Saturday, 28th September 2024

Lata Mangeshkar Birth Anniversary: ಲತಾ ಮಂಗೇಶ್ಕರ್ ಕುರಿತ ಈ ಸಂಗತಿಗಳು ನಿಮಗೆ ಗೊತ್ತೆ?

ಭಾರತೀಯ ಸಂಗೀತ ಜಗತ್ತಿನ ಶ್ರೇಷ್ಠ ಗಾಯಕರಲ್ಲಿ ಒಬ್ಬರಾದ ಲತಾ ಮಂಗೇಶ್ಕರ್ (Lata Mangeshkar Birth Anniversary) ಅವರು ತಮ್ಮ ಹಾಡಿನ ಮೂಲಕವೇ ಜನರಿಗೆ ಮೋಡಿ ಮಾಡುತ್ತಿದ್ದರು. ಇವರು ನಮ್ಮನ್ನು ಬಿಟ್ಟು ಅಗಲಿದರೂ ಕೂಡ ತಾವು ಹಾಡಿದ ಮಧುರ ಗೀತೆಗಳ ಮೂಲಕ ಜನರ ಮನಸ್ಸಿನಲ್ಲಿ ಯಾವಾಗಲೂ ಜೀವಂತವಾಗಿದ್ದಾರೆ. ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಅವರೊಂದಿಗಿನ ಹಾಡಿದ ಅಮರ ಡ್ಯುಯೆಟ್‌ ಸಾಂಗ್‌ಗಳು ಮತ್ತು ಇತರ ಪ್ರಮುಖ ಭಾರತೀಯ ಗಾಯಕರೊಂದಿಗೆ ಲತಾ ಅವರು ಹಾಡಿದ ಹಾಡುಗಳು ಹಿಂದಿ ಚಿತ್ರರಂಗದ ಸ್ಮರಣೀಯ ಗೀತೆಗಳ ಸಾಲಿಗೆ ಸೇರಿವೆ. ಇಂತಹ ಖ್ಯಾತ ಗಾಯಕಿಯ ಬಗ್ಗೆ ನಿಮಗೆ ತಿಳಿಯದ ಕೆಲವು ವಿಚಾರಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಿ.

Latha Mangeshkar

ಕಲಾವಿದರ ಕುಟುಂಬದಲ್ಲಿ ಜನಿಸಿದ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು ಕಲಾವಿದರ ಕುಟುಂಬಕ್ಕೆ ಸೇರಿದವರು. ಅವರ ತಂದೆ ನಾಟಕ ಕಂಪನಿಯನ್ನು ನಡೆಸುತ್ತಿದ್ದರು. ಆಗಲೇ ಲತಾ ಅವರಿಗೆ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇತ್ತು. ಸಹೋದರಿಯರು (ಲತಾ ಮತ್ತು ಆಶಾ ಭೋಂಸ್ಲೆ) ಹಾಡಲು ಶುರು ಮಾಡಿದಾಗ ಅವರ ಗುರಿ ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸುವುದಾಗಿತ್ತು.

Latha Mangeshkar

ಲತಾ ಮಂಗೇಶ್ಕರ್ ಮೊದಲ ಹಾಡು ತಿರಸ್ಕೃತವಾಗಿತ್ತು!

1942ರಲ್ಲಿ ಲತಾ ಮಂಗೇಶ್ಕರ್‌ ಅವರು ತಮ್ಮ ವೃತ್ತಿಜೀವನದ ಮೊದಲ ಹಾಡನ್ನು ʼಕಿಟಿ ಹಸಾಲ್‌ʼ ಎಂಬ ಮರಾಠಿ ಚಿತ್ರಕ್ಕಾಗಿ ಹಾಡಿದ್ದರು. ಈ ಹಾಡಿನ ಧ್ವನಿಮುದ್ರಣವನ್ನೂ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಚಿತ್ರದ ಕೊನೆಯ ಎಡಿಟ್‌ ವೇಳೆ ಈ ಹಾಡನ್ನು ತೆಗೆದುಹಾಕಲಾಯಿತು!

Latha Mangeshkar

ಹಾಡನ್ನು ರೆಕಾರ್ಡ್ ಮಾಡುವಾಗ ಮೂರ್ಛೆ ಹೋಗಿದ್ದ ಲತಾ ಮಂಗೇಶ್ಕರ್

ಲತಾ ಅವರು ಒಮ್ಮೆ ಸಂಗೀತ ಸಂಯೋಜಕ ನೌಶಾದ್ ಅವರೊಂದಿಗೆ ಹಾಡನ್ನು ರೆಕಾರ್ಡ್ ಮಾಡುವಾಗ ಮೂರ್ಛೆ ಹೋಗಿದ್ದರು. ಈ ವಿಚಾರವನ್ನು ಅವರೇ  ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. “ನಾವು ಬೇಸಿಗೆಯ ಕಾಲದಲ್ಲಿ ಮಧ್ಯಾಹ್ನದ ವೇಳೆ ಹಾಡನ್ನು ರೆಕಾರ್ಡ್ ಮಾಡುತ್ತಿದ್ದೇವು. ಆ ದಿನಗಳಲ್ಲಿ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಎಸಿ ಇರಲಿಲ್ಲ. ಹಾಗಾಗಿ ಅಂತಿಮ ರೆಕಾರ್ಡಿಂಗ್ ಸಮಯದಲ್ಲಿ ಸೀಲಿಂಗ್ ಫ್ಯಾನ್ ಅನ್ನು ಸಹ ಸ್ವಿಚ್ ಆಫ್ ಮಾಡಲಾಯಿತು. ಆಗ ನಾನು ಸೆಕೆ ತಾಳಲಾರದೆ  ಮೂರ್ಛೆ ಹೋದೆ” ಎಂದು ಲತಾ ಅವರು ತಿಳಿಸಿದ್ದರು.

ಲತಾ ಮಂಗೇಶ್ಕರ್‌ ಎಂದಿಗೂ ತಮ್ಮ ಹಾಡುಗಳನ್ನು ಕೇಳಲಿಲ್ಲ!

ಲತಾ ಮಂಗೇಶ್ಕರ್ ಒಮ್ಮೆ ʼಬಾಲಿವುಡ್ ಹಂಗಾಮಾʼದೊಂದಿಗೆ ಮಾತನಾಡುವಾಗ, ತಾವು ಹಾಡಿದ ಹಾಡುಗಳನ್ನು ಎಂದೂ ಕೇಳುವುದಿಲ್ಲ ಎಂದು ತಿಳಿಸಿದ್ದರು. ಯಾಕೆಂದರೆ ಹಾಗೆ ಮಾಡಿದರೆ, ನನ್ನ ಗಾಯನದಲ್ಲಿ ನೂರು ದೋಷಗಳನ್ನು ಕಂಡುಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದರು!

ನೆಚ್ಚಿನ ಸಂಗೀತ ನಿರ್ದೇಶಕ ಮದನ್ ಮೋಹನ್

ಲತಾ ಅವರ ನೆಚ್ಚಿನ ಸಂಗೀತ ನಿರ್ದೇಶಕ ಮದನ್ ಮೋಹನ್ ಆಗಿದ್ದರು. ಅವರ ನಡುವೆ ಸಹೋದರ ಮತ್ತು ಸಹೋದರಿಯ ಸಂಬಂಧವಿತ್ತು. ಹಾಗೆಯೇ ಜಹಾನ್ ಅರಾ ಅವರ ‘ವೋ ಚುಪ್ ರಹೇ’ ತಮ್ಮ ಹಾಗೂ ಅವರ ಸಹಯೋಗದ ಹಾಡಾಗಿದ್ದು, ಇದು  ತಮ್ಮ ನೆಚ್ಚಿನ ಸಹಯೋಗವೆಂದು ತಿಳಿಸಿದ್ದರು.

ರಾಜ್ಯಸಭೆ ಸದಸ್ಯರಾಗಿದ್ದ ಲತಾ ಮಂಗೇಶ್ಕರ್

ಲತಾ ಅವರು 1999ರಿಂದ 2005ರವರೆಗೆ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.  ಅವರು 1999ರಲ್ಲಿ ರಾಜ್ಯಸಭೆಗೆ (ಮೇಲ್ಮನೆ) ನಾಮನಿರ್ದೇಶನಗೊಂಡಿದ್ದರು. ಆದರೆ ತಮ್ಮ ಅಧಿಕಾರಾವಧಿ ಬಗ್ಗೆ ಅವರಿಗೆ ತೃಪ್ತಿ ಇರಲಿಲ್ಲ.

ಲತಾ ಅವರ ಖ್ಯಾತಿ ಭಾರತದ ಗಡಿಗಳನ್ನೂ ಮೀರಿತ್ತು

ಲತಾ ಮಂಗೇಶ್ಕರ್‌ ಕೇವಲ ಗಾಯಕಿಯಾಗಿ ಭಾರತದಲ್ಲಿ ಮಾತ್ರ ಪ್ರಸಿದ್ಧಿಯಾಗಿಲ್ಲ. ಅವರ ಸುಮಧುರ ಧ್ವನಿಗೆ  ಪ್ರಪಂಚದಾದ್ಯಂತ ಲಕ್ಷಾಂತರ ಜನ ಅಭಿಮಾನಿಗಳಾಗಿದ್ದಾರೆ.  ಲಂಡನ್‌ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಫ್ರಾನ್ಸ್ ಸರ್ಕಾರವು 2007ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ನೀಡಿತ್ತು.

ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಲತಾ ಮಂಗೇಶ್ಕರ್

1974ರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಲತಾ ಮಂಗೇಶ್ಕರ್ ಅವರ ಹೆಸರನ್ನು ಅತಿ ಹೆಚ್ಚು ಹಾಡು ರೆಕಾರ್ಡ್‌ ಮಾಡಿದ ಗಾಯಕಿ ಎಂಬ ಶೀರ್ಷಿಕೆಯಡಿಯಲ್ಲಿ ಸೇರ್ಪಡೆಯಾಗಿತ್ತು. ಆದರೆ ಇದನ್ನು ಆ ಕಾಲದ ಖ್ಯಾತ ಗಾಯಕ ಮೊಹಮ್ಮದ್ ರಫಿ ವಿರೋಧಿಸಿದ್ದರು! ಮುಂದೆ ರಫಿ ಹೆಸರನ್ನೂ ಲತಾ ಜತೆ ಗಿನ್ನಿಸ್‌ ಬುಕ್‌ನಲ್ಲಿ ಸೇರಿಸಲಾಯಿತು. ವಿಶೇಷವೆಂದರೆ 1991ರಲ್ಲಿ ಗಿನ್ನಿಸ್‌ ಬುಕ್‌ನಿಂದ ಲತಾ ಹೆಸರನ್ನು ಕೈಬಿಡಲಾಯಿತು. 1991ರಿಂದ 2011ರವರೆಗೆ ಲತಾ ಅವರ ಸಹೋದರಿ ಆಶಾ ಭೋಂಸ್ಲೆ ಅವರು ಅತಿ ಹೆಚ್ಚು ಹಾಡು ಹಾಡಿದ ಕೀರ್ತಿಗೆ ಪಾತ್ರರಾದರು. ಆ ಬಳಿಕ ದಕ್ಷಿಣ ಭಾರತದ ಖ್ಯಾತ ಗಾಯಕಿ ಪಿ ಸುಶೀಲಾ ಅವರು ಅತಿ ಹೆಚ್ಚು ಹಾಡು ಹಾಡಿದ ಗೌರವಕ್ಕೆ ಪಾತ್ರರಾದರು.

ಒ ಪಿ ನಯ್ಯರ್ ಅವರೊಂದಿಗೆ ಎಂದಿಗೂ ಕೆಲಸ ಮಾಡದ ಲತಾ ಮಂಗೇಶ್ಕರ್

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ, ಲತಾ ಅವರು ಶ್ರೇಷ್ಠ ಭಾರತೀಯ ಸಂಗೀತ ಸಂಯೋಜಕರು ಮತ್ತು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. ಆದರೆ ಅವರು ಎಂದಿಗೂ ಖ್ಯಾತ ಸಂಗೀತ ಸಂಯೋಜಕ ಒ ಪಿ ನಯ್ಯರ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಹಾಡಲೇ ಇಲ್ಲ!

ಲತಾ ಮಂಗೇಶ್ಕರ್ ಕೊನೆಯ ಬಾರಿ ಹಾಡಿದ್ದು 2019ರಲ್ಲಿ

ಲತಾ ಮಂಗೇಶ್ಕರ್‌ ಅವರು ತಮ್ಮ ಕೊನೆಯ ಹಾಡು ‘ಸೌಗಂಧ್ ಮುಜೆ ಈಸ್ ಮಿಟ್ಟಿ ಕಿ’ 2019ರಲ್ಲಿ ರೆಕಾರ್ಡ್‌ ಮಾಡಿದ್ದರು. ಭಾರತೀಯ ಸೇನೆ ಮತ್ತು ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಮಯೂರೇಶ್ ಪೈ ಅವರು ಈ ಹಾಡನ್ನು ಸಂಯೋಜಿಸಿದ್ದರು. ಈ ಹಾಡು ಮಾರ್ಚ್ 30, 2019ರಂದು ಬಿಡುಗಡೆಯಾಯಿತು.

ಇದನ್ನೂ ಓದಿ:ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ವಯಸ್ಕರ ಸಿನಿಮಾ ನಟಿ ರಿಯಾ ಬಾರ್ಡೆ ಬಂಧನ

ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರು ಈಗ ನಮ್ಮ ಜೊತೆ ಇಲ್ಲ ಎನ್ನುವುದೇ ಬೇಸರದ ಸಂಗತಿ. ಲತಾ ಮಂಗೇಶ್ಕರ್‌ ಭಾರತದ ನೆಲದಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸೋಣ.