Saturday, 23rd November 2024

Bigg Boss Kannada 11 : ಬಿಗ್‌ಬಾಸ್‌ಗೆ ಆಯ್ಕೆಯಾದ ಮೊದಲ ನಾಲ್ವರು ಸ್ಪರ್ಧಿಗಳು ಯಾರೆಲ್ಲ? ಇಲ್ಲಿದೆ ಅವರ ವಿವರ

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 11’ ರಿಯಾಲಿಟಿ ಶೋಗಾಗಿ (Bigg Boss Kannada 11) ಆಯ್ಕೆಯಾಗಿರುವ ಮೊದಲ ನಾಲ್ಕು ಸ್ಪರ್ಧಿಗಳ ವಿವರ ಸೆಪ್ಟೆಂಬರ್‌ 28ಕ್ಕೆ ಬಹಿರಂಗಗೊಂಡಿದೆ. ಈ ಜನಪ್ರಿಯ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಸೆಪ್ಟೆಂಬರ್ 29 ರಂದು ಸಂಜೆ 6 ಗಂಟೆಗೆ ಆರಂಭವಾಗಲಿರುವ ಹೊರತಾಗಿಯೂ, ನಾಲ್ವರನ್ನು ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್‌ 28ರಂದು ಘೋಷಿಸಲಾಗಿದೆ. ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಅವರ ಹೆಸರನ್ನು ಪ್ರಕಟಿಸಲಾಗಿದೆ.

‘ಸತ್ಯ’ ಸೀರಿಯಲ್ ಖ್ಯಾತಿಯ ಗೌತಮಿ ಜಾಧವ್ ಮೊದಲ ಸ್ಪರ್ಧಿಯಾಗಿ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟಿದ್ದರೆ, ವಿವಾದಗಳಿಂದಲೇ ಸುದ್ದಿ ಮಾಡುತ್ತಿದ್ದ ಲಾಯರ್ ಜಗದೀಶ್ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನು ಉದ್ಯಮಿಗೆ ಮೋಸ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಹಿಂದೂ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಕ್ರಮವಾಗಿ ಮೂರನೇ ಸ್ಪರ್ಧಿಯಾಗಿದ್ದರೆ, ಉದ್ಯಮಿ ಗೋಲ್ಡ್ ಸುರೇಶ್‌ ನಾಲ್ಕನೇ ಸ್ಪರ್ಧಿಯೆಂಬುದು ಖಚಿತಗೊಂಡಿದೆ.

ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಭಾಗದ ಮೂಲಕ ಅವರು ದೊಡ್ಮನೆಗೆ ಪ್ರವೇಶ ಪಡೆಯಲಿದ್ದಾರೆ. ವೀಕ್ಷಕರ ಓಟಿಂಗ್ ಮೂಲಕ ಸ್ಪರ್ಧೀಗಳು ಎರಡರಲ್ಲೊಂದು ವಿಭಾಗಕ್ಕೆ ಸೇರಿಕೊಳ್ಳಲಿದ್ದಾರೆ. ಜಿಯೋ ಸಿನಿಮಾದ ಮೂಲಕ ವೋಟ್ ಮಾಡಲು ವೀಕ್ಷಕರಿಗೆ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

ಬಿಗ್‌ಬಾಸ್‌ ಮನೆ ಸೇರಲಿರುವ ಮೊದಲ ನಾಲ್ಕು ಸ್ಪರ್ಧಿಗಳ ವಿವರ ಇಲ್ಲಿದೆ

ಗೌತಮಿ ಜಾಧವ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಸತ್ಯ’ದ ಕಥಾನಾಯಕಿ ಪಾತ್ರದಲ್ಲಿ ಗೌತಮಿ ಕಾಣಿಸಿಕೊಂಡಿದ್ದರು. ಅದೇ ರೀತಿ ದಶಕದ ಹಿಂದೆ ಪ್ರಸಾರವಾಗಿದ್ದ ‘ನಾಗಪಂಚಮಿ’ ಸೀರಿಯಲ್‌ನಲ್ಲಿ ಗೌತಮಿ ಜಾಧವ್ ಅಭಿನಯಿಸಿದ್ದರು. ‘ಲೂಟಿ’, ‘ಆದ್ಯಾ’, ‘ಕಿನಾರೆ’ ಸಿನಿಮಾಗಳಲ್ಲಿ ಅವರು ಪಾತ್ರ ವಹಿಸಿದ್ದಾರೆ. ತಮಿಳಿನ ಚಿತ್ರವೊಂದರಲ್ಲೂ ಗೌತಮಿ ಜಾಧವ್ ನಟಿಸಿದ್ದಾರೆ. ಗೌತಮಿ ಜಾಧವ್ ಸ್ಯಾಂಡಲ್‌ವುಡ್‌ ಕ್ಯಾಮರಾಮೆನ್‌ ಅಭಿಷೇಕ್ ಕಾಸರಗೋಡು ಅವರ ಪತ್ನಿ. ಅಭಿಷೇಕ್ ಖ್ಯಾತ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಪುತ್ರ.

‘ಕಿನಾರೆ’ ಸಿನಿಮಾದಲ್ಲಿ ನಾಯಕಿಯಾಗಿ ಗೌತಮಿ ನಟಿಸುವಾಗ ಅಭಿಷೇಕ್ ಕ್ಯಾಮರಾಮ್ಯಾನ್ ಆಗಿದ್ದರು.ಈ ವೇಳೆ ಅವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಡಿಸೆಂಬರ್ 31, 2019 ರಂದು ಅವರು ಮದುವೆಯಾಗಿದ್ದಾರೆ. ದಂಪತಿ ಶ್ವಾನ ಪ್ರಿಯರು.

ಲಾಯರ್ ಜಗದೀಶ್

ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳು, ನಟಿಯರು, ಕಲಾವಿದರ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡುವ ಮೂಲಕ ಖ್ಯಾತಿ ಪಡೆದವರು ಲಾಯರ್ ಜಗದೀಶ್‌. ಅವರನ್ನು ಅಭಿಮಾನಿಗಳು ‘ವಕೀಲ್ ಸಾಬ್’ ಎಂದೂ ಕರೆಯುತ್ತಾರೆ. ಲಾಯರ್ ಜಗದೀಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ರವಿ ಡಿ. ಚನ್ನಣ್ಣನವರ್ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬೆನ್ನಲ್ಲೇ ಕರ್ನಾಟಕದಲ್ಲಿ ವಕೀಲಿಕೆ ಮಾಡದಂತೆ ಬೆಂಗಳೂರು ವಕೀಲರ ಸಂಘ ನಿರ್ಬಂಧ ವಿಧಿಸಿತ್ತು. ಇನ್ನೂ ಜಾತಿ ನಿಂದನೆ ಪ್ರಕರಣದಲ್ಲೂ ಲಾಯರ್ ಜಗದೀಶ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.

ಇದನ್ನೂ ಓದಿ: Bigg Boss Kannada 11: ಸುದ್ದಿಗೋಷ್ಠಿ ಕರೆದ ‘ಬಿಗ್‌ಬಾಸ್‌ ಕನ್ನಡ 11’ ಟೀಂ; ಸ್ಪರ್ಧಿಗಳ ಪಟ್ಟಿ ಇಂದೇ ಬಹಿರಂಗ?

ಇತ್ತೀಚೆಗೆ ಕೊಲೆ ಕೇಸಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಪರವಾಗಿ ವಕೀಲ ಜಗದೀಶ್‌ ಪ್ರತಿಭಟನೆ ನಡೆಸಿದ್ದರು. ಮಾಜಿ ಸಿಎಂ ಹಾಗೂ ಸ್ವಾಮೀಜಿಯೊಬ್ಬರ ವಿರುದ್ಧ ವಕೀಲ ಜಗದೀಶ್‌ ಆರೋಪ ಹೊರಿಸಿದ್ದರು. ಕನ್ನಡ ನಟಿಯರ ಬಗ್ಗೆಯೂ ಆರೋಪಿಸಿದ್ದ ವಿಡಿಯೋಗಳು ವೈರಲ್ ಆಗಿದ್ದವು. ”ಭ್ರಷ್ಟರ ವಿರುದ್ಧ ಅನ್ಯಾಯದ ವಿರುದ್ಧ ಹೋರಾಡುತ್ತೇನೆ”ಎನ್ನುವುದು ಅವರ ಟ್ಯಾಗ್‌ಲೈನ್. ಅವರ ಪೂರ್ತಿ ಹೆಸರು ಜಗದೀಶ್ ಮಹಾದೇವ್ (ಕೆ ಎನ್‌ ಜಗದೀಶ್‌ ಕುಮಾರ್). ಇವರು ಬೆಂಗಳೂರಿನ ಕೋಡಿಗೇಹಳ್ಳಿ ನಿವಾಸಿ ಎನ್ನಲಾಗಿದೆ. ಅವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾನೆ.

ಚೈತ್ರಾ ಕುಂದಾಪುರ

ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ವಂಚಿಸಿದ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿ ಜೈಲುಪಾಲಾಗಿದ್ದ ಚೈತ್ರಾ ಕುಂದಾಪುರ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದಲ್ಲಿ ಜೈಲು ಸೇರುವ ಮೊದಲು ಚೈತ್ರಾ ಹಿಂದೂ ಫೈರ್‌ಬ್ರಾಂಡ್ ಭಾಷಣಕಾರ್ತಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದರು. ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇತ್ತು. ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಹಿಂದೂ ಸಮಾವೇಷಗಳಲ್ಲಿ ಭಾಷಣ ಮಾಡುತ್ತಿದ್ದರು. ಪತ್ರಿಕೋದ್ಯಮ ಪದವೀಧರೆಯಾಗಿರುವ ಅವರು ಅಲ್ಪ ಕಾಲ ಪತ್ರಿಕಾ ಕಚೇರಿಯಲ್ಲೂ ಕಾರ್ಯನಿರ್ವಹಿಸಿದ್ದಾರೆ.

ಗೋಲ್ಡ್‌ ಸುರೇಶ್‌

ಸದಾ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವವರು ಸುರೇಶ್ ಬಿಗ್‌ಬಾಸ್‌ಗೆ ನಾಲ್ಕನೇ ಸ್ಪರ್ಧಿ. ಅವರನ್ನು ಜನ ‘ಗೋಲ್ಡ್ ಸುರೇಶ್’ ಎಂದೇ . ಸುರೇಶ್ ಮೂಲತಃ ಉತ್ತರ ಕರ್ನಾಟಕದವರು. 10ನೇ ಕ್ಲಾಸ್‌ವರೆಗೂ ಓದಿರುವ ಸುರೇಶ್ ಊರು ಬಿಟ್ಟು ಓಡಿ ಬಂದಿದ್ದರು.
ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಸುರೇಶ್ ಆರಂಭದಲ್ಲಿ ಸೂಪರ್‌ವೈಸರ್‌ ಆಗಿದ್ದವರು. ಕೈಯಲ್ಲಿ ದುಡ್ಡು ನಿಲ್ಲುತ್ತಿದ್ದಂತೆ ಕಾರು ಮತ್ತು ಚಿನ್ನದ ಮೇಲೆ ಕ್ರೇಜ್ ಹುಟ್ಟಿತ್ತು. ‘’ನನ್ನ ಬಳಿ ಹಲವು ಕಾರುಗಳಿವೆ. ಮೊದಲು ಒಂದು ಸಣ್ಣ ಲಕ್ಷ್ಮೀ ಡಾಲರ್‌ ಧರಿಸಲು ಪ್ರಾರಂಭಿಸಿದೆ. ಈಗ ನನ್ನ ಬಳಿ ಎಲ್ಲಾ ಡಿಸೈನ್‌ನ ಚಿನ್ನವಿದೆ ಎಂದು ಸುರೇಶ್‌ ಹೇಳುತ್ತಾರೆ. ಸುರೇಶ್ ಅವರಿಗೆ ಮದುವಯಾಗಿದ್ದು ಒಂದು ಹೆಣ್ಣು ಮಗು ಇದೆ.