Wednesday, 27th November 2024

IND vs BAN: ಮೂರನೇ ದಿನದಾಟಕ್ಕೂ ಮಳೆ ಭೀತಿ

IND vs BAN

ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ(IND vs BAN) ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಆಹುತಿಯಾಗಿತ್ತು. ಇದೀಗ ಇಂದು ನಡೆಯುವ ಮೂರನೇ ದಿನದ ಆಟಕ್ಕೂ ಮಳೆ ಭೀತಿ ತಪ್ಪಿದ್ದಲ್ಲ. ಶನಿವಾರ ರಾತ್ರಿಯೂ ಇಲ್ಲಿ ಭಾರೀ ಮಳೆ ಸುರಿದ ಕಾರಣ ಮೈದಾನದ ಕವರ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ.

ಭಾನುವಾರವೂ ಮೈದಾನ ಒದ್ದೆಯಿದ್ದರೆ ಆಟ ನಡೆಯುವುದು ಕಷ್ಟ. ಸದ್ಯ ತುಂತುರು ಮಳೆ ಕಾಣಿಸಿಕೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನಗರದಲ್ಲಿ ಇಂದು ಕೂಡ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಸೋಮವಾರ ಮತ್ತು ಮಂಗಳವಾರ ವರುಣ ಬಿಡುವು ನೀಡಲಿದೆ ಎನ್ನಲಾಗಿದೆ. ಕೊನೆಯ ಎರಡು ದಿನ ಆಟ ನಡೆದರೂ, ಪಂದ್ಯ ಬಹುತೇಕ ಡ್ರಾದತ್ತ ಸಾಗಲಿದೆ. ಪಂದ್ಯದ ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್‌ಗಳಿಸಿದೆ.

ಇದನ್ನೂ ಓದಿ INDvsBAN : ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಆಯ್ಕೆ, ಮಯಾಂಕ್‌ಗೆ ಮೊದಲ ಕರೆ

ಟೆಸ್ಟ್ ಪಂದ್ಯ ಡ್ರಾ ಸಾಧಿಸಿದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್‌ಗೇರುವ ಹಂಬಲದಲ್ಲಿರುವ ಭಾರತಕ್ಕೆ ತುಸು ಹಿನ್ನಡೆಯಾಗುವ ನಿರೀಕ್ಷೆಯಿದೆ. 2023-25ರ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 71.67 ಅಂಕ ಕಲೆಹಾಕಿರುವ ಭಾರತ ಸದ್ಯ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ಎದುರು ಭಾರತ 2-0ಯಿಂದ ಗೆದ್ದರೆ, ಉಳಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಬಹುದು. ಒಂದು ವೇಳೆ ಮಳೆಯಿಂದ 2ನೇ ಟೆಸ್ಟ್ ಡ್ರಾಗೊಂಡರೆ ಮುಂದಿನ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸುವ ಒತ್ತಡಕ್ಕೆ ರೋಹಿತ್ ಶರ್ಮ ಸಿಲುಕಲಿದೆ. ಜತೆಗೆ ಇತರ ತಂಡಗಳ ಫಲಿತಾಂಶವೂ ವರದಾನವಾಗಬೇಕಿದೆ.

ಇಂದು ಬಿಸಿಸಿಐ ವಾರ್ಷಿಕ ಸಭೆ

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) 93ನೇ ವಾರ್ಷಿಕ ಮಹಾಸಭೆ (ಎಜಿಎಂ) ಭಾನುವಾರ ಉದ್ಯಾನನಗರಿಯಲ್ಲಿ ನಡೆಯಲಿದೆ. ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಇಬ್ಬರು ಪ್ರತಿನಿಧಿಗಳನ್ನು ಆರಿಸುವುದು ಸಭೆಯ ಪ್ರಮುಖ ಅಜೆಂಡಾ ಆಗಿದೆ.

ಮಹಾಸಭೆಯ ಪ್ರಮುಖ ಅಜೆಂಡಾ

1. ಐಸಿಸಿ ಸಭೆಗಳಿಗೆ ಭಾರತದ ಇಬ್ಬರು ಪ್ರತಿನಿಧಿಗಳ ಆಯ್ಕೆ.

2. ಐಪಿಎಲ್​ ಆಡಳಿತ ಮಂಡಳಿಗೆ ಭಾರತೀಯ ಕ್ರಿಕೆಟರ್ಸ್​ ಸಂಸ್ಥೆಯ (ಐಸಿಎ) ಪ್ರತಿನಿಧಿಯ ಸೇರ್ಪಡೆಗೆ ಅನುಮೋದನೆ.

3. 2024-25ರ ಸಾಲಿನ ವಾರ್ಷಿಕ ಬಜೆಟ್​ಗೆ ಅನುಮೋದನೆ.