Wednesday, 27th November 2024

IND vs BAN: ಲಂಗೂರ್​ ಕಣ್ಗಾವಲಿನಲ್ಲಿ ಭಾರತ-ಬಾಂಗ್ಲಾ ಟೆಸ್ಟ್‌

IND vs BAN

ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ(IND vs BAN) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಒಂದೆಡೆ ಮಳೆ ಅಡಚಣೆಯಾದರೆ ಇನ್ನೊಂದೆಡೆ ಕೋತಿಗಳ ಉಪಟಳ. ಇದು ಸ್ಟೇಡಿಯಂ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಮಂಗಗಳ ಕಾಟವನ್ನು ತಪ್ಪಿಸುವ ಸಲುವಾಗಿ ಉತ್ತರ ಪ್ರದೇಶ ಕ್ರಿಕೆಟ್​ ಸಂಸ್ಥೆ ಲಂಗೂರ್​ಗಳನ್ನು(Langur) ಬಳಸಿಕೊಂಡಿದೆ.

ಪಂದ್ಯದ ಮೊದಲ ದಿನ ಪ್ರೇಕ್ಷಕರಿಂದ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವ ಮಂಗಗಳು, ಪಂದ್ಯದ ನೇರಪ್ರಸಾರದ ಚಿತ್ರೀಕರಣ ಮಾಡುವಾಗ ಕ್ಯಾಮರಾಮನ್​ಗಳಿಗೂ ತೀವ್ರ ತೊಂದರೆಗಳನ್ನು ನೀಡಿತ್ತು. ಮೈದಾನಕ್ಕೆ ಹೊದಿಸಿದ ಕವರ್‌ಗಳನ್ನು ಕೂಡ ಎಸೆದು ಹರಿದು ಹಾಕಿತ್ತು.

ಸ್ಟೇಡಿಯಂ ನಿರ್ದೇಶಕ ಸಂಜಯ್​ ಕಪೂರ್ ಮಾತನಾಡಿ, ಮಂಗಗಳ ಭಯವನ್ನು ನಿವಾರಿಸಲು ನಮಗೆ ಲಂಗೂರ್​ಗಳ ಬಳಕೆ ಅಗತ್ಯವಾಗಿತ್ತು. ಲಂಗೂರ್​ಗಳು ಕೋತಿಗಳ ಜಾತಿಗೇ ಸೇರಿದ್ದರೂ, ಕಪ್ಪಾದ ಮೂತಿ ಮತ್ತು ಉದ್ದನೆಯ ಬಾಲಗಳನ್ನು ಹೊಂದಿರುತ್ತವೆ. ಲಂಗೂರ್​ಗಳಿಗೆ ಮಂಗಗಳು ಹೆದರುವುದರಿಂದ ಅವುಗಳ ಹತ್ತಿರಕ್ಕೆ ಹೋಗುವುದಿಲ್ಲ. ಹೀಗಾಗಿ ಮಂಗಗಳನ್ನು ಓಡಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ Women’s T20 World Cup: ಇಂಡೋ-ಪಾಕ್‌ ಪಂದ್ಯಕ್ಕೆ ಅಂಪೈರ್‌ಗಳ ಆಯ್ಕೆ

ಭಾರತ ಹಾಗೂ ಬಾಂಗ್ಲಾದೇಶ(IND vs BAN) ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಆಹುತಿಯಾಗಿತ್ತು. ಇದೀಗ ಇಂದು ನಡೆಯುವ ಮೂರನೇ ದಿನದ ಆಟಕ್ಕೂ ಮಳೆ ಭೀತಿ ತಪ್ಪಿದ್ದಲ್ಲ. ಸದ್ಯ ಮಳೆ ನಿಂತಿದ್ದರೂ ಮೈದಾನ ಒದ್ದೆಯಾದ ಕಾರಣ ಪಂದ್ಯ ಆರಂಭವಾಗಿಲ್ಲ. ಬೆಳಗ್ಗೆ ತುಂತುರು ಮಳೆ ಕೂಡ ಕಾಣಿಸಿಕೊಂಡಿತ್ತು. ಮಧ್ಯಾಹ್ನದ ಬಳಿಕ ಭಾರೀ ಮಳೆಯ ಮುನ್ಸೂಚನೆಯೂ ಇದೆ. ಸೋಮವಾರ ಮತ್ತು ಮಂಗಳವಾರ ವರುಣ ಬಿಡುವು ನೀಡಲಿದೆ ಎನ್ನಲಾಗಿದೆ. ಕೊನೆಯ ಎರಡು ದಿನ ಆಟ ನಡೆದರೂ, ಪಂದ್ಯ ಬಹುತೇಕ ಡ್ರಾದತ್ತ ಸಾಗಲಿದೆ. ಪಂದ್ಯದ ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್‌ಗಳಿಸಿದೆ.

ಪಂದ್ಯ ಡ್ರಾ ಗೊಂಡರೆ ಭಾರತಕ್ಕೆ ನಷ್ಟ

ಟೆಸ್ಟ್ ಪಂದ್ಯ ಡ್ರಾ ಸಾಧಿಸಿದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್‌ಗೇರುವ ಹಂಬಲದಲ್ಲಿರುವ ಭಾರತಕ್ಕೆ ತುಸು ಹಿನ್ನಡೆಯಾಗುವ ನಿರೀಕ್ಷೆಯಿದೆ. 2023-25ರ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 71.67 ಅಂಕ ಕಲೆಹಾಕಿರುವ ಭಾರತ ಸದ್ಯ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ಎದುರು ಭಾರತ 2-0ಯಿಂದ ಗೆದ್ದರೆ, ಉಳಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಬಹುದು. ಒಂದು ವೇಳೆ ಮಳೆಯಿಂದ 2ನೇ ಟೆಸ್ಟ್ ಡ್ರಾಗೊಂಡರೆ ಮುಂದಿನ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸುವ ಒತ್ತಡಕ್ಕೆ ರೋಹಿತ್ ಶರ್ಮ ಸಿಲುಕಲಿದೆ. ಜತೆಗೆ ಇತರ ತಂಡಗಳ ಫಲಿತಾಂಶವೂ ವರದಾನವಾಗಬೇಕಿದೆ.