ಮುಂಬಯಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಬಾಂಗ್ಲಾದೇಶ(IND vs BAN) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ(Hardik Pandya) ಕೂಡ ತಂಡಕ್ಕೆ ಮರಳಿದ್ದಾರೆ. ಈ ಸರಣಿಗಾಗಿ ಪಾಂಡ್ಯ ನೆಟ್ಸ್‌ನಲ್ಲಿ ಬ್ಯಾಟಿಂಗ್ ಜತೆಗೆ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ(hardik pandya practice). ಪಾಂಡ್ಯ ಅವರ ಕಠಿಣ ಅಭ್ಯಾಸದ ಫೋಟೊಗಳು ವೈರಲ್ ಆಗಿದೆ.
ಜುಲೈನಲ್ಲಿ ಶ್ರೀಲಂಕಾ ಪ್ರವಾಸದಲ್ಲಿನ ಟಿ20 ಸರಣಿ ಬಳಿಕ ವಿಶ್ರಾಂತಿ ಪಡೆದಿದ್ದ ಪಾಂಡ್ಯ ಇದೀಗ ಸುಮಾರು ಎರಡು ತಿಂಗಳ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮ ಟಿ20ಗೆ ವಿದಾಯ ಹೇಳಿದ್ದರು. ಈ ವೇಳೆ ನಾಯಕತ್ವ ಹಾರ್ದಿಕ್ ಹೆಗಲೇರಲಿದೆ ಎನ್ನಲಾಗಿತ್ತು. ಆದರೆ, ಬಿಸಿಸಿಐ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿತು. ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6ರಂದು ಗ್ವಾಲಿಯರ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ IND vs BAN: ಲಂಗೂರ್ ಕಣ್ಗಾವಲಿನಲ್ಲಿ ಭಾರತ-ಬಾಂಗ್ಲಾ ಟೆಸ್ಟ್
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುವ ಮೂಲಕ ಸಂಚಲನ ಮೂಡಿಸಿದ್ದ ಎಕ್ಸ್‌ಪ್ರೆಸ್ ವೇಗಿ ಮಾಯಾಂಕ್ ಯಾದವ್ ಭಾರತ ತಂಡದ ಒರ ಚೊಚ್ಚಲ ಕರೆ ಪಡೆದಿದ್ದಾರೆ. ಆಡುವ ಬಳಗದಲ್ಲಿಯೂ ಕಾಣಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಭಾರೀ ನಿರೀಕ್ಷೆಯಲ್ಲಿದ್ದ ಇಶಾನ್ ಕಿಶನ್‌ಗೆ ಮತ್ತೆ ನಿರಾಸೆಯಾಗಿದೆ. ಅವರಿಗೆ ಸ್ಥಾನ ನೀಡಲಾಗಿಲ್ಲ.
ಟೆಸ್ಟ್ ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಪುನರಾಗಮನ?
ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಪೂರ್ವಭಾವಿಯಾಗಿ ಮುಂಬರುವ ರಣಜಿ ಟ್ರೋಫಿಯಲ್ಲಿ ಬರೋಡ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 11ರಿಂದ ರಣಜಿ ಟ್ರೋಫಿ(Ranji Trophy) ದೇಶೀಯ ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಬರೋಡ ತಂಡ ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ.
ಹಾರ್ದಿಕ್ ಪಾಂಡ್ಯ ಕಳೆದ 6 ವರ್ಷಗಳಿಂದ ಟೆಸ್ಟ್ ಪಂದ್ಯ ಆಡಿಲ್ಲ. 2018ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೌಥಾಂಪ್ಟನ್ನಲ್ಲಿ ಕೊನೇಯ ಟೆಸ್ಟ್ ಆಡಿದ್ದರು. ಆ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ಅವರು ಟೆಸ್ಟ್ ಕ್ರಿಕೆಟ್ನಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಇದೀಗ ಸುದೀರ್ಘ ಸಮಯದ ಬಳಿಕ ಮತ್ತೆ ರೆಡ್ ಬಾಲ್ ಆಡಲು ನಿರ್ಧರಿಸಿದ್ದಾರೆ. ಬಿಸಿಸಿಐ ಪಾಂಡ್ಯಗೆ ರಣಜಿ ಆಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ವರ್ಷಾಂತ್ಯದಲ್ಲಿ ಆಸ್ಟ್ರೆಲಿಯಾ ವಿರುದ್ಧ ನಡೆಯುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್(Border Gavaskar Trophy) ಟೆಸ್ಟ್ ಸರಣಿಗೆ ಪಾಂಡ್ಯ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಈ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
30 ವರ್ಷದ ಹಾರ್ದಿಕ್ ಪಾಂಡ್ಯ ಇದುವರೆಗೆ ಭಾರತ ಪರ 11 ಟೆಸ್ಟ್ ಆಡಿದ್ದು, 1 ಶತಕ, 4 ಅರ್ಧಶತಕ ಸಹಿತ 532 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಒಂದು 5 ವಿಕೆಟ್ ಗೊಂಚಲು ಕೂಡ ಸೇರಿದೆ. ಪಾಂಡ್ಯ ಟೆಸ್ಟ್‌ಗೆ ಮರಳಿದರೆ ಭಾರತ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠಗೊಳ್ಳಲಿದೆ.