Monday, 7th October 2024

Health Tips in Kannada: ನಮ್ಮ ದೇಹದ ತೂಕ ನೋಡುವುದಕ್ಕೂ ಒಂದು ಸಮಯ ಇದೆ ಎನ್ನುವುದು ತಿಳಿದಿರಲಿ

Health Tips in Kannada

ಬೆಂಗಳೂರು: ತೂಕ ಇಳಿಸುವ ಅಥವಾ ಏರದಿರುವಂತೆ ಮಾಡುವ ಭೂಮಿ ತೂಕದ ಕೆಲಸವನ್ನು ಹೊತ್ತುಕೊಂಡಿದ್ದೀರಾ? ಹಾಗಾದರೆ ದಿನಕ್ಕೊಮ್ಮೆ ತಪ್ಪದೇ ತೂಕದ ಯಂತ್ರದ ಮೇಲೆ ನಿಂತು, ಗ್ರಾಂ ಲೆಕ್ಕದಲ್ಲಿ ವ್ಯತ್ಯಾಸವಾಯಿತೋ ಅಥವಾ ಕೆ.ಜಿ. ಲೆಕ್ಕದಲ್ಲೇ ಆಚೀಚೆ ಆಯಿತೋ ಎಂದು ಕಳವಳಿಸುವವರು ನೀವಾಗಿದ್ದರೆ, ನಿಮಗಾಗಿ ಈ ಲೇಖನ! (Health Tips in Kannada)

ರಾತ್ರಿ ಬೆಳಗಾಗುವುದರೊಳಗೆ ತೂಕದಲ್ಲಿ ಸಹಜವಾಗಿಯೇ ಸಾಕಷ್ಟು ವ್ಯತ್ಯಾಸವಾಗಲು ಸಾಧ್ಯವಿದೆ ಎನ್ನುವುದನ್ನು, 100 ಗ್ರಾಂಗೆ ಒಲಿಂಪಿಕ್ಸ್‌ ಚಿನ್ನ ಕಳೆದುಕೊಂಡು ನಾವೆಲ್ಲ ಅರಿತಿದ್ದೇವೆ. ಹಾಗಾಗಿ ದಿನವೂ ದಿನಸಿಯಂತೆ ನಮ್ಮ ತೂಕವನ್ನು ಅಳೆದು-ತೂಗುವ ಅಗತ್ಯವಿಲ್ಲ. ಮಾತ್ರವಲ್ಲ, ತೂಕವನ್ನು ನಿಯಮಿತವಾಗಿ ನೋಡಿಕೊಳ್ಳುವುದಕ್ಕೆ ಒಂದು ಸಮಯವನ್ನು ನಿಗದಿ ಮಾಡಿಕೊಳ್ಳುವುದು ಸರಿಯಾದ ಕ್ರಮ. ಹಾಗಾದರೆ ಯಾವ ಸಮಯ ಸೂಕ್ತ ಅಥವಾ ಯಾವ ಸಮಯ ಸೂಕ್ತವಲ್ಲ?

ನಿತ್ಯವೂ ತೂಕ ನೋಡಿಕೊಳ್ಳುವುದರಿಂದ ಪ್ರಯೋಜನಕ್ಕಿಂತ ಕಿರಿಕಿರಿಯೇ ಹೆಚ್ಚಾಗಬಹುದು. ಕಾರಣ, ನಿನ್ನೆಗಿಂತ ಇಂದು ಅರ್ಧ ಕೆ.ಜಿ. ಹೆಚ್ಚಾಗಿದೆ ತೂಕ ಎನ್ನುತ್ತಿದ್ದಂತೆ ಹೌಹಾರುತ್ತೇವೆ. ತೆಗೆದುಕೊಂಡ ಆಹಾರ, ನೀರು, ಹಾರ್ಮೋನು ವ್ಯತ್ಯಾಸಗಳು ಮುಂತಾದ ಹಲವು ಕಾರಣಗಳು ತೂಕ ಏರಿಳಿಯುವುದರ ಹಿಂದೆ ಇರಬಹುದು. ಇಂಥ ಯಾವುದನ್ನೂ ಅರ್ಥ ಮಾಡಿಕೊಳ್ಳದೆ ಕೇವಲ ತೂಕ ಮಿಷನ್‌ ತೋರಿಸುವ ಸಂಖ್ಯೆಯನ್ನು ಗಮನಿಸಿ ತಲೆ ಕೆಡಿಸಿಕೊಳ್ಳುವುದು, ಅನಗತ್ಯ ಒತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ತೂಕ ನೋಡುವುದಾದರೆ ಯಾವ ಸಮಯ ಸೂಕ್ತವಲ್ಲ ಎಂಬುದನ್ನು ಗಮನಿಸಿ.

ಊಟದ ನಂತರ

ಇದು ಸಾಮಾನ್ಯ ಜ್ಞಾನ ಹೌದಾದರೂ, ಕೆಲವೊಮ್ಮೆ ನಾವಿದನ್ನು ಗಮನಿಸುವುದಿಲ್ಲ. ಊಟ-ತಿಂಡಿ ಆದಾಕ್ಷಣ ತೂಕ ನೋಡಲು ಹೋಗಬೇಡಿ. ಆಹಾರವಿನ್ನೂ ಪಚನವಾಗುತ್ತಿರುವಾಗ ಬಹಳಷ್ಟು ನೀರಿನಂಶ ದೇಹದಲ್ಲಿ ಉಳಿದಿರುತ್ತದೆ. ಹಾಗಾಗಿ ಈ ಹೊತ್ತಿಗೆ ತೂಕ ನೋಡಿದರೆ, ದೇಹದ ತೂಕ ಮಾತ್ರವಲ್ಲ, ತಿಂದ ಆಹಾರದ ತೂಕವೂ ಸೇರಿರುವುದು ಸಹಜ. ತುಂಬಿದ ಹೊಟ್ಟೆಯಲ್ಲಿ ತೂಕ ನೋಡಿ, ಹೌಹಾರುವಂತೆ ಮಾಡಿಕೊಳ್ಳದಿರುವುದು ಒಳ್ಳೆಯದು.

ರಾತ್ರಿ ನಿದ್ದೆ ಸರಿಯಾಗದಿದ್ದರೆ

ಯಾವುದೋ ಕಾರಣಕ್ಕೆ ರಾತ್ರಿಯ ನಿದ್ದೆ ಸರಿಯಾಗಿಲ್ಲ ಎಂದರೆ, ಮಾರನೇ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲೂ ತೂಕ ನೋಡುವ ಉಸಾಬರಿಗೆ ಹೋಗಬೇಡಿ. ನಿದ್ರಾಹೀನ ಸ್ಥಿತಿಯಲ್ಲಿ ದೇಹದ ಚೋದಕಗಳು ಏರುಪೇರಾಗಿರುತ್ತವೆ. ಅದರಲ್ಲೂ ನಮ್ಮ ಹಸಿವೆ ಮತ್ತು ನೀರಡಿಕೆಯನ್ನು ನಿಯಂತ್ರಿಸುವ ಚೋದಕಗಳು ಅತಿಯಾಗಿ ಕೆಲಸ ಮಾಡುತ್ತಿರಬಹುದು. ಹಾಗಾಗಿ ನಮ್ಮ ಆಹಾರದ ಸೇವನೆಯೂ ಹೆಚ್ಚಿರುವ ಎಲ್ಲ ಸಾಧ್ಯತೆಯಿದೆ. ಹೆಚ್ಚಿದ ನೀರಡಿಕೆ ಮತ್ತು ಹಸಿವೆಯಿಂದ ತೂಕದಲ್ಲೂ ಏರಿಕೆ ಕಾಣಬಹುದು.

ಜಿಮ್‌ನಿಂದ ಬಂದಾಕ್ಷಣ

ವರ್ಕೌಟ್‌ ಮಾಡಿ ಬೆವರಿಳಿಸಿದ್ದೀರಿ. ಇಷ್ಟು ಬೆವರಿದ ಮೇಲೆ ಕಿಂಚಿತ್ತಾದರೂ ತೂಕ ಇಳಿಯದೇ ಎನ್ನುವ ಭಾವನೆ ಬಂದು, ತೂಕದ ಮಿಷನ್‌ ಮೇಲೇರಿದ್ದೀರಾ? ಸ್ವಲ್ಪ ತಾಳಿ, ತೂಕ ಹೆಚ್ಚು ಕಾಣುವ ಸಂಭವವಿದೆ. ವ್ಯಾಯಾಮದಿಂದ ತೂಕ ಇಳಿಯುವುದು ಹೌದು, ಕೊಬ್ಬು ಕಡಿಮೆಯಾಗಿ ಸ್ನಾಯುಗಳು ಬಲಗೊಳ್ಳುವುದು ನಿಜ. ಆದರೆ ತಕ್ಷಣಕ್ಕೆ ದೇಹದಲ್ಲಿ ಹಿಡಿದಿಟ್ಟುಕೊಂಡ ನೀರಿನ ಪ್ರಮಾಣದಿಂದ ದೇಹತೂಕ ಹೆಚ್ಚು ಕಾಣಿಸಬಹುದು.

ಮುಟ್ಟಿನ ದಿನಗಳಲ್ಲಿ

ಮಹಿಳೆಯರಿಗೆ ಈ ದಿನಗಳಲ್ಲಿ ಹಾರ್ಮೋನುಗಳ ಏರಿಳಿತ ಅತ್ಯಂತ ಸಾಮಾನ್ಯ ವಿಷಯ. ಹೊಟ್ಟೆ ಉಬ್ಬರಿಸುವುದು, ದೇಹದಲ್ಲಿ ಹೆಚ್ಚಿನ ಪ್ರಮಾಣದನೀರು ಉಳಿಯುವುದೂ ಸಾಮಾನ್ಯ ಸಂಗತಿಯೇ. ಇವುಗಳಿಂದ ದೇಹದ ತೂಕದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಾಣುವುದು ನೈಸರ್ಗಿಕ ಬದಲಾವಣೆ. ಹಾಗಾಗಿ ಈ ದಿನಗಳಲ್ಲೂ ತೂಕ ನೋಡಿಕೊಂಡು ವ್ಯರ್ಥ ಪ್ರಲಾಪ ಮಾಡಬೇಡಿ.

ಬೆಳಗಿನ ಹೊತ್ತು

ಬೆಳಗ್ಗೆ ಏಳುತ್ತಿದ್ದಂತೆ ತೂಕದ ಯಂತ್ರ ಹತ್ತುವ ಅಭ್ಯಾಸವಿದ್ದರೆ, ಸ್ವಲ್ಪ ತಾಳಿ. ರಾತ್ರಿ ತಡವಾಗಿ ಊಟ ಮಾಡಿ ಮಲಗುವ ಅಭ್ಯಾಸ ನಿಮಗಿದ್ದರೆ, ಬೆಳಗ್ಗೆ ಏಳುತ್ತಿದ್ದಂತೆ ತೂಕ ನೋಡಬೇಡಿ. ಮಲಗಿದ ನಂತರ ರಾತ್ರಿಯ ಆಹಾರ ಪಚನವಾಗುವುದು ನಿಧಾನವೇ. ಹಾಗಾಗಿ ಮೊದಲಿಗೆ ಬಾತ್‌ರೂಮಿನ ಕೆಲಸಗಳನ್ನೆಲ್ಲ ಮುಗಿಸಿ, ಆನಂತರವೇ ತೂಕದ ಮಿಷನ್‌ನತ್ತ ಗಮನ ಹರಿಸಿ.

ಈ ಸುದ್ದಿಯನ್ನೂ ಓದಿ: Biotin Deficiency: ಈ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನಿಮಗೆ ಬಯೋಟಿನ್‌ ಕೊರತೆಯಿದೆ ಎಂದರ್ಥ; ಅದಕ್ಕೆ ಪರಿಹಾರವೇನು?