Wednesday, 27th November 2024

UN Recognition: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ವಿಶ್ವಸಂಸ್ಥೆಯ ಮಾನ್ಯತೆ!

UN recognition

ಕಾರವಾರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ ಪ್ರಾಪ್ತವಾಗಿದೆ. ಯಕ್ಷಗಾನ ರಂಗ ಭೂಮಿಯ ಇತಿಹಾಸವನ್ನು ಹಲವು ಸರ್ವ ಪ್ರಥಮಗಳ ದಾಖಲೆ ನಿರ್ಮಿಸಿದ ಮಂಡಳಿ, ಇಂದು ವಿಶ್ವಸಂಸ್ಥೆಯ (UN recognition) ಗೌರವ ಪಡೆದುಕೂಂಡಿದ್ದು, ಯಕ್ಷಗಾನ ಸಂಸ್ಥೆಯೊಂದಕ್ಕೆ ಈ ಮಾನ್ಯತೆ ಪ್ರಥಮ ಬಾರಿಯಾಗಿ ಬಂದಿದೆ. ಸ್ವಾತಂತ್ಯ ಪೂರ್ವದಲ್ಲಿ 1934ರಲ್ಲಿ ಸ್ಥಾಪನೆಯಾದ ಮಂಡಳಿಗೆ ಈಗ 90ನೇ ವರ್ಷದ ಸಂಭ್ರಮ. ಇದೇ ಸಂದರ್ಭದಲ್ಲಿ ವಿಶ್ವಮನ್ನಣೆ ಸಂಸ್ಥೆಗೆ ದೊರಕಿದ್ದು, ಅತಿಯಾದ ಹೆಮ್ಮೆ ಸಂತೋಷದ ಸಂಗತಿಯಾಗಿದೆ ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ವಿಶ್ವದ 58 ರಾಷ್ಟ್ರೀಯ ಸಂಸ್ಥೆಗಳ ಪೈಕಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಒಂದಾಗಿದೆ ಎಂಬುದು ಇಡೀ ಕರ್ನಾಟಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೂ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ ಎಂದು ಹೇಳಿದ್ದಾರೆ.

ಯುನೆಸ್ಕೋ ಮಾನ್ಯತೆ ಇಡಗುಂಜಿ ಮಂಡಳಿ ಸುದೀರ್ಘವಾಗಿ, ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ ಈ ಎಲ್ಲಾ ಪ್ರಯತ್ನ ಹಾಗೂ ಸಾಧನೆಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವವಾಗಿದೆ ಎಂದು ತಿಳಿಸಿದ್ದಾರೆ.

ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದಲ್ಲಿ ರಂಗಮಂದಿರ, ಯಕ್ಷಗಾನ ಪ್ರದರ್ಶನ, ಯಕ್ಷಗಾನ ಗುರುಕುಲ, ಶಿಕ್ಷಣ, ಆಟವೇ ಪಾಠ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಭಾಸಂ, ಪ್ರಾತ್ಯಕ್ಷತೆ, ಅಧ್ಯಯನ, ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಕಳೆದ 90 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಡಳಿಯ ಸಾಧನೆ ಅಪಾರವಾದದ್ದು ಎಂದು ಮಾಹಿತಿ ನೀಡಿದ್ದಾರೆ.