ಬೆಂಗಳೂರು: ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ (Film City in Mysuru) ನಿರ್ಮಾಣಕ್ಕಾಗಿ ಈಗಾಗಲೇ ಗುರುತಿಸಲಾಗಿರುವ 110 ಎಕರೆ ಕೆಐಎಡಿಬಿ ಭೂಮಿಯನ್ನು ಆದಷ್ಟು ಬೇಗನೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಚಿತ್ರನಗರಿ ನಿರ್ಮಿಸುವ ಕುರಿತು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಾರ್ತಾ ಇಲಾಖೆ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಆದಷ್ಟು ಬೇಗನೆ ಟೆಂಡರ್ ಕರೆದು ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ ಮಾಡಲು ಟೆಂಡರ್ ಕರೆಯಬೇಕು. ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಜಮೀನಿಗೆ ಕಾಂಪೌಂಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ ಅವರು, ಮೂರು ವರ್ಷಗಳ ಒಳಗಾಗಿ ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಚಿತ್ರರಂಗದವರ ಅಭಿಪ್ರಾಯಗಳನ್ನು ಸಹ ಪಡೆದುಕೊಂಡು, ಎಲ್ಲಾ ಸೌಲಭ್ಯಗಳು ಒಳಗೊಂಡಿರುವ ಚಿತ್ರನಗರ ನಿರ್ಮಾಣವಾಗಬೇಕು ಎಂದು ಹೇಳಿದರು.
ಹೈದರಾಬಾದ್ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು. ಸಿನಿಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಇಲ್ಲಿ ಲಭ್ಯವಿರಬೇಕು. ಈ ಕುರಿತು ದೇಶದ ಪ್ರಮುಖ ಮೂರು ಚಿತ್ರನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ಸೂಚನೆ ನೀಡಿದರು.
ಸರ್ಕಾರಕ್ಕೆ ಹೊರೆಯಾಗದಂತೆ ಚಿತ್ರನಗರಿ ನಿರ್ಮಾಣವಾಗಬೇಕು. ಚಿತ್ರನಗರಿ ಸ್ವರೂಪ ಕುರಿತಾಗಿ ಸಮಗ್ರವಾದ ವರದಿಯನ್ನು ಸಲ್ಲಿಸಲು ಸೂಚಿಸಬೇಕು. ಚಿತ್ರ ನಗರಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಲು ಅವರು ಸೂಚನೆ ನೀಡಿದರು.
ಈ ಸುದ್ದಿಯನ್ನೂ ಓದಿ | HD Kumaraswamy: ಎಚ್ಡಿಕೆ ವಿರುದ್ಧ ಕೊಳಕು ಶಬ್ದ ಬಳಕೆ; ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ದೂರು
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.