ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಚಿಂತನೆಗಳಿಗೆ ಜೀವಕೊಟ್ಟಾಗ ಮಾತ್ರವೇ ಮೇಲೆ ಚಮತ್ಕಾರ ನಡೆಯುತ್ತದೆ. ‘ದೇವರು ಕೊಟ್ಟ ಜೋಳಿಗೆ ಎಂದು ಮರಕ್ಕೆ ನೇತುಹಾಕಿ ನಿದ್ರಿಸಿದರೆ ದವಸ-ಧಾನ್ಯ ಸಿಗುವುದಿಲ್ಲ’ ಎಂದಿದ್ದಾರೆ ಬಲ್ಲವರು. ದೇವರೇ ಕೊಟ್ಟ ಜೋಳಿಗೆ ಹಿಡಿದು ಭಿಕ್ಷೆಗೆ ಸುತ್ತಬೇಕು. ಸರಿಯಾಗಿ ಕೆಲಸ ಮಾಡದೆ ವಿತಂಡವಾದ ಮಾಡಿದರೆ ಪ್ರಯೋಜನವಿಲ್ಲ.
ಹಾಗೇ ಸುಮ್ಮನೆ ನಿಮ್ಮ ಸುತ್ತಮುತ್ತ ತಿರುಗಿ ನೋಡಿ, ನಿಮ್ಮ ಕಣ್ಣಿಗೆ ಏನು ಕಾಣಿಸುತ್ತಿದೆ ಎನ್ನುವುದನ್ನು ಬರೆದಿಟ್ಟು ಕೊಳ್ಳಿ. ನಿಮ್ಮ ಸುತ್ತಮುತ್ತ ಇರುವ ಹತ್ತು ಜನರ ಹೆಸರನ್ನು, ವಸ್ತುಗಳನ್ನು, ನಿಮ್ಮ ಇಂದಿನ ಪರಿಸ್ಥಿತಿಯನ್ನು, ನಿಮ್ಮ ಆರೋಗ್ಯ, ಹಣ… ಒಟ್ಟಾರೆ ನಿಮ್ಮ ದಿನ ನಿತ್ಯದ ಬದುಕಿನಲ್ಲಿ ಸಹಜವಾಗಿ ಭಾಗಿಯಾಗುವ ಎಲ್ಲವನ್ನೂ ಒಮ್ಮೆ ಅವಲೋಕಿಸಿ ನೋಡಿ. ಅದ್ಯಾವುದೂ ನಿಮಗೆ ಒಂದು ದಿನದಲ್ಲಿ ಸಿಕ್ಕಿದ್ದಲ್ಲ!
ಅದನ್ನು ನೀವು ಬಯಸಿ ಪಡೆದುಕೊಂಡಿದ್ದು. ಅದನ್ನು ಪಡೆಯಲು ನೀವು ಪ್ರಜ್ಞಾಪೂರ್ವಕವಾಗಿಯೋ ಅಥವಾ ಇಲ್ಲದೆಯೋ ಕೆಲಸ ಮಾಡಿರುತ್ತೀರಿ. ಹೀಗಾಗಿ ಇಂದು ನಿಮ್ಮ ಸುತ್ತಮುತ್ತ ಇರುವುದೆಲ್ಲವೂ ನೀವು ಸೃಷ್ಟಿಸಿ ಕೊಂಡಿದ್ದು. ನಿಮ್ಮ ಇಂದಿನ ಕಥೆಯ ನಿಜವಾದ ಮಾಲೀಕರು ಯಾರಾದರೂ ಇದ್ದರೆ ಅದು ನೀವು ಮಾತ್ರ!
ಇಂದಿನ ನಿಮ್ಮ ಜೀವನ ಹಸನಾಗಿದ್ದರೆ ಮೇಲಿನ ನನ್ನ ಮಾತುಗಳನ್ನು ಒಪ್ಪುವುದರಲ್ಲಿ ಯಾರಿಗೂ ಕಷ್ಟವಾಗುವು ದಿಲ್ಲ.
ಆದರೆ ಇಂದಿನ ಜೀವನ ಅತ್ಯಂತ ಕಷ್ಟದಿಂದ ಇದ್ದು, ಎಲ್ಲದರಲ್ಲೂ ಸೋಲು ಕಾಣುತ್ತಿದ್ದು, ಕಣ್ಮುಂದಿನ ಬದುಕು ಕಪ್ಪು ಬಿಳುಪಾಗಿದ್ದು, ಬದುಕಿನಲ್ಲಿ ಕಲರ್ ಇಲ್ಲವಾಗಿದ್ದರೆ ಅದಕ್ಕೂ ನೀವೇ ಕಾರಣ. ಒಪ್ಪುವುದು, ಬಿಡುವುದು ಆಮೇಲಿನ ಮಾತು. ಹೌದು ನಿಮ್ಮ ಕಥೆಯನ್ನು ನೀವೇ ಬರೆದು ಕೊಂಡಿದ್ದೀರಿ. ಕಥೆ ಗೆಲುವಿನ ಕಥೆಯಾಗದೆ, ಸೋಲು ಮತ್ತು ಗೋಳಿನ ಕಥೆಯಾದರೆ ಅದಕ್ಕೂ ಬೇರೆ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಈ ಅಧ್ಯಾಯವನ್ನು ಮೊದಲ ಅಧ್ಯಾಯವನ್ನಾಗಿ ಮಾಡಬೇಕು ಎನ್ನಿಸಿದ್ದು ಕೂಡ ನಿಜ. ಅದಕ್ಕೆ ಕಾರಣ ಸ್ಪಷ್ಟ.
ಅದೆಂದರೆ- ಇವತ್ತಿಗೂ ಬಹುತೇಕರಿಗೆ ತಮ್ಮ ಹಣೆಬರಹವನ್ನು ಬರೆದುಕೊಳ್ಳುವವರು ತಾವೇ ಎನ್ನುವ ಸರಳ ಸತ್ಯ ಗೊತ್ತಿಲ್ಲದೇ ಇರುವುದು. ಇಂಥವರು ಎಲ್ಲಾ ಸೋಲುಗಳಿಗೂ ಹಣೆಬರಹವನ್ನು, ವಿಧಿಯನ್ನು, ಬಂಧು- ಮಿತ್ರರನ್ನು, ಸಮಯವನ್ನು, ವ್ಯವಸ್ಥೆಯನ್ನು ದೂಷಿಸಿಕೊಂಡು ಕಾಲ ಹಾಕುತ್ತಾರೆ. ದಯವಿಟ್ಟು ಕ್ಷಮೆ ಇರಲಿ ಸ್ನೇಹಿತರೆ, ಇದು ಶುದ್ಧ ಸುಳ್ಳು. ನೀವು ಸಮುದ್ರದ ದಂಡೆಯಲ್ಲಿ ಎಷ್ಟೇ ವೇಳೆ ಕಾಯುತ್ತ ಕುಳಿತುಕೊಳ್ಳಿ- ನೀರು ಬಿಸಿಯಾದ ಮೇಲೆ ಈಜಾಡಲು ಇಳಿಯುತ್ತೇನೆ ಎನ್ನುವ ಆಶಾಭಾವದಲ್ಲಿ; ಅದೆಂದಿಗೂ ಆಗದ ವಿಷಯ.
ಬದುಕು ಕೂಡ ಥೇಟ್ ಹಾಗೆಯೇ, ಕಾಯುತ್ತ ಕುಳಿತರೆ ಕಾಯುತ್ತಲೇ ಕುಳಿತಿರುತ್ತೇವೆ. ಈ ಅಗಾಧ ಪ್ರಪಂಚದಲ್ಲಿ ಯಾರೂ ನಮಗೆ ಜಾಗವನ್ನು ಬಿಟ್ಟುಕೊಡುವುದಿಲ್ಲ, ಇಲ್ಲಿ ನಮ್ಮ ಜಾಗವನ್ನು ನಾವೇ ಸೃಷ್ಟಿಸಿಕೊಳ್ಳಬೇಕು.
ವೃತ್ತಿ-ಪ್ರವೃತ್ತಿಯ ಸಲುವಾಗಿನ ವ್ಯಾಪಕ ಓಡಾಟದಲ್ಲಿ ನನಗೆ ಬಹಳಷ್ಟು ಜನರ ಪರಿಚಯವಾಗಿದೆ, ಮಾತುಕತೆ ಯಾಗಿದೆ. ಅದರಲ್ಲಿ ಒಂದಷ್ಟು ಪ್ರತಿಶತ ಜನರು ಮಾತ್ರ ತಮಗೆ ಬೇಕಾದ ಯಶಸ್ಸು, ಹಣ, ಬದುಕು ಕಟ್ಟಿಕೊಂಡಿzರೆ. ಉಳಿದ ಬಹುತೇಕರ ಕಥೆ, ಅದು ಗೋಳಿನ ಕಥೆ. ಹಣೆಬರಹ, ಪೂರ್ವಜನ್ಮದ ಋಣ ಇತ್ಯಾದಿಗಳ ಮೇಲೆ ಸೋಲಿನ ಕಾರಣ ಹೊರಿಸಿ, ಇಷ್ಟವಿಲ್ಲದ ಬದುಕನ್ನೇ ಬದುಕುತ್ತಿರುತ್ತಾರೆ. ಇಂಥ ವ್ಯಕ್ತಿಗಳನ್ನು ನಾನು ಕೆಲವು ಬಾರಿ ಪ್ರಶ್ನೆ ಮಾಡಿದ್ದೇನೆ- ‘ನಿಮ್ಮ ಬಳಿ ಸಮಯ ಮತ್ತು ಹಣ ಎರಡೂ ಹೇರಳವಾಗಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?’ ಅಂತ.
ತಕ್ಷಣವೇ, ‘ಓಹ್, ಬದುಕು ತುಂಬಾ ಖುಷಿಯಾಗಿರುತ್ತಿತ್ತು’ ಎನ್ನುವುದು ಸಾಮಾನ್ಯ ಉತ್ತರ. ಖುಷಿಯಾಗಿರುವುದು ಮನಸ್ಥಿತಿ. ಅದಕ್ಕೆ ನಿಗದಿತ ಸಮಯ ಅಥವಾ ಹಣದ ಅವಶ್ಯಕತೆ ಇಲ್ಲವೇ ಇಲ್ಲ, ಇರಲಿ. ಖುಷಿಯಾಗಿರುವುದು ಎಂದರೇನು? ಎನ್ನುವ ಪ್ರಶ್ನೆಗೆ ಉತ್ತರವೂ ಬಹುತೇಕ ರೆಡಿಮೇಡ್. ಅದನ್ನು ಈ ಸಮಾಜ ನಮಗೆ ಕಲಿಸಿ ಕೊಟ್ಟಿದೆ. ನನಗನ್ನಿಸಿದ್ದನ್ನೆ ಮಾಡುವುದು, ನನ್ನಿಷ್ಟದ ಕೆಲಸ ಮಾಡುವುದು, ಪ್ಯಾಷನ್ ಹಿಂದೆ ಹೋಗುವುದು ಇತ್ಯಾದಿ ಸಿದ್ಧ ಉತ್ತರಗಳು ಸಿಗುತ್ತವೆ.
ಆಗೆ, ‘ಓಹ್ ಗ್ರೇಟ್… ನಿಮ್ಮಿಷ್ಟದ ಕೆಲಸ ಯಾವುದು? ನಿಮ್ಮ ಪ್ಯಾಷನ್ ಏನು?’ ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ. ಆಗ ಬರುವ ಉತ್ತರವೇ ಅವರವರ ಸದ್ಯದ ಪರಿಸ್ಥಿತಿಗೆ ಕಾರಣ. ಇಂಥವರಿಂದ ಸಾಮಾನ್ಯವಾಗಿ ಬರುವ ಉತ್ತರ
‘ಓಹ್ ಗೊತ್ತಿಲ್ಲ, ಹಣ, ಸಮಯ ಸಿಕ್ಕಾಗ ಯೋಚಿಸಿ, ಒಳ್ಳೆಯ ನಿರ್ಧಾರ ಮಾಡುತ್ತೇನೆ’ ಎನ್ನುವುದು. ಅಂದರೆ ಗಮನಿಸಿ ಬಹುತೇಕರಿಗೆ ‘ಏನು ಬೇಕು? ಏನಾಗಬೇಕು? ಈ ಬದುಕಿನಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳಬೇಕು, ಅದಕ್ಕಾಗಿ ಏನು ಮಾಡ ಬೇಕು?’ ಎನ್ನುವ ಅತ್ಯಂತ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿದ್ಧವಿಲ್ಲ. ಆಟೋ ಹತ್ತಿದ ತಕ್ಷಣ ಹೋಗಬೇಕಾದ ಸ್ಥಳವನ್ನು ಹೇಳದಿದ್ದರೆ ಡ್ರೈವರ್ ಎಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯ? ಥೇಟ್ ಹಾಗೆಯೇ ನೀವು ನಿಮ್ಮ ಸುಪ್ತ ಮನಸ್ಸಿಗೆ ಏನು ಬೇಕು ಎನ್ನುವುದನ್ನೇ ಫೀಡ್ ಮಾಡದಿದ್ದರೆ ಅದು ಬೇಕಾದ
ಫಲಿತಾಂಶವನ್ನು ಹೇಗೆ ತಾನೇ ನೀಡೀತು? ಎಲ್ಲಕ್ಕೂ ಮೊದಲಿಗೆ ನಾನು ಎಲ್ಲಿದ್ದೇನೆ? ಎಲ್ಲಿಗೆ ಹೋಗಬೇಕು?
ಈ ಪ್ರಯಾಣಕ್ಕೆ ತಗಲುವ ಸಮಯವೆಷ್ಟು? ಖರ್ಚೆಷ್ಟು? ಎನ್ನುವುದನ್ನು ಅರಿತಿರಬೇಕು.
ಖರ್ಚು ಎಂದರೆ ಅದು ಹಣವೇ ಆಗಿರಬೇಕೆಂದಿಲ್ಲ. ಒಟ್ಟಿನಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ. ಎಲ್ಲವೂ
ಒಂದು ಮೌಲ್ಯವನ್ನು ಬೇಡುತ್ತವೆ. ಇದನ್ನು ತಿಳಿದುಕೊಳ್ಳಬೇಕು. ಈಗ ನಾವಿರುವ ಜಾಗ ಅಂದರೆ ನಮ್ಮ ಪರಿಸ್ಥಿತಿಯ ಬಗ್ಗೆ ನಮಗೆ ಒಪ್ಪಿಗೆಯಿಲ್ಲ ಅಥವಾ ಖುಷಿ, ಹೆಮ್ಮೆಯಿಲ್ಲ ಎಂದಾದರೆ, ಆಗ ಎಲ್ಲಿಗೆ ಹೋಗಬೇಕು ಅಂದರೆ ಏನನ್ನು ಮಾಡಬೇಕು ಅಥವಾ ಬೇರಾವ ಪರಿಸ್ಥಿತಿಗೆ ಹೋಗಬೇಕು, ಸರಳವಾಗಿ ಏನು ಬೇಕು ಎನ್ನುವುದನ್ನು ಕಂಡುಕೊಳ್ಳ ಬೇಕು. ನೆನಪಿರಲಿ- ಎಲ್ಲಿದ್ದೇವೆ ಎನ್ನುವುದರಿಂದ ಎಲ್ಲಿಗೆ ಹೋಗಬೇಕು ಎನ್ನುವ ಎರಡು ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಅಲ್ಲಿಗೆ ಅರ್ಧ ಕೆಲಸವಾದಂತೆ! ಉಳಿದರ್ಧಕ್ಕೆ ಸಮಯ, ಪರಿಶ್ರಮದ ಅವಶ್ಯಕತೆ ಜತೆಯಾದರೆ ಸಾಕು.
ಈ ವೇಳೆಗೆ ಕೆಲವರು, ‘ಇವೆಲ್ಲವೂ ಹೇಳಲು, ಕೇಳಲು ಬಹಳ ಚಂದ; ಆದರೆ ಇದು ಸಾಧ್ಯವೇ?’ ಎನ್ನುವ ಪ್ರಶ್ನೆಯನ್ನು
ಕೇಳಿಕೊಂಡಿರುತ್ತಾರೆ. ಅವರಿಗಾಗಿ ಮತ್ತು ನಿಮ್ಮೆಲ್ಲರಿಗಾಗಿ ಕಳೆದ ಎರಡು ದಶಕಗಳ ಹಿಂದೆ ಇದ್ದ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ, ಇಂದಿನ ಪ್ರಪಂಚವನ್ನು ಗಮನಿಸಿ ನೋಡಿ. ಆಗಿರುವ ಅಗಾಧ ಬದಲಾವಣೆ ಕಣ್ಣಿಗೆ ಕಾಣುತ್ತದೆ. ನೀವು ಅಂದುಕೊಂಡ ತಕ್ಷಣ, ನಿರ್ಧಾರ ತೆಗೆದುಕೊಂಡ ತಕ್ಷಣ ಬದುಕು ಬದಲಾಗುವುದಿಲ್ಲ. ಪುಸ್ತಕ ಓದುವುದರಿಂದ, ಈ ಲೇಖನ ಓದುವುದರಿಂದ ಕೂಡ ನಿಮ್ಮ ಬದುಕು ಬದಲಾಗುವುದಿಲ್ಲ! ಬೆಂಬಿಡದೆ ಅಂದು ಕೊಂಡ ಕಡೆಗೆ ನಿಲ್ಲದ ಪ್ರಯಾಣವಿರಬೇಕು, ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಸಮಯದ ಜತೆಗೆ ಬದುಕು ಖಂಡಿತ ಬದಲಾಗುತ್ತದೆ.
ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಸದಾ ಬದಲಾವಣೆ ಆಗುತ್ತಿರುತ್ತದೆ, ನಿತ್ಯವೂ ನೂರೆಂಟು ಘಟನೆಗಳು ಜರುಗು ತ್ತವೆ. ಇವೆಲ್ಲವೂ ನಮ್ಮ ಯೋಚನೆಯ, ನಿರ್ಧಾರಗಳ ಫಲ. ಒಳ್ಳೆಯ ಯೋಚನೆಗಳ ಫಲಿತಾಂಶ ಒಳಿತನ್ನೂ ಕೆಟ್ಟ ಯೋಚನೆಗಳ ಫಲ ಕೆಡುಕನ್ನೂ ನೀಡುತ್ತವೆ.
ನಮ್ಮ ಯೋಚನೆಗಳಿಗೆ, ಚಿಂತನೆಗಳಿಗೆ ಇರುವ ತಾಕತ್ತಿನ ಅರಿವು ನಮಗಾದರೆ ನಾವು ಎಂದಿಗೂ ಋಣಾತ್ಮಕ ಚಿಂತನೆಗಳನ್ನು ಮಾಡುವುದಿಲ್ಲ. ಧನಾತ್ಮಕ ಯೋಚನೆಯಿಂದ ಪವಾಡವೇ ಜರುಗುತ್ತದೆ. ವೈದ್ಯಕೀಯ ವಿeನವನ್ನು ಒಮ್ಮೆ ಗಮನಿಸಿ ನೋಡಿ. ಹತ್ತಿಪತ್ತು ಸಂಖ್ಯೆಯ ಇಲಿಗಳ ಮೇಲಿನ ಪ್ರಯೋಗ ಇದನ್ನು ಸಿದ್ಧಪಡಿಸಿದೆ. ಒಳ್ಳೆಯ ಮಾತು, ಒಳ್ಳೆಯ ವಾತಾವರಣದಲ್ಲಿದ್ದ ಇಲಿಗಳಿಗೂ, ಋಣಾತ್ಮಕ ವಾತಾವರಣದಲ್ಲಿದ್ದ ಇಲಿಗಳಿಗೂ ಒಂದೇ ಆಹಾರವನ್ನು ನೀಡಿದಾಗ, ಧನಾತ್ಮಕ ಪರಿಸರದಲ್ಲಿನ ಇಲಿಗಳು ಹೆಚ್ಚು ಖುಷಿಯಿಂದ, ಆರೋಗ್ಯದಿಂದ ಇರುವುದು
ಕಂಡುಬಂದಿದೆ.
ನಿತ್ಯವೂ ನಾವು ಆಡುವ ಮಾತು, ನಡೆದುಕೊಳ್ಳುವ ರೀತಿ ಅಭ್ಯಾಸವಾಗಿ ಬದಲಾಗುತ್ತವೆ. ಅಭ್ಯಾಸಗಳು ನಿಧಾನವಾಗಿ ನಮ್ಮ ಪರಿಚಯವಾಗುತ್ತವೆ. ನಮ್ಮ ಪರಿಚಯ ನಮ್ಮ ಚಿಂತನೆಗಳನ್ನು ಜಗತ್ತಿಗೆ ಪ್ರಚುರಪಡಿಸುತ್ತದೆ. ಹೀಗಾಗಿ ನಾವು ನಿತ್ಯವೂ ನಮ್ಮ ಅಭ್ಯಾಸಗಳನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಬದುಕನ್ನು ಖಂಡಿತ ಬದಲಿಸಿ ಕೊಳ್ಳಬಹುದು.
ಧನಾತ್ಮಕ ಚಿಂತನೆಗಳಿಂದ ಎಲ್ಲವೂ ಸಾಧ್ಯ ಎನ್ನುವುದನ್ನು ಅವಹೇಳನ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಎಲ್ಲವನ್ನೂ ಕೇವಲ ಯೋಚನೆ, ಚಿಂತನೆಗಳಿಂದ ಸಾಧಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಾದ ಇವರದು. ‘ಹೊಟ್ಟೆ ತುಂಬಿದೆ ಎನ್ನುವ ಭಾವನೆಯಿಂದ ಎಷ್ಟು ದಿನ ಊಟ ಮಾಡದೆ ಇರಲು ಸಾಧ್ಯ? ನನಗೆ ಸಮಸ್ಯೆಗಳು ಇಲ್ಲ ಅಥವಾ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಧನಾತ್ಮಕ ಯೋಚನೆಯಿಂದ ಸಮಸ್ಯೆ ಪರಿಹಾರವಾಗುತ್ತದೆಯೇ?’ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾರೆ.
ಗಮನಿಸಿ, ಚಿಂತನೆಗಳಿಗೆ ಜೀವಕೊಟ್ಟಾಗ ಮಾತ್ರವೇ ಮೇಲೆ ಹೇಳಿದ ಚಮತ್ಕಾರ ನಡೆಯುತ್ತದೆ. ಇದನ್ನು ಕನ್ನಡದ ಒಂದು ನಾಣ್ಣುಡಿ ಚೆನ್ನಾಗಿ ವಿವರಿಸುತ್ತದೆ. ‘ದೇವರು ಕೊಟ್ಟ ಜೋಳಿಗೆ ಎಂದು ಮರಕ್ಕೆ ನೇತುಹಾಕಿ ನಿದ್ದೆ ಮಾಡಿದರೆ ದವಸ-ಧಾನ್ಯಗಳು ಸಿಗುವುದಿಲ್ಲ’ ಎನ್ನುತ್ತದೆ ಆ ಮಾತು. ಸ್ವತಃ ದೇವರೇ ಜೋಳಿಗೆ ಕೊಟ್ಟಿದ್ದರೂ ಅದನ್ನು ಹಿಡಿದು ಭಿಕ್ಷೆಗೆ ಊರೂರು ಸುತ್ತಬೇಕಾದ್ದು ಕರ್ತವ್ಯ. ಕೆಲಸವನ್ನು ಸರಿಯಾಗಿ ಮಾಡದೆ ವಿತಂಡವಾದದಿಂದ ಯಾವುದೇ
ಪ್ರಯೋಜನವಿಲ್ಲ.
ನಂಬಿಕೆ, ಧನಾತ್ಮಕತೆ ಎಲ್ಲವೂ ಬದುಕಿಗೆ ಬೇಕು. ಅವೆಲ್ಲವುಗಳ ಜತೆಗೆ ನಿತ್ಯಜೀವನಕ್ಕೆ ಬೇಕಾಗುವ ಸಾಮಾನ್ಯ ಜ್ಞಾನ ಮತ್ತು ರಿಯಾಲಿಟಿಗಳ ಅರಿವು ಕೂಡ ಮುಖ್ಯ. ಯಾವ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ. ಅದನ್ನು ನಾವೇ ಕಲಿಯಬೇಕು. ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ. ನಾವಿರುವ ಪರಿಸ್ಥಿತಿ ಎಷ್ಟೇ ಚಂದವಿರಲಿ ಅದು ಬದಲಾಗುತ್ತದೆ, ಬದಲಾಗಬೇಕು. ಇಲ್ಲದಿದ್ದರೆ ನಾವೇ ಬದಲಾ ಯಿಸುತ್ತೇವೆ. ನೀವು ಓದುತ್ತಿರುವ ಪುಸ್ತಕದ ಒಂದು ಅಧ್ಯಾಯದಲ್ಲಿನ ಪುಟದಲ್ಲಿ ಒಳ್ಳೆಯ ಮಾಹಿತಿ ಇದ್ದರೆ, ಅದನ್ನು ಓದಿ ಬಹಳ ಮುದಗೊಂಡಿರುತ್ತೀರಿ.
ಹಾಗಂತ ಎಷ್ಟು ಸಮಯ ಅದೇ ಹಾಳೆಯಲ್ಲಿ ಉಳಿಯಬಹುದು? ಮುಂದಿನ ಪುಟಕ್ಕೆ ಹೋಗಲೇಬೇಕು, ಪುಟ ತಿರುಗಿಸದೆ ವಿಧಿಯಿಲ್ಲ. ಬದುಕೂ ಹಾಗೆಯೇ ಬದಲಾಗಬೇಕು, ಬದಲಾವಣೆಗೆ ಒಗ್ಗಿಕೊಳ್ಳಬೇಕು. ಸಮಯಕ್ಕೆ ತಕ್ಕಂತೆ ನಮ್ಮ ಬದುಕಿನ ಸ್ಕ್ರಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬೇರೆ ಯಾರೋ ಬರೆದ ಸ್ಕ್ರಿಪ್ಟ್ ನಲ್ಲಿ ಪಾತ್ರವಾಗುವು ದಕ್ಕಿಂತ ನಾವೇ ಬರೆದ ಕಥೆಯಲ್ಲಿ ನಮ್ಮನ್ನು ಕಂಡುಕೊಳ್ಳುವುದರಲ್ಲಿ ಸುಖವಿದೆ. ನೆನಪಿರಲಿ- ಇಲ್ಲಿ ನಮ್ಮ ಕಥೆಯ ಬರಹಗಾರ, ಪಾತ್ರಧಾರಿ, ನಿರ್ದೇಶಕ ಎಲ್ಲವೂ ನಾವೇ. ಗೆಲುವಿಗೂ, ಸೋಲಿಗೂ ಕಾರಣರು ನಾವೇ. ಅದು ಬೇರಾರೂ ಆಗಿರಲು ಸಾಧ್ಯವಿಲ್ಲ.
ಇದನ್ನೂ ಓದಿ: Rangaswamy Mookanahalli column: ಮನಿ-ಮ್ಯಾಟರ್: ಹೆಣ್ ಮಕ್ಳೇ ಸ್ಟ್ರಾಂಗು ಗುರು!