Friday, 29th November 2024

Champions Trophy: ಪಾಕ್‌ ಪ್ರವಾಸವನ್ನು ಕೇಂದ್ರ ನಿರ್ಧರಿಸಲಿದೆ ಎಂದ ಬಿಸಿಸಿಐ ಉಪಾಧ್ಯಕ್ಷ

Champions Trophy

ಮುಂಬಯಿ: ಮುಂದಿನ ವರ್ಷ ಪಾಕಿಸ್ತಾನದ(Pakistan) ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy) ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪಾಕ್‌ಗೆ ಪ್ರಯಾಣಿಸಲಿದೆಯಾ ಎನ್ನುವುದು ಸದ್ಯ ಬಹುಚರ್ಚಿತ ವಿಷಯ. ಇದೇ ವಿಚಾರವಾಗಿ ಬಿಸಿಸಿಐ(BCCI) ಉಪಾಧ್ಯಕ್ಷ ರಾಜೀವ್‌ ಶುಕ್ಲಾ(Rajeev Shukla) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ(Indian government) ನಿರ್ಧರಿಸಲಿದೆ ಎಂಬುದಾಗಿ ಹೇಳಿದ್ದಾರೆ.

ಭಾರತ ತಂಡ ಪಾಕ್‌ಗೆ ತೆರಳುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪ್ರತಿಯೊಂದು ಅಂತಾರಾಷ್ಟ್ರೀಯ ಪ್ರವಾಸಕ್ಕೂ ಕೇಂದ್ರದ ಸಮ್ಮತಿ ಪಡೆಯುವುದು ನಮ್ಮ ನೀತಿಯಾಗಿದೆ. ಇಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ. ಪಾಗ್‌ಗೆ ತೆರಳುವ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಕೇಂದ್ರ ಏನು ಹೇಳುತ್ತದೋ ಬಿಸಿಸಿಐ ಅದನ್ನು ಪಾಲಿಸುತ್ತದೆ ಎಂದು ರಾಜೀವ್‌ ಶುಕ್ಲಾ ಹೇಳಿದರು.

ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಐವರು ಸದಸ್ಯರ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಈ ಭೇಟಿ ವೇಳೆ ಪಂದ್ಯಾವಳಿ ನಡೆಯುವ ಲಾಹೋರ್‌ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ಕ್ರಮಗಳು, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಐಸಿಸಿಯ ಕಾರ್ಯಕ್ರಮ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಕ್ರಿಕೆಟ್‌ ಮತ್ತು ಪ್ರೊಡಕ್ಷನ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಈ ನಿಯೋಗದಲ್ಲಿದ್ದರು. ಐಸಿಸಿ ಅಧಿಕಾರಿಗಳು ಪಿಸಿಬಿಯ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು. ಹೀಗಾಗಿ ಪಾಕ್‌ನಲ್ಲಿಯೇ ಪಂದ್ಯ ನಡೆಯುವುದು ಖಚಿತ ಎನ್ನಲಾಗಿತ್ತು.

ಸದ್ಯದ ಮಾಹಿತಿ ಪ್ರಕಾರ ಈ ಕೂಟದಲ್ಲಿ ಭಾರತೀಯ ತಂಡ ಭಾಗವಹಿಸುವ ಸಾಧ್ಯತೆಯಿದೆ ಮತ್ತು ಭಾರತ ಆಡುವ ಎಲ್ಲ ಪಂದ್ಯಗಳು ಲಾಹೋರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಭಾರತೀಯ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅವಕಾಶ ನೀಡದಿದ್ದರೆ ಏನು ಮಾಡಬಹುದು ಎನ್ನುವುದು ತಿಳಿದುಬಂದಿಲ್ಲ.

ಇದನ್ನೂ ಓದಿ Team India : ಟೆಸ್ಟ್‌ ಮುಗಿಯುವ ಮೊದಲೇ 3 ಆಟಗಾರರನ್ನು ಹೊರಕ್ಕೆ ಕಳುಹಿಸಿದ ಬಿಸಿಸಿಐ

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ. ಪಾಕಿಸ್ತಾನ 7 ವರ್ಷಗಳ ಬಳಿಕ, ಕಳೆದ ವರ್ಷ ಏಕದಿನ ವಿಶ್ವಕಪ್‌ ಆಡಲು ಭಾರತಕ್ಕೆ ಬಂದಿತ್ತು.