Saturday, 16th November 2024

Gaumutra Row: ಗೋಮೂತ್ರ ಕುಡಿದರೆ ಮಾತ್ರ ಗರ್ಬಾ ಪೆಂಡಾಲ್‌ಗೆ ಎಂಟ್ರಿ; ಬಿಜೆಪಿ ಆದೇಶಕ್ಕೆ ಪ್ರತಿಪಕ್ಷಗಳು ಕಿಡಿ

Gaumutra Row

ಇಂಧೋರ್:‌ ಸಾರ್ವಜನಿಕ ಉತ್ಸವ, ಹಬ್ಬದ ಆಚರಣೆ ವೇಳೆ ಸುರಕ್ಷತೆ ದೃಷ್ಟಿಯಿಂದ ಅಲ್ಲಿ ಭಾಗವಹಿಸುವ ಜನರ ದಾಖಲೆಗಳನ್ನು ಪರಿಶೀಲಿಸುವುದು ಈಗೀಗ ಸರ್ವೇಸಾಮಾನ್ಯ. ದಾಖಲೆ ಪರಿಶೀಲಿಸಿ ಸಮಾರಂಭ ನಡೆಯುವ ಸ್ಥಳಕ್ಕೆ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಮಧ್ಯಪ್ರದೇಶದಲ್ಲಿ ಗೋಮೂತ್ರ(Gaumutra Row) ಸೇವನೆಯನ್ನೇ ಗರ್ಬಾ ಪೆಂಡಾಲ್‌(Garba pandals)ಗೆ ಎಂಟ್ರಿ ಪಾಸ್‌ ಮಾಡಿ ಆದೇಶ ಹೊರಡಿಸಿರುವ ವಿಚಾರ ಬಹಳ ಸದ್ದು ಮಾಡುತ್ತಿದೆ. ಬಿಜೆಪಿಯ ಈ ಆದೇಶ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ನವರಾತ್ರಿ ಸಂದರ್ಭದಲ್ಲಿ ಆಯೋಜಿಸಲಾಗುವ ಗರ್ಭಾ ನೃತ್ಯ ಸಮಾರಂಭದ ಪೆಂಡಾಲ್‌ ಒಳಗೆ ಪ್ರವೇಶಿಸುವ ಮುನ್ನ ಜನರು ಗೋಮೂತ್ರ ಸೇವಿಸಬೇಕು. ಗೋಮೂತ್ರ ಸೇವಿಸಿದವರಿಗೆ ಮಾತ್ರ ಗರ್ಭಾ ಪೆಂಡಾಲ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಇಂಧೋರ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ಶರ್ಮಾ ಕಾರ್ಯಕ್ರಮ ಆಯೋಜಕರಿಗೆ ಆದೇಶ ಹೊರಡಿಸಿದ್ದಾರೆ.

ಗರ್ಭಾ ಪೆಂಡಾಲ್‌ಗೆ ಪ್ರವೇಶಿಸುವವರು ಹಿಂದೂಗಳಾಗಿದ್ದರೆ ಅವರು ಗೋಮೂತ್ರ ಕುಡಿಯುವುದನ್ನು ವಿರೋಧಿಸುವುದಿಲ್ಲ. ಭಕ್ತರು ಗರ್ಬಾ ಪೆಂಡಾಲ್‌ಗೆ ಪ್ರವೇಶಿಸಲು ಅನುಮತಿಸುವ ಮೊದಲು ಗೋಮೂತ್ರ ಸೇವಿಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಘಟಕರನ್ನು ವಿನಂತಿಸಿದ್ದೇವೆ. ಆಧಾರ್ ಕಾರ್ಡ್ ಅನ್ನು ಎಡಿಟ್ ಮಾಡಬಹುದು, ಆದರೆ, ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದರೆ, ಅವನು ಗೋಮೂತ್ರ ಸೇವಿಸಿದ ನಂತರವೇ ಗರ್ಭಾ ಪೆಂಡಾಲ್‌ ಪ್ರವೇಶಿಸುತ್ತಾನೆ ಮತ್ತು ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಕಿಡಿ

ಬಿಜೆಪಿಯ ಈ ಆದೇಶಕ್ಕೆ ಕಾಂಗ್ರೆಸ್‌ ಕಿಡಿಕಾರಿದ್ದು,ಇದು ಪಕ್ಷದ ಧ್ರುವೀಕರಣದ ಹೊಸ ತಂತ್ರ ಎಂದು ಬಣ್ಣಿಸಿದೆ. ಗೋಶಾಲೆಗಳ ದುಃಸ್ಥಿತಿಯ ಬಗ್ಗೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಗೋವಿನ ವಿಚಾರವನ್ನು ಕೇವಲ ರಾಜಕೀಯಕ್ಕೆ ಬಳಸಿಕೊ‍ಳ್ಳುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ. ಗೋಮೂತ್ರದ ಬೇಡಿಕೆಯನ್ನು ಹೆಚ್ಚಿಸುವುದು ಧ್ರುವೀಕರಣದ ರಾಜಕೀಯ ಬಿಜೆಪಿಯ ಹೊಸ ತಂತ್ರವಾಗಿದೆ ಎಂದು ಸಂಸದ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಆರೋಪಿಸಿದ್ದಾರೆ.

ಮತ್ತೊಂದೆಡೆ ಮಹಾರಾಷ್ಟ್ರ ಸರಕಾರ(Maharashtra government) ಗೋವನ್ನು ʼರಾಜ್ಯ ಮಾತೆʼ ಎಂದು ಘೋಷಿಸಿದೆ. ಭಾರತದಲ್ಲಿ ಗೋವುಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಮಹಾಯುತಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಅಧಿಕೃತ ಆದೇಶದಲ್ಲಿ, ಗೋವುಗಳು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಪಾರಂಪರಿಕಾ ಮಹತ್ವವನ್ನು ಹೊಂದಿದೆ ಎಂದಿರುವ ಸರ್ಕಾರ, ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ . ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ:Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ