ಮುಂಬಯಿ: ಮುಂಬರುವ ಐಪಿಎಲ್ 18ನೇ(IPL 2025) ಆವೃತ್ತಿಗೆ ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ (BCCI) 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಎಲ್ಲ ಫ್ರಾಂಚೈಸಿಗಳು ಕೂಡ ಉಳಿಸಿಕೊಳ್ಳುವ ಮತ್ತು ಹರಾಜಿನಲ್ಲಿ ಖರೀದಿಸುವ ಆಟಗಾರರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲು ಆರಂಭಿಸಿದೆ. ಕೆಲ ಆಟಗಾರರು ತಮ್ಮ ಮೂಲ ಫ್ರಾಂಚೈಸಿ ಬಿಟ್ಟು ಬೇರೆ ಫ್ರಾಂಚೈಸಿ ಪರ ಆಡಲು ಮುಂದಾಗಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ(MI) ತಂಡದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಸೇರಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರೋಹಿತ್ ಮುಂಬೈ ತೊರೆದು ಲಕ್ನೋ(LSG) ತಂಡವನ್ನು ಸೇರಲಿದ್ದಾರೆ ಎನ್ನಲಾಗಿದೆ.
ಮೈ ಕೇಲ್ ವರದಿಯ ಪ್ರಕಾರ ರೋಹಿತ್ ಶರ್ಮ ಅವರು ಮುಂಬೈ ತಂಡದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ. ಅವರು ಲಕ್ನೋ ಪರ ಆಡಲಿದ್ದಾರೆ ಎಂದು ವರದಿ ಮಾಡಿದೆ. ಈ ಹಿಂದೆ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿದ್ದ ಜಹೀರ್ ಖಾನ್ ಈಗ ಲಕ್ನೋ ಫ್ರಾಂಚೈಸಿ ಸೇರಿದ್ದಾರೆ. ಜಹೀರ್ ಅವರು ರೋಹಿತ್ ಅವರನ್ನು ಲಕ್ನೋ ತಂಡ ಸೇರಿಸಿಕೊಳ್ಳಲು ತಂಡದ ಮಾಲಕ ಸಂಜೀವ್ ಗೋಯೆಂಕಾಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ IND vs BAN: ಕೊಹ್ಲಿ ಬ್ಯಾಟ್ನಲ್ಲಿ ಸತತ ಸಿಕ್ಸರ್ ಬಾರಿಸಿದ ವೇಗಿ ಆಕಾಶ್ ದೀಪ್; ವಿಡಿಯೊ ವೈರಲ್
ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ರನ್ನು ದಿಢೀರ್ ಬೆಳವಣಿಗೆ ಎಂಬಂತೆ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ವಹಿಸಿತ್ತು. ಆದರೇ ಅವರ ನಾಯಕತ್ವದಲ್ಲಿ ಹಿಂದೆದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯಗೆ ನಾಯಕತ್ವ ನೀಡಿದಾಗಲೇ ರೋಹಿತ್ ಮುಂಬೈ ತೊರೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ರೋಹಿತ್ ಒಂದು ಆವೃತ್ತಿಗೆ ಆಟ ಮುಂದುವರಿಸಿದ್ದರು. ಈ ಬಾರಿ ಅವರು ಮುಂಬೈಗೆ ಗುಡ್ ಬೈ ಹೇಳುವುದು ಖಚಿತ ಎನ್ನಲಾಗಿದೆ. ರೋಹಿತ್ ಮುಂಬೈ ತೊರೆಯಲಿದ್ದಾರಾ ಅಥವಾ ಅದೇ ತಂಡದಲ್ಲಿ ಮುಂವುವರಿಯಲಿದ್ದಾರಾ? ಎನ್ನುವ ಪ್ರಶ್ನೆಗೆ ಈ ತಿಂಗಳಾಂತ್ಯದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.
ರೋಹಿತ್ ಅವರು ಡೆಕ್ಕನ್ ಚಾರ್ಜಸ್ ಪರ ಆಡುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ್ದರು. ಈ ತಂಡ ತೊರೆದ ಬಳಿಕ ಇದುವರೆಗೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಒಟ್ಟು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಟ್ಟು 6 ಐಪಿಎಲ್ ಟ್ರೋಫಿ ಗೆದ್ದ ಆಟಗಾರನಾಗಿದ್ದಾರೆ. ಡೆಕ್ಕನ್ ಪರವೂ ಆಟಗಾರನಾಗಿ ಒಂದು ಕಪ್ ಗೆದ್ದಿದ್ದಾರೆ. ಇದುವರೆಗೆ 257 ಐಪಿಎಲ್ ಪಂದ್ಯಗಳಲ್ಲಿ 6628 ರನ್, ಬೌಲಿಂಗ್ನಲ್ಲಿ 15 ವಿಕೆಟ್ ಕಡೆವಿದ್ದಾರೆ. ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ. 2 ಶತಕ ಹಾಗೂ 43 ಅರ್ಧಶತಕ ಬಾರಿಸಿದ್ದಾರೆ.