Sunday, 6th October 2024

Monsoon 2024 : ಭಾರತದಲ್ಲಿ ಈ ಮುಂಗಾರು ಮಳೆಯ ಅನಾಹುತಕ್ಕೆ ಮೃತಪಟ್ಟವರು 1400 ಮಂದಿ

Monsoon 2024

ನವದೆಹಲಿ: 2024ರ ಮಾನ್ಸೂನ್ ಋತುವಿನಲ್ಲಿ (Monsoon 2024 ) ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಭಾರತದಲ್ಲಿ ಒಟ್ಟು 1,492 ಜನರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಹವಾಮಾನ ಇಲಾಖೆ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ. ಪ್ರವಾಹ ಮತ್ತು ಮಳೆ ಸಂಬಂಧಿತ ಘಟನೆಗಳಿಂದಾಗಿ 895 ಜನರು ಪ್ರಾಣ ಕಳೆದುಕೊಂಡರೆ ಮಾನ್ಸೂನ್ ಋತುವಿನಲ್ಲಿ ಗುಡುಗು ಮತ್ತು ಮಿಂಚಿನ ಹೊಡೆತದಿಂದ 597 ಜನರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ.

2024ರ ಮಾನ್ಸೂನ್ ಸಮಯದಲ್ಲಿ ದೇಶವು 525 ಭಾರಿ ಮಳೆಯನ್ನು ಎದುರಿಸಿದೆ. (115.6 ಮಿ.ಮೀ ಮತ್ತು 204.5 ಮಿ.ಮೀ ನಡುವಿನ ಮಳೆ) ಬಂದಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಅಂಕಿಅಂಶಗಳ ಪ್ರಕಾರ, ಋತುವಿನ ಆರಂಭದಲ್ಲಿ ಜಾರ್ಖಂಡ್‌ನಲ್ಲಿ 13 ಮತ್ತು ರಾಜಸ್ಥಾನದಲ್ಲಿ ನಾಲ್ವರು ಸೇರಿದಂತೆ 17 ಜನರು ಬಿಸಿಗಾಳಿಯಿಂದ ಮೃತಪಟ್ಟಿದ್ದರು.

ಜುಲೈ 30ರಂದು ಪರಿಸರ ಸೂಕ್ಷ್ಮ ವಯನಾಡ್ ಜಿಲ್ಲೆಯ ಭೂಕುಸಿತಕ್ಕೆ ಸೇರಿದಂತೆ ಕೇರಳದಲ್ಲಿ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ 397 ಸಾವುಗಳು ದಾಖಲಾಗಿವೆ. ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ 102 ಮತ್ತು 100 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಮತ್ತು ಭಾರಿ ಮಳೆಯ ಪರಿಣಾಮವಾಗಿ 13 ಸಾವಿನ ವರದಿಯಾಗಿವೆ.

ಗುಡುಗು ಮತ್ತು ಮಿಂಚಿನ ಹೊಡೆತದಿಂದಾಗಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಸಾವುಗಳು (189 ಸಂಭವಿಸಿವೆ. ಇನ್ನು ಉತ್ತರ ಪ್ರದೇಶ (138), ಬಿಹಾರ (61) ಮತ್ತು ಜಾರ್ಖಂಡ್ (53) ನಂತರದ ಸ್ಥಾನದಲ್ಲಿವೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಮಾನ್ಸೂನ್ ಅಂತ್ಯ

2024ರ ನೈಋತ್ಯ ಮಾನ್ಸೂನ್ ಋತುವು ಸೋಮವಾರ ಅಧಿಕೃತವಾಗಿ ಕೊನೆಗೊಂಡಿದೆ. ಭಾರತವು 934.8 ಮಿ.ಮೀ ಮಳೆ ದಾಖಲಿಸಿದೆ. ಇದು ದೀರ್ಘಾವಧಿಯ ಸರಾಸರಿಯ ಶೇಕಡಾ 107.6 ರಷ್ಟು ಮತ್ತು 2020 ರ ನಂತರದ ಅತಿ ಹೆಚ್ಚು ಮಳೆಯಾಗಿದೆ.

ಮಧ್ಯ ಭಾರತವು ಈ ಪ್ರದೇಶದ ದೀರ್ಘಾವಧಿಯ ಸರಾಸರಿಗಿಂತ ಶೇಕಡಾ 19 ರಷ್ಟು ಹೆಚ್ಚು ಮಳೆ ಪಡೆದಿದೆ. ದಕ್ಷಿಣದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 14ರಷ್ಟು ಹೆಚ್ಚು ಮಳೆಯನ್ನು ದಾಖಲಿಸಿದೆ. ವಾಯುವ್ಯ ಭಾರತವು ಸಾಮಾನ್ಯಕ್ಕಿಂತ ಶೇಕಡಾ 7 ರಷ್ಟು ಹೆಚ್ಚು ಮಳೆಯನ್ನು ಕಂಡಿದೆ. ವ್ಯತಿರಿಕ್ತವಾಗಿ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 14 ರಷ್ಟು ಕಡಿಮೆ ಮಳೆಯಾಗಿದೆ.

ಇದನ್ನೂ ಓದಿ : Narendra Modi : ಜಾತಿವಾದ ಮುಂದಿಟ್ಟು ದೇಶಭಕ್ತಿ ಹತ್ತಿಕ್ಕಲು ಕಾಂಗ್ರೆಸ್‌ ಯತ್ನ; ಮೋದಿ ಆರೋಪ

ಜೂನ್‌ನಲ್ಲಿ ಶೇ.11, ಜುಲೈನಲ್ಲಿ ಶೇ.9, ಆಗಸ್ಟ್‌ನಲ್ಲಿ ಶೇ.15.3 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.11.6ರಷ್ಟು ಮಳೆ ಕೊರತೆಯಾಗಿದೆ.

ಭಾರತದ ಭೌಗೋಳಿಕ ಪ್ರದೇಶವನ್ನು 36 ಹವಾಮಾನ ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. 21 ಉಪವಿಭಾಗಗಳು ಸಾಮಾನ್ಯ ಮಳೆ ದಾಖಲಿಸಿವೆ, 10 ಹೆಚ್ಚುವರಿ ಮಳೆ ಕಂಡಿವೆ. ಎರಡು ಅತಿ ಹೆಚ್ಚಿನ ಮಳೆಯನ್ನು ಕಂಡಿವೆ.