Sunday, 24th November 2024

Chikkaballapur News: ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕು: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

Chikkaballapur News

ಚಿಕ್ಕಬಳ್ಳಾಪುರ: ಐಟಿಬಿಟಿಯಂತೆ ಕೃಷಿಗೂ (Agriculture) ಒಳ್ಳೆಯ ದಿನಗಳು ಬರುವ ಕಾಲ ದೂರವಿಲ್ಲ. ಭೂತಾಯಿಗೆ ಬೆವರು ಹರಿಸಿ ದುಡಿಯುವ ರೈತಾಪಿ ವರ್ಗ ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಕರೆ ನೀಡಿದರು. ನಗರದ ಹೊರವಲಯದ (Chikkaballapur News) ಹರ್ಷೋದಯ ಕಲ್ಯಾಣಮಂಟಪದಲ್ಲಿ ಮಂಗಳವಾರ ರಾಷ್ಟ್ರೀಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ-2024 ಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಫಲವಾಗಿ ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರವಲಯ ಲಾಭದಾಯಕವಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ. ಎಐ ತಂತ್ರಜ್ಞಾನವೂ ಕೂಡ ಹನಿ ನೀರಾವರಿ, ಕೊಳವೆ ಬಾವಿ ನಿರ್ವಹಣೆ, ಹವಾಮಾನ ಮಾಹಿತಿ,ತೋಟಗಾರಿಕೆ ಬೆಳೆಗಳ ಸಂವರ್ಧನೆಗೆ ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ರೈತರು ಕೂಡ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರವೇ ಲಾಭನಷ್ಟಗಳನ್ನು ಸರಿದೂರಿಸಲು ಸಾಧ್ಯ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿನೀರಾವರಿ ತಂತ್ರಜ್ಞಾನವನ್ನು ತುಂಬಾ ಸಮರ್ಥವಾಗಿ ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸ್ವಾಭಿಮಾನ ಬದುಕಿನ ರೀತಿ. ಪ್ರತಿಕೂಲ ಸನಿವೇಶಗಳಲ್ಲೂ ಅಧೀರರಾಗದೆ ಸ್ವಾಭಿಮಾನದಿಂದ ಸವಾಲುಗಳನ್ನು ಮೆಟ್ಟಿನಿಲ್ಲುವ ಪರಿ ಉಳಿದ ರೈತರಿಗೆ ಮಾದರಿಯಾಗಬೇಕಿದೆ ಎಂದರು.

ಈ ಸುದ್ದಿಯನ್ನೂ ಓದಿ | CM Siddaramaiah: ಹಿರಿಯ ನಾಗರಿಕರಿಗೆ ಮಾಸಾಶನ ಹೆಚ್ಚಳದ ಬಗ್ಗೆ ಚರ್ಚೆ: ಸಿದ್ದರಾಮಯ್ಯ

ಯುವಕರು ಕೃಷಿಯತ್ತ ಆಕರ್ಷಿತರಾಗುವ ಮೂಲಕ ತಂದೆ ತಾಯಿಯ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಇಲ್ಲಿಯೇ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಾಫ್ಟ್‌ವೇರ್ ವಿಜ್ಞಾನಿಗಳಂತೆ ಗೌರವದ ಬದುಕನ್ನು ಕೃಷಿಯಲ್ಲಿ ಕಾಣಲು ಸಾಧ್ಯ. ಪರಾವಲಂಬಿಗಳಾಗಿ ಇನೊಬ್ಬರ ಕೈಕೆಳಗೆ ದುಡಿಯುವ ಬದಲು ನೀವೇ 10 ಮಂದಿಗೆ ಉದ್ಯೋಗ ಕೊಟ್ಟು ಇದ್ದಲ್ಲಿಯೇ ನೆಮ್ಮದಿಯಾಗಿ ಬದುಕುವುದನ್ನು ಕಲಿಯಿರಿ ಎಂದು ಸ್ವಾಮೀಜಿ ಕರೆ ನೀಡಿದರು.

ಯುವರೈತ ಮರಳುಕುಂಟೆ ಚೇತನ್ ಮಾತನಾಡಿ, ದಾಳಿಂಬೆ ಬೆಳೆ ರೈತರಿಗೆ ಲಾಭದಾಯಕ ಕೃಷಿಯಾಗಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ಸಂಪೂರ್ಣವಾದ ಮಾಹಿತಿ ನೀಡುವ ಭಾಗವಾಗಿ ಈ ಸಮಾವೇಶವನ್ನು ಏರ್ಪಡಿಸಲಾಗಿದೆ. ದಾಳಿಂಬೆ ಬೆಳೆಗೆ ರೋಗಬಾದೆ ಹೆಚ್ಚಿದೆ. ಎಂತಹ ಪರಿಸರದಲ್ಲಿ ಈ ಬೆಳೆ ಬೆಳೆಯಬಹುದು, ಯಾವ ರೋಗಕ್ಕೆ ಯಾವ ಔಷಧಿ ಬಳಸಬೇಕು. ಮಾರುಕಟ್ಟೆಯ ರೀತಿರಿವಾಜುಗಳೇನು ಎಂಬ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ವಿಜ್ಞಾನಿಗಳಿಂದ ಒಂದೇ ಸೂರಿನಡಿ ಅರಿವು ಮೂಡಿಸಲು ರಾಷ್ಟ್ರೀಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶವನ್ನು ರೈತರೇ ಸೇರಿ ಮಾಡುತ್ತಿದ್ದೇವೆ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ನಮ್ಮ ಜಿಲ್ಲೆ ಹಣ್ಣು, ತರಕಾರಿ ಬೆಳೆಯುವಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತರು ಬದಲಾದ ಕೃಷಿಯಂತೆ ದಾಳಿಂಬೆ ಬೆಳೆದು ಲಾಭಮಾಡುವತ್ತ ಮನಸ್ಸು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ದಾಳಿಂಬೆ ಬೆಳೆಗಾರರನ್ನು ಒಂದೆಡೆ ಸೇರಿಸಿ ಈ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳ ಬಗ್ಗೆ ವಿಜ್ಞಾನಿಗಳ ಮೂಲಕ ರೈತರಿಗೆ ವೈಜ್ಞಾನಿಕವಾಗಿ ಸಮಗ್ರ ಮಾಹಿತಿ ನೀಡಲು ಈ ಸಮಾವೇಶ ಮಾಡುತ್ತಿದ್ದಾರೆ. ಇದು ಯಶಸ್ವಿಯಾಗಲಿ ಎಂದರು.

ಈ ಸುದ್ದಿಯನ್ನೂ ಓದಿ | MB Patil: ಜಾಗತಿಕ ಸೆಮಿಕಂಡಕ್ಟರ್‌ ಕಂಪನಿಗಳ ಜತೆ ಬಾಂಧವ್ಯ ಬಲಪಡಿಸಿದ ಸಚಿವ ಎಂ.ಬಿ. ಪಾಟೀಲ್‌

ರಾಷ್ಟ್ರೀಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಬೇಕಾದ ಕೃಷಿ ಪರಿಕರ, ಟ್ರಾಕ್ಟರ್, ಸ್ಪಿಂಕ್ಲರ್, ಔಷದೋಪಚಾರ, ಬೀಜೋಪಚಾರ ಮೊದಲಾಗಿ ಎಲ್ಲಾ ರೀತಿಯ ಕಂಪನಿಗಳು ಒಂದೇ ಸೂರಿನಡಿ ಮಳಿಗೆಗಳನ್ನು ತೆರೆದು, ಮಾಹಿತಿ ನೀಡುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿತ್ತು.