Tuesday, 26th November 2024

Dr R H Pavithra Column: ಮಹಾತ್ಮ ಗಾಂಧೀಜಿ ಮತ್ತು ಗಾಂಧಿವಾದದ ಅವಲೋಕನ

ಗಾಂಧೀಸ್ಮೃತಿ

ಡಾ.ಆರ್‌.ಎಚ್.ಪವಿತ್ರ

ಗುಜರಾತಿನ ಹಳ್ಳಿಯೊಂದರ ಮೋಹನ್‌ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಮಹಾತ್ಮನಾಗಲಿಲ್ಲ. ಅವರನ್ನು ಅಷ್ಟೊಂದು ಎತ್ತರಕ್ಕೆ ಕೊಂಡೊಯ್ದಿದ್ದು ಅವರ ನಿಸ್ವಾರ್ಥ ಹೋರಾಟಗಳು ಹಾಗೂ ಸಹಜೀವಿಗಳೆಡೆಗೆ ಇದ್ದ ಪ್ರೀತಿ. ಗಾಂಧಿಯೆಂಬ ಶಾಂತಿದೂತನ ನಿಷ್ಕಳಂಕ ವ್ಯಕ್ತಿತ್ವವನ್ನು ಯಾರಾದರೂ ಅನುಮಾನಿಸಲಾದೀತೇ? ಆ ದಿನಮಾನಗಳಲ್ಲಿ ದೇಶದ ಮೂಲೆಮೂಲೆಯಲ್ಲಿ ಬೆರಗು ಹುಟ್ಟಿಸಿದ್ದ ಗಾಂಧೀಜಿ ತಮ್ಮ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ಅಹಿಂಸಾ ಮಾರ್ಗದಿಂದಾಗಿ ಜಗತ್ತನ್ನೇ ತಮ್ಮೆಡೆಗೆ ಸೆಳೆದು ಬಿಟ್ಟರು. ಹಾಗಾಗಿಯೇ, ಇಂದಿಗೂ ಗಾಂಧಿಯವರನ್ನು ಹಲವಾರು ವಿದೇಶಿ ನಾಯಕರು ತಮ್ಮ ಸಾಧನೆಯ ಸ್ಪೂರ್ತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

1869ರ ಅಕ್ಟೋಬರ್ ೨ರಂದು ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿದ ಗಾಂಧೀಜಿ ತಮ್ಮ ಜೀವಿತದ ಉದ್ದಕ್ಕೂ ಆದರ್ಶ ಗಳನ್ನು ಪಾಲನೆ ಮಾಡುತ್ತಲೇ ಬಂದವರು. ಅವರು ಸ್ವಾರ್ಥಕ್ಕೆ ಸಿಲುಕಿದ್ದರೆ ಅಥವಾ ದುರಾಸೆಗೆ ಬಿದ್ದಿದ್ದರೆ, ಅಂದಿನ ಆಂಗ್ಲ ಸರಕಾರದಲ್ಲಿ ದೊಡ್ಡ ಹುದ್ದೆಯನ್ನೇ ಅಲಂಕರಿಸಬಹುದಿತ್ತು. ದೇಶ ಸ್ವತಂತ್ರಗೊಂಡ ಕೂಡಲೇ ತಾವು ಬಯಸಿದ ಪದವಿ ಯನ್ನು ಪಡೆದು, ತಮ್ಮ ಮಕ್ಕಳನ್ನು ಅತ್ಯುನ್ನತ ಸ್ಥಾನಗಳಲ್ಲಿ ಕೂರಿಸಬಹುದಿತ್ತು. ಆದರೆ, ಹಾಗೆ ಮಾಡಿದ್ದಿದ್ದರೆ ಅವರು ರಾಷ್ಟ್ರಪಿತನಾಗಿ ಉಳಿಯುತ್ತಿರಲಿಲ್ಲ, ‘ಮಹಾತ್ಮ’ನೆಂದು ಕರೆಸಿಕೊಳ್ಳಲು ಅರ್ಹರಾಗು ತ್ತಿರಲಿಲ್ಲ.

ಇಂಥದ್ದನ್ನು ಬಯಸದಿದ್ದ ಕಾರಣಕ್ಕಾಗಿಯೇ ಗಾಂಧೀಜಿ ಜಗತ್ತಿನೆದುರು ಇವತ್ತಿಗೂ ದೊಡ್ಡವರಾಗುತ್ತಲೇ ಹೋಗು ತ್ತಿರುವುದು. “ಮಹಾತ್ಮ ಎನ್ನುವ ಬಿರುದು ನನಗೆ ನೋವನ್ನುಂಟುಮಾಡಿದೆ ಹಾಗೂ ಇದರಿಂದ ನಾನು ಒಂದು ಕ್ಷಣವೂ ಉಬ್ಬಿಹೋದ ನೆನಪಿಲ್ಲ” ಎಂದು ತಮ್ಮ ಆತ್ಮಕಥೆಯಲ್ಲಿ ಗಾಂಧೀಜಿ ಹೇಳಿಕೊಂಡಿರುವುದು, ಅವರೆಂದೂ ಹೊಗಳಿಕೆಗಳಿಗೆ ಕಿವಿಯಾಗುತ್ತಿರಲಿಲ್ಲ ಎನ್ನುವ ಸತ್ಯವನ್ನು ಸಾಕ್ಷೀಕರಿಸುತ್ತದೆ.

ಗಾಂಧೀಜಿ ತಾವು ಅನುಸರಿಸಿದ ಪ್ರತಿಯೊಂದು ಮಾರ್ಗಗಳನ್ನು ತಮ್ಮ ಬದುಕಿನ ಹಾದಿಯ ಪ್ರಯೋಗಗಳೆಂದೇ
ಹೇಳಿಕೊಂಡಿದ್ದಾರೆ. ಹಾಗೆಂದು ತಾವು ಮಾಡಿದ್ದೇ ಇತರರಿಗೂ ಸರಿಯೆನಿಸಬೇಕು ಎನ್ನುವ ಮನೋಭಾವ ಅವರಲ್ಲಿ ರಲಿಲ್ಲ. “ನನ್ನ ಪ್ರಯೋಗಗಳು ಕೊನೆಯ ತೀರ್ಮಾನಗಳೆಂದಾಗಲೀ, ದೋಷರಹಿತವಾದಂಥವು ಎಂದಾಗಲೀ ನಾನು ಹೇಳುವುದಿಲ್ಲ” ಎಂದು ಅವರೇ ತಿಳಿಸಿದ್ದಾರೆ.

ಸ್ವತಃ ಬರಹಗಾರರಾಗಿದ್ದ ಗಾಂಧಿಯವರು ತಮ್ಮ ಆತ್ಮಕಥೆಯಲ್ಲಿ ಹಲವಾರು ಘಟನೆಗಳನ್ನು ದಾಖಲಿಸದಿರ ಬಹುದಿತ್ತು ಹಾಗೂ ಕೆಲವು ಕಪೋಲ ಕಲ್ಪಿತ ವಿಷಯಗಳನ್ನುಸೇರಿಸಿ ಇನ್ನಷ್ಟು ವೈಭವೀಕರಿಸಿಕೊಳ್ಳ ಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ ಎಲ್ಲವನ್ನೂ ತೆರೆದಿಟ್ಟಿರುವುದನ್ನು ನೋಡಿದಾಗ ಅವರಲ್ಲಿನ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆ ಎಷ್ಟೊಂದು ಪ್ರಖರವಾಗಿತ್ತೆಂಬುದು ಅನಾವರಣಗೊಳ್ಳುತ್ತದೆ. ಹೀಗಾಗಿಯೇ ಮಹಾತ್ಮ ಗಾಂಧಿಯವರ ನಡೆ-ನುಡಿ ಹಿಂದಿಗಿಂತಲೂ ಇಂದು ಹೆಚ್ಚು ಅಗತ್ಯವೆನಿಸುವುದು.

‘ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳಿರುವ ಗಾಂಧೀಜಿಯ ಮಾತನ್ನು ಒಪ್ಪಲೇಬೇಕು. ಅವರು ನಡೆದ
ಹಾದಿ, ನುಡಿದ ಮಾತು, ಅಳವಡಿಸಿಕೊಂಡಿದ್ದ ತತ್ವಗಳು ಹಾಗೂ ವಿಚಾರಗಳು ಮುಚ್ಚುಮರೆಯಿಲ್ಲದೆ ಅನುಸರಿಸಲು
ಯೋಗ್ಯವಾದ ಜೀವನಪಾಠಗಳಾಗಿವೆ. ಜಾತಿ-ಧರ್ಮಗಳೊಳಗಿನ ಅಸಹಿಷ್ಣುತೆ, ಅಸಮಾನತೆ, ಅಸ್ಪೃಶ್ಯತೆ ಮುಂತಾದ
ಸಾಮಾಜಿಕ ಅನಿಷ್ಟಗಳನ್ನು ಅಳಿಸುವ ಪ್ರಯತ್ನದಲ್ಲಿ ಗಾಂಧೀಜಿ ಸಂಪೂರ್ಣವಾಗಿ ತೊಡಗಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಪ್ರತಿಯೊಂದು ಗ್ರಾಮಗಳೂ ಸ್ವಾವಲಂಬನೆಯ ಮೂಲಕ ಗ್ರಾಮಸ್ವರಾಜ್ಯ ಗಳಾಗಬೇಕೆಂದು ಕನಸು ಕಂಡರು.

ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ತತ್ವಗಳು, ವೇಗವಾಗಿ ಮತ್ತು ನಿರಂತರವಾಗಿ ಬದಲಾಗುತ್ತಿರುವ ಇಂದಿನ
ಜಗತ್ತಿನಲ್ಲಿ ಭರವಸೆ ಮತ್ತು ಬುದ್ಧಿವಂತಿಕೆಯ ದಾರಿದೀಪಗಳಾಗಿ ಬೆಳಗುತ್ತಿವೆ. ಸರಳತೆ, ಅಹಿಂಸೆ, ಸ್ವಾವಲಂಬನೆ,
ಸತ್ಯಸಂಧತೆ ಮತ್ತು ಸಹಾನುಭೂತಿಯೊಂದಿಗೆ ಗಾಂಧಿ ತತ್ವಗಳು ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿ ಸಲು ಅಮೂಲ್ಯವಾದ ಒಳನೋಟಗಳನ್ನು ನೀಡುತ್ತವೆ. ಈ ತತ್ವಗಳು ಏಕೆ ಅತ್ಯಗತ್ಯವಾಗಿ ಉಳಿದಿವೆ, ಹೆಚ್ಚು ಸಾಮ ರಸ್ಯ ಹಾಗೂ ಸುಸ್ಥಿರ ಜಗತ್ತಿಗೆ ಅವು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ನಾವು ಆಳವಾಗಿ ಅವಲೋಕಿಸ ಬೇಕು.

ಗಾಂಧಿಯವರ ನೇತೃತ್ವದ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಅಹಿಂಸೆಯು ಪ್ರಬಲ ಶಕ್ತಿಯಾಗಿ, ಒಂದು ಸ್ಮಾರಕ ಉದಾಹರಣೆಯಾಗಿ ಕಾರ್ಯನಿರ್ವಹಿಸಿತು. ಶಾಂತಿಯುತ ಪ್ರತಿಭಟನೆಗಳು, ಬಹಿಷ್ಕಾರಗಳು ಮತ್ತು ನಾಗರಿಕ ಅಸಹಕಾರದ ಮೂಲಕ ಭಾರತವು ೧೯೪೭ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತು. ಈ ಘಟನೆಯು ಅಹಿಂಸಾತ್ಮಕ ಪ್ರತಿರೋಧದ ಪರಿವರ್ತಕ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿತು.

ಗಾಂಧೀಜಿಯ ಜೀವನ ಸತ್ಯಸಂಧ ತೆಗೆ ಸಾಕ್ಷಿಯಾಗಿತ್ತು. 1930ರಲ್ಲಿ ನಡೆದ ಪ್ರಸಿದ್ಧ ಉಪ್ಪಿನ ಸತ್ಯಾಗ್ರಹ ಸೇರಿದಂತೆ, ನಾಗರಿಕ ಅಸಹಕಾರದ ಚಳವಳಿಗಳು ಸತ್ಯದ ಆಧಾರದ ಮೇಲೆ ಅಂದಿನ ಅನ್ಯಾಯಗಳನ್ನು ಬಹಿರಂಗಪಡಿಸಿದವು. ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಗಾಂಧಿಯವರು ಸರಳ ಜೀವನವನ್ನು ನಡೆಸಿದರು, ಖಾದಿ ಯನ್ನು ಧರಿಸಿದರು ಮತ್ತು ಸ್ಥಳೀಯ ಉತ್ಪಾದನೆಯ ಮೂಲಕ ಸ್ವಾವಲಂಬನೆಯನ್ನು ಉತ್ತೇಜಿಸಿದರು.

ಸರಳತೆಯೆಡೆಗಿನ ಅವರ ಬದ್ಧತೆಯು ಲಕ್ಷಾಂತರ ಜನರು ಆ ವೈಶಿಷ್ಟ್ಯವನ್ನು ಅನುಸರಿಸುವಂತೆ ಪ್ರೇರೇಪಿಸಿತು. ಗಾಂಧಿಯವರ ಸ್ವಾವಲಂಬನೆಯ ಕರೆಯು ಆರ್ಥಿಕ ಸ್ವಾವಲಂಬನೆಗೂ ವಿಸ್ತರಿಸಿತು. ಗುಡಿ ಕೈಗಾರಿಕೆಗಳು ಮತ್ತು ಸ್ವಾವಲಂಬಿ ಗ್ರಾಮೀಣ ಸಮುದಾಯಗಳನ್ನು ಉತ್ತೇಜಿಸಿದ ಅವರು, ಸ್ಥಳೀಯ ಉತ್ಪಾದನೆಯ ಮಹತ್ವವನ್ನು ಒತ್ತಿ ಹೇಳಿದರು. ಗಾಂಧಿಯವರ ತತ್ವಗಳು ಅಂದಿನಂತೆ ಇಂದಿಗೂ ಪ್ರಸ್ತುತ ವಾಗಿದ್ದರೂ, ಇಂದಿನ ಸಂಕೀರ್ಣ ಮತ್ತು ಅಂತರ್‌ಸಂಪರ್ಕಿತ ಜಗತ್ತಿನಲ್ಲಿ ಅವುಗಳ ಅನ್ವಯದಲ್ಲಿ ಸವಾಲು ಇದ್ದೇ ಇರುತ್ತದೆ. ನಮ್ಮ ಕಾಲದ ತುರ್ತು ಸಮಸ್ಯೆ ಗಳನ್ನು ಪರಿಹರಿಸಿಕೊಳ್ಳಲು, ನಾವು ವ್ಯಕ್ತಿಗಳಾಗಿ ಮತ್ತು ಒಂದು ಸಮಾಜವಾಗಿ ಗಾಂಧಿಯವರ ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಪ್ರಶ್ನೆ ಮೂಡುವುದು ಸಹಜ.

ಡಿಜಿಟಲ್ ಯುಗದಲ್ಲಿ ಅಹಿಂಸೆ: ಇಂದಿನ ಡಿಜಿಟಲ್ ಯುಗದಲ್ಲಿ, ಅಹಿಂಸೆಯು ದೈಹಿಕ ಕ್ರಿಯೆಗಳನ್ನು ಮೀರಿ ಆನ್ ಲೈನ್ ಸಂವಹನಗಳಿಗೆ ವಿಸ್ತರಿಸುತ್ತಿದೆ. ಆನ್‌ಲೈನ್ ಕಿರುಕುಳ ಮತ್ತು ದ್ವೇಷ ಭಾಷಣದ ಹರಡುವಿಕೆಯು, ಅಹಿಂಸೆಯ ಅಳವಡಿಕೆಯ ನಿಟ್ಟಿನಲ್ಲಿ ಹೊಸ ಬದ್ಧತೆಯನ್ನು ಬಯಸುತ್ತಿದೆ. ಸಾಮಾಜಿಕ ಮಾಧ್ಯಮಗಳು ದ್ವೇಷಭಾಷಣದ ವಿರುದ್ಧ ನೀತಿಗಳನ್ನು ಜಾರಿಗೊಳಿಸುವ ಮೂಲಕ ಹಾಗೂ ಸಕಾರಾತ್ಮಕ ಆನ್ ಲೈನ್ ಸಂವಹನ ಗಳನ್ನು ಉತ್ತೇಜಿಸುವ ಮೂಲಕ ಗೌರವಾನ್ವಿತ ಸಂವಾದವನ್ನು ಬೆಳೆಸುವಲ್ಲಿ ಪಾತ್ರ ವಹಿಸಬಹುದು.

ತಪ್ಪು ಮಾಹಿತಿಯ ಯುಗದಲ್ಲಿ ಸತ್ಯದ ಹರಿವು: ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ವಿರುದ್ಧದ ಹೋರಾ ಟಕ್ಕೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಮಾಧ್ಯಮ ಸಾಕ್ಷರತೆಯ ಶಿಕ್ಷಣ, ಕೌಶಲಗಳು ಮತ್ತು ಸತ್ಯಪರಿಶೀಲನೆಯ ಉಪಕ್ರಮಗಳು ನೈಜಮಾಹಿತಿಯ ಮೌಲ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅತ್ಯಗತ್ಯ ವಾಗುತ್ತವೆ. ಜವಾಬ್ದಾರಿ ಯುತ ಪತ್ರಿಕೋದ್ಯಮವು ಈ ಹೋರಾಟದಲ್ಲಿ ಮೂಲಾಧಾರವಾಗಿ ಉಳಿದಿದ್ದು, ನಿಖರವಾದ ವರದಿಗಾರಿಕೆ ಮತ್ತು ನೈತಿಕ ಮಾನದಂಡಗಳನ್ನು ಅದು ಒತ್ತಿಹೇಳುತ್ತದೆ.

ಸ್ವಾವಲಂಬನೆಯ ತತ್ವದ ಮಹತ್ವ: ಜಾಗತೀಕರಣಕ್ಕೆ ಒಡ್ಡಿಕೊಂಡ ಜಗತ್ತಿನಲ್ಲಿ ಸ್ವಾವಲಂಬನೆಯ ತತ್ವವು ಹೊಸ ಆಯಾಮಗಳನ್ನು ಪಡೆಯುತ್ತದೆ. ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯವಾಗಿದ್ದರೂ, ಸ್ಥಳೀಯ ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸುವ ಮತ್ತು ಸಣ್ಣ ಉದ್ಯಮಗಳನ್ನು ಬೆಂಬಲಿಸುವ ಪರಿಪಾಠವು ಸಮುದಾಯ ಮಟ್ಟ ದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಬಲ್ಲದು. ಮುಕ್ತ-ಮೂಲ ಚಳವಳಿ ಮತ್ತು ಸಹಯೋಗದ ನಾವೀನ್ಯವು, ಸ್ವಾವಲಂಬನೆಯು ಜಾಗತಿಕ ಅಂತರ್‌ಸಂಪರ್ಕದೊಂದಿಗೆ ಸಹಬಾಳ್ವೆ ನಡೆಸಬಹುದು ಎಂಬುದನ್ನು ತೋರಿಸುತ್ತದೆ.

ಸಹಾನುಭೂತಿ ಮತ್ತು ಸೇವೆಯ ಏಕೀಕರಣ: ಧ್ರುವೀಕರಣಗೊಂಡ ಜಗತ್ತಿನಲ್ಲಿ, ಸಹಾನುಭೂತಿ ಮತ್ತು ಸೇವೆಯು
ಒಡಕುಗಳನ್ನು ತೊಡೆದು ಎಲ್ಲರನ್ನೂ ಒಂದುಗೂಡಿಸುವ ಸೇತುವೆಯಾಗಿ ಕಾರ್ಯನಿರ್ವಹಿಸಬಲ್ಲದು. ಸಮುದಾಯ
ಸೇವಾ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸ್ವಯಂಸೇವಕ ಉಪಕ್ರಮಗಳು ಮತ್ತು
ಪರಾನುಭೂತಿ ಶಕ್ತಿಯ ನಿರ್ಮಾಣದ ಶಿಕ್ಷಣವು, ಏಕತೆ ಮತ್ತು ಹಂಚಿಕೆಯ ಮಾನವೀಯ ಪ್ರಜ್ಞೆಯನ್ನು ಬೆಳೆಸುತ್ತದೆ.
ರಾಜಕೀಯ, ವ್ಯಾಪಾರ ವಲಯಗಳು ಮತ್ತು ನಾಗರಿಕ ಸಮಾಜದಲ್ಲಿನ ನಾಯಕರು, ಸಾಮಾಜಿಕ ಜವಾಬ್ದಾರಿ ಮತ್ತು
ಅಂತರ್ಗತ ನೀತಿಗಳಿಗೆ ಆದ್ಯತೆ ನೀಡುವ ಮೂಲಕ ಸೂಕ್ತ ಮಾದರಿಯನ್ನು ಹೊಂದಿಸಬಹುದು.

21ನೇ ಶತಮಾನದ ಸಂಕೀರ್ಣತೆಗಳನ್ನು ತಿಳಿದುಕೊಳ್ಳಲು ನಾವು ಯತ್ನಿಸುವಾಗ, ಮಹಾತ್ಮ ಗಾಂಧಿಯವರ ಅಹಿಂಸೆ, ಸತ್ಯಪರತೆ, ಸರಳತೆ, ಸ್ವಾವಲಂಬನೆ ಮತ್ತು ಸಹಾನುಭೂತಿಯ ತತ್ವಗಳು ಸುಸಂಬದ್ಧವಾಗಿರುವುದಲ್ಲದೆ ಅಗತ್ಯವಾಗಿಯೂ ಉಳಿದಿವೆ. ಅವು ಹೆಚ್ಚು ಶಾಂತಿಯುತ, ಸಮರ್ಥನೀಯ ಮತ್ತು ಸಾಮರಸ್ಯದ ಪ್ರಪಂಚದ ಕಡೆಗಿನ ಮಾರ್ಗಸೂಚಿಯನ್ನು ನೀಡುತ್ತವೆ. ಈ ತತ್ವಗಳು ಭೂತಕಾಲಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಐತಿಹಾಸಿಕ ಘಟನೆಗಳು ಮತ್ತು ಆಧುನಿಕ ಉದಾಹರಣೆಗಳು ನಿದರ್ಶಿಸುತ್ತವೆ.

ಅವು ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವುದನ್ನು ಮುಂದುವರಿಸುತ್ತವೆ. ಗಾಂಧಿಯವರ ವಿವೇಚ ನಾಯುತ ತತ್ವ ಗಳು ಎಲ್ಲಾ ಕಾಲಕ್ಕೂ ಅನುರಣಿಸುತ್ತವೆ, ಉತ್ತಮ ಪ್ರಪಂಚಕ್ಕಾಗಿ ಶ್ರಮಿಸುವಂತೆ ನಮ್ಮನ್ನು ಆಗ್ರಹಿಸುತ್ತವೆ. ಈ ತತ್ವಗಳನ್ನು ನಾವು, ಪ್ರಗತಿ ಮತ್ತು ಸಾಮರಸ್ಯದ ಕಡೆಗಿನ ನಮ್ಮ ಪಯಣದಲ್ಲಿ ದಾರಿದೀಪಗಳಾಗಿ ಅಳವಡಿಸಿಕೊಳ್ಳುವ ಮೂಲಕ ಅವರ ಕರೆಗೆ ಕಿವಿಯಾಗೋಣ. ಹೀಗೆ ಮಾಡಿದಾಗ, ತಲೆಮಾರು ಗಳನ್ನೂ ಮೀರಿದ ದೃಷ್ಟಿಕೋನವನ್ನು ಹೊಂದಿದ್ದ ಮಹಾತ್ಮ ಗಾಂಧೀಜಿ ಎಂಬ ವ್ಯಕ್ತಿತ್ವವನ್ನು ನಾವು ಗೌರವಿಸಿದಂತಾಗುತ್ತದೆ.

(ಲೇಖಕಿ ಮೈಸೂರಿನ ಕ.ರಾ.ಮು.ವಿಶ್ವ ವಿದ್ಯಾಲಯದ ಗಾಂಧಿ ಅಧ್ಯಯನ ಪೀಠದ ನಿರ್ದೇಶಕರು)

ಇದನ್ನೂ ಓದಿ: Mahatma Gandhi: ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು