Sunday, 6th October 2024

Iran Attacks Israel: ಕ್ಷಿಪಣಿ ದಾಳಿಗೆ ಇರಾನ್‌ ಬೆಲೆ ತೆರಲೇಬೇಕು-ಇಸ್ರೇಲ್‌ನಿಂದ ಎಚ್ಚರಿಕೆ; ಮತ್ತೊಂದು ಡೆಡ್ಲಿ ಅಟ್ಯಾಕ್‌ಗೆ ಸಜ್ಜು

Iran Attacks Israel

ಟೆಹ್ರಾನ್‌: ನಿನ್ನೆ ತಡರಾತ್ರಿ ಕ್ಷಿಪಣಿ ದಾಳಿ ನಡೆಸಿದ ಇರಾನ್‌(Iran Attacks Israel) ವಿರುದ್ಧ ಇಸ್ರೇಲ್‌ ಪ್ರತಿಕಾರದ ಶಪತ ಮಾಡಿದೆ. ಶಿಯಾ ಉಗ್ರಗಾಮಿ ಸಂಘಟನೆ ಮತ್ತು ಇರಾನ್‌(Iran) ಮಿತ್ರ ಪಕ್ಷವಾದ ಹೆಜ್ಬುಲ್ಲಾ(Hezbollah)ವನ್ನು ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಮಂಗಳವಾರ ಇಸ್ರೇಲ್‌ ಮೇಲೆ 200 ಕ್ಷಿಪಣಿಗಳ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಸ್ರೇಲ್‌, ಈ ಉದ್ಧಟತನಕ್ಕೆ ಇರಾನ್‌ ಬೆಲೆ ತೆರಲೇಬೇಕು ಎಂದು ಹೇಳಿದ್ದು, ಶೀಘ್ರದಲ್ಲೇ ಬಹುದೊಡ್ಡ ಮಟ್ಟದ ದಾಳಿಗೆ ಇಸ್ರೇಲ್‌ನಿಂದ ಯೋಜನೆ ರೂಪಿಸಿರುವುದು ಸ್ಪಷ್ಟವಾಗಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ದಾಳಿ ಬೆನ್ನಲ್ಲೇ ರಾತ್ರೋರಾತ್ರಿ ಭದ್ರತಾ ಸಚಿವಾಲಯದ ಸಭೆ ಕರೆದಿದ್ದು, ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇರಾನ್‌ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಶಿಕ್ಷೆ ಸಿಕ್ಕೇ ಸಿಗುತ್ತದೆ. ಬಹುದೊಡ್ಡಮಟ್ಟದಲ್ಲಿ ಇರಾನ್‌ ಈ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಇರಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇರಾನ್‌ನ ಕ್ಷಿಪಣಿ ದಾಳಿಯು ವಿಫಲವಾಗಿದೆ. ಗಾಜಾ, ಲೆಬನಾನ್ ಮತ್ತು ಇತರ ಸ್ಥಳಗಳಲ್ಲಿ ತನ್ನ ಶತ್ರುಗಳು ಕಲಿತಂತೆ ಇರಾನ್ ಶೀಘ್ರದಲ್ಲೇ ತಕ್ಕ ಪಾಠವನ್ನು ಕಲಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂದರು.

ಇರಾನ್ ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಹಗರಿ ದೇಶದ ವಾಯು ರಕ್ಷಣಾ ವಿಭಾಗವು ಒಳಬರುವ ಹಲವು ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದರು. ಅದಾಗ್ಯೂ ಜೆರಿಕೊದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ವ್ಯಕ್ತಿಯೊಬ್ಬ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕಳೆದ ವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಹಮಾಸ್ ನಾಯಕನ ಹತ್ಯೆಗೆ ಪ್ರತಿಕ್ರಿಯೆಯಾಗಿ ನಿನ್ನೆಯ ದಾಳಿ ನಡೆದಿದೆ ಎಂದು ಇರಾನ್‌ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಇರಾನ್ನಿಂದ ಉಡಾಯಿಸಲಾದ ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ತಡೆಯಲು ಇಸ್ರೇಲ್‌ ಅಸಾಧಾರಣ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ದೇಶಾದ್ಯಂತ ವಾಯು ದಾಳಿಯ ಸೈರನ್ ಗಳು ಪ್ರತಿಧ್ವನಿಸಿದ ನಂತರ ರಾತ್ರಿ ಆಕಾಶವು ಸ್ಫೋಟಗಳಿಂದ ಬೆಳಗುತ್ತಿದ್ದವು. ಕ್ಷಿಪಣಿಗಳು ಜೋರ್ಡಾನ್ ವಾಯುಪ್ರದೇಶದ ಮೇಲೆ ಪತ್ತೆಯಾಗಿವೆ.

ಕ್ಷಿಪಣಿಗಳು ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದವು. ಇಸ್ರೇಲ್‌ನ ಐರನ್ ಡೋಮ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ತಡೆಯುತ್ತಿದ್ದವು. ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದ ತಕ್ಷಣ ಅವುಗಳನ್ನು ತಡೆಯುವ ವಿಡಿಯೊಗಳು ಕೂಡ ವೈರಲ್‌ ಆದವು.

ಈ ಸುದ್ದಿಯನ್ನೂ ಓದಿ: Iran Attacks Israel : ಇರಾನ್‌ ದಾಳಿ ಮುಗಿದಿದೆ, ಬಾಂಬ್‌ ಶೆಲ್ಟರ್‌ನಿಂದ ಹೊರಬನ್ನಿ ಎಂದು ಪ್ರಜೆಗಳಿಗೆ ಕರೆ ಕೊಟ್ಟ ಇಸ್ರೇಲ್‌