Saturday, 23rd November 2024

Health Tips: ಬೆಳಗ್ಗೆ ಎದ್ದಾಗ ಕಾಡುವ ತಲೆ ನೋವಿಗೆ ಕಾರಣ ಏನು ಗೊತ್ತೇ?

Health Tips

ಬೆಳಗ್ಗೆ ಎದ್ದಾಗ ದೇಹ, ಮನಸ್ಸು ಉಲ್ಲಾಸವಾಗಿದ್ದರೆ (Health Tips) ಮಾತ್ರ ದಿನ ಚೆನ್ನಾಗಿರುತ್ತದೆ. ಒಂದು ವೇಳೆ ಎದ್ದ ತಕ್ಷಣ ತಲೆ ನೋವು (headache) ಕಾಡಲಾರಂಭಿಸಿದರೆ ಇದನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಇದು ಗಂಭೀರ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಹೀಗಾಗಿ ಈ ತಲೆನೋವನ್ನು ಕಡೆಗಣಿಸದೆ ಸರಿಯಾದ ಕಾರಣ ಪತ್ತೆ ಹಚ್ಚಿ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ.

ಬೆಳಗ್ಗೆ ಎದ್ದ ಮೇಲೆ ತಲೆನೋವು (Waking up with headache) ಬರಲು ಎಂಟು ಪ್ರಮುಖ ಕಾರಣಗಳಿವೆ ಎಂದು ವೈದ್ಯ ಅರುಣ್ ಎಲ್. ನಾಯಕ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.

ತಲೆನೋವಿನೊಂದಿಗೆ ಏಳುವುದು ಸಂಪೂರ್ಣ ದಿನವನ್ನೇ ಅಹಿತಕರವನ್ನಾಗಿಸುತ್ತದೆ. ಇದು ನಮ್ಮ ದೈನಂದಿನ ಕಾರ್ಯದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ಬೆಳಗ್ಗಿನ ಈ ತಲೆನೋವಿಗೆ ಹಲವಾರು ಕಾರಣಗಳಿವೆ. ಅವುಗಳನ್ನು ಅರ್ಥಮಾಡಿಕೊಳ್ಳುವುದು ಅದಕ್ಕೆ ಪರಿಹಾರ ಕಂಡು ಹಿಡಿಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ. ನಾಯಕ್.

ನಿದ್ರೆಯಲ್ಲಿ ಉಸಿರಾಟದ ತೊಂದರೆ, ನಿದ್ರಾಹೀನತೆ, ನಿದ್ರೆಯಲ್ಲಿ ಹಲ್ಲು ಕಡಿಯುವುದು, ಮೈಗ್ರೇನ್, ನಿರ್ಜಲೀಕರಣ, ತಲೆನೋವಿನ ಔಷಧಗಳ ಅತಿಯಾದ ಬಳಕೆ, ಸಂಜೆ ತಡವಾಗಿ ಕಾಫಿ ಕುಡಿಯುವುದು, ಮದ್ಯಪಾನ ಇವೆಲ್ಲವೂ ಬೆಳಗ್ಗಿನ ತಲೆನೋವಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಉಸಿರಾಟದ ತೊಂದರೆ

ನಿದ್ರೆಯಲ್ಲಿ ಉಸಿರಾಟದ ತೊಂದರೆಯು ನಿದ್ರೆಗೆ ಅಡ್ಡಿ ಪಡಿಸುತ್ತದೆ. ಆಮ್ಲಜನಕದ ಕೊರತೆಯಿಂದ ನಿದ್ರೆಗೆ ತೊಂದರೆಯಾಗುತ್ತದೆ. ಇದರಿಂದ ಬೆಳಗ್ಗೆ ಎದ್ದಾಗ ತಲೆನೋವು ಉಂಟಾಗಬಹುದು.

Health Tips

ನಿರ್ಜಲೀಕರಣ

ದಿನದಲ್ಲಿ ಸಾಕಷ್ಟು ನೀರು ಕುಡಿಯದೇ ಇರುವುದು ಕೂಡ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಹಗಲು ಸರಿಯಾಗಿ ನೀರು ಕುಡಿಯದೇ ಇರುವುದು ರಾತ್ರಿಯಲ್ಲಿ ಪದೇ ಪದೇ ಬಾಯಾರಿಕೆಗೆ ಕಾರಣವಾಗುತ್ತದೆ. ಇದರಿಂದ ರಾತ್ರಿ ಸರಿಯಾಗಿ ನಿದ್ರೆಯಾಗದೆ ಬೆಳಗ್ಗೆ ತಲೆನೋವಿಗೆ ಕಾರಣವಾಗುತ್ತದೆ.

ಹಲ್ಲುಗಳ ಕಡಿತ

ಕೆಲವರಿಗೆ ನಿದ್ರೆಯಲ್ಲಿ ಹಲ್ಲುಗಳನ್ನು ಕಡಿಯುವ ಅಭ್ಯಾಸವಿರುತ್ತದೆ. ಇದು ದವಡೆಯ ಸುತ್ತಲಿನ ಸ್ನಾಯುಗಳಿಗೆ ಒತ್ತಡ ಉಂಟು ಮಾಡುತ್ತದೆ. ಇದರಿಂದಲೂ ತಲೆನೋವು ಉಂಟಾಗುತ್ತದೆ.

ನಿದ್ರೆಯ ಭಂಗಿ

ವಿಚಿತ್ರವಾದ ಭಂಗಿಯಲ್ಲಿ ನಿದ್ರಿಸುವುದು ಅಥವಾ ಸರಿಯಾದ ದಿಂಬನ್ನು ಬಳಸದೇ ಇರುವುದು ಕುತ್ತಿಗೆ ಮತ್ತು ತಲೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತಲೆನೋವಿಗೆ ಕಾರಣವಾಗುತ್ತದೆ.

Health Tips

ಕಾಫಿ ಸೇವನೆ

ತಡ ರಾತ್ರಿ ಕೆಲವರಿಗೆ ಕಾಫಿ ಸೇವಿಸುವ ಅಭ್ಯಾಸವಿರುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೂ ಬೆಳಗ್ಗೆ ಎದ್ದಾಗ ತಲೆನೋವು ಅನುಭವಿಸಬಹುದು.

ಏನು ಪರಿಹಾರ ?

ದಿನಚರಿಯನ್ನು ಸರಿಯಾಗಿ ಪಾಲಿಸುವುದು ಬಹುಮುಖ್ಯ. ಇದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

ನಿದ್ರಾ ಸ್ಥಳ ಸ್ವಚ್ಛವಾಗಿರಲಿ ಮತ್ತು ಉತ್ತಮ ವಾತಾವರಣ ಹೊಂದಿರಲಿ. ಇದರಿಂದ ಚೆನ್ನಾಗಿ ನಿದ್ರೆ ಬರಲು ಸಾಧ್ಯವಿದೆ.

ಹಗಲಿನಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ರಾತ್ರಿ ಪದೇಪದೇ ಬಾಯಾರಿಕೆಯಾಗುವುದು ತಪ್ಪುತ್ತದೆ.

ರಾತ್ರಿಯಲ್ಲಿ ಹಲ್ಲುಗಳನ್ನು ಕಡಿಯುವ ಅಭ್ಯಾಸವಿದ್ದರೆ ಮೌತ್‌ಗಾರ್ಡ್ ಬಳಸಬಹುದು.

ನಿದ್ರೆಯ ಸಮಯಕ್ಕೆ ಸರಿಯಾದ ದಿಂಬು ಆಯ್ಕೆ ಮಾಡಿಕೊಳ್ಳಿ.

Healthy Brain: ದಿನಚರಿಯಲ್ಲಿ ಇರಲಿ ಈ ನಿಯಮ; ಆರೋಗ್ಯಕರವಾಗಿರಲಿ ಮೆದುಳು

ತಲೆನೋವು ಮುಂದುವರಿದರೆ ಮೈಗ್ರೇನ್‌ ಉಂಟಾಗಿರುವ ಸಾಧ್ಯತೆ ಇದೆ. ಇದಕ್ಕಾಗಿ ಆರೋಗ್ಯ ತಜ್ಞರನ್ನು ಭೇಟಿ ಮಾಡಿ.