Sunday, 6th October 2024

Vishweshwar Bhat Column: ಹಿಂದಕ್ಕೆ ಬರಲಾಗದ, ಮುಂದ‌ಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ ಸ್ಥಿತಿ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ನಾವು ವಾಹನವೇರಿ ಮರುಭೂಮಿಯಲ್ಲಿ ಸಾಗುವಾಗ ಮಾರ್ಗದಲ್ಲಿ ಅಲ್ಲಲ್ಲಿ ದೂರದಲ್ಲಿ ಒಂಟೆಗಳು, ಒಂದೆರಡು ವಾಹನಗಳು ಕಣ್ಣಿಗೆ ಬಿದ್ದಿದ್ದನ್ನು ಬಿಟ್ಟರೆ, ಅಲ್ಲಿ ಮನುಷ್ಯರ ಅಸ್ತಿತ್ವವೇ ಇಲ್ಲವೇನೋ ಎಂಬ ಅನುಮಾನ ಬರುವಂತಿತ್ತು. ಆ ಮರುಭೂಮಿಯಲ್ಲಿ ಡಾಂಬರು ರಸ್ತೆ ಇರಲಿಲ್ಲ. ಮಣ್ಣು, ಉಸುಕು ಅಥವಾ ಮರಳಿನ ಕಾಲುದಾರಿಯ ಮೇಲೆ ಉಬ್ಬು-ತಗ್ಗು ಮಾರ್ಗದಲ್ಲಿ ನಮ್ಮ ಕಾರು ಹೊರಟಿತ್ತು.

ಸ್ನೇಹಿತರಾದ ಕಿರಣ್ ಉಪಾಧ್ಯಾಯ ಅವರ ಜತೆ ನಾನು ಕಳೆದ ವರ್ಷ ಸೌದಿ ಅರೇಬಿಯಾಕ್ಕೆ ರೋಡ್ ಟ್ರಿಪ್‌ಗೆ ಹೋಗಿದ್ದೆ. ಆ ಮರುಭೂಮಿ ದೇಶದಲ್ಲಿ ನಾವು ಡ್ರೈವ್ ಮಾಡಿಕೊಂಡು ಏನಿಲ್ಲವೆಂದರೂ ಐದು ಸಾವಿರಕ್ಕೂ ಅಧಿಕ ಕಿ.ಮೀ. ದೂರ ಪ್ರವಾಸ ಮಾಡಿರಬಹುದು. ಸೌದಿಯಲ್ಲಿ ಪ್ರವಾಸ ಮಾಡುವಾಗ ನಗರ ಪ್ರದೇಶವನ್ನು ದಾಟಿದರೆ, ಎಲ್ಲಿ ನೋಡಿದರೂ ಮರುಭೂಮಿಗಳೇ. ಅದರ ಹೊರತಾಗಿ ಮತ್ತೇನನ್ನೂ ನೋಡಲು ಸಾಧ್ಯವಿಲ್ಲ. ನೂರಾರು ಕಿ.ಮೀ. ಪ್ರಯಾಣಿಸಿದರೂ ಒಂದೇ ಒಂದು ಮರ, ಹುಲ್ಲು, ಹಸಿರು ಸಹ ಕಣ್ಣಿಗೆ ಗೋಚರಿಸುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಮರಳಿನ ಸಾಗರ!

ರಸ್ತೆ ಫಲಕ, ಮೈಲಿಗಲ್ಲು ಅಥವಾ ಜಿಪಿಎಸ್ ಇಲ್ಲದಿದ್ದರೆ, ಎಲ್ಲಿದ್ದೇವೆ ಎಂಬುದೂ ತಿಳಿಯುವುದಿಲ್ಲ. ಎಲ್ಲಿಗೆ ಹೋದರೂ ಒಂದೇ ಪರಿಸರ, ಒಂದೇ ಹವಾಮಾನ ಮತ್ತು ಒಂದೇ ಭೌಗೋಳಿಕ ಪ್ರದೇಶ. ನಾವಿರುವ ತಾಣದ ಸುತ್ತಮುತ್ತ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿವೆಯಾ ಎಂದು ಮೊಬೈಲ್ ನಲ್ಲಿ ಪರಿಶೀಲಿಸಿದರೆ, ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿ Edge of the World (ಅಂದರೆ ‘ಪ್ರಪಂಚದ ಅಂಚು’) ಎಂಬ ರಮಣೀಯ ತಾಣವಿದೆ ಎಂಬುದು ಗೊತ್ತಾಯಿತು. ಆ ತಾಣದ ಹೆಸರು ಅಲ್ಲಿಗೆ ಹೋಗುವಂತೆ ನಮ್ಮನ್ನು ಪ್ರೇರೇಪಿಸಿತು. ಸರಿ, ಅಲ್ಲಿಗೆ ಹೋಗಲೇಬೇಕು ಎಂದು ನಿರ್ಧರಿಸಿ ಹೊರಟೆವು. ಆ ತಾಣಕ್ಕೆ ಸುಮಾರು ಹತ್ತು ಹತ್ತು ಕಿ.ಮೀ. ದೂರವಿರುವಾಗಲೇ, ಜಿಪಿಎಸ್ ಹುಚ್ಚಾ ಪಟ್ಟೆ ವರ್ತಿಸಲಾರಂಭಿಸಿತು. ಹತ್ತು ಕಿ.ಮೀ. ದೂರದಲ್ಲಿದೆ ಎಂದು ತೋರಿಸಿದ ಜಿಪಿಎಸ್ ಮುಂದಿನ ಕ್ಷಣದಲ್ಲಿ ಹದಿನೈದು ಕಿ. ಮೀ. ದೂರ ಎಂದು ತೋರಿಸಲಾರಂಭಿಸಿತು. ಅಷ್ಟೊತ್ತಿಗೆ ಸಾಯಂಕಾಲ ಐದೂವರೆ ಗಂಟೆ ಆಗಿರಬಹುದು. ಸೂರ್ಯ ಮುಳುಗಲಾರಂಭಿಸಿದರೂ ಆ ಬಟಾಬಯಲಿನಲ್ಲಿ ನಾವು ‘ಪ್ರಪಂಚದ ಅಂಚ’ನ್ನು ತಲುಪುವ ಉಮೇದಿನಲ್ಲಿ ಹೊರಟಿದ್ದೆವು.

ನಾವು ಹಾಗೆ ಹೋಗುವಾಗ ಮಾರ್ಗದಲ್ಲಿ ಅಲ್ಲಲ್ಲಿ ದೂರದಲ್ಲಿ ಒಂಟೆಗಳು, ಒಂದೆರಡು ವಾಹನಗಳು ಕಣ್ಣಿಗೆ
ಬಿದ್ದಿದ್ದನ್ನು ಬಿಟ್ಟರೆ, ಆ ಮರುಭೂಮಿಯಲ್ಲಿ ಮನುಷ್ಯರ ಅಸ್ತಿತ್ವವೇ ಇಲ್ಲವೇನೋ ಎಂಬ ಅನುಮಾನ ಬರುವಂತಿತ್ತು. ಆ ಮರುಭೂಮಿಯಲ್ಲಿ ಡಾಂಬರು ರಸ್ತೆ ಇರಲಿಲ್ಲ. ಮಣ್ಣು, ಉಸುಕು ಅಥವಾ ಮರಳಿನ ಕಾಲುದಾರಿಯ ಮೇಲೆ ಉಬ್ಬು-ತಗ್ಗು ಮಾರ್ಗದಲ್ಲಿ ನಮ್ಮ ಕಾರು ಹೊರಟಿತ್ತು. ದೂರದ ಎದ್ದ ಕಾರಿನ ಧೂಳು ನಮಗೆ ಉbಜಛಿ ಟ್ಛ ಠಿeಛಿ Uಟ್ಟ್ಝbನ ದಿಕ್ಕನ್ನು ಹೇಳುತ್ತಿತ್ತು. ಆ ಕಾರಿನಲ್ಲಿದ್ದವರು ಆ ತಾಣವನ್ನು ನೋಡಿ ಹಿಂದಿರುಗುತ್ತಿರಬಹುದು ಎಂದು ನಾವು ಅಂದುಕೊಂಡು ಆ ದಿಕ್ಕಿನೆಡೆ ಕ್ರಮಿಸುತ್ತಿದ್ದೆವು.

ಎಷ್ಟು ದೂರ ಕ್ರಮಿಸಿದರೂ ‘ಪ್ರಪಂಚದ ಅಂಚು’ ಸಮೀಪಿಸುತ್ತಿರುವ ಸಣ್ಣ ಸುಳಿವೂ ನಮಗೆ ಗೊತ್ತಾಗುತ್ತಿರಲಿಲ್ಲ.
ಅಷ್ಟೊತ್ತಿಗೆ ನಮ್ಮ ಮೊಬೈಲ್ ನೆಟ್‌ವರ್ಕ್ ಹೊರಟುಹೋಯಿತು. ಈ ಕಾರಣದಿಂದ ಜಿಪಿಎಸ್ ಸಹ ಕೆಲಸ ಮಾಡುತ್ತಿರಲಿಲ್ಲ. ಸೂರ್ಯನೂ ನಿಧಾನವಾಗಿ ಕಂತುತ್ತಿದ್ದ. ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆ ಯದು, ಅಷ್ಟು ಸನಿಹ ಬಂದಿರುವುದರಿಂದ ‘ಪ್ರಪಂಚದ ಅಂಚು’ ತಲುಪುವುದು ಮತ್ತು ಎರಡನೆಯದು, ಅಲ್ಲಿಂದ ಬಂದ ದಾರಿಯಲ್ಲಿ ತಕ್ಷಣ ವಾಪಸ್ ಹೊರಡುವುದು.

Edge of the World ಸುಮಾರು ೧,೨೦೦ ನೂರು ಮೀಟರ್ ಆಳದ ಕಣಿವೆ. ಸೌದಿ ಅರೇಬಿಯಾದ ರಾಜಧಾನಿ
ರಿಯಾದ್‌ನಿಂದ ಸುಮಾರು ನೂರೈವತ್ತು ಕಿ.ಮೀ. ದೂರದಲ್ಲಿ, ಸುಮಾರು ಎಂಟು ನೂರು ಕಿ.ಮೀ. ಉದ್ದದ
ತುವೈಕ್ ಪರ್ವತ ಶ್ರೇಣಿಯ ಕಟ್ಟಕಡೆಯ ಕಣಿವೆ ಪ್ರದೇಶ. ಅದರ ಮುಂದೆ ಏನಿದೆಯೋ ಆ ಬ್ರಹ್ಮನಿಗೇ ಗೊತ್ತು! ನಾವು Edge of the World ತಲುಪುವುದೇ ಅನುಮಾನ ಎಂದು ನಮಗೆ ಬಲವಾಗಿ ಅನಿಸಲಾರಂಭಿಸಿತು. ಒಂದು ವೇಳೆ ತಲುಪಿದರೂ, ಅಷ್ಟೊತ್ತಿಗೆ ಸಂಪೂರ್ಣ ಕತ್ತಲಾಗುವುದರಿಂದ ಅನನ್ನೂ ನೋಡಲಾಗುವುದಿಲ್ಲ.

ಅದಕ್ಕಿಂತ ಹೆಚ್ಚಾಗಿ, ಆ ದಾರಿಯಲ್ಲಿ ವಾಪಸ್ ಬರುವುದಾದರೂ ಹೇಗೆ? ಇನ್ನೊಂದು ಮನಸ್ಸು ಹೇಳುತ್ತಿತ್ತು,
ಹೇಗಿದ್ದರೂ ಅಷ್ಟು ದೂರ ಹೋಗಿದ್ದೀರಾ.. ನೀವು ನೋಡಬೇಕೆಂದಿರುವ ಸ್ಥಳ ಬಹಳ ಹತ್ತಿರದಲ್ಲಿದೆ, ಅಷ್ಟು
ಸನಿಹ ಹೋಗಿ ಖಾಲಿ ಕೈಯಲ್ಲಿ ಬರುತ್ತೀರಾ? ಆದರೆ ನಾವು ಆ ದುಸ್ಸಾಹಸಕ್ಕೆ ಮುಂದಾಗಲಿಲ್ಲ. ಅದೇ ಒಳ್ಳೆಯ ದಾಯಿತು. Edge of the World ಹತ್ತಿರ ಹತ್ತಿರ ಹೋದವರು, ಒಲ್ಲದ ಮನಸ್ಸಿನಿಂದ ಕಾರನ್ನು ಹಿಂದಕ್ಕೆ ತಿರುಗಿಸಿ ದೆವು. ಅಷ್ಟರೊಳಗೆ ಸೂರ್ಯ ಹೆಚ್ಚು-ಕಮ್ಮಿ ಮುಳುಗಿದ್ದ. ಆತ ಕಂತುವಾಗ ಹೊರಸೂಸುವ ಕಿರಣಗಳು ಮೋಡಗಳಿಂದ ಹೊರಚಾಚುತ್ತಿದ್ದವು. ಆದರೆ ಆ ಮರುಭೂಮಿಯಲ್ಲಿ ನರಪಿಳ್ಳೆಯೂ ಇರಲಿಲ್ಲ.

ದೂರದಲ್ಲಿ ಇರುವೆಗಳಂತೆ ಕಾಣಿಸುತ್ತಿದ್ದ ಒಂಟೆಗಳ ಸಾಲುಗಳು ಮರೆಯಾಗಿದ್ದವು. ಅದು ಮಂಗಳ ಗ್ರಹದ ಮೈದಾನ ದಂತೆ ಬೋಳುಬೋಳಾಗಿ ಕಾಣಿಸುತ್ತಿತ್ತು. ತುಸು ದೂರ ವಾಪಸ್ ಬರುತ್ತಿರುವಂತೆ, ನಮ್ಮ ಮುಂದೆ ಎರಡು ಕಾಲು ದಾರಿಗಳು ತೆರೆದುಕೊಂಡವು. ಯಾವ ಹಾದಿಯಲ್ಲಿ ಹೋಗುವುದೆಂದು ಗೊಂದಲವಾಯಿತು. ಏನಾದರೂ ಆಗಲಿ ಎಂದು ಒಂದು ದಾರಿಯನ್ನು ಆಯ್ದುಕೊಂಡೆವು. ಪುಣ್ಯವಶಾತ್ ಆ ಎರಡೂ ದಾರಿಗಳು ಸ್ವಲ್ಪ ದೂರದ ನಂತರ ಕೂಡಿ ಒಂದಾದವು. ಆ ಮರುಭೂಮಿಯಲ್ಲಿ ನಾವು ಎಲ್ಲಿದ್ದೇವೆ, ಮುಂದೆ ಯಾವ ಕಡೆ ಹೋಗಬೇಕು, ನಾವು ಸಾಗುತ್ತಿರುವ ದಿಕ್ಕು ಸರಿಯಾಗಿದೆಯಾ, ಇನ್ನು ಎಷ್ಟು ದೂರ ಕ್ರಮಿಸಿದರೆ ನಮಗೆ ಮುಖ್ಯರಸ್ತೆ ಅಥವಾ ಊರು ಸಿಗುತ್ತದೆ ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರಗಳಿರಲಿಲ್ಲ. ಹೇಳಿ ಕೇಳಿ ಕಿರಣ್ ಮರುಭೂಮಿವಾಸಿ. ಅವರು ಸುಮಾರು ಎರಡು ದಶಕಗಳನ್ನು ಮರುಭೂಮಿಯಲ್ಲಿಯೇ ಕಳೆದವರು.

ಮರುಭೂಮಿಯ ನೀರವತೆ, ಅಸಹನೀಯ ತಬ್ಬಲಿತನ ಅವರಿಗೆ ಗೊತ್ತಿಲ್ಲದ ಸಂಗತಿಗಳೇನಲ್ಲ. ಆದರೆ ಅಂದು ನಾವಿದ್ದ ತಾಣ ಅವರಿಗೂ ಗೊತ್ತಿಲ್ಲದ ಮತ್ತೊಂದು ಮರುಭೂಮಿ. ಅಸಲಿಗೆ ನಾವು ಎಲ್ಲಿದ್ದೇವೆ ಎಂಬುದೇ ಗೊತ್ತಿಲ್ಲದಿರುವಾಗ ಹೋಗುವುದಾದರೂ ಎಲ್ಲಿಗೆ? ಈ ಪ್ರಶ್ನೆ ನಮ್ಮನ್ನು ಭೂತಾಕಾರವಾಗಿ ಕಾಡಲಾರಂಭಿಸಿತು. ಅಷ್ಟೊತ್ತಿಗೆ ನಮ್ಮ ಮುಂದೆ ಕತ್ತಲ ಪರದೆ ನಿಧಾನವಾಗಿ ಜಾರಲಾರಂಭಿಸಿತು. ಅಕ್ಷರಶಃ ಅದೇ ನಮಗೆ Edge of the World! ಅಲ್ಲಿ ನಿಲ್ಲುವ ಹಾಗಿರಲಿಲ್ಲ. ಅದೃಷ್ಟವಶಾತ್ ಕಾರಿನಲ್ಲಿ ಇನ್ನೂ ಸ್ವಲ್ಪ ಪೆಟ್ರೋಲ್ ಇತ್ತು.

ಬಚಾವ್ ಆಯ್ತು ಬಡಜೀವ ಅಂದುಕೊಂಡೆವು. ಮೊಬೈಲಿಗೆ ನೆಟ್‌ವರ್ಕ್ ಆಸರೆ ಇರಲಿಲ್ಲ. ಜಿಪಿಎಸ್
ಏದುಸಿರು ಬಿಡುತ್ತಿತ್ತು. Edge of the Worldಗೆ ವಿರುದ್ಧ ದಿಕ್ಕಿಗೆ ಸಾಗುತ್ತಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಂಡೆವು. ಪೆಟ್ರೋಲ್ ಖಾಲಿಯಾಗುವುದರೊಳಗೆ ಜನವಸತಿ ಪ್ರದೇಶವನ್ನಂತೂ ತಲುಪಬಹುದು ಎಂಬ ಆಶಾಭಾವನೆಯಿಂದ ಆ ಕತ್ತಲಿನಲ್ಲಿ ಕಿರಣ್ ಕಾರನ್ನು ಓಡಿಸಲಾರಂಭಿಸಿದರು. ಆದರೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದು ಮಾತ್ರ ಇಬ್ಬರಿಗೂ ಗೊತ್ತಿರಲಿಲ್ಲ.

ಕ್ಷಣಕ್ಷಣಕ್ಕೂ ನಮ್ಮ ಗೊಂದಲದ ಮೂಟೆಯ ಭಾರ ಹೆಚ್ಚಾಗುತ್ತಿತ್ತು. ಆ ಕಗ್ಗತ್ತಲಿನಲ್ಲಿ ಸಣ್ಣ ಬೆಳಕು, ದೂರದ ಒಬ್ಬ ವ್ಯಕ್ತಿ ಕಾಣಿಸಿಕೊಳ್ಳಬಾರದೇ ಎಂದು ಅಂದುಕೊಂಡಿದ್ದಷ್ಟೇ ಬಂತು. ಅಂಥ ಯಾವ ಚಮತ್ಕಾರವೂ ನಡೆಯಲಿಲ್ಲ. ಇದು ಆತಂಕ, ಎದೆಬಡಿತವನ್ನು ಮತ್ತಷ್ಟು ಜಾಸ್ತಿ ಮಾಡುತ್ತಿತ್ತು. Edge of the World ನಮ್ಮ ಪಾಲಿಗೆ end of the world ಥರ ಭಾಸವಾಗುತ್ತಿತ್ತು. ನಾನಂತೂ ನನ್ನ ಜೀವನದಲ್ಲಿ ಆ ರೀತಿ ಭೀತಿ ಹುಟ್ಟಿಸುವ ನಿರ್ದಯಿ ಮರುಭೂಮಿ ಯನ್ನು ನೋಡಿರಲಿಲ್ಲ. ಅಲ್ಲಿ ನಿಂತು ನಮ್ಮ ಊರು, ಕುಟುಂಬ, ಸ್ನೇಹಿತರು ಸಹ ಕಣ್ಣ ಮುಂದೆ ಬರುತ್ತಿರಲಿಲ್ಲ. ಅಸಲಿಗೆ ನಾನು ಎಂಬ ಪ್ರಾಣಿ ಇರುವುದಾದರೂ ನಿಜವಾ ಎಂದು ಅನಿಸಲಾರಂಭಿಸಿಬಿಟ್ಟಿತು.

ನನ್ನ ಮೈ ಚಿವುಟಿಕೊಂಡೆ. ನನ್ನ ಇರುವಿಕೆಗೆ ಆ ಸಣ್ಣ ನೋವು ಸಾಂತ್ವನ ನೀಡಿತಷ್ಟೇ. ಜತೆಯಲ್ಲಿ ಕಿರಣ್ ಇದ್ದುದರಿಂದ ನನ್ನ ಭಯವನ್ನು ತೋರಿಸಿಕೊಳ್ಳದೇ ಅದನ್ನೇ ಹಾಸ್ಯಮಯ ಪ್ರಸಂಗವಾಗಿ ಪರಿವರ್ತಿಸಿಕೊಂಡು ಹಗುರವಾಗಲು ಹರಸಾಹಸಪಡುತ್ತಿದ್ದೆ.

ಈ ಮಧ್ಯೆ, ಮರುಭೂಮಿಯಲ್ಲಿ ಹಾದಿ ತಪ್ಪಿಸಿಕೊಂಡು, ಐದಾರು ತಾಸು ನಡೆದು ನಡೆದು ನಿತ್ರಾಣನಾಗಿ, ಕೊನೆಗೆ
ಇಡೀ ರಾತ್ರಿಯನ್ನು ಮರಳಹಾಸಿನ ಮಲಗಿ ಕಳೆದ ಸುಡಾನ್ ದೇಶದ ಪ್ರವಾಸಿಗನ ರೋಚಕ ಅನುಭವ ನೆನಪಾ ಯಿತು. ಎಂಥ ಅನುಭವಿಗೂ ಮರುಭೂಮಿ ಹೇಗೆ ತನ್ನ ಹಾದಿಯನ್ನು ಕತ್ತಲುಗೊಳಿಸಿ ಗಲಿಬಿಲಿ ಗೊಳಿಸಿಬಿಡುತ್ತದೆ ಎಂಬುದನ್ನು ಕಟ್ಟಿಕೊಟ್ಟ ಮೊರೊಕ್ಕೋ ದೇಶದ ಅಲೆಮಾರಿಯೊಬ್ಬನ ಕಥನ ಹಾದುಹೋಯಿತು. ಕಡಲು ಚಲನಶೀಲ, ಮರುಭೂಮಿ ಸ್ಥಾವರ ಮತ್ತು ನಿಗೂಢ. ಜನ ಮತ್ತು ಜೀವ ಇರುವೆಡೆ ಜೀವನ ಮಾಡಬಹುದು. ಆದರೆ ಮರುಭೂಮಿ ಶುದ್ಧ ಮಣ್ಣಂಗಟ್ಟೆ! ಅದು ನಿರ್ಭಾವುಕ.

ಆ ಕತ್ತಲೆಯನ್ನು ಸೀಳಿಕೊಂಡು ನಮ್ಮ ಕಾರು ಒಂದೇ ಸಮನೆ ಚಲಿಸುತ್ತಿತ್ತು. ಆದರೆ ಎತ್ತ ಸಾಗುತ್ತಿದ್ದೇವೆ ಎಂಬ ಸಣ್ಣ
ಕಲ್ಪನೆಯೂ ನಮಗಿರಲಿಲ್ಲ. ಒಂದು ವೇಳೆ ನಾವಿಬ್ಬರೂ ಆ ಮರುಭೂಮಿಗೆ ಎಷ್ಟೇ ಪರಿಚಿತರಾಗಿದ್ದರೂ ಆ ಕತ್ತಲೆಯಲ್ಲಿ ನಾವು ಅಬ್ಬೇಪಾರಿಗಳೇ.

ಸುಮಾರು 25-30 ಕಿ.ಮೀ. ದೂರ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡವರಂತೆ ಕಾರನ್ನು ಓಡಿಸಿದ ಬಳಿಕ, ಅನತಿ ದೂರದ
ಮಿಣುಕು ಹುಳದಂತೆ ಬೆಳಕಿನ ಸೆಲೆ ಕಾಣಿಸಿಕೊಂಡಿತು. ಬದುಕಿದೆಯಾ ಬಡಜೀವವೇ ಎಂದುಕೊಂಡೆವು.
ಮತ್ತಷ್ಟು ದೂರ ಕ್ರಮಿಸಿದ ಬಳಿಕ ಮೊಬೈಲ್‌ಗೂ ಜೀವ ಬಂದಿತು. ಜಿಪಿಎಸ್ ಉಸಿರು ಬಿಡಲಾರಂಭಿಸಿತು.

ನಾವಿಲ್ಲಿದ್ದೇವೆ ಎಂಬುದು ಮೊಬೈಲ್ ಪರದೆಯಲ್ಲಿ ಕಾಣಿಸಲಾರಂಭಿಸಿತು. ಆ ಎರಡು ಗಂಟೆ ಆ ಮರುಭೂಮಿ ಯಲ್ಲಿ ಶುದ್ಧ ತಬ್ಬಲಿಗಳಂತೆ, ‘ದಾರಿ ತಪ್ಪಿದ ಮಗ’ನಾಗಿ ಕಂಗಾಲಾಗಿದ್ದೆವು. ಕೊನೆಗೆ, ನಿತ್ರಾಣವಾಗಿ ಕಿನಾರೆಯಲ್ಲಿ ಬಿದ್ದ ಮೀನು ತೆವಳುತ್ತಾ, ತೆವಳುತ್ತಾ ಕಡಲು ಸೇರುವಂತೆ, ಹೇಗೇಗೋ ಮುಖ್ಯ ರಸ್ತೆ ಸೇರಿಕೊಳ್ಳುವ ಹೊತ್ತಿಗೆ ಏಳೋ-ಹನ್ನೊಂದೋ ಆಗಿತ್ತು. ಇಂದಿಗೂ ಆ ಕ್ಷಣಗಳನ್ನು ನೆನಪಿಸಿಕೊಂಡರೆ ಮೈಮೇಲೆ ಚಳಿಗುಳ್ಳೆಗಳು ಮೂಡುತ್ತವೆ. ಈ ಘಟನೆಯನ್ನು ಇಂದು ಹಠಾತ್ ನೆನಪಿಸಿಕೊಳ್ಳಲು ಕಾರಣವೇನು ಎಂದು ನಿಮಗನಿಸಬಹುದು. ಇದಕ್ಕೂ ಕಾರಣ ವಿದೆ. ಇತ್ತೀಚೆಗೆ ‘ಉದಯವಾಣಿ’ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ‘ಜಿಪಿಎಸ್ ಸಿಗ್ನಲ್ ಕಡಿತ, ಅಲೆದು ಅಲೆದು ಸುಸ್ತಾಗಿ ಸಾವು. ಸೌದಿ ಮರುಭೂಮಿಯಲ್ಲಿ ದಿಕ್ಕು ತಪ್ಪಿ ಭಾರತದ ವ್ಯಕ್ತಿ ಸಾವು’ ಎಂಬ ಶೀರ್ಷಿಕೆ.

ಅಂದು ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣದ ಕರೀಂ ನಗರದ ೨೭ ವರ್ಷ ವಯಸ್ಸಿನ ಮೊಹಮ್ಮದ್ ಶೆಹಜಾದ ಮತ್ತು ಸೂಡಾನಿನ ಆತನ ಸ್ನೇಹಿತ ದಾರಿ ತಪ್ಪಿಸಿಕೊಂಡಿದ್ದಾರೆ.

ಅವರ ಮೊಬೈಲ್ ಜಿಪಿಎಸ್ ಸಿಗ್ನಲ್ ಏಕಾಏಕಿ ಕಡಿತವಾಗಿದೆ. ತುಸು ಹೊತ್ತಿನ ಬಳಿಕ ಅವರ ಮೊಬೈಲ್ ಬ್ಯಾಟರಿ ಸಹ ಖಾಲಿಯಾಗಿದೆ. ಯಾವ ಕಡೆ ಹೋಗಬೇಕು ಎಂಬುದು ಗೊತ್ತಾಗದೇ ಸುಮಾರು ನೂರಾರು ಕಿ.ಮೀ. ಅಲೆದಿzರೆ. ನಂತರ ಕಾರಿನ ಇಂಧನ ಸಹ ಮುಗಿದುಹೋಗಿದೆ. ಅಷ್ಟೊತ್ತಿಗೆ ಇಬ್ಬರಿಗೂ ಹಸಿವಾಗಿ ಕಾರಿನಲ್ಲಿದ್ದ ಕುಡಿಯುವ ನೀರು, ಡ್ರೈ ಫ್ರೂಟ್ಸ್, ಬಿಸ್ಕತ್ ಅನ್ನು ಖಾಲಿ ಮಾಡಿzರೆ. ಸೌದಿ ಅರೇಬಿಯಾದ ದಕ್ಷಿಣ ಭಾಗದಲ್ಲಿ ‌ಹರಡಿರುವ ಸುಮಾರು ಸಾವಿರ ಕಿ.ಮೀ. ಉದ್ದ, ಐನೂರು ಕಿ.ಮೀ. ಅಗಲದ ರಬ್ ಅಲ್ ಖಲಿ ಮರುಭೂಮಿಯಲ್ಲಿ ಎಷ್ಟು ಅಲೆದರೂ ಅವರಿಗೆ ತಾವು ಎಲ್ಲಿದ್ದೇವೆ ಎಂಬುದು ಗೊತ್ತಾಗಿಲ್ಲ ಮತ್ತು ಮುಖ್ಯರಸ್ತೆ ಸಿಕ್ಕಿಲ್ಲ. ಅಲೆದು ಅಲೆದು
ಸುಸ್ತಾಗಿ, ಕೊನೆಗೆ ಇಬ್ಬರೂ ಬಾಯಾರಿಕೆಯಿಂದ ದಯನೀಯವಾಗಿ ಸತ್ತಿದ್ದಾರೆ.

ಈ ಸುದ್ದಿ ಓದುತ್ತಿದ್ದಂತೆ ನನಗೆ ಹಿಂದಕ್ಕೆ ಬರಲಾಗದ, ಮುಂದಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ Edge of
the World ತುತ್ತತುದಿಯಲ್ಲಿ ನಿಂತ ಅನುಭವವಾಯಿತು. ಅಂದು ನಾವು ಸಹ ಅದೇ ಸ್ಥಿತಿಯಲ್ಲಿದ್ದೆವು. ಬಚಾವ್ ಆಗಿ ಬಂದಿದ್ದೇ ದೊಡ್ಡದು!

ಇದನ್ನೂ ಓದಿ: Vishweshwar Bhat Column: ಅಂಕಣಕಾರರ ತಳಮಳ