ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಕೃಷಿ ಚಟುವಟಿಕೆಗಳನ್ನೇ ಪ್ರಮುಖವಾಗಿಸಿಕೊಂಡು ಬೆಳೆದು ನಾಗರಿಕತೆ ಹೊಂದಿರುವ ಹಳ್ಳಿಗಳ ದೇಶ ಭಾರತ. ಕೃಷಿ, ತೋಟಗಾರಿಕೆ ಬೆಳೆಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇಷ್ಟಾದರೂ ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪದ ಹತ್ತಾರು ಘಟನೆಗಳು ರೈತರಿಗೆ ನೇರ ಹೊಡೆತ ನೀಡುತ್ತವೆ. ಇಂಥ ಸಂದರ್ಭ ದಲ್ಲಿ ರೈತರಿಗೆ ಬೆಳೆ ವಿಮೆಯೇ ದೊಡ್ಡ ಆಶ್ರಯವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಳೆ ವಿಮೆ ಸಾಕಷ್ಟು ಪರಿವರ್ತನೆಯಾಗಿರುವುದರ ಜತೆಗೆ ಅದರ ಸರಳೀಕರಣವೂ ಆಗಿದೆ. ಆದರ ನಡುವೆಯೂ ಒಂದಿಷ್ಟು ಕ್ಲಿಷ್ಟತೆ ಇದೆ. ಇದನ್ನು ಸರಿಪಡಿಸಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ರೈತರಿಗೆ ಸುಲಭದಲ್ಲಿ ಸಿಗುವಂತೆ ಮಾಡಿದಲ್ಲಿ ರೈತರು
ಇನ್ನಷ್ಟು ನೆಮ್ಮದಿಯ ಬದುಕು ನಡೆಸಲು ಸಾಧ್ಯ. ಪ್ರಾಕೃತಿಕ ವಿಷಮ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ, ಸ್ಥೈರ್ಯ ಅವರಲ್ಲಿ ಇನ್ನಷ್ಟು ಹೆಚ್ಚಲಿದೆ.
ದೇಶದ ‘ಫುಡ್ ಬಾಸ್ಕೆಟ್’ ಎಂದೇ ಖ್ಯಾತವಾಗಿರುವ ಉತ್ತರ ಪ್ರದೇಶವು ಗೋಧಿ, ಅಕ್ಕಿ, ಕಬ್ಬು, ಆಲೂಗಡ್ಡೆ,
ಹಾಲು ಮತ್ತು ದಿನನಿತ್ಯದ ತರಕಾರಿ ಬೆಳೆಗೆ ಪ್ರಸಿದ್ಧವಾಗಿದ್ದರೆ, ಹರಿಯಾಣವು ತನ್ನ ಶೇ.80ರಷ್ಟು ಭೂಮಿಯನ್ನು ಇಂಥ ವಿವಿಧ ಬೆಳೆಗಳಿಗೆ ಉಪಯೋಗಿಸುತ್ತಿದೆ. ಮಧ್ಯಪ್ರದೇಶವು ದೇಶದ ಜಿಡಿಪಿಗೆ ಶೇ.47ರಷ್ಟು ಕೃಷಿ ಪ್ರಯೋಜನ ನೀಡುವ ಮೂಲಕ ಕೃಷಿ ಸಮ್ಮಾನ ಪ್ರಶಸ್ತಿಯನ್ನು 7 ಬಾರಿ ತನ್ನದಾಗಿಸಿಕೊಂಡಿದೆ. ಇನ್ನು ಗುಜರಾತ್ ತನ್ನ ಅರ್ಧದಷ್ಟು ಪ್ರದೇಶವನ್ನು ಕೃಷಿಗಾಗಿಯೇ ಬಳಸುತ್ತಿದೆ.
ಅಸ್ಸಾಂ ರಾಜ್ಯವು ಚಹಾ ಸೇರಿದಂತೆ ಅತ್ಯುಪಯುಕ್ತ ಬೆಳೆಗಳನ್ನು ಬೆಳೆಯುತ್ತಿದ್ದರೆ, ಕರ್ನಾಟಕವು ಭತ್ತ, ಅಡಕೆ,
ತೆಂಗು, ಕಾಫಿ ಸಹಿತ ಹಲವು ತೋಟಗಾರಿಕೆ ಬೆಳೆಗಳ ಮೂಲಕ ದೇಶದ ಮನ್ನಣೆ ಪಡೆದಿದೆ. ಇಲ್ಲಿನ ಒಂದೊಂದು ಜಿಲ್ಲೆಯಲ್ಲೂ ಒಂದೊಂ ದು ವಿಶೇಷ ಬೆಳೆಗಳಿವೆ. ಕರಾವಳಿ ಜಿಗಳಲ್ಲಿ ಭತ್ತ, ಅಡಕೆ, ತೆಂಗು, ಕೋಕ್ ಇತ್ಯಾದಿ ಪ್ರಮುಖ ಬೆಳೆಯಾದರೆ ಮಲೆನಾಡಿನಲ್ಲಿ ಭತ್ತ, ಅಡಕೆಯೇ ಪ್ರಧಾನ. ಬಯಲುಸೀಮೆ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖವಾಗಿ ಕಬ್ಬು
ಬೆಳೆಯಲಾಗುತ್ತದೆ. ಹೀಗೆ ಎಲ್ಲ ಕಡೆಗಳಲ್ಲೂ ಬೆಳೆಯ ಭಿನ್ನತೆಯಿದೆ.
ಸುಮಾರು 1785280 ಚ.ಕಿ.ಮೀ.ನಷ್ಟು ಭೂಮಿ ಯನ್ನು ದೇಶದ ಕೃಷಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇದರಲ್ಲಿ ಶೇ.೪೦ರಷ್ಟು ನೀರಾವರಿಯದಾಗಿದ್ದರೆ, 40 ದಶಲಕ್ಷ ಹೆಕ್ಟೇರ್ ಅಂತರ್ಜಲದಿಂದ ಮತ್ತು 22 ದಶಲಕ್ಷ ಹೆಕ್ಟೇರ್ ಕಾಲುವೆಗಳಿಂದ ನಡೆಯುತ್ತಿವೆ. ಮೂರನೇ ಎರಡು ಭಾಗದಷ್ಟು ಕೃಷಿಯು ಮಳೆಗಾಲದ ಮೇಲೆ ಅವಲಂಬಿ
ತವಾಗಿದ್ದು, ಅಮೆರಿಕ, ರಷ್ಯಾ, ಚೀನಾ, ಬ್ರೆಜಿಲ್ ನಂತರದಲ್ಲಿ ಭಾರತವು ಅತಿಹೆಚ್ಚು ಕೃಷಿಯೋಗ್ಯ ಭೂಮಿಯನ್ನು ಹೊಂದಿದೆ. ತಾಪಮಾನ ಏರಿಕೆಯಿಂದಾಗಿ ಮಳೆ ವಿಧಾನದಲ್ಲಿ ಬದಲಾವಣೆಯಾಗಿ ಇದು ಕೃಷಿಯ ಮೇಲೆ ನೇರ ಪ್ರಭಾವ ಬೀರುತ್ತಿದೆ.
ಮಳೆ ಆಶ್ರಿತ ಕೃಷಿಗೆ ಸಕಾಲದಲ್ಲಿ ಮಳೆಯ ಕೃಪೆ ಸಿಗುತ್ತಿಲ್ಲ. ಕಟಾವು ಅಥವಾ ಇಳುವರಿ ಪಡೆಯುವ ಸಂದರ್ಭದಲ್ಲಿ ಮಳೆ ಜಾಸ್ತಿ ಬರುತ್ತಿದೆ. ಇದೆಲ್ಲದರಿಂದಲೂ ರೈತರಿಗೆ ಸಮಸ್ಯೆ ಆಗುತ್ತಿದ್ದು, ಇದರ ನಿವಾರಣೆಗೆ ಬೆಳೆ ವಿಮೆ ಅತಿ
ಅವಶ್ಯಕವಾಗಿದೆ. 150 ವರ್ಷಗಳ ಅಂಕಿ-ಅಂಶ ಪರಿಗಣಿಸಿದರೆ, ತಾಪಮಾನವು ಸರಾಸರಿ ಶೇ.2 ಡಿಗ್ರಿ
ಸೆಲ್ಸಿಯಸ್ ನಷ್ಟು ಜಾಸ್ತಿ ಆಗಿದೆ. ಇದು ಪಶುಗಳು, ಬೆಳೆಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಮಾವು ಬೇಗ ಹೂ ಬಿಡುತ್ತಿದೆ. ಹೀಗಾದರೆ ಕಾಯಿ ಕಚ್ಚುವ ಪ್ರಮಾಣ ಕಡಿಮೆ ಆಗುತ್ತದೆ. ಸೇಬು ಬೆಳೆಯುವುದಕ್ಕೆ ಬೇಕಾದ ಕನಿಷ್ಠ ಎತ್ತರ ಹೆಚ್ಚುತ್ತಿರುವುದರಿಂದ ಸೇಬಿನ ಇಳುವರಿ ಕಡಿಮೆ ಆಗುತ್ತಿದೆ.
ಹವಾಮಾನ ವೈಪರೀತ್ಯ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಹಾರ ಉತ್ಪಾದನೆ ಇಳಿಕೆಯಾಗುವುದರ
ಜತೆಗೆ ಗುಣಮಟ್ಟವೂ ಕಡಿಮೆಯಾಗಲಿದೆ. ಮಣ್ಣು-ಸಸ್ಯ, ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಸಮತೋಲನ
ಕಳೆದುಹೋಗಲಿದೆ. ಕರ್ನಾಟಕದಲ್ಲಿ ನೀರಿನ ಬರ ವಿಪರೀತವಿದ್ದು, ರಾಜ್ಯದಾದ್ಯಂತ ಕೃಷಿಹೊಂಡಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ, ಹನಿ ನೀರಾವರಿ, ಸ್ಪ್ರಿಂಕ್ಲರ್ ಬಳಸುವ ಮೂಲಕ ನೀರು ಪೋಲಾಗುವುದನ್ನು ತಡೆಯಬೇಕು. ನಿಯಂತ್ರಿತ ನೀರಾವರಿ ಪದ್ಧತಿಯ ಬಳಕೆ ಈ ನಿಟ್ಟಿನಲ್ಲಿ ಹೆಚ್ಚು ಸೂಕ್ತ. ಸೆನ್ಸರ್‌ಗಳನ್ನು ಬಳಸಿ ಸಸಿಗಳಿಗೆ ಎಷ್ಟು ನೀರು ಅಗತ್ಯವಿದೆ ಎಂದು ಕಂಡುಕೊಂಡು ಅಷ್ಟೇ ಪ್ರಮಾಣದ ನೀರುಣಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದು ಒಳಿತು. ಭತ್ತ ಹಾಗೂ ಕಬ್ಬಿಗೂ ಚತುರ ನೀರಾವರಿ ಬಳಸಿ ಎರಡರಿಂದ ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು.
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವುದು ದೊಡ್ಡ ಸವಾಲು. ದೇಶದಲ್ಲಿ ರೈತರ ಆದಾಯ ದ್ವಿಗುಣವಾ
ಗಲು 14 ವರ್ಷ ಕಾಯಬೇಕಾಯಿತು. ಇಂಥ ಸ್ಥಿತಿಯು ಆತ್ಮಹತ್ಯೆಯಂಥ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.
ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸು ವುದರ ಜತೆಯ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಇತ್ತೀಚೆಗೆ ವ್ಯಾಪಕವಾಗಿ ಮಾತುಕತೆ ನಡೆಯುತ್ತಿದೆ.
ಬೆಳೆ ಬೆಳೆಯುವುದರ ಜತೆಗೆ ಪಶುಸಂಗೋಪನೆ, ಕೋಳಿ ಸಾಕಣೆ, ಜೇನು ಕೃಷಿ, ಅಣಬೆ ಕೃಷಿ, ಒಂದು ಬೆಳೆಯ ಬದಲು ಎರಡು ಬೆಳೆ ತೆಗೆಯುವುದು, ಎರಡು ಪ್ರಮುಖ ಬೆಳೆಗಳ ನಡುವೆ ದ್ವಿದಳ ಧಾನ್ಯ ಬೆಳೆಯುವುದು ಇತ್ಯಾದಿ ಪರಿಪಾಠ ಗಳಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬಹುತೇಕ ಕೃಷಿ ಉತ್ಪನ್ನಗಳು ಬೇಗ ಹಾಳಾಗುವಂಥವು. ಇವುಗಳ ಶೇಖರಣೆಗೆ ಸರಣಿ ಶೀತಲ ಗೃಹಗಳನ್ನು ನಿರ್ಮಿಸುವ, ಸಾಗಣೆ ಹಾಗೂ ಮೌಲ್ಯ ವರ್ಧನೆಗೆ ವ್ಯವಸ್ಥೆ ಕಲ್ಪಿಸುವ ಕೆಲಸಗಳಾಗಬೇಕು.
ಇಂಥ ಕಠಿಣ ಸಂದರ್ಭಗಳಲ್ಲಿ ರೈತರ ಸಹಾಯಕ್ಕೆ ಬರುವ ಕೆಲ ಯೋಜನೆಗಳಲ್ಲಿ ಈ ಬೆಳೆ ವಿಮೆ ಕೂಡ
ಒಂದೆನ್ನಬಹುದು. ಭಾರತದಲ್ಲಿ ಬೆಳೆ ವಿಮೆಯನ್ನು ಸಾಮಾನ್ಯವಾಗಿ ವಿವಿಧ ಸರಕಾರಿ ಯೋಜನೆಗಳ ಮೂಲಕ
ಜಾರಿಗೆ ತರಲಾಗುತ್ತಿದ್ದು, ಇಂಥವುಗಳಲ್ಲಿ ಪ್ರಮುಖವಾಗಿ ಪ್ರಧಾನಮಂತ್ರಿ -ಸಲ್ ಬಿಮಾ ಯೋಜನೆ (PMFBY)
ಕೂಡ ಒಂದಾಗಿದೆ.
ಬೆಳೆ ವಿಮಾ ಪಾಲಿಸಿಗಳನ್ನು ವಿಶಿಷ್ಟವಾಗಿ ಕೃಷಿಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಘಟಕಗಳಿಗೆಂದು ವಿನ್ಯಾಸಗೊಳಿ ಸಲಾಗಿದ್ದು, ದೊಡ್ಡ ಪ್ರಮಾಣದ ವಾಣಿಜ್ಯ ರೈತರು, ಸಣ್ಣ ಪ್ರಮಾಣದ ಜೀವನಾಧಾರ ರೈತರು,
ಹಿಡುವಳಿದಾರ ರೈತರು, ಸಾಲ ಪಡೆಯದ ರೈತರು, ಉಪಕರಣ ತಯಾರಕರು ಮತ್ತು ಆಹಾರ ಸಂಸ್ಕಾರಕಗಳು
ಸೇರಿದಂತೆ ಕೃಷಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಕಡ್ಡಾಯ ಮತ್ತು ಸ್ವಯಂಪ್ರೇರಿತ ಘಟಕಗಳೆಲ್ಲವೂ ಈ
ವಿಮೆಯನ್ನು ಹೊಂದಬಹುದಾಗಿದೆ.
ಬೆಳೆ ವಿಮಾ ಯೋಜನೆಗಳು 1970ರ ದಶಕದಿಂದಲೂ ದೇಶದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ. ಪೈಲಟ್ ಬೆಳೆ
ವಿಮಾ ಯೋಜನೆ, ಸಮಗ್ರ ಬೆಳೆ ವಿಮಾ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಮಾ ಯೋಜನೆ (NAIS) ಸೇರಿದಂತೆ ರಾಷ್ಟ್ರೀಯ ಮಟ್ಟದ ವಿವಿಧ ಯೋಜನೆಗಳನ್ನು ಪರಿಚಯಿಸಲಾ ಗಿದೆ. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು ಮರುರೂಪಿತ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ (RWBCIS) ಇತ್ಯಾದಿಗಳನ್ನು ಕೇಂದ್ರ ಸರಕಾರದ ಮೂಲಕ 2016ರಲ್ಲಿ ಪ್ರಾರಂಭಿಸಲಾಯಿತು.
ಬೆಳೆನಾಶದಿಂದಾಗಿ ರೈತರ ಜೀವನೋಪಾಯದ ಮೇಲಾಗುವ ವ್ಯತಿರಿಕ್ತ ಪರಿಣಾಮವನ್ನು ತಗ್ಗಿಸುವುದು ಮತ್ತು ನಷ್ಟದ ಭಯವಿಲ್ಲದೆ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು, ಬೆಳೆ ವಿಮೆಯ ಪ್ರಾಥಮಿಕ ಉದ್ದೇಶವಾಗಿದೆ. ಇಷ್ಟೆಲ್ಲ ಸೌಲಭ್ಯ-ಸೌಕರ್ಯಗಳನ್ನು ಸರಕಾರಗಳಿಂದ ಘೋಷಿಸಲಾಗಿ ದ್ದರೂ, ಪರಿಣತರಲ್ಲದವರಿಗೆ ಆಧುನಿಕತೆ-ತಂತ್ರeನದ ಹೆಸರಿನಲ್ಲಿ ತಂತ್ರಾಂಶಗಳನ್ನು ತಯಾರಿಸುವುದಕ್ಕೆ ಗುತ್ತಿಗೆ ನೀಡುವ ಸ್ಥಳೀಯ ಆಡಳಿತವು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತ ತಮಾಷೆ ನೋಡುತ್ತಿದೆ ಎನ್ನಬಹುದು.
‘ಭೂಮಿ’ ಎನ್ನುವ ತಂತ್ರಾಂಶವು ಅರೆಬರೆ ಕಾಲಮ್ಮುಗಳನ್ನು ಪಹಣಿಗಳಲ್ಲಿ ತೋರುವ ಮೂಲಕ, ಬಹುತೇಕ ರೈತರು ವಿಮೆ ಪಾವತಿ ಸದಂತೆ ಎಡವಟ್ಟು ಮಾಡಿಕೊಂಡು ಕುಳಿತಿದೆ. ಅಂತಿಮ ಗಡುವು ಮುಗಿದರೂ ವಿಮೆ ತುಂಬಲು ಸಾಧ್ಯವಾಗದೆ ರೈತರು ಹಣೆ ಚಚ್ಚಿಕೊಳ್ಳುತ್ತಿzರೆ. ಇತ್ತ ಬೆಳೆನಷ್ಟಕ್ಕೆ ಪರಿಹಾರದ ಹಣವೂ ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಇನ್ನು ಅಡಕೆ ಬೆಳೆಯ ವಿಚಾರಕ್ಕೆ ಬಂದರೆ, ರಾಜ್ಯ ಸರಕಾರದ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳ ಉಡಾಫೆ, ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತವೆ. ಈಗಷ್ಟೇ ನೈಋತ್ಯ ಮುಂಗಾರು ಹಂಗಾಮು ಆರಂಭ ವಾಗಿದ್ದು, ರೈತರಿಗೆ ಹವಾಮಾನ ಆಧರಿತ ಬೆಳೆ ಯೋಜನೆಯ ವಿಮಾ ಮಾಹಿತಿಯನ್ನು ತಡವಾಗಿ ನೀಡಲಾಗಿದೆ ಮತ್ತು ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಜುಲೈ 31ನ್ನು ಕೊನೆಯ ದಿನವನ್ನಾಗಿ ತಿಳಿಸಲಾಗಿತ್ತು. ಈ ಕಾರಣದಿಂದಾಗಿ ಬಹುತೇಕ ರೈತರಿಗೆ ಈ ಮಾಹಿತಿ ತಲುಪಿಲ್ಲ.
ಆದ್ದರಿಂದ ನೋಂದಣಿಯ ಕಾಲಾವಕಾಶ ವನ್ನು ವಿಸ್ತರಿಸಬೇಕೆಂಬುದು ಸ್ಥಳೀಯ ಜನಪ್ರತಿನಿಧಿಗಳ, ರೈತರ ಆಗ್ರಹವಾಗಿದೆ ಕೂಡ. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ, ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 80 ಸಾವಿರ ರು., ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 127000 ರು. ನೀಡಲಾಗುತ್ತಿದೆ. ಇದರಂತೆಯೇ, ಪ್ರತಿ ಹೆಕ್ಟೇರ್ ಅಡಕೆ ಬೆಳೆಗೆ 6400 ರು. ವಿಮೆ ಕಂತು ವಿಧಿಸಲಾ ಗಿದ್ದು, ಅಡಕೆ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 128000 ರು. ವಿಮೆ ಮೊತ್ತ ನೀಡಲಾಗುತ್ತದೆ. ರೈತರು 5 ಕಂತುಗಳಲ್ಲಿ 6400 ರು. ಪಾವತಿಸಬೇಕು ಎಂದೇನೋ ತಿಳಿಸಲಾಗಿದೆ. ಆದರೆ, ಕೊಟ್ಟಿ ರುವ ಕಾಲಮಿತಿ ಅತ್ಯಲ್ಪವಾಗಿದ್ದು, ತಮ್ಮ ವಿಮೆ ಕಂತು ಪಾವತಿ ಸಲು ಅನುಕೂ ಲವಾಗುವಂತೆ ಕಾಲಾವಕಾಶವನ್ನು ಇನ್ನಷ್ಟು ವಿಸ್ತರಿಸಬೇಕೆಂಬುದು ವಿವಿಧೆಡೆಯ ಅಡಕೆ ಬೆಳೆಗಾರರ ಆಗ್ರಹವಾಗಿದೆ.
ಬೆಳೆ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತದೆ. ‘ಫಾರ್ಮರ್ ರಿಜಿಸ್ಟ್ರೇಷನ್ ಆಂಡ್ ಯುನಿಫೈಡ್
ಬೆನಿಫಿಶಿಯರಿ ಇನರ್ಮೇಷನ್ ಸಿಸ್ಟಮ’ (FRUITS) ತಂತ್ರಾಂಶದಲ್ಲಿ ರೈತರು ತಮ್ಮ ಬೆಳೆ ಸಂಬಂಧಿತ
ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ.
ಆಪ್ ಆಧಾರದಲ್ಲಿ ರೈತರೇ ಬೆಳೆ ಸಮೀಕ್ಷೆಯನ್ನು ಆನ್ ಲೈನ್ ವ್ಯವಸ್ಥೆಯಲ್ಲಿ ಮಾಡುವ ಅವಕಾಶವೂ ಇದೆ.
ಇದೆಲ್ಲದರ ಹೊರತಾಗಿ ಕೆಲವು ತಾಂತ್ರಿಕ ಸಮಸ್ಯೆಗಳೂ ರೈತರನ್ನು ಕಾಡುತ್ತಿವೆ. ಈ ಸಮಸ್ಯೆಗಳನ್ನು ಸರಕಾರಗಳು
ಆರಂಭದಲ್ಲಿಯೇ ಸರಿಪಡಿಸಬೇಕು. ದೇಶದಲ್ಲಿ ಒಂದೊಂದು ಬೆಳೆಯ ಸ್ವರೂಪವೂ ಭಿನ್ನವಾಗಿರುವುದರಿಂದ
ಇಳುವರಿ ಬರಲು ಅದರದ್ದೇ ಕಾಲಮಿತಿ ಇರುತ್ತದೆ. ಅಡಕೆ, ತೆಂಗು ಇತ್ಯಾದಿ ಒಂದು ರೀತಿಯದ್ದಾದರೆ ಬಾಳೆ ಸಹಿತ
ವಿವಿಧ ಹಣ್ಣಿನ ಬೆಳೆಗಳು ಇನ್ನೊಂದು ರೀತಿಯದ್ದಾಗಿವೆ.
ಇದರ ನಿಖರತೆ ರೈತರಿಗೆ, ಬೆಳೆಗಾರರಿಗೆ ಸ್ಪಷ್ಟವಾಗಿರುತ್ತದೆ. ಹೀಗಾಗಿ ಬೆಳೆ ಸಮೀಕ್ಷೆ ಅಥವಾ ನೋಂದಣಿಗೆ ಕೊನೆಯ
ದಿನ ನಿಗದಿ ಮಾಡುವ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಅಥವಾ ವಿಮಾ ಸಂಸ್ಥೆಯ ಅಧಿಕಾರಿಗಳು
ಏಕಪಕ್ಷೀಯ ನಿರ್ಧಾರ ಮಾಡುವುದು ಸರಿಯಲ್ಲ. ರೈತರಿಂದಲೂ ಮಾಹಿತಿ ಪಡೆದು ಯಾವ ಸಮಯ ಸೂಕ್ತ
ಎಂಬುದನ್ನು ಅವರಿಂದಲೂ ತಿಳಿಯಬೇಕು. ರೈತರಿಗೆ ಸೌಲಭ್ಯ ನೀಡುವಾಗ ಅಥವಾ ಸೌಲಭ್ಯಕ್ಕಾಗಿ ನೋಂದಣಿ,
ಅರ್ಜಿ ಆಹ್ವಾನ ಇತ್ಯಾದಿ ಸಂದರ್ಭದಲ್ಲಿ ತರಾತುರಿ ಮಾಡುವುದು ಸರಿಯಲ್ಲ. ಹಾಗೆಯೇ ಪರಿಹಾರ
ನೀಡುವಾಗ ವಿಳಂಬ ಧೋರಣೆಯೂ ಸರಿಯಲ್ಲ. ಬೆಳೆ ವಿಮೆ ಕಂತುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು
ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ಆದಲ್ಲಿ, ನಷ್ಟ ಹೊಂದಿದ ರೈತ ಅಥವಾ ಬೆಳೆಗಾರ ತಕ್ಷಣವೇ
ಪರ್ಯಾಯ ಬೆಳೆಯನ್ನು ಅಥವಾ ಪರಿಷ್ಕೃತ ಮಾದರಿಯಲ್ಲಿ ಅದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆಯು ಮೂಲ ಆಶಯದಂತೆ ರೈತ ಸ್ನೇಹಿಯಾಗಿರಬೇಕು.
ತಾಂತ್ರಿಕ ಸಮಸ್ಯೆಗಳಿಂದ ರೈತರಿಗೆ ಅನಾನುಕೂಲ ಅಗಕೂ ಡದು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆಯು ಸಂಗಾತಿ ಯಾಗಿರಬೇಕೇ ವಿನಾ, ಅದನ್ನು ಪಡೆಯಲು ಪರಿತಪಿಸುವಂತೆ ಆಗಬಾರದು. ಈ ನಿಟ್ಟಿನಲ್ಲಿ ಸರಕಾರ, ಇಲಾಖೆಯ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕು, ರೈತರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಬೆಳೆ ವಿಮೆಯ ಪರಿಹಾರ ಮೊತ್ತ ಹೆಚ್ಚಬೇಕು ಹಾಗೂ ನೋಂದಣಿಗೆ ಕಾಲಮಿತಿಯನ್ನು ಅವೈಜ್ಞಾನಿಕವಾಗಿ ರೂಪಿಸುವುದು ತಪ್ಪಬೇಕು.