Monday, 25th November 2024

Costly Coffee: ಪ್ರಾಣಿಯ ಮಲದಿಂದ ತಯಾರಿಸಲಾಗುತ್ತದೆ ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಈ ಕಾಫಿ!

Costly Coffee

ನಾವೆಲ್ಲ ಕುಡಿಯುವ ಕಾಫಿ (Drinking coffee) ದರ (Costly Coffee) ಎಷ್ಟಿರಬಹುದು? ಕೇವಲ 10, 20, 50, 100 ರೂ. ಇಷ್ಟೇ ಎಂದರೆ ಅದು ತಪ್ಪು. ಯಾಕೆಂದರೆ ಕೆಲವು ಕಾಫಿಗಳ ದರ (coffee rate) ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿದೆ. ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಕಾಫಿ ಒಂದಿದೆ. ಅದನ್ನು ತಯಾರಿಸುವ ರೀತಿಯೂ ಅಷ್ಟೇ ವಿಶಿಷ್ಟವಾಗಿದೆ.

ಬೆಳಗ್ಗೆ ಎದ್ದಾಗ ಒಂದು ಕಪ್, ಸಂಜೆ ಸ್ನೇಹಿತರೊಂದಿಗೆ ಇನ್ನೊಂದು ಕಪ್, ರಾತ್ರಿ ಬೇಸರ ಕಳೆಯಲು ಮತ್ತೊಂದು ಕಪ್ ಕಾಫಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಸಂತೋಷ, ದುಃಖ, ಟೆನ್ಶನ್… ಹೀಗೆ ಪ್ರತಿಯೊಂದು ಸಂದರ್ಭದಲ್ಲಿ ಜೊತೆಯಾಗುವ ಕಾಫಿ ಹೀರುತ್ತಾ ಬಾಲ್ಕನಿ ಮೇಲೆ ಕುಳಿತರೆ ಮನಸ್ಸು ರಿಲ್ಯಾಕ್ಸ್ ಆದ ಅನುಭವ ಕೊಡುತ್ತದೆ. ಎಸ್ಪ್ರೆಸೊ, ಅಮೇರಿಕಾನೋ, ಕ್ಯಾಪುಸಿನೊ, ಲ್ಯಾಟೆ ಸೇರಿದಂತೆ ವಿಶ್ವದಾದ್ಯಂತ ಹಲವಾರು ವಿಧದ ಕಾಫಿಗಳಿವೆ. ಅವರವರ ಇಷ್ಟಕ್ಕೆ ಅನುಗುಣವಾಗಿ ಸೇವಿಸುವ ಕೆಲವು ಕಾಫಿಯ ದರ ಅತ್ಯಂತ ದುಬಾರಿಯಾಗಿದೆ.

ವಿಶ್ವದಲ್ಲೇ ಅತ್ಯಂತ ದುಬಾರಿಯಾದ, ಆಕರ್ಷಕ ಮತ್ತು ವಿಶಿಷ್ಟವಾದ ಕಾಫಿ ಒಂದಿದೆ. ಇದನ್ನು ಸಿವೆಟ್ ಕಾಫಿ ಅಥವಾ ಕಾಫಿ ಲುವಾಕ್ ಎಂದು ಕರೆಯುತ್ತಾರೆ. ಆದರೆ ಇದನ್ನು ಯಾವುದೇ ಬೀಜದಿಂದ ತಯಾರಿಸುವುದಿಲ್ಲ. ಬದಲಾಗಿ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ!

Costly Coffee

ಸಿವೆಟ್ ಕಾಫಿಯನ್ನು ಪುನುಗು ಬೆಕ್ಕುಗಳ ಹಿಕ್ಕೆಗಳಿಂದ ತಯಾರಿಸಲಾಗುತ್ತದೆ. ಸಿವೆಟ್ ಕಾಫಿಯನ್ನು ತಯಾರಿಸಲು ಕಾಫಿ ಹಣ್ಣುಗಳನ್ನು ಪುನುಗು ಬೆಕ್ಕಿಗೆ ತಿನ್ನಲು ನೀಡಲಾಗುತ್ತದೆ. ಬಳಿಕ ಅದರ ಮಲವನ್ನು ಸಂಗ್ರಹಿಸಿ ಅದರಲ್ಲಿ ಸಿಗುವ ಕಾಫಿ ಬೀಜಗಳನ್ನು ಸಂಸ್ಕರಿಸಿ ಸಿವೆಟ್ ಕಾಫಿ ಮಾಡಲು ಬಳಸಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿರುವ ಬ್ಲ್ಯಾಕ್ ಐವರಿ ಕಾಫಿಯನ್ನು ಇದೇ ರೀತಿ ಆನೆಗಳ ಲದ್ದಿಯಿಂದ ತಯಾರಿಸಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಕಾಫಿ ಉತ್ಪಾದನೆಯಲ್ಲಿ ಏಷ್ಯಾದ ಮೂರನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾದ ಭಾರತದ ಪಾತ್ರವೂ ಇದೆ.

ಸಿವೆಟ್ ಕಾಫಿ ಯಾಕೆ ದುಬಾರಿ?

ಪುನುಗು ಬೆಕ್ಕಿನ ಹಿಕ್ಕೆಗಳನ್ನು ಸಂಗ್ರಹಿಸಲು ಮತ್ತು ಗುಣಮಟ್ಟದ ಕಾಫಿ ಉತ್ಪಾದನೆಗೆ ಹೆಚ್ಚಿನ ಸಮಯ ವ್ಯರ್ಥವಾಗುವುದರಿಂದ ಇದು ದುಬಾರಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಅದರಲ್ಲೂ ವಿಶೇಷವಾಗಿ ಗಲ್ಫ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪ್ರತಿ ಕಿಲೋ ಗ್ರಾಂ ಸಿವೆಟ್ ಕಾಫಿ ಬೆಲೆ 20,000 ರೂ.ನಿಂದ 25,000 ರೂ. ಇದೆ.

Costly Coffee

ಕಾಫಿ ಲುವಾಕ್‌ನ ಮೂಲ

ಕಾಫಿ ಲುವಾಕ್ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ತಯಾರಿಸಲಾಯಿತು. ಡಚ್ ವಸಾಹತುಶಾಹಿಗಳು 19ನೇ ಶತಮಾನದಲ್ಲಿ ಅಲ್ಲಿ ಕಾಫಿ ತೋಟಗಳನ್ನು ನಿರ್ಮಿಸಿದರು. ಜಾವಾದಲ್ಲಿನ ರೈತರು ಪುನುಗು ಬೆಕ್ಕುಗಳಿಂದ ಹೊರಹಾಕಲ್ಪಟ್ಟ ಬೀನ್ಸ್‌ನಿಂದ ವಿಶಿಷ್ಟವಾದ ಮತ್ತು ಸುವಾಸನೆಯುಕ್ತವಾದ ಕಾಫಿಯನ್ನು ತಯಾರಿಸಬಹುದು ಎಂದು ಕಂಡುಹಿಡಿದರು. ಇತ್ತೀಚಿನ ವರ್ಷಗಳಲ್ಲಿ ಸಿವೆಟ್ ಕಾಫಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಆಗ್ನೇಯ ಏಷ್ಯಾದಲ್ಲಿ ಹೆಚ್ಚಿನ ಸಿವೆಟ್ ಫಾರ್ಮ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ ಈ ಸಾಕಣೆ ಕೇಂದ್ರಗಳು ಪುನುಗು ಬೆಕ್ಕುಗಳ ಆರೋಗ್ಯಕ್ಕೆ ಸೂಕ್ತವಾಗಿಲ್ಲ. ಇದರಿಂದ ಹೆಚ್ಚಿನ ಸಾವು ಸಂಭವಿಸುವ ಅಪಾಯವಿದೆ ಎನ್ನುತ್ತಾರೆ ಪ್ರಾಣಿ ಸಂರಕ್ಷಣಾಕಾರರು.

Pregnancy Tips: ಮನೆಯಲ್ಲಿರುವ ಈ ಪ್ರಾಣಿಗಳು ಗರ್ಭಿಣಿಯರಿಗೆ ಅಪಾಯಕಾರಿಯಂತೆ!

ಇಲ್ಲಿ ಪುನುಗುಬೆಕ್ಕುಗಳನ್ನು ಪಂಜರದೊಳಗೆ ಹಾಕಿ ಕಾಫಿ ಚೆರ್ರಿಗಳನ್ನು ಬಲವಂತವಾಗಿ ತಿನ್ನುವಂತೆ ಮಾಡಲಾಗುತ್ತದೆ. ಇದು ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವರ ವಾದ.