ಮುಂಬೈ: ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ (IndiGo Flight) 5 ಗಂಟೆ ವಿಳಂಬವಾಗಿರುವ ಘಟನೆ ವರದಿಯಾಗಿದೆ. ಕರ್ತವ್ಯದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೈಲಟ್ ಓವರ್ ಟೈಮ್ ಡ್ಯೂಟಿ ಮಾಡಲು ನಿರಾಕರಿಸಿದ್ದರಿಂದ ವಿಮಾನ ಸುಮಾರು 5 ಗಂಟೆಗಳ ಕಾಲ ವಿಳಂಬವಾಯಿತು. ಪುಣೆಯಿಂದ ಮಧ್ಯರಾತ್ರಿ 12.45ಕ್ಕೆ ಹೊರಡಬೇಕಿದ್ದ 6E 361 ವಿಮಾನ ಅಂತಿಮವಾಗಿ ಬೆಳಗ್ಗೆ 5.44ಕ್ಕೆ ಹೊರಟು 6.49ಕ್ಕೆ ಬೆಂಗಳೂರು ತಲುಪಿತು. ಸುಮಾರು 5 ಗಂಟೆಗಳ ಕಾಲ ಸಿಕ್ಕಿ ಹಾಕಿಕೊಂಡ ಪ್ರಯಾಣಿಕರು ಹೈರಾಣಾದರು. ಈ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ (Viral Video).
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವಿಶೇಕ್ ಗೋಯಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನದೊಳಗಿನ ವಿಡಿಯೊವನ್ನು ಹಂಚಿಕೊಂಡ ಅವರು ʼʼತಮ್ಮ ಕರ್ತವ್ಯದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ್ದರಿಂದ ಸುಮಾರು 5 ಗಂಟೆ ಪ್ರಯಾಣಿಕರು ವಿಮಾನದಲ್ಲೇ ಕಾಯುವಂತಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.
Indigo flight was delayed for 5 hrs after Pilot refuses to take off due to work hrs ending.
— Avishek Goyal (@AG_knocks) October 2, 2024
Frustration pf Passengers can clearly be seen. But Why blame only the Pilot ??
Blame the company not the crew. Indigo has become a joke😤 pic.twitter.com/0ohOOTi3RG
ʼʼಪ್ರಯಾಣಿಕರು ಅಸಮಾಧಾನಗೊಂಡಿರುವುದು ಮತ್ತು ಒತ್ತಡಕ್ಕೆ ಒಳಗಾಗಿರುವುದನ್ನು ವಿಡಿಯೊದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಪೈಲಟ್ ಅನ್ನು ಮಾತ್ರ ದೂರಿ ಪ್ರಯೋಜನವೇನು? ಕಂಪನಿಯನ್ನು ದೂರಿ. ಅದು ಬಿಟ್ಟು ಸಿಬ್ಬಂದಿಯನ್ನು ಹಳಿದು ಪ್ರಯೋಜನವಿಲ್ಲ. ದಿನ ಕಳೆದಂತೆ ಇಂಡಿಗೋ ಹಾಸ್ಯದ ವಸ್ತುವಾಗುತ್ತಿದೆʼʼ ಎಂದು ಅವರು ಹೇಳಿದ್ದಾರೆ.
ಸಿಬ್ಬಂದಿಯೊಬ್ಬರು ಪೈಲಟ್‌ಗೆ ಕರೆ ಮಾಡುವಂತೆ ಸಹೋದ್ಯೋಗಿಯನ್ನು ಕೇಳುತ್ತಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ. ಹತಾಶೆಗೊಂಡ ಪ್ರಯಾಣಿಕರು ಕಾಕ್‌ಪಿಟ್‌ಗೆ ತೆರಳಿ ಬಾಗಿಲು ಮುಚ್ಚಿದ ಪೈಲಟ್ ಅನ್ನು ಹೊರ ಬರುವಂತೆಯೂ ಆಗ್ರಹಿಸಿದ್ದಾರೆ. ಅವರ ಬಳಿಯಲ್ಲಿ ಯಾವುದೇ ಉತ್ತರವಿಲ್ಲ. ಇದಕ್ಕಾಗಿ ಬಾಗಿಲು ಹಾಕಿಕೊಂಡಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ತಮ್ಮ ಪರಿಸ್ಥಿತಿಯನ್ನು ವಿವರಿಸಲು ಲೈವ್ ವಿಡಿಯೊ ಮಾಡಬೇಕು ಎಂದು ಇನ್ನು ಕೆಲವರು ಸಲಹೆ ನೀಡಿದ್ದಾರೆ.
ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಇಂಡಿಗೋ ವಿರುದ್ದ ಕಿಡಿಕಾರಿದ್ದಾರೆ. ಪ್ರಯಾಣಿಕರು ಯಾವುದೇ ಪರಿಹಾರ ಪಡೆದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದು ಕಂಪೆನಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ತಜ್ಞರು ಹೇಳಿದ್ದೇನು?
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ನಿರ್ದಿಷ್ಟ ಕೆಲಸದ ಅವಧಿಯನ್ನು ನಿಗದಿಪಡಿಸಲಾಗಿದೆ. ಈ ವಿಮಾನದ ಪೈಲಟ್‌ನ ಕರ್ತವ್ಯ ಅವಧಿ ಮುಗಿದಿದ್ದರಿಂದ ಸಮಸ್ಯೆ ಎದುರಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sadguru Jaggi Vasudev: ಸದ್ಗುರುಗೆ ಬಿಗ್ ರಿಲೀಫ್; ಇಶಾ ಫೌಂಡೇಶನ್ ವಿರುದ್ಧದ ಕಾನೂನು ಕ್ರಮಕ್ಕೆ ಸುಪ್ರೀಂ ತಡೆ
ಇಂಡಿಗೋ ನೀಡಿದ ಸ್ಪಷ್ಟನೆ
ಹರಿಯಾಣ ಮೂಲದ ಇಂಡಿಗೋ ವಿಮಾನ ಸಂಸ್ಥೆ ಈ ಅನಾನುಕೂಲತೆಗಾಗಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ʼʼಸೆಪ್ಟೆಂಬರ್ 24ರಂದು ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ 6 ಇ 361 ವಿಮಾನ 5 ಗಂಟೆಗಳ ಕಾಲ ವಿಳಂಬವಾಯಿತು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿತ್ತು ಮತ್ತು ನಮ್ಮ ಸಿಬ್ಬಂದಿ ಅಗತ್ಯ ಸಹಾಯ ಮಾಡಿದ್ದಾರೆ. ಅನಾನುಕೂಲತೆಗೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.