Thursday, 28th November 2024

Gamball: ಆಂಗ್ಲರ ‘ಬಾಜ್ ಬಾಲ್‌’ಗೆ ಭಾರತದ ಹೊಸ ಅಸ್ತ್ರ; ಏನಿದು ‘ಗಮ್‌ ಬಾಲ್‌’?

ಮುಂಬಯಿ: ಟೆಸ್ಟ್‌ನಲ್ಲಿ ಆಂಗ್ಲರು ಪರಿಚಯಿಸಿದ ಆಕ್ರಮಣಕಾರಿ ಆಟದ ಶೈಲಿಯಾದ ಬಾಜ್‌ಬಾಲ್ ಈಗ ಠುಸ್‌ ಆಗಿದೆ. ಈಗ ಏನಿದ್ದರೂ ಭಾರತದ ಗಮ್‌ ಬಾಲ್‌(Gamball) ಶೈಲಿ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ. ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಮೊದಲ ಪ್ರದರ್ಶನವೇ ಭಾರತೀಯ ಕ್ರಿಕೆಟ್‌ಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ. ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಗಮ್‌ ಬಾಲ್‌ ಕ್ಲಿಕ್‌ ಆಗಿದೆ.

ಏನಿದು ಗಮ್‌ ಬಾಲ್‌?

ಸದ್ಯ ಟೆಸ್ಟ್‌ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಾಗುತ್ತಿರುವ ಆಕ್ರಮಕಾರಿ ಆಟದ ಶೈಲಿಯಾದ ಗಮ್‌ ಬಾಲ್‌ ಪರಿಚಯಿಸಿದ್ದು ಕೋಚ್‌ ಗೌತಮ್‌ ಗಂಭೀರ್‌. ಅವರ ಹೆಸರಿನ ಅಕ್ಷರವನ್ನೇ ಬಳಸಿಕೊಂಡು ಇದನ್ನು ಗಮ್ ಬಾಲ್ ಎನ್ನಲಾಗುತ್ತಿದೆ. ನಿರ್ಭೀತ ಕ್ರಿಕೆಟ್ ಶೈಲಿಯನ್ನು ಅಳವಡಿಸಿಕೊಂಡುವುದು ಆಡುವುದು ಇಲ್ಲಿ ಮುಖ್ಯ. ಔಟ್ ಆಗುವುದರ ಬಗ್ಗೆ ಚಿಂತೆಯಿಲ್ಲದೇ ಗೆಲುವನ್ನೇ ಗುರಿಯಾಗಿಸಿ ಬ್ಯಾಟಿಂಗ್ ಮಾಡುವುದು ಇದರ ತಂತ್ರವಾಗಿದೆ. ಇಲ್ಲಿ ಯಾವುದೇ ಆಟಗಾರನ ವೈಯಕ್ತಿಕ ಮೈಲಿಗಲ್ಲುಗಳು ಮುಖ್ಯವಾಗುವುದಿಲ್ಲ. ಇಡೀ ತಂಡವಾಗಿ ಪ್ರತೀ ಪಂದ್ಯವನ್ನು ಗೆಲ್ಲುವುದೇ ಪ್ರಧಾನ ಗುರಿಯಾಗಿರುತ್ತದೆ. ಇದರಿಂದ ಟೆಸ್ಟ್ ಕ್ರಿಕೆಟ್ ಹೆಚ್ಚು ಆಸಕ್ತಿದಾಯಕವಾಗಲಿದೆ ಎನ್ನುವುದು ಗಂಭೀರ್‌ ಯೋಜನೆ.

ಇದನ್ನೂ ಓದಿ IND vs BAN: ಬಾಂಗ್ಲಾದ ಶಕೀಬ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ವಿರಾಟ್‌ ಕೊಹ್ಲಿ

ಕಾನ್ಪುರ ಟೆಸ್ಟ್‌ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ಭಾರತ ತಂಡ ಕೇವಲ 34.4 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ ಬಾರಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಟೆಸ್ಟ್‌ ಕ್ರಿಕೆಟ್‌ ನಲ್ಲಿ ಅತೀ ವೇಗದಲ್ಲಿ 50, 100, 150, 200 ರನ್‌ ಗಳಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು. 3 ಓವರ್‌ನಲ್ಲಿ 50 ರನ್‌, 10.1 ಓವರ್‌ನಲ್ಲಿ 100 ರನ್‌, 18.2 ಓವರ್‌ನಲ್ಲಿ 150 ರನ್‌ ಮತ್ತು 24.3 ಓವರ್‌ನಲ್ಲಿ 200 ರನ್‌ ಗಳಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿತ್ತು.

ಎರಡೂವರೆ ದಿನಗಳ ಕಾಲ ಮಳೆಯ ಕಾರಣದಿಂದ ಪಂದ್ಯ ರದ್ದಾದ ಬಳಿಕ ಭಾರತ ಈ ಗಮ್‌ ಬಾಲ್‌ ಶೈಲಿಯ ಆಟಕ್ಕೆ ಒತ್ತು ನೀಡಿತ್ತು. ಭಾರತ ಗಮ್‌ ಬಾಲ್‌ ಶೈಲಿಯಲ್ಲಿ ಆಡದೇ ಹೋಗಿದ್ದರೆ. ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಇತ್ತು. ಮುಂಬರುವ ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಸರಣಿಯಲ್ಲಿಯೂ ಭಾರತ ಗಮ್‌ ಬಾಲ್‌ ಶೈಲಿಯ ಆಟವನ್ನು ಮುಂದುವರಿಸಲಿದೆಯಾ ಎಂದು ನೋಡಬೇಕಿದೆ.