ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Vijay) ಅಭಿನಯದ ಕೊನೆ ಸಿನಿಮಾ ಸದ್ದು ಮಾಡುತ್ತಿದೆ. ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಚ್.ವಿನೋತ್ (H.Vinoth) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼದಳಪತಿ 69ʼ (Thalapathy 69) ಎಂದು ಹೆಸರಿಡಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ನಿರ್ಮಿಸುತ್ತಿರುವ ಈ ಸಿನಿಮಾ ಸದ್ಯ ತಾರಾಬಳಗದಿಂದಲೇ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ನಾಯಕಿಯಾಗಿ ನಿರ್ಮಾಪಕರು ಕರುನಾಡ ಬೆಡಗಿಗೆ ಮಣೆ ಹಾಕಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಡಿಸಲಾಗಿದೆ.
ಯಾರು ಈ ಕರುನಾಡ ಬೆಡಗಿ?
ಉಡುಪಿ ಮೂಲದ ಬಹಭಾಷಾ ನಟಿ ಪೂಜಾ ಹೆಗ್ಡೆ ʼದಳಪತಿ 69ʼ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ವಿಶೇಷ ಎಂದರೆ ಪೂಜಾ ಹೆಗ್ಡೆ ಅವರು ವಿಜಯ್‌ಗೆ ನಾಯಕಿಯಾಗುತ್ತಿರುವುದು ಇದು ಎರಡನೇ ಬಾರಿ. 2022ರಲ್ಲಿ ತೆರೆಕಂಡ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ʼಬೀಸ್ಟ್ʼ ಸಿನಿಮಾದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಮೋಡಿ ಮಾಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಾಧಾರಣ ಯಸಸ್ಸು ಪಡೆದಿದ್ದರೂ ಈ ಜೋಡಿ ಗಮನ ಸೆಳೆದಿತ್ತು. ಅದರಲ್ಲಿಯೂ ʼಅರಬಿಕ್ ಕುತ್ತುʼ ಹಾಡು ಇಂದಿಗೂ ಹಲವರ ಹಾಟ್ ಫೆವರೇಟ್ ಎನಿಸಿಕೊಂಡಿದೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ ಹಾಡಿಗೆ ಇಬ್ಬರು ಜಬರ್‌ಜಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
Yaaaaasss! Hoping to create magic once again with the one and only Thalapathy @actorvijay ❤️ https://t.co/0ZXTsKQ5Kg
— Pooja Hegde (@hegdepooja) October 2, 2024
ಹಿರಿದಾಗುತ್ತಿದೆ ತಾರಾಗಣ
ಮೊದಲೇ ಹೇಳಿದಂತೆ ʼದಳಪತಿ 69ʼ ಗಮನ ಸೆಳೆಯಲು ಪ್ರಮುಖ ಕಾರಣವೇ ಇದರ ತಾರಾಗಣ. ಹೌದು, ವಿವಿಧ ಚಿತ್ರರಂಗದ ಘಟಾನುಘಟಿಗಳು ವಿಜಯ್ ಅವರ ಈ ಕೊನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಖ್ಯ ವಿಲನ್ ಆಗಿ ಬಾಲಿವುಡ್‌ನ ಬಾಬಿ ಡಿಯೋಲ್ ನಟಿಸುತ್ತಿರುವುದು ಈಗಾಗಲೇ ಅಧಿಕೃತಗೊಂಡಿದೆ. ಇನ್ನು ಚಿತ್ರದ ಮತ್ತೊಬ್ಬ ನಾಯಕಿಯಾಗಿ ಮಲಯಾಳಂನ ಮಮಿತಾ ಬೈಜು ನಟಿಸಲಿದ್ದಾರೆ. ಇತ್ತೀಚೆಗೆ ತೆರೆಕಂಡ ʼಪ್ರೇಮಲುʼ ಮಲಯಾಳಂ ಚಿತ್ರದ ಮೂಲಕ ಮಮಿತಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇವರೆಲ್ಲರ ಜತೆಗೆ ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ಗೌತಮ್ ವಾಸುದೇವ್ ಮೆನನ್ ಕೂಡ ಈ ಚಿತ್ರದ ಮುಖ್ಯ ಮಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜಕೀಯದತ್ತ ವಿಜಯ್
ಸುಮಾರು 3 ದಶಕಗಳಿಂದ ತೆರೆ ಮೇಲೆ ಮಿಂಚಿದ ವಿಜಯ್ ಇದೀಗ ರಾಜಕೀಯದತ್ತ ಮುಖ ಮಾಡಿದ್ದು, ಚಿತ್ರರಂಗದಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ʼದಳಪತಿ 69ʼ ಕೊನೆಯ ಸಿನಿಮಾ ಎಂದು ಅವರು ಪ್ರಕಟಿಸಿದ್ದಾರೆ.
1992ರಲ್ಲಿ ಬಿಡುಗಡೆಯಾದ ʼನಾಲೈಯ ತೀರ್ಪುʼ ಚಿತ್ರದ ಮೂಲಕ ಅವರು ಬಣ್ಣದ ಲೋಕ ಪ್ರವೇಶಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ʼತಮಿಳಗ ವರಟ್ರಿ ಕಳಗಂʼ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದರು. ʼದಳಪತಿ 69ʼ ಸಿನಿಮಾ ಕೂಡ ರಾಜಕೀಯದ ಕಥೆ ಹೇಳಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ತೆರೆಕಂಡ ವಿಜಯ್ ಅಭಿನಯದ ʼದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ.
ಈ ಸುದ್ದಿಯನ್ನೂ ಓದಿ: Aishwarya Rai Bachchan: ‘ನಮ್ಮ ನಡುವೆ ಏನಿಲ್ಲ’ ಪತಿ ಜತೆ ಫೋಟೋ ತೆಗೆಸಿಕೊಂಡು ಐಶ್ವರ್ಯಾ ರೈ ರವಾನಿಸಿದ ಸಂದೇಶವೇನು?