ಬಳ್ಳಾರಿ: ರೇಣುಕಾಸ್ವಾಮಿ ಕೊಲೆ (Renuka Swamy Murder Case) ಕೇಸ್‌ನಲ್ಲಿ ಆರೋಪಿಯಾಗಿರುವ ನಟ ದರ್ಶನ್ (Actor Darshan) ಸದ್ಯ ಬಳ್ಳಾರಿ (Bellary Jail) ಜೈಲಿನಲ್ಲಿದ್ದು, ಇಂದು ಆತನ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಬೆನ್ನಿನ ನೋವಿನಿಂದ ನರಳುತ್ತಿರುವ ದರ್ಶನ್, ಇದೇ ಕಾರಣ ನೀಡಿ ಜಾಮೀನು (bail) ಅಥವಾ ಮತ್ತೆ ವೈದ್ಯಕೀಯ ಚಿಕಿತ್ಸೆಯ ನೆಪ ನೀಡಿ ಬೆಂಗಳೂರು ಜೈಲಿಗೆ ಶಿಫ್ಟ್ ಕೇಳುವ ಸಾಧ್ಯತೆಯಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದ ದರ್ಶನ್ ಅಲ್ಲಿ ಪಡೆದ ರಾಜಾತಿಥ್ಯದ ಫೋಟೋ ಲೀಕ್ ಆದ ಕಾರಣ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈಗ ಮತ್ತೆ ದರ್ಶನ್‌ನನ್ನು ಬಳ್ಳಾರಿ ಜೈಲಿನಿಂದ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಆರೋಗ್ಯ ಹದಗೆಟ್ಟಿದೆ. ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಬೆನ್ನಿನಲ್ಲಿ ಊತ ಕಂಡು ಬಂದಿದ್ದು, ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ಆದರೆ ದರ್ಶನ್, ಬೆಂಗಳೂರಿನಲ್ಲಿ ವೈದ್ಯಕೀಯ ತಪಾಸಣೆ ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾನೆ.
ಇಂದಿಗೆ ನಟ ದರ್ಶನ್ ಕಸ್ಟಡಿ ಕೂಡ ಮುಗಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ವೇಳೆ ದರ್ಶನ್‌ಗೆ ಇಂದೂ ಕೂಡ ಜಾಮೀನು ನಿರಾಕರಿಸಿದರೆ, ತನ್ನ ಅನಾರೋಗ್ಯದ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ. ಅನಾರೋಗ್ಯ ಹಾಗೂ ಚಿಕಿತ್ಸೆಯ ಕಾರಣಕ್ಕೆ ತನ್ನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಮತ್ತೆ ಶಿಫ್ಟ್ ಮಾಡಿಸಿ ಎಂದು ಮನವಿ ಮಾಡಲು ದರ್ಶನ್ ನಿರ್ಧರಿಸಿದ್ದಾನೆ.
ನ್ಯಾಯಾಧೀಶರು ದರ್ಶನ್ ಅನಾರೋಗ್ಯ ಸಮಸ್ಯೆ ಪರಿಗಣಿಸಿ, ಆತನ ಮನವಿ ಪುರಸ್ಕರಿಸುವ ಸಾಧ್ಯತೆಯೂ ಇದೆ. ಹಲವು ಬಾರಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡುತ್ತಲೇ ಇದ್ದು, ಇಂದಿನ ವಿಚಾರಣೆಯಲ್ಲಿ ಜಾಮೀನು ಸಿಗುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗಿದೆ. ಒಂದು ವೇಳೆ ನ್ಯಾಯಾಂಗ ಬಂಧನ ವಿಸ್ತರಣೆಯಾದರೂ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡು ಬೆಂಗಳೂರಿಗೆ ಶಿಫ್ಟ್ ಆಗಲು ಅನುಮತಿ ಕೇಳಲು ದರ್ಶನ್ ವಕೀಲರು ಪ್ಲ್ಯಾನ್ ಮಾಡಿದ್ದಾರೆ.
ಸೆಪ್ಟೆಂಬರ್ 21ರಂದು ಮೊದಲ ಬಾರಿ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿದಾಗ ಸರಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪಣೆಗೆ ಸಮಯ ಕೇಳಿದ್ದರು. ಹಾಗಾಗಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿತ್ತು. ಆದರೆ ಸೆಪ್ಟೆಂಬರ್ 27ರಂದು ಅರ್ಜಿ ವಿಚಾರಣೆಗೆ ಬಂದಾಗ ದರ್ಶನ್ ಪರ ಹಿರಿಯ ವಕೀಲರು ಹಾಜರಿಲ್ಲ ಎಂದು ಕಾರಣ ಕೊಟ್ಟಿದ್ದ ಕಿರಿಯ ವಕೀಲ ಸುನಿಲ್ ಅರ್ಜಿ ವಿಚಾರಣೆಗೆ ಮತ್ತೆ ಸಮಯ ಕೇಳಿದ್ದರು. ಬಳಿಕ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು.
ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ವಕೀಲರು ಹಾಜರಿಲ್ಲದ ಕಾರಣ, ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ (ಇಂದಿಗೆ) ಮುಂದೂಡಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಮೂವರಿಗೆ ಮಾತ್ರ ಇತ್ತೀಚೆಗೆ ಜಾಮೀನು ಸಿಕ್ಕಿದೆ.
ಇದನ್ನೂ ಓದಿ: Actor Darshan: ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ; ಜಾಮೀನಿಗೆ ಕಾರಣಗಳು ಇಲ್ಲಿವೆ