ಸ್ಫೂರ್ತಿಪಥ ಅಂಕಣ: 2024 -ಆ ಸಂಗೀತ ನಿರ್ದೇಶಕರ ಜನ್ಮ ಶತಮಾನದ ವರ್ಷ
- ರಾಜೇಂದ್ರ ಭಟ್ ಕೆ.
Vijaya Bhaskar: ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ವರ್ಷ ತುಂಬುತ್ತಿತ್ತು! ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಮಾಧುರ್ಯಪೂರ್ಣ ಹಾಡುಗಳನ್ನು ಕೊಟ್ಟ ಕೀರ್ತಿ ಅವರದ್ದು. ಅವರ ಹಾಡುಗಳ ಮೂಲಕ ಅವರು ಇಂದಿಗೂ ನಮ್ಮ ನಡುವೆ ಜೀವಂತರಾಗಿದ್ದಾರೆ ಎನ್ನಬಹುದು.
ಗಟ್ಟಿಯಾದ ಶಾಸ್ತ್ರೀಯ ಚೌಕಟ್ಟು
1924ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು. ಆದರೆ ಬಾಲ್ಯದಿಂದಲೂ ಅವರ ಆಸಕ್ತಿಯು ಸಂಗೀತದ ಕಡೆಗೆ ಇತ್ತು. ಗೋವಿಂದ್ ಭಾವೆ ಎಂಬ ಗುರುವಿನಿಂದ ಅವರು ಹಿಂದೂಸ್ತಾನಿ ಸಂಗೀತದ ಶಿಕ್ಷಣ ಪಡೆದರು. ಹಲವು ವರ್ಷ ನಾರಾಯಣ ಸ್ವಾಮಿ ಅವರಿಂದ ಕರ್ನಾಟಕ ಸಂಗೀತದ ಪಾಠವೂ ಅವರಿಗೆ ದೊರೆಯಿತು. ಲೀನಿ ಹಂಟ್ ಅವರಿಂದ ವೆಸ್ಟರ್ನ್ ಮ್ಯೂಸಿಕ್ ಅವರು ಕಲಿತರು.
ಆದರೆ ಅವರು ಶುದ್ಧ ಸಂಗೀತವನ್ನು ಕಲಿತದ್ದು ಮುಂಬೈಗೆ ಹೋಗಿ ನೌಶಾದ್ ಮತ್ತು ಮದನಮೋಹನ್ ಎಂಬ ಅದ್ಭುತ ಸಂಗೀತ ನಿರ್ದೇಶಕರ ಜೊತೆಗೆ. ಪಿಯಾನೋ ನುಡಿಸುತ್ತಾ ಆರ್ಕೆಸ್ಟ್ರಾ ಟೀಮ್ ಕಟ್ಟಿ ನೂರಾರು ಸ್ಟೇಜ್ ಶೋಗಳನ್ನು ಅವರು ಕೊಟ್ಟರು. ಆಗಲೂ ಅವರ ಮನಸ್ಸು ಸಂಗೀತ ನಿರ್ದೇಶನದ ಕಡೆಗೆ ಇತ್ತು.
ಮಾಧುರ್ಯದ ಶಕೆ ಆರಂಭ
1953ರಲ್ಲಿ ಆರ್ ನಾಗೇಂದ್ರ ರಾವ್ ಅವರ ಸಿನೆಮಾ ‘ರಾಮ ಪೂಜಾ ‘ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು. ಅಲ್ಲಿಂದ ಅವರಿಗೆ ಕನ್ನಡದ ಶ್ರೇಷ್ಟ ಸಿನೆಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯ ಆಯಿತು. ಬೆಳ್ಳಿ ಮೋಡ ಪುಟ್ಟಣ್ಣ ಅವರ ಮೊದಲ ಸಿನೆಮಾ ಆಗಿತ್ತು. ಅದಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದರು.
ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ ..
ಬೆಳ್ಳಿ ಮೋಡ ಸಿನೆಮಾದ ಎಲ್ಲ ಹಾಡುಗಳೂ ಟಾಪ್ ಹಿಟ್ ಆದರೂ ಬೇಂದ್ರೆಯವರ ಮೂಡಲ ಮನೆ ಹಾಡು, ಅದರ ಕಂಪೋಸ್, ಅದರ ಚಿತ್ರೀಕರಣ ಇವುಗಳನ್ನು ಮರೆಯೋದು ಹೇಗೆ? ಈಗಲೂ ಆ ಹಾಡು ಕೇಳುವಾಗ ಮೈ ಝುಂ ಆಗದೇ ಇರದು. ಅದು ವಿಜಯಭಾಸ್ಕರ್ ಅವರ ಮ್ಯೂಸಿಕನ ತಾಕತ್ತು!
ಅಲ್ಲಿಂದ ವಿಜಯಭಾಸ್ಕರ್ ಹಿಂದೆ ತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಮುಂದೆ ಪುಟ್ಟಣ್ಣ ಅವರ 25 ಸಿನೆಮಾಗಳಲ್ಲಿ 19 ಸಿನೆಮಾಗಳಿಗೆ ಸಂಗೀತ ಕೊಟ್ಟವರು ಇದೇ ವಿಜಯ ಭಾಸ್ಕರ್! ಅದೂ ಎಂತಹ ಸಿನೆಮಾಗಳು ಅಂತೀರಿ? ನಾಗರಹಾವು, ಗೆಜ್ಜೆ ಪೂಜೆ, ಶರಪಂಜರ, ಕಥಾ ಸಂಗಮ, ಮಾನಸ ಸರೋವರ, ಬಿಳಿ ಹೆಂಡ್ತಿ, ಶುಭ ಮಂಗಳ, ಉಪಾಸನೆ, ಅಮೃತ ಘಳಿಗೆ…ಎಲ್ಲವೂ ಸೂಪರ್ ಹಿಟ್! ಪುಟ್ಟಣ್ಣ ಅವರಿಗೆ ಅಪಾರವಾದ ಸಂಗೀತದ ಆಸಕ್ತಿ ಇದ್ದ ಕಾರಣ ವಿಜಯ ಭಾಸ್ಕರ್ ಅವರ ಸಿನೆಮಾಗಳಲ್ಲಿ ಅದ್ಭುತವಾದ ಮಾಧುರ್ಯದ ರಸಪಾಕವನ್ನೇ ಕೊಟ್ಟರು. ಹಾಗೆಯೇ ಖ್ಯಾತ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ ( ರವಿ) ಅವರ ಹೆಚ್ಚಿನ ಸಿನೆಮಾಗಳಿಗೆ ಸಂಗೀತ ಕೊಟ್ಟದ್ದು ಇದೇ ವಿಜಯ ಭಾಸ್ಕರ್.
ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಬಾರೇ ಬಾರೇ (ನಾಗರಹಾವು), ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ (ಶರಪಂಜರ), ಮಾನಸ ಸರೋವರ ( ಶೀರ್ಷಿಕೆ ಗೀತೆ), ಹಿಂದುಸ್ತಾನವು ಎಂದೂ ಮರೆಯದ ( ಅಮೃತ ಘಳಿಗೆ), ಸ್ನೇಹದ ಕಡಲಲ್ಲಿ ( ಶುಭ ಮಂಗಳ) , ಸಂಪಿಗೆ ಮರದ ಹಸಿರೆಲೆ ನಡುವೆ (ಉಪಾಸನೆ), ಭಾರತ ಭೂಶಿರ ಮಂದಿರ ಸುಂದರಿ (ಉಪಾಸನೆ), ಜಯತು ಜಯ ವಿಠ್ಠಲ (ಸಂತ ತುಕಾರಾಂ) ಇಂತಹ ಸೂಪರ್ ಹಿಟ್ ಹಾಡುಗಳನ್ನು ಕನ್ನಡಿಗರು ಮರೆಯುವುದು ಸಾಧ್ಯವೇ ಇಲ್ಲ.
ಆ ಸಿನೆಮಾಗಳು ಬಿಡುಗಡೆಯಾಗಿ ಎಷ್ಟೋ ದಶಕಗಳು ಆಗಿದ್ದರೂ ಈ ಹಾಡುಗಳನ್ನು ಕನ್ನಡಿಗರು ಇಂದಿಗೂ ಮರೆತಿಲ್ಲ. ಅದು ವಿಜಯಭಾಸ್ಕರ್ ಅವರ ಸಂಗೀತದ ಪವರ್! ಅದು ಶುದ್ಧವಾದ ಸಂಗೀತದ ಖದರು!
ಅದೇ ರೀತಿ ನೀನೇ ಸಾಕಿದಾ ಗಿಣಿ (ಮಾನಸ ಸರೋವರ), ಶಾರದೆ ದಯೆ ತೋರಿದೆ (ಮಲಯ ಮಾರುತ), ತುತ್ತು ಅನ್ನ ತಿನ್ನೋಕೆ ( ಜಿಮ್ಮಿಗಲ್ಲು), ಬೆಸುಗೆ ( ಶೀರ್ಷಿಕೆ ಗೀತೆ), ಯಾವ ಜನ್ಮದ ಮೈತ್ರಿ ( ಶೀರ್ಷಿಕೆ ಗೀತೆ), ಕನ್ನಡ ನಾಡಿನ ವೀರ ರಮಣಿಯ (ನಾಗರ ಹಾವು), ಪಂಚಮ ವೇದ ಪ್ರೇಮದ ನಾದ(ಗೆಜ್ಜೆ ಪೂಜೆ), ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ (ಶರಪಂಜರ) ಇಂತಹ ಸಾವಿರಾರು ಹಾಡುಗಳು ವಿಜಯಭಾಸ್ಕರ್ ಸಂಗೀತದ ಮೂಲಕ ಅಮರತ್ವವನ್ನು ಪಡೆದಿವೆ.
ಒಬ್ಬ ಸಂಗೀತ ನಿರ್ದೇಶಕ ಸಂಗೀತ ಕೊಟ್ಟ ಒಂದು ಸಿನಿಮಾದ ಕೆಲವು ಹಾಡು ಹಿಟ್ ಆಗುವುದು ಸಹಜ. ಆದರೆ ವಿಜಯಭಾಸ್ಕರ್ ಸಂಗೀತ ಕೊಟ್ಟ ಸಿನೆಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿವೆ ಎಂದರೆ ಎಷ್ಟು ಗ್ರೇಟ್ ಅಲ್ವಾ? ಅದರಲ್ಲಿಯೂ ಶಾಸ್ತ್ರೀಯ ಸಂಗೀತ ಆಧಾರಿತವಾದ ಮಲಯಮಾರುತ, ಉಪಾಸನೆ ಸಿನೆಮಾಗಳ ಎಲ್ಲ ಹಾಡುಗಳೂ ಹಿಟ್ ಲಿಸ್ಟ್ ಸೇರಿವೆ!
ಒಂಬತ್ತು ಭಾಷೆ, 700 ಸಿನೆಮಾಗಳು ವಿಜಯ ಭಾಸ್ಕರ್ ಕಾಣ್ಕೆ!
1980ರಿಂದ 2001ರವರೆಗೆ ವಿಜಯಭಾಸ್ಕರ್ ಭಾರತದ ಒಂಬತ್ತು ಭಾಷೆಗಳ 700 ಸಿನೆಮಾಗಳಿಗೆ ಸಂಗೀತವನ್ನು ಕೊಟ್ಟಿದ್ದಾರೆ! ಅದರಲ್ಲಿ ಕನ್ನಡದ 170 ಸಿನೆಮಾಗಳು ಸೇರಿವೆ. ಉಳಿದಂತೆ ತಮಿಳು, ತೆಲುಗು, ಮಲಯಾಳಂ, ಒರಿಯಾ, ಹಿಂದೀ, ಕೊಂಕಣಿ, ಮರಾಠಿ ಭಾಷೆಯ ಸಿನೆಮಾಗಳು ಸೇರಿವೆ. ಹಾಗೆಯೇ ಇಂಗ್ಲೆಂಡಿಗೆ ಹೋಗಿ ರಾಬರ್ಟ್ ಕ್ಲೈವ್ ಎಂಬ ಇಂಗ್ಲಿಷ್ ಸಿನಿಮಾಕ್ಕೂ ಸಂಗೀತ ಕೊಟ್ಟು ಅವರು ಬಂದಿದ್ದಾರೆ! ಜಿ ವಿ ಅಯ್ಯರ್ ಅವರ ಮೆಗ್ನಮಾಪಸ್ ಹಿಂದಿ ಸಿನೆಮಾ ವಿವೇಕಾನಂದ, ಇದಕ್ಕೂ ಅವರೇ ಸಂಗೀತ ನೀಡಿದ್ದಾರೆ. ಅವರಿಗೆ 6 ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿಗಳು ಬಂದಿವೆ. ಮಲಯಾಳಂ ಲೆಜೆಂಡ್ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರ 3 ಶ್ರೇಷ್ಟ ಮಲಯಾಳಂ ಸಿನೆಮಾಗಳಿಗೆ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ! ಸೂರ್ ಸಿಂಗಾರ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಅಂದರೆ ಅದು ವಿಜಯ ಭಾಸ್ಕರ್.
ಶಾಸ್ತ್ರೀಯ ಸಂಗೀತ, ಜಾನಪದ ಹಾಡು, ಭಾವಗೀತೆ, ಭಕ್ತಿ ಸಂಗೀತ, ಗಝಲ್, ಕವ್ವಾಲಿ, ವೆಸ್ಟರ್ನ್….ಹೀಗೆ ಎಲ್ಲ ಪ್ರಕಾರದ ಹಾಡುಗಳಿಗೆ ಸಂಗೀತವನ್ನು ಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು.
ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ
70ರ ದಶಕದ ಶ್ರೇಷ್ಟವಾದ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ತುಳು ಸಿನೆಮಾ ಅದು ‘ಕೋಟಿ ಚೆನ್ನಯ’. ಅದಕ್ಕೆ ಸಂಗೀತವನ್ನು ನೀಡಿದವರು ವಿಜಯ ಭಾಸ್ಕರ್. ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ, ಕೆಮ್ಮಲೆತ ಬ್ರಹ್ಮ ಹಾಡು, ಜೋಡು ನಂದಾ ದೀಪ ಬೆಳಗಂಡ್….ಮೊದಲಾದ ಹಾಡುಗಳನ್ನು ತುಳು ಭಾಷಿಗರು ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದವರು ಇದೇ ವಿಜಯ ಭಾಸ್ಕರ್! ಹಾಗೆಯೇ ಸಂಗ್ಯಾ ಬಾಳ್ಯಾ, ನಾಂದಿ, ಉಯ್ಯಾಲೆ ಮೊದಲಾದ ಪ್ರಯೋಗಾತ್ಮಕ ಸಿನಿಮಾಗಳಿಗೂ ಸಂಗೀತವನ್ನು ಕೊಟ್ಟು ಗೆದ್ದವರು ಅವರು.
ಅಮರತ್ವವನ್ನು ಪಡೆದ ವಿಜಯ ಭಾಸ್ಕರ್ ಹಾಡುಗಳು!
2002ರ ಇಸವಿ ತಮ್ಮ 77ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಆದರೆ ಅವರು ಸಂಗೀತ ನೀಡಿದ ಸಾವಿರಾರು ಹಾಡುಗಳ ಮೂಲಕ ವಿಜಯಭಾಸ್ಕರ್ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ. ಕನ್ನಡದ ಫಿಲಂ ಚೇಂಬರ್ ಅವರ ನೆನಪಿಗಾಗಿ ಅವರ ಶತಮಾನದ ವರ್ಷ ಏನಾದರೂ ಮಾಡಲೇಬೇಕು ಎಂಬ ಒತ್ತಾಯ ಕನ್ನಡಿಗರದಾಗಬೇಕು.
ಜೊತೆಗೆ ನನಗೆ ಇಷ್ಟವಾದ ಅವರ ಇನ್ನೂ ಕೆಲವು ಹಾಡುಗಳ ಪಟ್ಟಿಯ ಜೊತೆಗೆ ಅವರಿಗೆ ಶ್ರದ್ಧಾಂಜಲಿ ಕೊಡುವೆ.
೧) ಯಾವ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ.
೨) ಓ ಗುಣವಂತಾ.
೩) ಬೆಳ್ಳಿ ಮೊಡವೆ ಎಲ್ಲಿ ಓಡುವೇ.
೪) ಕೊಡಗಿನ ಕಾವೇರಿ.
೫) ವಸಂತ ಬರೆದನು ಒಲವಿನ ಓಲೆ
೬) ಭಾವವೆಂಬ ಹೂವು ಅರಳಿ.
೭) ಎಲ್ಲೆಲ್ಲಿ ಸಂಗೀತವೇ.
೮) ಚಂದ ಚಂದ ಗುಲಾಬಿ
ತೋಟವೇ ಚಂದ.
೯) ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು.
೧೦) ಭಾವವೆಂಬ ಹೂವು ಅರಳಿ.
೧೧) ಯಾವ ತಾಯಿಯ ಮಡಿಲ ಮಗಳಾದರೇನು.
೧೨) ಹಾಡೊಂದ ನಾ ಹಾಡುವೆ.
೧೩) ಆಚಾರವಿಲ್ಲದ ನಾಲಗೆ.
ಇದನ್ನೂ ಓದಿ: Smart Glass : ರಾಜೇಂದ್ರ ಭಟ್ ಅಂಕಣ: ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ!