ಬೆಂಗಳೂರು: ‘ನಮ್ಮ ಮೆಟ್ರೊ’ (Namma Metro) ಹಸಿರು ಮಾರ್ಗದ (green line) ವಿಸ್ತರಿತ ಮಾರ್ಗವಾದ ನಾಗಸಂದ್ರ-ಮಾದಾವರ ನಿಲ್ದಾಣಗಳ ನಡುವೆ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಗುರುವಾರವಷ್ಟೇ ಸುರಕ್ಷತಾ ತಪಾಸಣೆ ನಡೆಸಿದ್ದ ಆಯುಕ್ತರ ತಂಡ ಬಳಿಕ ಅನುಮತಿ ನೀಡಿದ್ದಾರೆ.
ರೈಲ್ವೆ ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್ ಮಧುಕರ್ ಚೌಧರಿ, ಉಪ ಆಯುಕ್ತ ನಿತೀಶ್ ಕುಮಾರ್ ರಂಜನ್ ಮತ್ತು ತಾಂತ್ರಿಕ ತಂಡದ ಸದಸ್ಯರು ಮಂಜುನಾಥನ ನಗರ, ಚಿಕ್ಕಬಿದರಕಲ್ಲು (ಜಿಂದಾಲ್) ಮತ್ತು ಮಾದಾವರ ಮೆಟ್ರೊ ನಿಲ್ದಾಣಗಳ ತಪಾಸಣೆ, ಹಳಿಗಳ ತಪಾಸಣೆ, ಸಿಗ್ನಲಿಂಗ್ ಪರಿಶೀಲನೆ, ಸಾಮರ್ಥ್ಯ ಪರೀಕ್ಷೆ ಸಹಿತ ವಿವಿಧ ಪರೀಕ್ಷೆಗಳನ್ನು ನಡೆಸಿದ್ದರು. ತಪಾಸಣೆಗೆ ಎರಡು ದಿನ ನಿಗದಿಯಾಗಿದ್ದರೂ ಒಂದೇ ದಿನದಲ್ಲಿ ಪೂರ್ಣಗೊಳಿಸಿದ್ದರು. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಬಹುದು ಎಂದು ಶುಕ್ರವಾರ ಸಂಜೆ ಬಿಎಂಆರ್‌ಸಿಎಲ್‌ಗೆ ಅನುಮತಿ ಪತ್ರವನ್ನು ನೀಡಿದ್ದಾರೆ.
‘ಮೂರೂವರೆ ಕಿಲೋಮೀಟರ್ ದೂರ, ಮೂರು ನಿಲ್ದಾಣಗಳಷ್ಟೇ ಇರುವ ಸಣ್ಣ ಮಾರ್ಗ ಇದಾಗಿದ್ದರಿಂದ ತ್ವರಿತ ತಪಾಸಣೆ ಮತ್ತು ಅನುಮತಿ ಸಿಕ್ಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿದ ದಿನ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಂಆರ್ಸಿಎಲ್ ಮೆಟ್ರೊ ನಿಲ್ದಾಣಗಳಲ್ಲಿ ಬ್ಯಾಟರಿ ವಿನಿಮಯ ಸೇವೆ ಘೋಷಿಸಿದ ಎಚ್ಇಐಡಿ, ಬಿಎಂಆರ್ಸಿಎಲ್