ಬೆಂಗಳೂರು: ಬೆಂಗಳೂರು (Bangalore news) ಸಮೀಪದ ಕಾಡಿನ ಗುಹೆಯೊಂದರಿಂದ 188 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಹೊರಗೆ ಕರೆತರಲಾಗಿದೆ ಎಂಬ ಸುದ್ದಿ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನಿನ್ನೆಯಿಂದ ವೈರಲ್ ಆಗುತ್ತಿದೆ. ‘ಕನ್ಸರ್ನ್ಡ್ ಸಿಟಿಜನ್’ ಎಂಬ ಹ್ಯಾಂಡಲ್‌ನಿಂದ X ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ತುಣುಕು ದಿಢೀರ್ ವೈರಲ್ (Viral video) ಆಗಿದೆ. ಸುಮಾರು 2.9 ಕೋಟಿ ಜನ ಇದನ್ನು ವೀಕ್ಷಿಸಿದ್ದಾರೆ. ಇದೀಗ ಇದರ ಫ್ಯಾಕ್ಟ್ ಚೆಕ್ (Fact Check) ಮಾಡಲಾಗಿದೆ.
“ಈ ಭಾರತೀಯ ವ್ಯಕ್ತಿ ಈಗಷ್ಟೇ ಗುಹೆಯಲ್ಲಿ ಪತ್ತೆಯಾಗಿದ್ದಾರೆ. ಆತನಿಗೆ 188 ವರ್ಷ ವಯಸ್ಸಾಗಿದೆ ಎಂದು ಹೇಳಲಾಗಿದೆ. ಅದ್ಭುತ” ಎಂದು ಈ ವೀಡಿಯೊಗೆ ಕ್ಯಾಪ್ಷನ್ ಹಾಕಲಾಗಿದೆ. 24 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ, ಇಬ್ಬರು ವ್ಯಕ್ತಿಗಳು ಆ ವೃದ್ಧರಿಗೆ ನಡೆಯಲು ಸಹಾಯ ಮಾಡುತ್ತಾರೆ. ಬೆನ್ನು ಬಾಗಿರುವ, ಬಿಳಿ ಗಡ್ಡವನ್ನು ಹೊಂದಿರುವ ಈ ವೃದ್ಧರು ವಾಕಿಂಗ್ ಸ್ಟಿಕ್ ಬಳಸಿ ನಡೆಯುತ್ತಾರೆ.
ಆದರೆ ಇದು ನಿಜಾನಾ? 188 ವರ್ಷ ವಯಸ್ಸಿನ ವ್ಯಕ್ತಿ ಇರುವುದು ಸಾಧ್ಯವಾ? ಅದೂ ಬೆಂಗಳೂರಿನ ಬಳಿ? ಈ ವೈರಲ್ ವೀಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ ತಿಳಿದುಬಂದ ಸತ್ಯವೇ ಬೇರೆ. ವೀಡಿಯೊದಲ್ಲಿರುವ ಈ ವ್ಯಕ್ತಿಗೆ 110 ವರ್ಷ ವಯಸ್ಸಾಗಿದೆ. ಮತ್ತು ಇವರು ಬೆಂಗಳೂರಿನವರಲ್ಲ. ಇವರು ಮಧ್ಯಪ್ರದೇಶದ ಒಬ್ಬ ಹಿಂದೂ ಸಂತ.
🇮🇳 This Indian Man has just been found in a cave.
— Concerned Citizen (@BGatesIsaPyscho) October 3, 2024
It’s alleged he’s 188 years old. Insane. pic.twitter.com/a7DgyFWeY6
ಸ್ವತಃ X ಮೀಡಿಯಾ ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಸ್ಪಷ್ಟನೆ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಉಲ್ಲೇಖಿಸಲಾದ ವಯಸ್ಸು ನಿಖರವಾಗಿಲ್ಲದಿರಬಹುದು ಎಂದಿದೆ. “ಇದು ತಪ್ಪು ಮಾಹಿತಿ. ಈ ವಯಸ್ಸಾದ ವ್ಯಕ್ತಿ ಭಾರತದ ಮಧ್ಯಪ್ರದೇಶದಲ್ಲಿ ವಾಸಿಸುವ ‘ಸಿಯಾರಾಮ್ ಬಾಬಾ’ ಎಂಬ ಹಿಂದೂ ಸಂತ. ವರದಿಗಳ ಪ್ರಕಾರ ಅವರು ಸುಮಾರು 110 ವರ್ಷ ವಯಸ್ಸಿನವರು” ಎಂದು ಎಕ್ಸ್ ಟಿಪ್ಪಣಿ ಇದೆ.
2024ರ ಜುಲೈ 2 ರಂದು ನವಭಾರತ್ ಟೈಮ್ಸ್‌ನಲ್ಲಿ ಬಂದ ಒಂದು ಲೇಖನ ಈ ಕುರಿತು ವಿವರ ನೀಡಿತ್ತು. ವರದಿಯ ಪ್ರಕಾರ ಸಿಯಾರಾಮ್ ಬಾಬಾ ಅವರ ವಯಸ್ಸು 109. ಸಿಯಾರಾಮ್ ಬಾಬಾ ಅವರು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವಾಸಿಸುತ್ತಾರೆ ಮತ್ತು ಈ ಪ್ರದೇಶದಲ್ಲಿ ತುಂಬಾ ಜನಪ್ರಿಯರು.
ಡೇಟಾ ಪರಿಶೀಲನೆ ಗುಂಪು ಡಿ-ಇಂಟೆಂಟ್ ಡೇಟಾ ಕೂಡ ಈ ವೈರಲ್ ವೀಡಿಯೊ ದಾರಿತಪ್ಪಿಸುವಂತಿದೆ ಎಂದಿದೆ. “ವಿಡಿಯೊ ಮಾಹಿತಿ ದಾರಿತಪ್ಪಿಸುವಂತಿದೆ. 188 ವರ್ಷ ವಯಸ್ಸಿನ ಭಾರತೀಯ ವ್ಯಕ್ತಿಯೊಬ್ಬರು ಗುಹೆಯಲ್ಲಿ ಪತ್ತೆಯಾಗಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವೆಂದರೆ ಈ ಹೇಳಿಕೆ ನಿಜವಲ್ಲ. ಇವರು ಭಾರತದ ಮಧ್ಯಪ್ರದೇಶದಲ್ಲಿ ವಾಸಿಸುವ ‘ಸಿಯಾರಾಮ್ ಬಾಬಾ’ ಎಂಬ ಸಂತ” ಎಂದಿದೆ.