Wednesday, 6th November 2024

Donald Trump: ಮೊದಲು ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿ; ಡೊನಾಲ್ಡ್ ಟ್ರಂಪ್ ಗುಡುಗು

ವಾಷಿಂಗ್ಟನ್‌: ಇರಾನ್‌ ಮತ್ತು ಇಸ್ರೇಲ್‌ ನಡುವೆ ದಾಳಿ ಪ್ರತಿ-ದಾಳಿ ನಡೆಯುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಈ ಮಧ್ಯೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್‌ನ ಪರಮಾಣು ನೆಲೆ (Iran’s Nuclear Sites)ಗಳ ಮೇಲೆ ಇಸ್ರೇಲ್‌ ದಾಳಿ ನಡೆಸಬೇಕು ಎಂದು ಹೇಳಿದ್ದಾರೆ.

ಉತ್ತರ ಕೆರೊಲಿನಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳು ಇಸ್ರೇಲ್‌ನನ್ನು ಗುರಿಯಾಗಿಸುವ ಸಾಧ್ಯತೆಯ ಬಗ್ಗೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೇಳಲಾದ ಪ್ರಶ್ನೆಯನ್ನು ಉಲ್ಲೇಖಿಸಿದ್ದಾರೆ. ”ಇರಾನ್ ಪರಮಾಣು ಸ್ಥಾವರಗಳ ಮೇಲಿನ ದಾಳಿಯನ್ನು ಬೆಂಬಲಿಸುತ್ತೀರಾ?” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಡನ್‌ ʼʼಇಲ್ಲʼʼ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮೊದಲು ಪರಮಾಣು ಅಸ್ತ್ರಗಳನ್ನು ಹೊಡೆಯಬೇಕು ಮತ್ತು ಉಳಿದವುಗಳ ಬಗ್ಗೆ ನಂತರ ಚಿಂತಿಸಬೇಕು” ಎಂದು ಟ್ರಂಪ್ ಹೇಳಿದ್ದಾರೆ. ಆ ಮೂಲಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಬೈಡನ್‌ ನಿಲುವೇನು?

ಇಸ್ರೇಲ್ ಮೇಲೆ ಇರಾನ್‌ ಇತ್ತೀಚೆಗೆ ಸುಮಾರು 200 ಕ್ಷಿಪಣಿಗಳ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಇಸ್ರೇಲ್‌ ನಡೆಸುವ ದಾಳಿಗಳಿಗೆ ಬೈಡನ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. “ಈ ಬಗ್ಗೆ ನಾವು ಇಸ್ರೇಲ್‌ನೊಂದಿಗೆ ಚರ್ಚಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ʼʼಎಲ್ಲ ಜಿ 7 ಸದಸ್ಯ ರಾಷ್ಟ್ರಗಳು ಇಸ್ರೇಲ್‌ಗೆ ಪ್ರತಿಕ್ರಿಯಿಸುವ ಹಕ್ಕಿದೆ. ಆದರೆ ಅದಕ್ಕೂ ಒಂದು ಕ್ರಮವಿದೆ ಎಂದು ಹೇಳಿವೆʼʼ ಎಂಬುದಾಗಿ ಬೈಡನ್‌ ತಿಳಿಸಿದ್ದಾರೆ.

ಅಮೆರಿಕದಲ್ಲಿ ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಾದ ನಡೆಸಿದ ಟ್ರಂಪ್‌ ಮಧ್ಯ ಪ್ರಾಚ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಕೆಲವು ದಿನಗಳ ಹಿಂದೆ ಅವರು ಮಧ್ಯ ಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಾರಣ ಎಂದು ಹೇಳಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತೀಯ ಮೂಲದ ಅಭ್ಯರ್ಥಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಪ್ರಬಲ ಪೈಪೋಟಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್​ ಕಚೇರಿ ಮೇಲೆ ಗುಂಡಿನ ದಾಳಿ