Friday, 10th January 2025

Haryana Polls: ಮೊದಲ ಬಾರಿಗೆ ಮತ ಚಲಾಯಿಸಿ ಹರ್ಷ ವ್ಯಕ್ತಪಡಿಸಿದ ಮನು ಭಾಕರ್‌

ಹರಿಯಾಣ: ಪ್ಯಾರಿಸ್‌ ಒಲಿಂಪಿಕ್ಸ್‌ ಅವಳಿ ಪದಕ ವಿಜೇತೆ, ಶೂಟರ್‌ ಮನು ಭಾಕರ್‌(Manu Bhaker) ಅವರು ಮೊದಲ ಬಾರಿಗೆ ಮತ ಚಲಾಯಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಹರಿಯಾಣ(Haryana Polls) ವಿಧಾನಸಭಾ ಚುನಾವಣೆಯ ಚರ್ಖಿ ದಾದ್ರಿಯ(Charkhi Dadri) ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ತನ್ನ ತಂದೆ ರಾಮ್ ಕಿಶನ್ ಭಾಕರ್ ಅವರೊಂದಿಗೆ ಮತ ಚಲಾಯಿಸಿದ ನಂತರ, ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮತ ಚಲಾಯಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಮನು, “ಈ ದೇಶದ ಯುವ ಜನತೆಯಾಗಿ, ಅತ್ಯಂತ ಅನುಕೂಲಕರ ಅಭ್ಯರ್ಥಿಗೆ ನಮ್ಮ ಮತವನ್ನು ಹಾಕುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಹೆಜ್ಜೆಗಳು ದೊಡ್ಡ ಗುರಿಗಳಿಗೆ ಕಾರಣವಾಗುತ್ತವೆ… ನಾನು ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ” ಎಂದು ಹೇಳಿದರು. ಮನು ಮತದಾನದ ಬ್ರಾಂಡ್ ಅಂಬಾಸಿಡರ್ ಮತ್ತು ಯೂತ್ ಐಕಾನ್ ಕೂಡ ಆಗಿದ್ದರು.

ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ. 8,821 ಶತಾಯುಷಿಗಳು ಸೇರಿ 2,03,54,350 ಮತದಾರರಿದ್ದಾರೆ. 101 ಮಹಿಳೆಯರು ಸೇರಿ 1,031 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ 464 ಅಭ್ಯರ್ಥಿಗಳು ಪಕ್ಷೇತರರು. ಮತದಾನಕ್ಕಾಗಿ ರಾಜ್ಯದಲ್ಲಿ 20,632 ಮತಗಟ್ಟೆ ಸ್ಥಾಪಿಸಲಾಗಿದೆ. ಬಿಜೆಪಿ, ಕಾಂಗ್ರೆಸ್,ಎಎಪಿ, ಐಎನ್‌ಎಲ್‌ಡಿ, ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷ ಕಣದಲ್ಲಿರುವ ರಾಜಕೀಯ ಪಕ್ಷಗಳಾಗಿವೆ.

ಇದನ್ನೂ ಓದಿ Manu Bhaker: ಟ್ರೋಲಿಗರಿಗೆ ಖಡಕ್​ ಉತ್ತರ ಕೊಟ್ಟ ಮನು ಭಾಕರ್‌

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ ಮತ್ತು ಜೆಜೆಪಿ 10 ಸ್ಥಾನ ಗೆದ್ದಿದ್ದವು. ಬಿಜೆಪಿಗೆ ಬಹುಮತ ಬಾರದ ಕಾರಣ ಜೆಜೆಪಿ ಬೆಂಬಲ ನೀಡಿತ್ತು. ಆದರೆ, ಇದೀಗ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಕಣಕ್ಕಿಳಿದಿವೆ.

ಈ ನಡುವೆ ಇಂದು ಸಂಜೆ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿವೆ ಎಂದು ವರದಿಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 3 ಹಂತದಲ್ಲಿ ಸೆ.18, 25 ಮತ್ತು ಅ.1 ರಂದು ಚುನಾವಣೆ ನಡೆದಿತ್ತು.