ಲಕ್ನೋ: ಅತ್ಯಂತ ರೋಚಕ ಹಂತ ತಲುಪಿದ್ದ ಶೇಷಭಾರತ(Rest of India) ಮತ್ತು ಮುಂಬೈ ನಡುವಣ ಇರಾನಿ ಕಪ್(Irani Cup) ಡ್ರಾದಲ್ಲಿ ಅಂತ್ಯ ಕಂಡಿದೆ. ಆದರೆ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಮೂಲಕ 27 ವರ್ಷದ ಬಳಿಕ ಕಪ್ ಗೆದ್ದ ಸಾಧನೆ ಮಾಡಿತು. ಇದು ಮುಂಬೈಗೆ ಒಲಿದ 15ನೇ ಟ್ರೋಫಿಯಾಗಿದೆ. ಕೊನೆಯ ಬಾರಿಗೆ ಮುಂಬೈ ಕಪ್ ಜಯಿಸಿದ್ದು 1997-98 ರ ಋತುವಿನಲ್ಲಿ.
ಲಕ್ನೋದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ(Ekana Cricket Stadium) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಸರ್ಫರಾಜ್ ಖಾನ್(222*) ಅವರ ಅಜೇಯ ದ್ವಿಶತಕ ಮತ್ತು ನಾಯಕ ರಹಾನೆ(97) ಬಾರಿಸಿದ ಅರ್ಧಶತಕದ ನೆರವಿನಿಂದ 537 ರನ್ ಬಾರಿಸಿತು. ದಿಟ್ಟ ರೀತಿಯಲ್ಲೇ ಜವಾಬು ನೀಡಿದ ಶೇಷ ಭಾರತ, 4ನೇ ದಿನದಾಟದಲ್ಲಿ(ಶುಕ್ರವಾರ) 416ಕ್ಕೆ ಆಲೌಟ್ ಆಯಿತು. ನಾಯಕ ಅಭಿಮನ್ಯು ಈಶ್ವರನ್ 191 ರನ್, ಧ್ರುವ ಜುರೆಲ್ 93 ರನ್ ಬಾರಿಸಿದರು. ಮೊದಲ ಇನಿಂಗ್ಸ್ನ 121 ರನ್ ಮುನ್ನಡೆ ಸಾಧಿಸಿದ ಮುಂಬೈ ಅಂತಿಮ ದಿನವಾದ ಶನಿವಾರ 8 ವಿಕೆಟ್ಗೆ 329 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಡ್ರಾ ಗೊಂಡರೂ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ IND vs BAN 1st T20: ಬಿಗಿ ಭದ್ರತೆಯಲ್ಲಿ ನಾಳೆ ಭಾರತ-ಬಾಂಗ್ಲಾ ಟಿ20 ಫೈಟ್
ದ್ವಿತೀಯ ಇನಿಂಗ್ಸ್ನಲ್ಲಿ ಮುಂಬೈ ಪರ ಮಿಂಚಿದ ಬ್ಯಾಟರ್ಗಳೆಂದರೆ ಪೃಥ್ವಿ ಶಾ(76) ಮತ್ತು ತನುಷ್ ಕೋಟ್ಯಾನ್(114) ಅಜೇಯ ಶತಕ ಬಾರಿಸಿದರು. ಇವರ ಜತೆಗಾರ ಮೋಹಿತ್ ಅವಸ್ತಿ(51) ಕೂಡ ಅರ್ಥಶತಕ ಬಾರಿಸಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ 1ನೇ ಇನಿಂಗ್ಸ್ 537 ಮತ್ತು 2ನೇ ಇನಿಂಗ್ಸ್ 329/8 (ಪೃಥ್ವಿ ಶಾ 76, ತನುಷ್ ಕೋಟ್ಯಾನ್ 114* ಮೋಹಿತ್ ಅವಸ್ತಿ 51*, ಸಾರಾಂಶ್ ಜೈನ್ 121ಕ್ಕೆ 6, ಮಾನವ್ 78 ಕ್ಕೆ 2). ಶೇಷಭಾರತ 1ನೇ ಇನಿಂಗ್ಸ್: 416 (ಈಶ್ವರನ್ 191, ಜುರೆಲ್ 93, ತನುಷ್101ಕ್ಕೆ 3, ಮುಲಾನಿ 122ಕ್ಕೆ 3).
ಹೆಚ್ಚು ಬಾರಿ ಇರಾನಿ ಟ್ರೋಪಿ ಗೆದ್ದ ತಂಡ
1959-60ರಿಂದ ನಡೆಯುತ್ತಿರುವ ಈ ಟೂರ್ನಿಯಲ್ಲಿ ರೆಸ್ಟ್ ಆಫ್ ಇಂಡಿಯಾ 30 ಬಾರಿ ಪ್ರಶಸ್ತಿ ಗೆದ್ದು ಅಗ್ರಸ್ಥಾನ ಪಡೆದಿದೆ. ಮುಂಬೈ 15 ಪ್ರಶಸ್ತಿ ಗೆದ್ದು ದ್ವಿತೀಯ ಸ್ಥಾನದಲ್ಲಿದೆ. ಮೂರನೇ ಸ್ಥಾನ ಕರ್ನಾಟಕಕ್ಕೆ. ರಾಜ್ಯ ತಂಡ 6 ಬಾರಿ ಚಾಂಪಿಯನ್ ಆಗಿದೆ. ಉಳಿದಂತೆ ಡೆಲ್ಲಿ 3, ರೈಲ್ವೇಸ್ 2, ವಿದರ್ಭ 2, ಸೌರಾಷ್ಟ್ರ 2, ಹೈದರಾಬಾದ್, ತಮಿಳುನಾಡು ಮತ್ತು ಹರಿಯಾಣ ತಲಾ 1 ಬಾರಿ ಪ್ರಶಸ್ತಿ ಗೆದ್ದಿವೆ.