Monday, 6th January 2025

ಇದು ಅಮೆರಿಕಾದ ಕೂಲಿ ಜೇನುಹುಳಗಳ ದಾರುಣ ಕಥೆ

ಶಿಶಿರಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯ ದಿಂದ ಅದರ ಪಶ್ಚಿಮಕ್ಕಿರುವ ಕ್ಯಾಲಿಫೋರ್ನಿಯಾಕ್ಕೆ ನಾವು ಕೆಲವು ಸ್ನೇಹಿತರು ಕಾರ್ ಡ್ರೈವ್ ಮಾಡಿಕೊಂಡು ಹೊರಟಿzವು. ಹೇಳಿ ಕೇಳಿ ಬೇಸಿಗೆಗಾಲ, ಸುಡುವ ಬಿಸಿಲು – ವಿಪರೀತ ಸೆಖೆ. ನೆವಾಡಾದ ಬೇಸಿಗೆಯ ಸೆಖೆಯೇ ಅಂಥದ್ದು, ಎಷ್ಟು ನೀರು ಕುಡಿದರೂ ದಾಹ ತಣಿಯುವುದಿಲ್ಲ.

ಎಸಿ ಇಲ್ಲದೆ ಬದುಕುವುದೇ ಸಾಧ್ಯವಿಲ್ಲ ಅನಿಸಿಬಿಡುತ್ತದೆ. ಅದರಲ್ಲಿಯೂ ನಾವು ಪ್ರಯಾಣಿಸುತ್ತಿದ್ದುದು ಡೆತ್ ವ್ಯಾಲಿಯ ಮೂಲಕ. ಡೆತ್ ವ್ಯಾಲಿ ಎಂದರೆ ಮರಳುಗಾಡು. ಅದು ಅಕ್ಷರಶಃ ಡೆತ್ ವ್ಯಾಲಿ – ಅಲ್ಲಿ ಒಂದೇ ಒಂದು ಹಸಿರು ದೂರ ದೂರಕ್ಕೂ ಕಾಣಿಸುವುದಿಲ್ಲ. ಹಗಲಲ್ಲಿ ಉಷ್ಣಾಂಶ ಬರೋಬ್ಬರಿ ೫೦ ಡಿಗ್ರಿ ಸೆಲ್ಸಿಯಸ್ ದಾಟಿರುತ್ತದೆ. ಕಾರಿನ ಕಿಟಕಿ ತೆರೆದರೆ ಅಗ್ನಿಯ ಜ್ವಾಲೆ ತಾಗಿದ ಅನುಭವ. ನಾವು ಕಾರಿನಲ್ಲಿಟ್ಟುಕೊಂಡಿದ್ದ ನೀರೆಲ್ಲ ಅದಾಗಲೇ ಖಾಲಿಯಾಗಿತ್ತು.

ಸುಮಾರು ಎಪ್ಪತ್ತು ಮೈಲಿ ಪ್ರಯಾಣಿಸಿದರೂ ಒಂದೇ ಒಂದು ಅಂಗಡಿ ಸಿಗಲಿಲ್ಲ. ಕೊನೆಯಲ್ಲಿ, ಮರಳುಗಾಡು ಕಳೆದು ಸಮತಟ್ಟು ಹಸಿರು, ಕ್ಯಾಲಿಫೋರ್ನಿಯಾ ರಾಜ್ಯ ಪ್ರವೇಶಿಸುವ ಜಾಗಕ್ಕೆ ಬಂದು ಮುಟ್ಟಿದೆವು. ಅಂದು ಟೋಲ್ ಪ್ಲಾಜಾ ಕಾಣಿಸಿದ್ದು – ಮರುಭೂಮಿ ದಾಟಿ ಓಯಾಸಿಸ್ ತಲುಪಿದ ಅನುಭವ. ಪೂರ್ವದ ಐದಾರು ರಾಜ್ಯದಿಂದ ಬರುವ ವಾಹನಗಳೆಲ್ಲ ಆ ಟೋಲ್ ಪ್ಲಾಜಾ ದಾಟಿಯೇ ಕ್ಯಾಲಿಫೋರ್ನಿಯಾ ಹೊಕ್ಕಬೇಕು. ಹತ್ತಾರು ದೊಡ್ಡ ದೊಡ್ಡ ಟ್ರಕ್‌ಗಳು ನಿಂತಿದ್ದು ಕಂಡು ಇಲ್ಲಿ ಖಂಡಿತ ನೀರು ಸಿಗಬಹುದು ಎಂದುಕೊಂಡು ಕಾರ್ ಅನ್ನು ಟ್ರಕ್‌ಗಳ ಹಿಂದೆ ನಿಲ್ಲಿಸಿಕೊಂಡೆವು.

ಕಾರಿನ ಬಾಗಿಲು ತೆಗೆದು ಕೆಳಗಿಳಿದರೆ ಸಮುದ್ರದ ಬೋರ್ಗರೆತದ ರೀತಿಯ ಸದ್ದು. ಅಲ್ಲಿಯೂ ಸಮುದ್ರವೇನೂ ಇಲ್ಲ ! ಹಾಗಾದರೆ ಈ ಶಬ್ದ ಎಲ್ಲಿಂದ ಬರುತ್ತಿದೆ? ನಮ್ಮ ಮುಂದೆ ನಿಲ್ಲಿಸಿದ್ದ ಎಲ್ಲ ಉದ್ದುದ್ದದ ಟ್ರಕ್ಕುಗಳಲ್ಲಿ ಡಬ್ಬಿಗಳು ತುಂಬಿದ್ದವು, ಅದರ ಮೇಲೆ ಒಂದು ಹಸಿರು ಬಣ್ಣದ – ಆಚೀಚೆ ಕಾಣಿಸುವ ತೆಳ್ಳನೆಯ ಬಟ್ಟೆ ಹೊದಿಸಲಾಗಿತ್ತು. ಅದರ ಒಳಗಡೆ ಗುಯ್ಯ್ ಎನ್ನುತ್ತಿದ್ದ ಕೋಟಿ ಜೇನುಹುಳಗಳು ಈ ಶಬ್ದ ಮಾಡುತ್ತಿವೆ ಎಂದು ನಂತರ ತಿಳಿಯಿತು.

ಅವುಗಳ ಗಿಜಿಗಿಜಿಯೇ ನಮಗೆ ಸಮುದ್ರದ ಅಬ್ಬರದಂತೆ ಕೇಳಿಸಿದ್ದು. ಗಾಳಿ ಬೀಸಿದಂತೆಲ್ಲ – ಗಾಳಿ ಆ ತೆರೆದ ಟ್ರಕ್ಕುಗಳಿಗೆ ಅಪ್ಪಳಿಸಿ ಹಾದುಹೋದಂತೆಲ್ಲ ಒಳಗಿದ್ದ ಜೇನುನೊಣ ಗಳು ಗುಯ್ ಗುಡುವುದು ಹೆಚ್ಚುತ್ತಿತ್ತು. ಇದೆಲ್ಲ ಸೇರಿ ಥೇಟ್ ಸಮುದ್ರದ ಅಲೆಗಳ ಸಪ್ಪಳದಂತೆ ಶಬ್ದದಲ್ಲಿ ಏರಿಳಿತವಾಗುತ್ತಿತ್ತು. ಸರತಿಯಲ್ಲಿ ನಿಂತ ಸಾಲು ಸಾಲು ಟ್ರಕ್ಕುಗಳು, ಅದರಲ್ಲಿ ತುಂಬಿದ ಜೇನು ಹುಳು ಗಳು, ಅದನ್ನು ಪರೀಕ್ಷಿಸಲು ಬಿಳಿ ಮುಸುಕು ವಸ್ತ್ರವನ್ನು ಧರಿಸಿ ಬರುವ ವಿಜ್ಞಾನಿಗಳಂತೆ ಕಾಣಿಸುವವರು. ಅವರು ಟ್ರಕ್ಕುಗಳಿಗೆ ಹಾಕಿದ್ದ ಮುಸುಕನ್ನು ಸ್ವಲ್ಪ ಸರಿಸಿ ಏನೋ ಪರೀಕ್ಷಿಸುತ್ತಿದ್ದರು.

ಅದೊಂದು ಅವಕಾಶವೆನ್ನುವ ರೀತಿಯಲ್ಲಿ ಹತ್ತಿಪ್ಪತ್ತು ಜೇನುಹುಳಗಳು ಆಚೆ ಹಾರಿ ಬಂದು ಪರೀಕ್ಷಿಸುವವರ ಮೈ ಕೈ ಮೇಲೆ
ಕೂತುಕೊಳ್ಳುತ್ತಿದ್ದವು. ಟ್ರಕ್ ಡ್ರೈವರ್‌ಗಳು ಸ್ವಲ್ಪ ದೂರಕ್ಕೆ ಹೋಗಿಯೇ ನಿಂತಿದ್ದರು. ಅ ಪಕ್ಕದಲ್ಲಿ ನಿಂತ ನನಗಂತೂ ಎಲ್ಲಿ
ಹುಳು ಕಡಿಯಬಹುದೇನೋ ಎಂಬ ಹೆದರಿಕೆ. ಆದರೂ ತೀರಾ ಅನಿರೀಕ್ಷಿತವಾದದ್ದರಿಂದ ಎಲ್ಲಿಲ್ಲದ ಕುತೂಹಲ. ಅದಾಗಲೇ
ಬಾಯಾರಿಕೆಯೆಲ್ಲ ಮರೆತು ಹೋಗಿತ್ತು. ಈ ಜೇನುಹುಳಗಳು ಎಲ್ಲಿಂದ ಬಂದವು, ಇವುಗಳನ್ನು ಎಲ್ಲಿಗೆ ಒಯ್ಯಲಾಗುತ್ತಿದೆ? ಏನೋ
ಪರೀಕ್ಷೆ ನಡೆಯುತ್ತಿತ್ತು, ಒಂದೈದು ನಿಮಿಷದಲ್ಲಿ ಟ್ರಕ್ ಡ್ರೈವರ್‌ಗಳು ಗಡಿಬಿಡಿಯಲ್ಲಿ ಅವರಿಂದ ಏನೋ ಒಂದು ಪೇಪರ್ ಪಡೆದು ಅಲ್ಲಿಂದ ಹೊರಡುತ್ತಿದ್ದರು. ಅದಾಗಲೇ ಅಲ್ಲಿ ಸುಮಾರು ಹದಿನೈದು ಇಂತಹ ಜೇನು ನೊಣ ತುಂಬಿಕೊಂಡ ಟ್ರಕ್ಕುಗಳು ಅಲ್ಲಿ ನಿಂತಿದ್ದವು.

ನೋಡನೋಡುತ್ತಲೇ ಇನ್ನೊಂದು ನಾಲ್ಕೆ ದು ಟ್ರಕ್ಕುಗಳು ಸರತಿಯಲ್ಲಿ ಬಂದು ನಿಂತವು. ಒಂದೊಂದು ಟ್ರಕ್ಕಿನಲ್ಲೂ ಸುಮಾರು ನಾಲ್ಕರಿಂದ ಐದುನೂರು ಜೇನುಗೂಡುಗಳು. ಜೇನನ್ನು ಸಾಕಿದ್ದ ನನಗೆ ಒಂದೊಂದು ಆ ಗಾತ್ರದ ಗೂಡಿನಲ್ಲೂ ಕನಿಷ್ಠ ಐವತ್ತು ಸಾವಿರ ಜೇನು ಹುಳಗಳಿರುತ್ತವೆ ಎಂದು ಅಂದಾಜಿಸಿದರೆ, ಪ್ರತೀ ಟ್ರಕ್ಕಿನಲ್ಲಿ ಏನಿಲ್ಲವೆಂದರೆ ಎರಡೂವರೆ ಕೋಟಿ ಹುಳಗಳು. ಅಂತಹ ಇಪ್ಪತ್ತು ಟ್ರಕ್ಕುಗಳೆಂದರೆ ಸುಮಾರು ಐವತ್ತು ಕೋಟಿ ಜೇನು ಹುಳಗಳು ಟ್ರಕ್ಕುಗಳೊಳಗೆ ನಮ್ಮ ಸುತ್ತಮುತ್ತಲಿದ್ದವು.

ಇಷ್ಟೊಂದು ಪ್ರಾಮಾಣದ ಜೀವಗಳು ಇಷ್ಟು ಸನಿಹದಲ್ಲಿ – ಸುತ್ತಲೂ ಇವೆ ಎಂದು ಅಂದುಕೊಳ್ಳುವುದೇ ಒಂದು ರೋಮಾಂಚನ – ಅದರ ಜೊತೆ ಅವು ಜೇನು ನೊಣಗಳೆನ್ನುವ ಕಾರಣದಿಂದ ಸ್ವಲ್ಪ ಭಯ. ಈ ಪ್ರಮಾಣದಲ್ಲಿ ಜೇನು ಹುಳವನ್ನು ಸಾಕಲು ಯಾರಾದರೂ ಖರೀದಿಸುತ್ತಿzರೆಯೇ? ಇದು ಯಾವ ರೀತಿಯ ಬ್ಯುಸಿನೆಸ್ಸು? ಎಂಬಿತ್ಯಾದಿ ಪ್ರಶ್ನೆಗಳು ತಲೆ ತುಂಬಿಕೊಳ್ಳಲು
ಕ್ಷಾಣಾರ್ಧ ಸಾಕಾಯಿತು. ಅಲ್ಲಿ ನಿಂತಿದ್ದ ಎಲ್ಲ ಟ್ರಕ್ಕುಗಳು ಒಂದೇ ರಾಜ್ಯದಿಂದ ಬಂದವು ಎಂದು ನಂಬರ್ ಪ್ಲೇಟ್ ನೋಡಿದರೆ
ತಿಳಿಯುತ್ತಿತ್ತು. ಏನಿದೆಲ್ಲದರ ಹಕೀಕತ್ತು? ಇಬ್ಬರು ಟ್ರಕ್ ಡ್ರೈವರ್ ಗಳನ್ನು ನಿಲ್ಲಿಸಿ ಮಾತನಾಡಿಸಿದಾಗ, ಏನು ಎತ್ತ ಎಂಬಿತ್ಯಾದಿ ಪ್ರಶ್ನೆ ಕೇಳಿದಾಗ ಹೊಸತೊಂದು ವ್ಯವಹಾರದ ಜಗತ್ತೇ ನಮ್ಮೆದುರು ತೆರೆದುಕೊಂಡಿತು.

ಈ ಜೇನುಗಳೆಲ್ಲ ಹೊರಟದ್ದು ಲೂಸಿಯಾನಾ ರಾಜ್ಯದಿಂದ. ಅಲ್ಲಿಂದ ಕ್ಯಾಲಿಫೋರ್ನಿಯಾ ಏನಿಲ್ಲವೆಂದರೂ ಎರಡೂವರೆ
ಸಾವಿರ ಕಿ.ಮೀ ಈ ಎಲ್ಲ ಜೇನುಗಳು ಮಾರಾಟಕ್ಕಲ್ಲ – ಕ್ಯಾಲಿಫೋರ್ನಿಯಾದ ಬಾದಾಮಿ ತೋಟಗಳಲ್ಲಿ ಕೃಷಿ ಕೆಲಸ ಮಾಡಲು. ನಿಜ – ಅಮೆರಿಕಾದಲ್ಲಿ ಜೇನನ್ನು ದುಡಿಸಿಕೊಳ್ಳುವ ಒಂದು ಬೃಹತ್ ಉದ್ಯಮವೇ ಇದೆ. ಕ್ಯಾಲಿಫೋರ್ನಿಯಾದ ಸುಮಾರು ೭,೬೦,೦೦೦ ಎಕರೆ ಬಾದಾಮಿ ತೋಟಗಳಲ್ಲಿ ಮತ್ತು ದೇಶದುದ್ದಗಲಕ್ಕೆ ಪರಾಗ ಸ್ಪರ್ಶ ಮಾಡುವುದೇ ಈ ಜೇನು ಹುಳುಗಳ ಕೆಲಸ.
ಅಮೆರಿಕಾದಲ್ಲಿ ಅತಿಹೆಚ್ಚು ಬಾದಾಮಿ ಬೆಳೆಯುವ ರಾಜ್ಯ ಕ್ಯಾಲಿಫೋರ್ನಿಯಾ. ಬಾದಾಮಿ ಇಳುವರಿ ಚೆನ್ನಾಗಿ ಬರಬೇಕೆಂದರೆ
ಕೀಟ ಮುಖೇನ ಪರಾಗಸ್ಪರ್ಶವಾಗಬೇಕು. ಕೆಲ ದಶಕಗಳ ಹಿಂದೆ ಬಾದಾಮಿ ಕೃಷಿ ಅಲ್ಪಪ್ರಮಾಣದಲ್ಲಿರುವಾಗ ಅಲ್ಲಿರುವ ಸ್ಥಳೀಯ ಕೀಟಗಳು ಮತ್ತು ಜೇನುಹುಳಗಳು ಪರಾಗ ಸ್ಪರ್ಶ ಮಾಡುತ್ತಿದ್ದವು.

ಕಾಲ ಕಳೆದಂತೆ, ಅಮೆರಿಕಾದಲ್ಲಿ ಕೃಷಿ ಕ್ರಾಂತಿಯ ಕಾರಣದಿಂದ, ಹೆಚ್ಚಿದ ಬಾದಾಮಿ ಡಿಮಾಂಡಿನ ಕಾರಣದಿಂದ, ಬಾದಾಮಿ ರ-
ಲಾಭದಾಯಕವಾದದ್ದರಿಂದ – ಕ್ಯಾಲಿಫೋರ್ನಿಯಾದಲ್ಲಿ ಬಾದಾಮಿ ತೋಟಗಳು ವಿಸ್ತರಿಸುತ್ತ ಹೋದವು. ಆದರೆ, ಸಮಸ್ಯೆ
ಯೆಂದರೆ ಕ್ಯಾಲಿಫೋರ್ನಿಯಾದಲ್ಲಿ ಆ ಪ್ರಮಾಣದಲ್ಲಿ ಪರಾಗ ಸ್ಪರ್ಶ ಮಾಡಲು ಜೇನುಹುಳಗಳೇ ಇರಲಿಲ್ಲ. ಇದರಿಂದ ಅಲ್ಲಿನ
ಕೃಷಿಕರ ಇಳುವರಿ ಕ್ರಮೇಣ ಕಡಿಮೆಯಾಯಿತು. ಅದೆಷ್ಟೇ ಪ್ರಮಾಣದ ಜೇನುಹುಳಗಳನ್ನು ಅಲ್ಲಿ ಸಾಕಿದರೂ ಅವು ಪ್ರತೀ
ವರ್ಷದ ಬೇಸಿಗೆಯ ಸೆಖೆಗೆ- ನೀರಿನ ಕೊರತೆಗೆ, ಬಾದಾಮಿ ಬೆಳೆಯ ಸಮಯ ಬಿಟ್ಟರೆ ಬೇರೆ ಸಮಯದಲ್ಲಿ ಹೊಟ್ಟೆಗಿಲ್ಲದೇ
ಬಹುಪಾಲು ಜೇನು ಹುಳುಗಳು ಸತ್ತುಹೋಗುತ್ತಿದ್ದವು.

ಆಗ ಈ ಜೇನುಗಳನ್ನು ಪರ ರಾಜ್ಯಗಳಿಂದ ಕೆಲಸಕ್ಕೆ ತರುವ ಪದ್ಧತಿ ಆರಂಭವಾಯಿತು. ಇಂದು ಅಮೆರಿಕಾದಲ್ಲಿ ಜೇನುಹುಳ ಗಳನ್ನು ಜೇನಿಗಿಂತ ಪರಾಗಸ್ಪರ್ಶದ ಕೆಲಸಕ್ಕೆ ಸಾಕುವುದು, ಬೆಳೆಸುವುದು ಹೆಚ್ಚು ಲಾಭದಾಯಕವಾಗಿದೆ. ಲೂಸಿಯಾನಾದ ಹಸನಾದ ವಾತಾವರಣದಲ್ಲಿ ಜೇನು ಹುಳಗಳನ್ನು ಉತ್ಪಾದಿಸಲಾಗುತ್ತದೆ (!), ಅವುಗಳನ್ನು ನಂತರ ಟ್ರಕ್ಕುಗಳಲ್ಲಿ ತುಂಬಿ ಕೊಂಡು ಕ್ಯಾಲಿಫೋರ್ನಿಯಾಕ್ಕೆ ಬಾದಾಮಿ ಗಿಡಗಳು ಹೂ ಬಿಡುವ ಸಮಯದಲ್ಲಿ ಟ್ರಕ್ಕುಗಳಲ್ಲಿ ತುಂಬಿಸಿಕೊಂಡು ತರಲಾ ಗುತ್ತದೆ. ಅಲ್ಲಿ ಅವು ಎಲ್ಲ ಬಾದಾಮಿ ಹೂಗಳನ್ನು ಪರಾಗಸ್ಪರ್ಶ ಮಾಡಲು ಬಿಡಲಾಗುತ್ತದೆ. ಕೃಷಿಯಲ್ಲಿ ಅದೆಷ್ಟೇ ಆಧುನಿಕತೆ ಒಳಬಂದರೂ ಪರಾಗಸ್ಪರ್ಶ ಎನ್ನುವ ಅತಿ ಸೂಕ್ಷ್ಮ ಕೆಲಸವನ್ನು ಮಾಡುವ ಯಾವುದೇ ಮಷಿನ್ – ತಂತ್ರಜ್ಞಾನ ಕಂಡುಹಿಡಿ ಯಲು ಮನುಷ್ಯನಿಗೆ ಸಾಧ್ಯವಾಗಿಲ್ಲವಲ್ಲ.

ಅದಕ್ಕೆನಿದ್ದರೂ ಜೇನುಹುಳಗಳೇ ಬೇಕು. ಅಲ್ಲಿ ಪರಾಗ ಸ್ಪರ್ಶದ ಕೆಲಸ ಮುಗಿಸಿ ಕೋಟಿ ಕೋಟಿ ಪ್ರಮಾಣದ ಜೇನುಹುಳಗಳು
ನಂತರ ಅನ್ಯ ರಾಜ್ಯಗಳಿಗೆ, ಮತ್ತೊಂದು ತೋಟಕ್ಕೆ ಕೆಲಸಕ್ಕೆ ಒಯ್ಯಲಾಗುತ್ತದೆ. ಈ ರೀತಿ ಜೇನುಹುಳಗಳನ್ನು ಒಯ್ಯುವ ಕೆಲಸ ಅಂದಾಜಿಸುವಷ್ಟು ಸುಲಭದ ಕೆಲಸವಲ್ಲ. ಜೇನು ಹುಳಗಳನ್ನು ಉಳಿದ ಸಾಮಾನುಗಳಂತೆ ಬೇಕಾ ಬಿಟ್ಟಿ, ಫ್ರಿಜ್ಜಿನಲ್ಲಿ ಒಯ್ಯಲು ಸಾಧ್ಯವಿಲ್ಲವಲ್ಲ. ಅವು ಜೀವಿಗಳು, ಅದರಲ್ಲಿಯೂ ಅತಿಸೂಕ್ಷ್ಮ. ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಬಿಸಿಲಿನ ತಾಪ ಹೆಚ್ಚಿದಲ್ಲಿ ಅವು ಐದು ನಿಮಿಷದ ಒಳಗೆ ಸತ್ತು ಹೋಗುತ್ತವೆ.

ಇವುಗಳನ್ನು ಒಯ್ಯುವ ಟ್ರಕ್ಕುಗಳು ಒಂದು ನಿಮಿಷವೂ ಎಲ್ಲಿಯೂ ನಿಲ್ಲದೇ ಸಾಗುತ್ತಿರಬೇಕು. ಹಾಗಾಗಿ ಟ್ರಕ್ಕುಗಳಲ್ಲಿ ಎರಡು ಡ್ರೈವರ್‌ಗಳಿರುತ್ತಾರೆ – ಸರತಿಯಲ್ಲಿ ಡ್ರೈವ್ ಮಾಡಬೇಕು. ಅದಲ್ಲದೇ ಪ್ರಯಾಣ ಹೆಚ್ಚೆಂದರೆ ಒಂದೂವರೆ ದಿನದಲ್ಲಿ ಮುಗಿಯಲೇ ಬೇಕು. ಎರಡು ದಿನಕ್ಕಿಂತ ಹೆಚ್ಚಿನ ಸಮಯ ಜೇನುಹುಳವನ್ನು ಬಂಧಿಸಿಟ್ಟರೆ ಅವು ಬದುಕುವುದಿಲ್ಲ. ಈ ಟ್ರಕ್ ಡ್ರೈವರ್‌ಗಳು ಊಟಕ್ಕೆ, ವಿಶ್ರಾಂತಿಗೆ ಮಾರ್ಗ ಮಧ್ಯೆ ಐದುನಿಮಿಷವೂ ನಿಲ್ಲುವಂತಿಲ್ಲ. ಆ ಕಾರಣದಿಂದ ಮೂತ್ರಕ್ಕೆ ಕೂಡ ಟ್ರಕ್ಕಿನೊಳಗೆ ವ್ಯವಸ್ಥೆಮಾಡಿಕೊಳ್ಳಲಾಗುತ್ತದೆ. ಗಾಳಿ ಗೂಡುಗಳ ಮೂಲಕ ಹಾಯುತ್ತಿದ್ದರಷ್ಟೇ ಒಳಗಿನ ಉಷ್ಣಾಂಶ ಹದದಲ್ಲಿ – ತಂಪಾಗಿರಲು ಸಾಧ್ಯ. ಹೀಗಿರುವಾಗ ಈ ಟೋಲ್ ಪ್ಲಾಜಾ ನಿಲ್ದಾಣದಲ್ಲಿ ನಿಲ್ಲಿಸಿzದರೂ ಏಕೆ? ಇಲ್ಲಿ ನಡೆಯುತ್ತಿರುವುದಾದರೂ ಏನು? ಅದು ಅಸಲಿಗೆ ಟೋಲ್ ಪ್ಲಾಜಾ ಆಗಿರಲಿಲ್ಲ.

ಟೋಲ್ ಪ್ಲಾಜಾದಂತೆ ಕಾಣಿಸುವ ಕ್ಯಾಲಿಫೋರ್ನಿಯಾದ ಕೃಷಿ ಇಲಾಖೆಯ ಚೆಕ್ ಪಾಯಿಂಟ್ ಎಂದು ನಂತರ ತಿಳಿಯಿತು. ಇಲ್ಲಿ
ಕ್ಯಾಲಿಫೋರ್ನಿಯಾ ರಾಜ್ಯದೊಳಗೆ ಬರುವ ಎಲ್ಲ ಜೇನು ತುಂಬಿದ ಟ್ರಕ್ಕುಗಳನ್ನು ಪರೀಕ್ಷಿಸಲಾಗುತ್ತಿತ್ತು. ಈ ಜೇನು ಹುಳುಗಳ ಜೊತೆ ಇನ್ಯಾವುದೋ ಅನ್ಯ ಕೀಟ ರಾಜ್ಯದೊಳಬಂದರೆ ಅವು ಅಲ್ಲಿನ ಬಾದಾಮಿ ಗಿಡಗಳಿಗೆ, ಉಳಿದ ಬೆಳೆಗಳಿಗೆ ಮಾರಕವಾಗ ಬಹುದು.

ಹಾಗಾಗಿ ಅಲ್ಲಿ ಜೇನು ತುಂಬಿದ ಟ್ರಕ್ಕುಗಳನ್ನು ನಿಲ್ಲಿಸಿ ಪರೀಕ್ಷಿಸಿ ಮುಂದೆ ಬಿಡುವ ವ್ಯವಸ್ಥೆಯಿತ್ತು. ಯಾವುದೇ ಬೇರೆ ಹುಳು, ಜೇನು ಹುಳದ ಜೊತೆ ಕಾಣಿಸಿಕೊಂಡರೆ ಅದರ ಫೋಟೋ ತೆಗೆದು ಈ ಚೆಕ್ ಪಾಯಿಂಟ್‌ನ ತಜ್ಞರು ಮುಖ್ಯ ಕೃಷಿ ಕೇಂದ್ರಾ ಲಯಕ್ಕೆ ಇಮೇಲ್ ಮೂಲಕ ಕಳಿಸಿಕೊಡುತ್ತಿದ್ದರು. ಅಲ್ಲಿ ಸುಮಾರು ಎರಡು ಮೂರು ನಿಮಿಷದ ಒಳಗೆ ಅದು ಯಾವ ಹುಳು, ಈ ಟ್ರಕ್ಕನ್ನು ಈ ಅನ್ಯ ಹುಳದ ಜೊತೆ ರಾಜ್ಯದೊಳಗೆ ಬಿಟ್ಟುಕೊಳ್ಳಬಹುದೇ ಎಂಬಿತ್ಯಾದಿ ನಿರ್ಣಯವಾಗಬೇಕು. ಈ ಎಲ್ಲ ಪ್ರಕ್ರಿಯೆ ನಿರ್ದಿಷ್ಟ ಸಮಯದೊಳಗೆ ನಡೆಯದಿದ್ದರೆ ಅಲ್ಲಿನ ಜೇನು ಹುಳಗಳೆಲ್ಲ ಸತ್ತುಹೋಗುತ್ತವೆ.

ನಿಲ್ಲಿಸಿದ ಒಂದೈದು ನಿಮಿಷದಲ್ಲಿ ಉಷ್ಣಾಂಶ ಕಡಿಮೆಮಾಡಿ ಗೂಡುಗಳನ್ನು ತಂಪಾಗಿರಿಸಲು ಅಲ್ಲಿ ನೀರಿನ ಸ್ಪ್ರೇ ಮಾಡುವ ವ್ಯವಸ್ಥೆಯಿದ್ದರೂ ಅದು ಕೇವಲ ತಾತ್ಕಾಲಿಕ ಪರಿಹಾರ ವಷ್ಟೇ. ಒಂದು ವೇಳೆ ಯಾವುದೇ ಟ್ರಕ್‌ನಲ್ಲಿ ಬೇಡದ, ಹಾನಿಕಾರಕ
ಬೇರೆ ಹುಳುಗಳು ಪ್ರಮಾಣ ಮೀರಿ ಕಾಣಿಸಿಕೊಂಡರೆ ಆ ಇಡೀ ಟ್ರಕ್ಕಿಗೆ ಕ್ಯಾಲಿಫೋರ್ನಿಯಾ ರಾಜ್ಯದೊಳಗೆ ಪ್ರವೇಶವಿಲ್ಲ. ಹೀಗೆ
ರಿಜೆಕ್ಟ್ ಆಗುವ ಟ್ರಕ್‌ನಲ್ಲಿರುವ ಹುಳುಗಳನ್ನು ಮಾರ್ಗ ಮಧ್ಯದ ಯಾವುದೇ ಬೇರೆ ರಾಜ್ಯದಲ್ಲಿ ಬಿಡುವಂತೆ ಕೂಡ ಇಲ್ಲ. ಹಾಗೆ ಬಿಟ್ಟರೆ ಅಲ್ಲಿನ ಕೃಷಿಗೆ ಅಡ್ಡ ಪರಿಣಾಮವಾಗುತ್ತದೆ.

ಮರಳಿ ಲೂಸಿಯಾನಕ್ಕೆ ಪ್ರಯಾಣಕ್ಕೆ ಮತ್ತೆ ಎರಡು ದಿನ ಬೇಕು. ಹಾಗಾಗಿ ಒಂದೊಮ್ಮೆ ಜೇನು ಹುಳದ ಒಂದು ಟ್ರಕ್ ತಿರಸ್ಕರಿಸ ಲ್ಪಟ್ಟಿತು ಎಂದರೆ ಸುಮಾರು ಎರಡೂವರೆ ಕೋಟಿ ಜೀವಗಳು ಸತ್ತವೆಂದೇ ಅರ್ಥ. ಜೇನುಹುಳಗಳು ಬದುಕುವುದೇ ಸುಮಾರು ನೂರಿಪ್ಪತ್ತರಿಂದ ನೂರೈವತ್ತು ದಿನ. ಹಾಗಾಗಿ ಲೂಸಿಯಾನದಲ್ಲಿ ಹುಟ್ಟಿದ ಜೇನುಹುಳ ಗಳು ಮತ್ತೆ ಲೂಸಿಯಾನಾ ನೋಡು ವುದೇ ಇಲ್ಲ. ಅತ್ತ ಕ್ಯಾಲಿಫೋರ್ನಿಯಾದಲ್ಲಿರುವಾಗ ಹುಟ್ಟಿದ ಹುಳಗಳು ಮತ್ತೆ ಮರಳಿ ಕ್ಯಾಲಿಫೋರ್ನಿಯಾ ನೋಡುವುದೇ ಇಲ್ಲ. ಈ ಹುಳುಗಳು ಕ್ಯಾಲಿಫೋರ್ನಿಯಾದ ಬಾದಾಮಿ ತೋಟಗಳಲ್ಲಿ ಪರಾಗಸ್ಪರ್ಶ ಮಾಡಿದ ನಂತರ ಅವುಗಳನ್ನು ಪೂರ್ವದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಸೇಬು ತೋಟಗಳಿಗೆ ಒಯ್ಯಲಾಗುತ್ತದೆ.

ಅಲ್ಲಿ ಕೆಲಸ ಮುಗಿಸಿದ ನಂತರ ಮೈನ್ ರಾಜ್ಯದ ಬ್ಲೂಬೆರ್ರಿ ತೋಟಕ್ಕೆ, ನಂತರ ಮೆಸ್ಸೇನ್ಚುಸೆಟ್ಸ್ ರಾಜ್ಯದ ಕ್ರ್ಯಾನ್ ಬೆರ್ರಿ ತೋಟಕ್ಕೆ ನಂತರ  ಇಡೀ ಜೇನಿನ ಕೋಟ್ಯಂತರ ಕುಟುಂಬಗಳು ಮತ್ತೆ ಲೂಸಿಯಾನಕ್ಕೆ ಮರಳುತ್ತವೆ. ಮಾರ್ಗಮಧ್ಯದಲ್ಲಿ ಸಾವು
ನೋವಿಗಂತೂ ಲೆಕ್ಕವಿಟ್ಟವರು ಯಾರು. ಅದೆಷ್ಟೇ ಮುತುವರ್ಜಿವಹಿಸಿದರೂ, ಅರ್ಧಕ್ಕೂ ಹೆಚ್ಚು ಜೇನುಹುಳುಗಳು ಕೆಲವೊಮ್ಮೆ ಈ ಪ್ರಯಾಣದಲ್ಲಿ ಸಾಯುತ್ತವೆ. ಆ ಕಾರಣದಿಂದ ಅವಶ್ಯವಿರುವ ಜೇನುಹುಳಗಳ ದುಪ್ಪಟ್ಟು ಲೂಸಿಯಾನದಿಂದ ಕಳಿಸಿಕೊಡ ಲಾಗುತ್ತದೆ. ಹೀಗೆ ಕಳುಹಿಸಿಸಿಕೊಟ್ಟ ಗೂಡುಗಳು ಮರಳುವಾಗ ಹೊಸ ತಲೆಮಾರಿನ ಹುಳಗಳು ಅಲ್ಲಿರುತ್ತವೆ.

ಹೀಗೆ ಅರ್ಧ ದೇಶವನ್ನು ದಿನ ಎರಡರೊಳಗೆ ಪ್ರಯಾಣ ಮಾಡುವ ಈ ಪುಟ್ಟ ಜೀವಿಗಳು ತೀರಾ ಮಾನಸಿಕ ಒತ್ತಡಕ್ಕೆ ಒಳಗಾಗು ತ್ತವೆ. ಸದಾ ಚಟುವಟಿಕೆಯಿಂದ ಸ್ವಚ್ಛಂದವಾಗಿ ಹಾರುತ್ತಿರುವ ಜೇನು ಹುಳವನ್ನು ಎರಡು ದಿನ ಪ್ರಯಾಣದ ಸಮಯದಲ್ಲಿ ಬಂಧಿಸಿಟ್ಟಾಗ ಅವುಗಳ ಮಾನಸಿಕ ಉದ್ವೇಗ ಹೆಚ್ಚಿರುತ್ತವೆ. ಒಮ್ಮೆ ತಲುಪಬೇಕಾದ ತೋಟಕ್ಕೆ ತಂದು ಮುಚ್ಚಿದ ಪರದೆ ತೆರೆದಾಕ್ಷಣ ಅವು ಗುಂಪುಗುಂಪಾಗಿ ಕಾರ್ಮೋಡ ಸದೃಶವಾಗಿ ಮೇಲಕ್ಕೆ ಹಾರುತ್ತವೆ, ಕಚ್ಚಾಡಿಕೊಳ್ಳುತ್ತವೆ – ಭಾರೀ ಪ್ರಮಾಣದಲ್ಲಿ ಸಾಯು ತ್ತವೆ. ಜೇನು ಹುಳುಗಳು ತೀರಾ ಸೂಕ್ಷ್ಮ ಗ್ರಾಹಿಗಳು. ಇಂದಿನ ಆಧುನಿಕ ಕೃಷಿಯಲ್ಲಿನ ಲೆಕ್ಕ ಮೀರಿದ ಕೀಟನಾಶಕಗಳು ಅವುಗಳು ಪರಾಗ ಸ್ಪರ್ಶದ ಕೆಲಸ ಮಾಡುವಾಗ ಮೈಗೆ ಅಂಟಿಕೊಳ್ಳುತ್ತವೆ. ಹೀಗೆ ಕೀಟನಾಶಕ ಒಂದು ಪ್ರಮಾಣಕ್ಕಿಂತ ಹೆಚ್ಚಿಗೆ ಬಳಿದುಕೊಂಡು ಗೂಡಿಗೆ ಮರಳುವ ಹುಳುಗಳಿಗೆ ದ್ವಾರಪಾಲಕ ಹುಳುಗಳು ಒಳಗೆ ಪ್ರವೇಶಿಸಲು ಬಿಡುವುದಿಲ್ಲ.

ಇದರಿಂದ ಅವು ಗೂಡಿನ ಹೊರಗೇ ಉಳಿದು ಸಾಯುತ್ತವೆ. ಅದಲ್ಲದೇ ನಿಮಗೆ ಒಂದೇ ತರಕಾರಿಯನ್ನು ಪ್ರತೀ ದಿನ – ಜೀವಮಾನ ಪೂರ್ತಿ ತಿನ್ನಲು ಕೊಟ್ಟರೆ ಏನಾಗಬಹುದು? ಅದೇ ಸ್ಥಿತಿ ಈ ಜೇನುಹುಳzಗಿರುತ್ತದೆ. ಸುಮಾರು ಎರಡು ತಿಂಗಳುಗಳ ಕಾಲ ಸಾವಿರಾರು ಎಕರೆ ತೋಟದ ಒಂದೇ ಬೆಳೆಯ ಮಧ್ಯೆ ಈ ಜೇನುಗಳನ್ನು ಬಿಡುವುದರಿಂದ ಅವುಗಳಿಗೆ ವೈವಿಧ್ಯಮಯ ಸಮ ತೋಲನದ ಆಹಾರದ ಕೊರತೆ ಕೂಡ ಉಂಟಾಗುತ್ತದೆ. ಸುಮಾರು ನಾಲ್ಕುನೂರು ಬೆಳೆಗಳು ಜೇನು ಹುಳವಿಲ್ಲದೇ ಮನುಷ್ಯನಿಗೆ ಬೆಳೆಯಲು ಸಾಧ್ಯವೇ ಇಲ್ಲ. ಒಂದು ಲೆಕ್ಕಾಚಾರದ ಪ್ರಕಾರ ಮನುಷ್ಯ ತಿನ್ನುವ ಮೂರು ತುತ್ತಿನಲ್ಲಿ ಒಂದು ತುತ್ತು ಆಹಾರದ ಉತ್ಪಾದನೆಯಲ್ಲಿ ಜೇನು ಹುಳುಗಳು ಭಾಗಿಯಾಗಿರುತ್ತದೆ.

ಜೇನು ಈ ಭೂಮಿಯಿಂದ ಮಾಯವಾದಲ್ಲಿ ಮನುಷ್ಯ ಕೇವಲ ಮೂರು ವರ್ಷದಲ್ಲಿ ಭೂಮಿಯಲ್ಲಿ ನಾಮಾವಶೇಷವಿಲ್ಲದಂತೆ ನಾಶವಾಗುತ್ತಾನೆ ಎನ್ನುತ್ತದೆ ವೈಜ್ಞಾನಿಕ ಲೆಕ್ಕಾಚಾರ. ಕೆಲವು ಬೆಳೆಗಳಿಗೆ ಜೇನುಹುಳಗಳ ಅವಶ್ಯಕತೆ ಅಷ್ಟಿರುವುದಿಲ್ಲ. ಬೀಸುವ ಗಾಳಿಯಿಂದಲೇ ಕೆಲವು ಬೆಳೆಗಳ ಪರಾಗಸ್ಪರ್ಶವಾಗುತ್ತದೆ. ಹಾಗಾಗಿ ಅಂತಹ ಬೆಳೆಗಳಲ್ಲಿ ಯಥೇಚ್ಛ, ಲೆಕ್ಕ ಮೀರಿ ಕೀಟನಾಶಕ
ಗಳನ್ನು ಬಳಸಲಾಗುತ್ತದೆ. ಅವು ಸ್ಥಳೀಯ ಜೇನುಹುಳಗಳಿಗೆ – ಕೀಟಗಳಿಗೆ ಮಾರಣಾಂತಿಕವಾಗುತ್ತದೆ.

ಮನುಷ್ಯನ ಇಡೀ ಆಹಾರ ಸರಪಳಿಯೇ ಜೇನು ಹುಳುಗಳ ಮೇಲೆ ನಿಂತಿದೆ ಎಂಬ ಸತ್ಯ ತಿಳಿದಿದ್ದರೂ ಅದ್ಯಾವ ಪರಿವೆಯೇ ಇಲ್ಲದಂತೆ ನಮ್ಮ ಇಂದಿನ ಕೃಷಿ ಸಾಗಿದೆ ಎಂಬುದು ದುರಂತ. ಕೀಟನಾಶಕ ಪ್ರಮಾಣವನ್ನು ಅಂದಾಜಿಸಿ ನಂತರ ಈ ಜೇನುಹುಳುಗಳನ್ನು ತೋಟಕ್ಕೆ ಬಿಡಬೇಕೆಂದು ಒಂದು ಕಾನೂನು ಇದೆ, ಆದರೆ ದುರಂತವೆಂದರೆ ಈ ಪರೀಕ್ಷೆಯನ್ನು ನಡೆಸುವವರು ಕೀಟನಾಶಕ ಕಂಪನಿಯವರೇ.

ಅಮೆರಿಕಾದಲ್ಲಿ ಕೀಟನಾಶಕ ಮತ್ತು ಇತರ ಕಾರಣಗಳಿಂದಾಗಿ ೨೦೦೫ರಲ್ಲಿ ಅರ್ಧಕ್ಕರ್ಧ ಹುಳುಗಳು ಸತ್ತಿದ್ದವು. ಆ ಕಾರಣ ದಿಂದಾಗಿ ಭೂಮಿಯ ಇನ್ನೊಂದು ಅರ್ಧದಲ್ಲಿರುವ ಆಸ್ಟ್ರೇಲಿಯಾದಿಂದ ಹುಳುಗಳನ್ನು ವಿಮಾನದಲ್ಲಿ ತರಿಸಿಕೊಳ್ಳಲಾಯಿತು. ಹೀಗೆ ಭೂಮಿಯ ಒಂದು ಭಾಗದಿಂದ, ಭೂಮಧ್ಯ ರೇಖೆ ದಾಟಿ ಪೂರ್ವಾರ್ಧಕ್ಕೆ ಬಂದ ಜೇನು ಹುಳಗಳು ವಾತಾವರಣ ಮತ್ತು
ಮತ್ತು ಋತುಗಳ ಬದಲಾವಣೆಯಿಂದ ಬದುಕಲೇ ಇಲ್ಲ. ಯುರೋಪ್‌ನ ಜೇನುಗಳು ಹೆಚ್ಚು ಶಕ್ತಿಶಾಲಿ ಮತ್ತು ಚಟುವಟಿಕೆ
ಯವು ಎಂಬ ಕಾರಣದಿಂದ ಅಲ್ಲಿಂದ ಕೂಡ ಜೇನುಹುಳುಗಳನ್ನು ಆಮದು ಮಾಡಿಕೊಳ್ಳಲಾಯಿತು – ಆದರೆ ಅವು ಕೂಡ
ಬದುಕುಳಿಯಲಿಲ್ಲ.

ಮನುಷ್ಯನ ದಾಹ, ಅವಶ್ಯಕತೆ ಅದೆಷ್ಟೇ ಇದ್ದರೂ ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಪ್ರಕೃತಿ ಅದನ್ನು ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲವಲ್ಲ. ಆದರೆ ಮನುಷ್ಯ ಕೂಡ ಅಷ್ಟಕ್ಕೇ ಬಿಡುವ ಜಾಯಮಾನದ ಪ್ರಾಣಿಯಲ್ಲ. ಯುರೋಪ್ ತಳಿಯನ್ನು
ಕ್ಷಮತೆಯ ಏಕೈಕ ಕಾರಣದಿಂದ ಸ್ಥಳೀಯವಾಗಿ ಅಲ್ಲಿನ ಜೇನುಹುಳುಗಳನ್ನು ಅಮೆರಿಕಾದಲ್ಲಿ ಅಭಿವೃದ್ಧಿ ಪಡಿಸಲಾಯಿತು.
ಇಂದು ಅಮೆರಿಕಾದಲ್ಲಿರುವ ಕೂಲಿ ಜೇನಿನಲ್ಲಿ ಬಹುತೇಕ ತಳಿಗಳು ಯುರೋಪ್ ಮೂಲದವು. ಅವುಗಳ ಜೀನ್ಸ್‌ಗಳು ಇಂದಿಗೂ
ಅಮೆರಿಕಾದ ಬೆಳೆಗಳಿಗೆ – ಹೂವುಗಳಿಗೆ ಒಗ್ಗಿಕೊಳ್ಳದ್ದರಿಂದ ಹತ್ತಾರು ರೋಗಗಳು ಅವನ್ನು ಬಾಧಿಸುತ್ತವೆ. ಅಲ್ಲದೇ ಹೀಗೆ ಅನ್ಯ
ಹುಳುಗಳ ಪ್ರಮಾಣ ಹೆಚ್ಚಿರುವುದರಿಂದ ಇಲ್ಲಿನ ಸ್ಥಳೀಯ ಜೇನಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಇದೆಲ್ಲ ಮನುಷ್ಯನ ವ್ಯವಹಾರ ತೀರಾ ಕೃತ್ರಿಮ ಪದ್ಧತಿಯೆನಿಸಿದರೂ ಇಂದು ಇದೊಂದು ಬಹು ಲಾಭ ತರುವ ಉದ್ಯಮ.
ಹಾಗಾಗಿ ಅದೆಲ್ಲ ಪ್ರಕೃತಿ ಎಸಗುವ ಸವಾಲುಗಳ ನಡುವೆ ಕೂಡ ಇಂದು ಈ ಜೇನುಹುಳಗಳಿಂದ ಕೆಲಸ ತೆಗೆಯುವ ಮಾನುಷ್ಯನ
ಅಮಾನವೀಯ ಕೃತ್ಯ ಮುಂದುವರಿದು ಸಾಗಿದೆ. ಇದು ಮನುಷ್ಯನ ವಿಕೃತಿಯ ನಡೆಗೆ ಇನ್ನೊಂದು ಉದಾಹರಣೆಯಷ್ಟೇ.
ಮನುಷ್ಯನ ಸ್ವಾರ್ಥ ಭೂಮಿಯ ಅದೆಷ್ಟು ಅವಾಂತರಗಳಿಗೆ ಕಾರಣವಾಗಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಪ್ರದೂಷಣೆ
ಮೊದಲಾದವುಗಳ ಜೊತೆ ಪ್ರಕೃತಿಯ ಜೀವಿಗಳ ಜೊತೆಯೂ ಮನುಷ್ಯ ಅನಾಚಾರಕ್ಕೆ ಇಳಿದಿರುವ ಹಲವು ಉದಾಹರಣೆಗಳಲ್ಲಿ
ಇದು ಕೂಡ ಒಂದು. ಆಕಳು, ಮೇಕೆ ಹೀಗೆ ಹತ್ತಾರು ಪ್ರಾಣಿಗಳನ್ನು – ಜೀವಿಗಳನ್ನು ತನ್ನ ಸ್ವಾರ್ಥಕ್ಕೆ ಪಳಗಿಸುವುದು, ಅದೊಂದು ಇಂಡಸ್ಟ್ರಿ ಎಂದು – ಆಧುನಿಕತೆಯೆಂದು ಒಪ್ಪಿಕೊಳ್ಳುವ ನಾವು ಇದನ್ನೂ ಆಧುನಿಕ ಕೃಷಿ ಪದ್ಧತಿಯ ಭಾಗ ಎಂದು ಒಪ್ಪಿ ಕೊಳ್ಳಲೇಬೇಕಾದ ಪರಿಸ್ಥಿತಿ.

ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೂಡ ಕೃಷಿ ಕ್ರಾಂತಿಯಾಗಬೇಕೆಂದರೆ ಈ ರೀತಿಯ ವಿಕೃತಿ ಗಳನ್ನು ಮುಂದೆ ನೆಚ್ಚಿಕೊಳ್ಳಬೇಕಾಗ ಬಹುದೇನೋ. ಆ ಹಂತವನ್ನು ತಲುಪುವ ಮೊದಲು ಒಂದು ಸುಸ್ಥಿರ ಸಮತೋಲನದ ಕೃಷಿ ಪದ್ಧತಿಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ವಿಚಾರಮಾಡುವ – ಹೆಜ್ಜೆಯಿಡುವ ಅವಶ್ಯಕತೆಯಿದೆ. ಇಂದು ಜೇನು ಹುಳದ ಮಹತ್ವ ನಮ್ಮಲ್ಲಿ ಬಹುತೇಕ ಕೃಷಿಕರಿಗೆ ಇದ್ದಂತಿಲ್ಲ. ಜೇನು ಹುಳವೆಂದರೆ ಕೇವಲ ಜೇನಿಗೋಸ್ಕರ ಎನ್ನುವ ಭಾವನೆ ನಮ್ಮಲ್ಲಿ ಬಹುತೇಕರಲ್ಲಿದೆ.

ನಾವು ಇಂದು ಎರೆಹುಳುವಿನಂತೆ ಜೇನು ಹುಳವೂ ಕೃಷಿಕ ಸ್ನೇಹಿ ಜೀವಿ ಎನ್ನುವ ಸೂಕ್ಷ್ಮತೆ ಅರಿಯುವ ಅವಶ್ಯಕತೆಯಿದೆ. ಜೇನು ಸಹಜವಾಗಿ ಸಾಕಿದಲ್ಲಿ ಉತ್ತಮ ಇಳುವರಿ ಸಾಧ್ಯ ಎನ್ನುವ ಸೂಕ್ಷ್ಮ ವಿಚಾರವನ್ನು ನಮ್ಮ ಕೃಷಿಕರಿಗೆ ತಲುಪಿಸುವ ಮತ್ತು ಆ
ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಹೊಣೆ ಕೃಷಿ ಇಲಾಖೆಗಿದೆ. ನಮ್ಮ ಕರಾವಳಿಯ ಹಲವೆಡೆ – ಉತ್ತರ ಕನ್ನಡದ ಕುಮಟಾ –
ಹೊನ್ನಾವರದಲ್ಲಿ ಜೇನು ಸೊಸೈಟಿಗಳು ಈ ಜೇನಿನೆಡೆಗಿನ ಜಾಗೃತಿ ಮೂಡಿಸುವ ಕೆಲಸವನ್ನು ಅಲ್ಪ ಪ್ರಮಾಣದಲ್ಲಿ ಮಾಡುತ್ತಿವೆ
ಯೇನೋ ನಿಜ.

ಆದರೆ ಸರಕಾರದ ಅಸಡ್ಡೆಯಿಂದ ಈ ಸೊಸೈಟಿಗಳು ತಮ್ಮ ಕೆಲಸವನ್ನು ಕೇವಲ ಜೇನು ಸಂಗ್ರಹ ಮತ್ತು ಮಾರಾಟಕ್ಕಷ್ಟೇ ಸೀಮಿತ ಗೊಳಿಸಿ ಕಾಲವೇ ಆಗಿದೆ. ಕೃಷಿ ಇಲಾಖೆಯಂತೂ ಜೇನಿನೆಡೆ ದಿವ್ಯ ನಿರ್ಲಕ್ಷ್ಯವಹಿಸಿ ಎಲ್ಲ ಮರೆತಂತೆ ಅನಿಸುತ್ತದೆ. ನಮ್ಮ ಕೃಷಿಕ ರಂತೂ ಜೇನು ಸಾಕಾಣಿಕೆಯನ್ನು ಸಂಪೂರ್ಣವಾಗಿ ಮರೆತಂತಿದೆ. ಈ ನಿರ್ಲಕ್ಷ್ಯ ಮುಂದೊಂದು ದಿನ ನಮ್ಮನ್ನೂ ಅಮೆರಿ ಕಾದ ಸ್ಥಿತಿಗೆ ತಂದು ನಿಲ್ಲಿಸಬಹುದು. ಹಾಗಾದಲ್ಲಿ ಕೂಲಿ ಜೇನು ಸಾಕಾಣಿಕೆ ಒಂದು ಒಳ್ಳೆಯ ಬ್ಯುಸಿನೆಸ್ ಆಗಿ ಹತ್ತಾರು ಕುಟುಂಬದ ಹೊಟ್ಟೆ ತುಂಬಬಹುದು ಬಿಡಿ. ಅಲ್ಲವೇ?

Leave a Reply

Your email address will not be published. Required fields are marked *