Saturday, 23rd November 2024

CM Siddaramaiah: ಕುರಿ ಕಾಯುವವರ ಮಗ 2ನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಸಿಎಂ ಪ್ರಶ್ನೆ

CM Siddaramaiah

ಮಾನ್ವಿ: ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸ್ತೀರಾ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಜನರನ್ನು ಪ್ರಶ್ನಿಸಿದರು. ಮಾನ್ವಿಯಲ್ಲಿ 45842.17 ಲಕ್ಷ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು ಎಂದು ಭಾವನಾತ್ಮಕವಾಗಿ ಜನ ಸಾಗರವನ್ನು ಪ್ರಶ್ನಿಸಿದರು. ಬಿಜೆಪಿ-ಜೆಡಿಎಸ್‌ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ದರಾಗಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕರ್ನಾಟಕ ಕನ್ನಡಮಯವಾಗಬೇಕು: ಸಿಎಂ ಸಿದ್ದರಾಮಯ್ಯ

ಕೊಟ್ಟ ಕುದುರೆ ಏರಲಾರದ ಕುಮಾರಸ್ವಾಮಿ ವೀರನೂ ಅಲ್ಲ, ಶೂರನೂ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶವೂ ಇತ್ತು. ಅಧಿಕಾರ, ಅವಕಾಶ ಇದ್ದಾಗ ಜನಪರ ಕೆಲಸ ಮಾಡದ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಈಗ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ

ರಾಜ್ಯದ ಬೊಕ್ಕಸ ಖಾಲಿ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೂ ಜನರ ಕೆಲಸ ಮಾಡಲಿಲ್ಲ. ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏನಿದ್ದರೂ ಆಪರೇಷನ್ ಕಮಲದ ಮೂಲಕ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಬೈಪಾಸ್ ಹಾದಿಯಲ್ಲೇ ಅಧಿಕಾರ ಹಿಡಿಯಲು ಕಾದು ಕುಳಿತಿದ್ದಾರೆ ಎಂದು ಆರೋಪಿಸಿದರು.

ನಾನು ಜಗ್ಗೋನೂ ಅಲ್ಲ. ಬಗ್ಗೋನೂ ಅಲ್ಲ; ಹೋರಾಟ ಮುಂದುವರಿಸ್ತೀನಿ

ಕಾರಣವೇ ಇಲ್ಲದೆ ರಾಜೀನಾಮೆ ಕೊಡಿ, ರಾಜಿನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ. ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗೋನೂ ಅಲ್ಲ. ಬಗ್ಗೋನೂ ಅಲ್ಲ. ಹೋರಾಟ ಮುಂದುವರಿಸ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ನಾಳೆ ʼಅಡ್ವೊಕೇಟ್ ಡೈರಿʼ ಕೃತಿ ಲೋಕಾರ್ಪಣೆ

ನನ್ನನ್ನು ಕೆಳಗೆ ಇಳಿಸುವ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಸೋಲಿಸ್ತೀನಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಬಿಜೆಪಿಗೆ ನೀವೂ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ ಅವರು ಬೃಹತ್ ಸ್ವಾಭಿಮಾನಿ ಜನ ಸಮಾವೇಶ ಸಂಘಟಿಸಿದ ಬೋಸರಾಜು ಮತ್ತು ರವಿ ಬೋಸರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು.