ಪಶ್ಚಿಮ ಆಫ್ರಿಕಾದ (West African country) ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆ (Burkina Faso Massacre) ನಡೆದಿದೆ. ಆಫ್ರಿಕಾ ಖಂಡದ ರಾಷ್ಟ್ರವಾದ ಬುರ್ಕಿನಾ ಫಾಸೊದ ಬರ್ಸಲೋಘೋ ಪಟ್ಟಣದ ಮೇಲೆ ನಡೆದ ಅಲ್ ಖೈದಾದೊಂದಿಗೆ ( Al-Qaeda) ನಂಟು ಹೊಂದಿರುವ ಭಯೋತ್ಪಾದಕರು (terrorists ) ದಾಳಿ ನಡೆಸಿ ಕೆಲವೇ ಗಂಟೆಗಳಲ್ಲಿ ಸುಮಾರು 600 ಜನರನ್ನು ಕೊಂದಿದ್ದಾರೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ.
ಉಗ್ರರಿಂದ ತಪ್ಪಿಸಿಕೊಳ್ಳಲು ನಾಗರಿಕರು ಕಂದಕಗಳನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದ ಕುಪಿತಗೊಂಡ ಜೆಎನ್‌ಐಎಂ ಉಗ್ರ ಸಂಘಟನೆಯು ಈ ದಾಳಿ ನಡೆಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಬುರ್ಕಿನಾ ಫಾಸೊದ ಬರ್ಸಲೋಘೋ ಪಟ್ಟಣದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು.
ಅಲ್ ಖೈದಾ ಮತ್ತು ಐಸಿಸ್ ಬೆಂಬಲಿತ ಉಗ್ರಗಾಮಿ ಗುಂಪಿನೊಂದಿಗೆ ನಂಟು ಹೊಂದಿರುವ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್- ಮುಸ್ಲಿಮಿನ್ ನ (ಜೆಎನ್‌ಐಎಂ) ಸದಸ್ಯರು 2015ರಿಂದ ನೆರೆಯ ಮಾಲಿಯೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಜೆಎನ್‌ಐಎಂ ಸದಸ್ಯರು ಮಾಲಿ ಮೂಲದ ಅಲ್ ಖೈದಾದ ಅಂಗಸಂಸ್ಥೆಯಾಗಿದ್ದು, ಬುರ್ಕಿನಾ ಫಾಸೊದಲ್ಲಿ ಸಕ್ರಿಯರಾಗಿದ್ದಾರೆ. ಅವರು ಬೈಕ್‌ಗಳಲ್ಲಿ ಬಂದು ಬರ್ಸಲೋಘೋದ ಹೊರವಲಯದಲ್ಲಿದ್ದ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ.
ವಿಶ್ವಸಂಸ್ಥೆಯು ಸುಮಾರು 200 ಜನರ ಸಾವಿನ ಬಗ್ಗೆ ಅಂದಾಜಿಸಿದರೆ, ಭಯೋತ್ಪಾದಕ ಗುಂಪು ಸುಮಾರು 300 ಜನರನ್ನು ಕೊಂದಿದೆ ಎಂದು ಹೇಳಿದೆ. ಆದರೆ ಫ್ರೆಂಚ್ ಸರ್ಕಾರದ ಭದ್ರತಾ ಸಂಸ್ಥೆ ದಾಳಿಯಲ್ಲಿ ಸುಮಾರು 600 ಜನರನ್ನು ಕೊಳ್ಳಲಾಗಿದೆ ಎಂದು ತಿಳಿಸಿದೆ.
ಬುರ್ಕಿನಾ ಫಾಸೊದ ಬರ್ಸಲೋಘೋ ಪಟ್ಟಣಕ್ಕೆ ಬೈಕ್‌ಗಲ್ಲಿ ಬಂದ ಭಯೋತ್ಪಾದಕರು ಪಟ್ಟಣವನ್ನು ರಕ್ಷಿಸಲು ಕಂದಕಗಳನ್ನು ಅಗೆಯುತ್ತಿದ್ದ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಕೋರರು ಗುಂಡು ಹಾರಿಸುತ್ತಿದ್ದಂತೆ ಕೆಲವು ಗ್ರಾಮಸ್ಥರು ನೆಲದ ಮೇಲೆ ಮಲಗಿ ಸತ್ತಂತೆ ನಟಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್‌ನಲ್ಲಿನ ದಂಗೆಗಳಿಂದಾಗಿ ಇಲ್ಲಿಂದ ಫ್ರೆಂಚ್ ಮತ್ತು ಅಮೆರಿಕನ್ ಸೇನಾ ಪಡೆಗಳು ನಿರ್ಗಮಿಸಿವೆ. ಇದರಿಂದ ಬಂಡುಕೋರರ ಸಾಮರ್ಥ್ಯ ಹೆಚ್ಚಿಸಿದೆ.
ಬುರ್ಕಿನಾ ಫಾಸೊದಲ್ಲಿ ಏನಾಗುತ್ತಿದೆ?
ಬುರ್ಕಿನಾ ಫಾಸೊದಲ್ಲಿ ಜಿಹಾದಿ ದಂಗೆಯು 2015ರಲ್ಲಿ ಪ್ರಾರಂಭವಾಗಿತ್ತು. ಇದು ನೆರೆಯ ಮಾಲಿಗೂ ಹರಡಿದೆ. ಈ ಸಂಘರ್ಷದಿಂದ ಇದುವರೆಗೆ 20,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, 2 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ.
2022ರ ಜನವರಿ ಮತ್ತು ಸೆಪ್ಟೆಂಬರ್‌ನಲ್ಲಿ ಬುರ್ಕಿನಾ ಫಾಸೊದಲ್ಲಿ ಸರಣಿ ದಂಗೆಗಳು ನಡೆದವು.
ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ನಂಟು ಹೊಂದಿರುವ ಜಿಹಾದಿಸ್ಟ್ ಹೋರಾಟಗಾರರು 2015 ರಿಂದ ಬುರ್ಕಿನಾ ಫಾಸೊದಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಬುರ್ಕಿನಾ ಫಾಸೊ ಸರ್ಕಾರ ಇದನ್ನು ಹತ್ತಿಕ್ಕುವಲ್ಲಿ ವಿಫಲವಾಗಿದ್ದು, ಭಾರಿ ಟೀಕೆಗಳು ವ್ಯಕ್ತವಾಗಿವೆ.
ಬದುಕುಳಿದವರು ಏನು ಹೇಳುತ್ತಾರೆ?
ಆಗಸ್ಟ್ 24ರ ದಾಳಿಯಿಂದ ಬದುಕುಳಿದವರು ತಾವು ಅನುಭವಿಸಿದ ಆಘಾತ ಮತ್ತು ಭಯಾನಕತೆಯ ಬಗ್ಗೆ ಸುದ್ದಿಗಾರರಿಗೆ ವಿವರಿಸಿದ್ದು ಹೀಗೆ..
ನಾವು ಬದುಕುಳಿದವರು ಇನ್ನು ಮುಂದೆ ಸಾಮಾನ್ಯರಲ್ಲ. ಸಮಸ್ಯೆ ನಮ್ಮೆಲ್ಲರಿಗೂ ಮೀರಿದೆ. ಹತ್ಯಾಕಾಂಡವು ನನ್ನ ಮುಂದೆ ಪ್ರಾರಂಭವಾಯಿತು. ಮೊದಲ ಗುಂಡುಗಳು ನನ್ನ ಮುಂದೆಯೇ ಹಾರಿದವು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು, ದಾಳಿಯಲ್ಲಿ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡರು ಮತ್ತು ಸತ್ತವರನ್ನು ಸಮಾಧಿ ಮಾಡುವ ಕಷ್ಟವನ್ನು ವಿವರಿಸಿದರು.
ಭಯೋತ್ಪಾದಕರು ದಿನವಿಡೀ ಜನರನ್ನು ಕೊಂದರು. ಮೂರು ದಿನಗಳ ಕಾಲ ನಾವು ದೇಹಗಳನ್ನು ಸಂಗ್ರಹಿಸುತ್ತಿದ್ದೆವು. ಹೃದಯದಲ್ಲಿ ಭಯ ಆವರಿಸಿಕೊಂಡಿದೆ. ಅನೇಕ ದೇಹಗಳು ನೆಲದ ಮೇಲೆ ಬಿದ್ದಿದ್ದವು. ಅದನ್ನು ಹೂಳುವುದು ಕಷ್ಟಕರವಾಗಿತ್ತು ಎನ್ನುತ್ತಾರೆ ಮತ್ತೊಬ್ಬರು.
Israel Airstrike: ಮತ್ತೆ ಇಸ್ರೇಲ್ ಏರ್‌ಸ್ಟ್ರೈಕ್; ಹಮಾಸ್ ಟಾಪ್ ಲೀಡರ್ ಉಡೀಸ್
ನಾನು ತಪ್ಪಿಸಿಕೊಳ್ಳಲು ಕಂದಕದೊಳಗೆ ತೆವಳಲು ಪ್ರಾರಂಭಿಸಿದೆ. ಆದರೆ ದಾಳಿಕೋರರು ಕಂದಕಗಳ ಬಳಿ ಬರುತ್ತಿರುವುದು ನೋಡಿ ಪೊದೆಯ ಬಳಿ ಅವಿತುಕೊಂಡೆ. ನನ್ನ ಸುತ್ತಮುತ್ತ ಎಲ್ಲೆಂದರಲ್ಲಿ ರಕ್ತ ಹರಿಯುತ್ತಿತ್ತು. ಎಲ್ಲೆಲ್ಲೂ ಕಿರುಚಾಟ ಕೇಳುತ್ತಿತ್ತು. ಮಧ್ಯಾಹ್ನದ ವರೆಗೂ ಅಲ್ಲೇ ಅಡಗಿಕೊಂಡೆ ಎಂದು ದಾಳಿಯಲ್ಲಿ ಬದುಕುಳಿದ ಮತ್ತೊಬ್ಬರು ಹೇಳಿದ್ದಾರೆ.
150 ಸೈನಿಕರ ಸಾವು
ಹಲವಾರು ವಾರಗಳಿಂದ ಬರ್ಸಲೋಘೋದ ಮೇಲೆ ಬಂಡುಕೋರರು ದಾಳಿ ನಡೆಸುತ್ತಿದ್ದು, 15 ದಿನಗಳ ಹಿಂದೆ ತಾವೋರಿ ಗ್ರಾಮದಲ್ಲಿ ಮಿಲಿಟರಿ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸುಮಾರು 150 ಸೈನಿಕರು ಸಾವನ್ನಪ್ಪಿದ್ದರು.
ಭಯೋತ್ಪಾದಕರ ದಾಳಿಯ ಬಳಿಕ ನಾಗರಿಕರಿಂದ ಕಂದಕಗಳ ನಿರ್ಮಾಣವನ್ನು ಅನುಮೋದಿಸಿದ ಬುರ್ಕಿನಾ ಫಾಸೊದ ಜುಂಟಾ ನಾಯಕ ಕ್ಯಾಪ್ಟನ್ ಇಬ್ರಾಹಿಂ ಟ್ರೇರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.