ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್ (Jani Master) ಅವರಿಗೆ ಪ್ರಕಟಿಸಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರದ್ದುಪಡಿಸಲಾಗಿದೆ (National Film Award for Best Choreography). ನೃತ್ಯ ಸಂಯೋಜಕಿಯಾಗಿರುವ 21 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 8ರಂದು ನವದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದ್ದು, ಈ ವೇಳೆ ಜಾನಿ ಮಾಸ್ಟರ್ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಜನಪ್ರಿಯ ಕೊರಿಯೋಗ್ರಾಫರ್ ಆಗಿರುವ ಜಾನಿ ಮಾಸ್ಟರ್ ಅವರಿಗೆ 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿತ್ತು. ತಮಿಳಿನ ʼತಿರುಚಿತ್ರಾಂಬಲನ್ʼ ಸಿನಿಮಾದ ʼಮೇಘಂ ಕರುಕ್ಕಾತʼ ಹಾಡಿನ ನೃತ್ಯ ಸಂಯೋಜನೆಗಾಗಿ ಅವರಿಗೆ ಅತ್ಯುತ್ತಮ ನೃತ್ಯ ಸಂಯೋಜನಕ ಪ್ರಶಸ್ತಿ ಪ್ರಕಟಿಸಲಾಗಿತ್ತು. ಆದರೆ ಜಾನಿ ಮಾಸ್ಟರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಶಸ್ತಿ ಸಮಿತಿ ರದ್ದು ಪಡಿಸಲು ನಿರ್ಧರಿಸಿದೆ. ಇದು ಜಾನಿ ಮಾಸ್ಟರ್ ಅವರ ಮಧ್ಯಂತರ ಜಾಮೀನಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
Jani Master basically started abusing this girl when she was a minor according to the report.
— Chinmayi Sripaada (@Chinmayi) September 16, 2024
I truly wish this girl all the strength to fight through this. https://t.co/OYp4VPD4IH
ಜಾನಿ ಮಾಸ್ಟರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಬಂಧಿಸಲಾಗಿತ್ತು. ಅವರು ಪ್ರಸ್ತುತ ಚಂಚಲಗುಡ ಜೈಲಿನಲ್ಲಿದ್ದಾರೆ. ʼʼಅಕ್ಟೋಬರ್ 8ರಂದು ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯವು ಜಾನಿ ಮಾಸ್ಟರ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ ಇದೀಗ ಅವರ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿರುವುದರಿಂದ ಜಾಮೀನು ದೊರೆಯುವ ಬಗ್ಗೆ ಅನುಮಾನ ಮೂಡಿದೆʼʼ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ
ನೃತ್ಯ ಸಂಯೋಜಕಿಯಾಗಿರುವ 21 ವರ್ಷದ ಯುವತಿ ದೂರು ನೀಡಿ, ಜಾನಿ ಮಾಸ್ಟರ್ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಜಾನಿ ಮಾಸ್ಟರ್ ಆಲಿಯಾಸ್ ಶೇಕ್ ಜಾನಿ ಬಾಷಾ ವಿರುದ್ಧ ಅವರು ದೂರಿದ್ದರು.
ಘಟನೆ ನಡೆದ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಚಿತ್ರೀಕರಣದ ವೇಳೆಯೂ ಜಾನಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Jani Master: ರಾಷ್ಟ್ರ ಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್
ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಈ ವರ್ಷದ ಜೂನ್‌ನಲ್ಲಿ ಡ್ಯಾನ್ಸರ್ ಸತೀಶ್ ಎನ್ನುವವರು ಜಾನಿ ಮಾಸ್ಟರ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದರು. ಕೆಲಸ ಸಿಗದಂತೆ ಜಾನಿ ಮಾಸ್ಟರ್ ತಡೆಯುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದರು. ಅಲ್ಲದೆ 2015ರಲ್ಲಿ ಕಾಲೇಜೊಂದರಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಜಾನಿ ಮಾಸ್ಟರ್‌ಗೆ ಹೈದರಾಬಾದ್‌ನ ಮೆಡ್ಚಲ್‌ನ ಸ್ಥಳೀಯ ನ್ಯಾಯಾಲಯವು 2019ರಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.