ಅವನಿ ಅಂಬರ ಅಂಕಣ: ರಾಜನೀತಿಯ ಚಾಣಾಕ್ಷ ನಡೆಯ ವಾನರ ಸಾಮ್ರಾಜ್ಯ
- ನಾರಾಯಣ ಯಾಜಿ
ಆರ್ದ್ರಸ್ಸಮಾಂಸಃ ಪ್ರತ್ಯಗ್ರಃ ಕ್ಷಿಪ್ತಃ ಕಾಯಃ ಪುರಾ ಸಖೇ!
ಪರಿಶ್ರಾನ್ತೇನ ಮತ್ತೇನ ಭ್ರಾತ್ರಾ ಮೇ ವಾಲಿನಾ ತದಾ ৷৷ ಕಿ.11.86৷৷
ರಾಘವ! ನಮ್ಮಣ್ಣನಾದ ವಾಲಿ (ದುಂದುಭಿಯ) ಈ ಪರ್ವತೋಪಮವಾದ ಶರೀರವನ್ನು ಎಸೆದ ಸಮಯದಲ್ಲಿ ಅದು ಹಸಿಯಾಗಿತ್ತು. ರಕ್ತದಿಂದಲೂ ತುಂಬಿತ್ತು. ಮೇಲಾಗಿ ಆ ಸಮಯದಲ್ಲಿ ವಾಲಿಯು ಆಯಾಸಗೊಂಡಿದ್ದನು. ಆಯಾಸಗೊಂಡ ಸಮಯದಲ್ಲಿಯೇ ವಾಲಿಯು ಪುಷ್ಟವಾಗಿದ್ದ ರಾಕ್ಷಸನ ಶರೀರವನ್ನು ಅಷ್ಟು ದೂರದ ವರೆಗೆ ಎಸೆದಿದ್ದನು. ಆದರೆ ಈಗ ಒಣಗಿಹೋದ, ಹುಲ್ಲಿನಂತೆ ಹಗುರವಾದ ಅವನ ಶರೀರವನ್ನು ಲೀಲಾಜಾಲವಾಗಿ ಎಸೆದುಬಿಟ್ಟಿದ್ದೀಯಾ. ಹಾಗಾಗಿ ವಾಲಿಗಿಂತಲೂ ನೀನು ಅಧಿಕ ಬಲನೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲಾಗುವುದಿಲ್ಲ. (ಕಿಷ್ಕಿಂಧಾಕಾಂಡದ 11 ನೆಯ ಸರ್ಗದಲ್ಲಿನ ಮೂರು ಶ್ಲೋಕದ ಸಾರಾಂಶ ಇಷ್ಟು)
ಸುಗ್ರೀವನ ಸಂಶಯ ಮುಗಿಯುವುದೇ ಇಲ್ಲ. ವಾಲ್ಮೀಕಿ ಬಾಲಕಾಂಡದಲ್ಲಿ ನಾರದರಲ್ಲಿ ಕೇಳಿದ ಮೊದಲ ಪ್ರಶ್ನೆಯೇ “ಕೋನ್ವಸ್ಮಿನ್ಸಾಮ್ಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್-ಗುಣವಂತನೂ ಮತ್ತು ಮಹಾಬಲಶಾಲಿಯಾದವನೂ ಆಗಿರುವ ವ್ಯಕ್ತಿ ಯಾರಾದರೂ ಇದ್ದಾರೆಯೇ” ಎನ್ನುವುದು. ಅಂತಹ ವ್ಯಕ್ತಿತ್ವದ ರಾಮನ ಪರಾಕ್ರಮದ ಕುರಿತು ಸುಗ್ರೀವನ ಸಂಶಯದ ಪರಮಾವಧಿ ಈ ಶ್ಲೋಕದಲ್ಲಿ ವ್ಯಕ್ತವಾಗಿದೆ. ರಾಮನ ಪರಾಕ್ರಮದ ವಿಷಯದಲ್ಲಿ ವಾನರರಿಗೆ ಚನ್ನಾಗಿ ತಿಳಿದಿದೆ. ವಾಲಿ ಸಹ ಸುಗ್ರೀವನೊಡನೆ ಯುದ್ಧಕ್ಕೆ ಹೊರಡುವಾಗ ತಾರೆ ರಾಮನ ವಿಷಯದಲ್ಲಿ ಎಚ್ಚರಿಸಿದಾಗ ಆತನ ಪರಾಕ್ರಮದ ಅರಿವಿದೆ ಎನ್ನುತ್ತಾನೆ. ಇವೆಲ್ಲದರ ಅರಿವಿದ್ದೂ ಸುಗ್ರೀವನಿಗೆ ರಾಮನ ಮೇಲೆ ಸಂಶಯ ಹೋಗಿಲ್ಲ. ಅದಕ್ಕೇ ಕಾರಣ ಮೊದಲೇ ಹೇಳಿದಂತೆ ವಾಲಿ ಸುಗ್ರೀವನನ್ನು ಎಲ್ಲೂ ನೆಲೆಯೂರಲು ಬಿಡದೇ ಪ್ರಪಂಚದುದ್ದಕ್ಕೂ ಅಂಡೆಲಿಸಿದ್ದು. ವಾಲಿಗೆ ಮತಂಗ ಋಷಿಯ ಶಾಪದ ಕಾರಣದಿಂದಾಗಿ ಋಷ್ಯಮೂಕ ಪರ್ವತ ಸುಗ್ರೀವನಿಗೆ ಅಡಗುತಾಣವಾಗಿ ಸಿಕ್ಕಿತು. ಸುಗ್ರೀವನನ್ನು ವಾಲಿ ಯಾವತ್ತಿಗೂ ಕ್ಷಮಿಸಿರಲೇ ಇಲ್ಲವೆನ್ನುವುದು ಕಿಷ್ಕಿಂಧಾಕಾಂಡದುದ್ದಕ್ಕೂ ಕಾಣಸಿಗುತ್ತದೆ. ವಾಲಿ ಮತ್ತು ರಾಮನ ಪರಾಕ್ರಮಗಳ ನಡುವೆ ಸುಗ್ರೀವನ ಮನಸ್ಥಿತಿ “Known devil is better than unknown God” ಎಂಬಂತಾಗಿತ್ತು. ವಾಲಿ ರಾಮರ ನಡುವೆ ಯುದ್ಧವಾದರೆ ತನ್ನ ಜೀವಕ್ಕೆ ಮತ್ತಿಷ್ಟು ಅಪಾಯ ಎದುರಾಗಬಹುದೆನ್ನುವ ಜೀವಭಯ ಕಾಡುತ್ತಿತ್ತು. ಮೊದಲು ಪರ್ವತೋಪಮವಾಗಿ ಬಿದ್ದಿರುವ ದುಂದುಭಿಯ ಮೂಳೆಗಳ ರಾಶಿಯನ್ನು ಒಂದೇ ಕಾಲಿನಿಂದ ಚಿಮ್ಮಿಸಿ ಎರಡು ನೂರು ಬಿಲ್ಲಂತರಕ್ಕೆ ಎಸೆಯಬೇಕು ಎಂದ; ಯಾವಾಗ ರಾಮ ಅದನ್ನು ಲೀಲಾಜಾಲವಾಗಿ ಮಾಡಿ ಮುಗಿಸಿದನೋ, ಆಗ ವಾಲಿ ಎಸೆಯುವಾಗ ಅದರಲ್ಲಿ ಮಾಂಸ ರಕ್ತಗಳೆಲ್ಲವೂ ಇದ್ದವು, ಈಗ ಅದರಲ್ಲಿರುವುದು ಕೇವಲ ಮೂಳೆಗಳು ಎಂದುಬಿಡುತ್ತಾನೆ. ಇದಂತೂ ಅವಿವೇಕದ ಪರಮಾವಧಿ ಎನಿಸಿಬಿಡುವುದು. ರಾಮ ಲಕ್ಷ್ಮಣರು ಅದು ಹೇಗೇ ಇಂಥ ಮಾತುಗಳನ್ನು ಸಹಿಸಿಕೊಂಡರೋ!
ಸುಗ್ರೀವ ಇಲ್ಲಿ ಈ ಎರಡು ಕಾರ್ಯದ ಮೂಲಕ ರಾಮನ ಬಲ ಮತ್ತು ಬಿಲ್ಲುವಿದ್ಯೆಯ ನಿಪುಣತೆಯನ್ನು ಪರೀಕ್ಷಿಸುತ್ತಿದ್ದಾನೆ. ಅದರರಿವು ರಾಮನಿಗೆ ಮನವರಿಕೆಯಾಗಿದೆ. ರಾಮನಿಗೂ ಸೀತೆಯನ್ನು ಹುಡುಕುವುದು ಮತ್ತು ರಾವಣನನ್ನು ಶಿಕ್ಷಿಸುವುದು ಮುಖ್ಯವಾದ ವಿಷಯಗಳಾಗಿವೆ. ಅವರಿಬ್ಬರ ನಡುವಿನ ಅಗ್ನಿಸಾಕ್ಷಿಯ ಮೈತ್ರಿಭಾವಕ್ಕೆ ಕಾರಣವಾದ ಅಂಶಗಳು ಇವು. ರಾಮನಿಗೆ ರಾವಣನ ಅಡಗುತಾಣ ಸುಗ್ರೀವನಿಗೆ ನಿಖರವಾಗಿ ತಿಳಿದಿದೆ ಎನ್ನುವುದೂ ಸಹ ಚನ್ನಾಗಿ ಗೊತ್ತು. ಈ ಹಂತದಲ್ಲಿ ಸುಗ್ರೀವ ಭಯಪಟ್ಟು ವಾಲಿಯ ಸಹವಾಸವೇ ಬೇಡವೆಂದು ಸುಮ್ಮನಿದ್ದರೆ ರಾಮನ ಕಾರ್ಯಕ್ಕೆ ವಿಘ್ನ ಎದುರಾಗಿಬಿಡುತ್ತದೆ. ರಾಜನಾದವ ಸಹನೆಯನ್ನು ಕಳೆದುಕೊಳ್ಳದೇ ಶತ್ರುಗಳನ್ನು ಮೂಲವನ್ನು ತಿಳಿದುಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ರಾಮನೇ ತನ್ನ ತಮ್ಮನಾದ ಭರತನಿಗೆ ಉಪದೇಶಿಸಿದ್ದಾನೆ.
ಕಚ್ಚಿದರ್ಥಂ ವಿನಿಶ್ಚಿತ್ಯ ಲಘುಮೂಲಂ ಮಹೋದಯಮ್
ಕ್ಷಿಪ್ರಮಾರಭಸೇ ಕರ್ತುಂ ನ ದೀರ್ಘಯಸಿ ರಾಘವ৷৷ ಅ.ಕಾಂ. 100-19৷৷
ಸ್ವಲ್ಪ ಪ್ರಯತ್ನದ ಮೂಲಕ ಯಾವ ಕಾರ್ಯಸಾಧನೆಯು ಸುಲಭವೋ ಅಂತಹುದನ್ನು ತ್ವರಿತವಾಗಿ ಮಾಡುತ್ತೀಯಾ ಎಂದು ಭಾವಿಸಿರುವೆ ಎನ್ನುವ ರಾಜನೀತಿಗನುಗುಣವಾಗಿ ರಾಮ ಇಲ್ಲಿ ಸಹನೆಯನ್ನು ತಾಳಿದ್ದಾನೆ. ಸುಗ್ರೀವ ವಾಲಿ ವಧೆ ಆದಮೇಲೆ ಭೋಗದಲ್ಲಿ ಮುಳುಗಿದ್ದಾಗ ಲಕ್ಷ್ಮಣನ ಮೂಲಕ ಕೊಡುವ ಎಚ್ಚರಿಕೆಯನ್ನು ಗಮನಿಸಬೇಕು. ಚಾಣಕ್ಯನ ಅರ್ಥಶಾಸ್ತ್ರದ ಮೂಲ ತಳಹದಿ ರಾಮಾಯಣದ ಅಯೋಧ್ಯಾಕಾಂಡದ 100 ಸರ್ಗದಲ್ಲಿ ರಾಮ ಬೋಧಿಸುವ ರಾಜನೀತಿಗಳಲ್ಲಿದೆ. ಹಾಗಾಗಿ ರಾಮ ನಗುತ್ತಲೇ ಆತನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಇನ್ನೇನು ಪರಾಕ್ರಮವನ್ನು ತೋರಬೇಕೆಂದು ಕೇಳುತ್ತಾನೆ. ವಾಲಿ ಮಾಡಿದಂತೆ ಒಂದು ಬಾಣದಿಂದ ಸಾಲವೃಕ್ಷವೊಂದನ್ನು ಬೇಧಿಸಿದರೆ ಸುಗ್ರೀವ ನಂಬುತ್ತಿದ್ದನೋ ಅಥವಾ ಇನ್ನೇನನ್ನಾದರೂ ವರಾತ ತೆಗೆಯುತ್ತಿದ್ದನೋ, ರಾಮ ಆನೆಯ ಸೋಂಡಿಲಿನಂತೆ ಸುದೀರ್ಘವಾಗಿರುವ ಧನಸ್ಸಿಗೆ ಬಾಣವನ್ನು ಹೂಡಿ ಏಕಕಾಲಕ್ಕೆ ಏಳು ಸಾಲವೃಕ್ಷಗಳನ್ನು ಬೇಧಿಸಿದ. ಆನಂತರದಲ್ಲಿ ಆ ಬಾಣ ಭೂಮಿಯನ್ನು ನಾಟಿ ಪುನಃ ರಾಮನ ಬತ್ತಳಿಕೆಯನ್ನು ಸೇರಿಕೊಂಡಿತು. ವಿಶ್ವಾಮಿತ್ರರು ಅನುಗ್ರಹಿಸಿದ ಸಜೀವ ಶರವನ್ನು ರಾಮ ಇಲ್ಲಿ ಪ್ರಯೋಗಿಸಿದ್ದ.
ಇಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತದೆ. ಮೊದಲನೆಯದು ವಾಲಿ ವಾನರ(?) ರಾಜನಾದರೂ, ಬಿಲ್ವಿದ್ಯೆಯಲ್ಲಿ ನಿಪುಣನಾಗಿದ್ದ. ಎರಡನೆಯದು ದುಂದುಭಿಯನ್ನು ಕೊಂದ ವಾಲಿ ಆತನನ್ನು ಎಸೆದ ಕಾರಣಕ್ಕೆ ಮತಂಗರಿಂದ ಶಾಪಪಡೆದ ಕಾರಣ, ಇನ್ನಿತರ ರಾಮಾಯಣದಲ್ಲಿದ್ದಂತೆ ಪ್ರತೀ ದಿನ ಬಂದು ಆತನ ಮೂಳೆಯನ್ನು ಎತ್ತುತ್ತಿರಲಿಲ್ಲ. ಆದರೆ ಸುಗ್ರೀವನಲ್ಲಿ ಭಯ ಹುಟ್ಟಿಸಲು ಆಗಾಗ ಬಂದು ಸಾಲವೃಕ್ಷವನ್ನು ಒಂದೊಂದು ಬಾಣದಿಂದ ಭೇದಿಸುತ್ತಿದ್ದ. ಈಗ ಸುಗ್ರೀವನಿಗೆ ರಾಮನ ಪರಾಕ್ರಮದ ಮೇಲೆ ಪೂರ್ತಿ ನಂಬಿಕೆ ಬಂತು. ಆತ ತಕ್ಷಣಕ್ಕೆ ಹೇಳುವ ಮಾತು “ವಾಲಿನಂ ಜಹಿ ಕಾಕುತ್ಸ್ಥ ಮಯಾ ಬದ್ಧೋಯಮಞ್ಜಲಿಃ – ನನ್ನ ಸಂತೋಷಕ್ಕಾಗಿ ಅಣ್ಣನ ರೂಪದಲ್ಲಿರುವ ವಾಲಿಯನ್ನು ನೀನು ಕೊಲ್ಲಬೇಕು” ಎನ್ನುವುದು. ಸುಗ್ರೀವ ವಾಲಿಯೇನಾದರೂ ಬದುಕುಳಿದರೆ ರಾಮನ ಅನುಪಸ್ಥಿತಿಯಲ್ಲಿ ತನ್ನನ್ನು ಉಳಿಸಲಾರ; ವಾಲಿ ಸಾಯಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ. ರಾಮನ ಮೊದಲ ಭೇಟಿಯಲ್ಲಿಯೇ ವಾಲಿಯನ್ನು ಕೊಲ್ಲು ಎಂದು ಕೇಳಿಕೊಂಡಿದ್ದ. ಈಗ ಎರಡನೆ ಸಾರಿ ಅದೇ ಮಾತನ್ನು ಹೇಳುತ್ತಾನೆ. ಆಗ ರಾಮ ಆತನಿಗೆ ಶೀಘ್ರವಾಗಿ ಕಿಷ್ಕಿಂಧೆಗೆ ಹೋಗಿ ಅಣ್ಣನನ್ನು ಕರೆ ಎಂದು ಹೇಳಿದಾಗ ಸುಗ್ರೀವ ವಾಲಿಯನ್ನು ಯುದ್ಧಕ್ಕೆ ಕರೆಯುತ್ತಾನೆ.
ರಾಮನ ಪರಾಕ್ರಮವನ್ನು ಪರೀಕ್ಷಿಸಿದ ಸುಗ್ರೀವ ವಾಲಿಯನ್ನು ಯುದ್ಧಕ್ಕೆ ಕರೆ ಎಂದು ಹೇಳಿದಾಗ ತಾನೇ ಹೊರಟ. ರಾಮನನ್ನು ಅಷ್ಟೆಲ್ಲಾ ಪರೀಕ್ಷಿಸಿದ ಆತ ರಾಮನಲ್ಲಿ ತನ್ನ ಪರವಾಗಿ ಯುದ್ಧ ಮಾಡಿ ತನ್ನ ಪತ್ನಿಯನ್ನು ಬಿಡಿಸಿಕೊಡು ಎನ್ನುವ ಪ್ರಶ್ನೆ ಮೂಡುತ್ತದೆ. ಸುಗ್ರೀವ ಮಹಾ ಚಾಣಾಕ್ಷ ರಾಜಕಾರಣಿ. ಆತನ ಶಾಸನಕ್ಕೆ ಸುಗ್ರೀವಾಜ್ಞೆಯೆಂದು ಹೆಸರು ಬಂದಿರುವುದು ಸುಮ್ಮನೇ ಅಲ್ಲ. ವಾಲಿ ರಾಜನಾಗಿದ್ದರೂ, ಯುವರಾಜನಾಗಿದ್ದ ಸುಗ್ರೀವನೇ ರಾಜ್ಯಭಾರದ ಹೊಣೆಯನ್ನು ಹೊತ್ತಿದ್ದ. ಆತನ ಒಂದು ಕರೆಗೆ ಪ್ರಪಂಚದಲ್ಲಿದ್ದ ಎಲ್ಲಾ ವಾನರರೂ ಕೆಲವು ದಿನಗಳೊಳಗೇ ಬಂದು ಸೇರಿ ಸೀತಾನ್ವೇಷಣೆಗೆ ಹೊರಟಿದ್ದಾರೆ (ಸೀತಾನ್ವೇಷಣೆಯಲ್ಲಿ ಈ ವಿವರಗಳನ್ನು ಗಮನಿಸೋಣ). ಆತನಿಗೆ ರಾಜ ಧರ್ಮ ಮತ್ತು ಗೃಹಸ್ಥ ಧರ್ಮದ ವಿಷಯ ಚನ್ನಾಗಿ ತಿಳಿದಿದೆ. ರಾಜರು ತಮಗೆ ಬೇಕಾದ ಎಲ್ಲಾ ಕೆಲಸಗಳನ್ನು ತಮ್ಮ ಸೈನ್ಯ, ಮಾಂಡಲಿಕರು ಮತ್ತು ಅಮಾತ್ಯರೇ ಮೊದಲಾದವರಿಂದ ಮಾಡಿಸಬಹುದು. ರಾಜ್ಯದ ಯಾವುದೇ ಪ್ರಜೆಗಳು ಏನನ್ನೇ ಸಾಧಿಸಲಿ, ಅದರ ಕೀರ್ತಿ ಮತ್ತು ಹಕ್ಕು ರಾಜನಾದವನಿಗೆ ಸಲ್ಲುತ್ತದೆ. ಆದರೆ ಎರಡು ವಿಷಯಗಳನ್ನು ಮಾತ್ರ ರಾಜನಾದವನು (ಎಲ್ಲರೂ) ಸ್ವಯಂ ತಾವೇ ಮಾಡಬೇಕು. ಮೊದಲನೆಯದು ಪಿತೃಶ್ರಾದ್ಧ, ಎರಡನೆಯದು ಸತಿಯ ಇಚ್ಛೆ. ರುಮೆ ತಾನೇ ತಾನಾಗಿ ವಾಲಿಯ ಸಂಗಡ ಹೋಗಿದ್ದಲ್ಲ; ವಾಲಿಯೇ ಬಲತ್ಕಾರವಾಗಿ ಇಟ್ಟುಕೊಂಡಿದ್ದು. ಆಕೆಯನ್ನು ಗೆದ್ದು ಮರಳಿ ಪಡೆಯಬೇಕಾಗಿರುವುದು ಸುಗ್ರೀವನೇ. ರಾಮ ಇಲ್ಲಿ ಆತನಿಗೆ ಸಹಾಯಕನಾಗಿದ್ದಾನೆ. ಹಾಗಾಗಿ ದ್ವಂದ್ವ ಯುದ್ಧಕ್ಕೆ ವಾಲಿಯ ಎದುರು ತಾನೇ ಹೋಗಬೇಕೆನ್ನುವುದರ ಅರಿವಿದೆ. ವಾಲಿಯನ್ನು ಕೊಲ್ಲಲು ರಾಮ ಹಿಂದಿನಿಂದ ಸಿದ್ಧನಾಗಿದ್ದಾನೆ ಎನ್ನುವ ಯೋಜನೆ ಇದರ ಹಿಂದಿದೆ. ಇಲ್ಲದೇ ಇದ್ದರೆ ರಾಮನಿಗೆ ಎಷ್ಟೆಲ್ಲ ಪ್ರಶ್ನೆಗಳನ್ನು ಹಾಕಿದ್ದ ಸುಗ್ರೀವ ತನ್ನ ಪರವಾಗಿ ಆತನೇ ಯುದ್ಧಮಾಡಲಿ ಎಂದು ಕೇಳದೇ ಇರುತ್ತಿರಲಿಲ್ಲ (ಇಂತಹ ಪ್ರಶ್ನೆಗಳನ್ನು ತಾಳಮದ್ದಳೆಯಲ್ಲಿ ಕೇಳುವುದಿದೆ). ವಾಲಿಯೊಡನೆ ಹೋರಾಟ ಮಾಡುವಾಗ ಗುರಿ ನೋಡಿ ಬಾಣಬಿಟ್ಟು ಆತನನ್ನು ಸಾಯಿಸುವ ರಾಮ ಹೇಗೆ ಕಾರ್ಯಾಚರಿಸಬಹುದೆನ್ನುವದನ್ನು ಪರೀಕ್ಷಿಸುವುದಕ್ಕಾಗಿಯೇ ಸುಗ್ರೀವ ಆತನ ಬಿಲ್ಲುವಿದ್ಯೆಯ ಗುರಿಯ ನಿಪುಣತೆಯನ್ನು ಸಾಲವೃಕ್ಷಗಳನ್ನು ಛೇದಿಸಲು ಪರೀಕ್ಷೆಯನ್ನು ಒಡ್ಡಿದ್ದಾನೆ. ವಾಲ್ಮೀಕಿ ಮುಂದೆ ನಡೆಯುವ ಸೂಕ್ಷ್ಮ ಘಟನೆಗಳನ್ನು ಅಭಿಧಾವೃತ್ತಿಯಲ್ಲಿ ತಿಳಿಸುತ್ತಾನೆ. ಅದನ್ನು ಮನವರಿಕೆ ಮಾಡಿಕೊಳ್ಳಲು ಸಮಗ್ರ ರಾಮಾಯಣವನ್ನು ಓದಬೇಕು. ಯಾವುದೋ ಒಂದು ಪ್ರಸಂಗವನ್ನು/ಭಾಗಗಳನ್ನು ಓದಿದಾಗ ಸಂಶಯಗಳು ಪರಿಹಾರವಾಗುವುದಿಲ್ಲ.
ಅಂತೂ ಸಂದರ್ಭ ಎದುರಾದರೆ ರಾಮನಲ್ಲಿ ವಾಲಿಯನ್ನು ಮಲ್ಲಯುದ್ಧದಲ್ಲಿ ಎದುರಿಸಲು ಬೇಕಾದ ಬಲ, ದೂರದಿಂದ ಹೊಡೆಯಲು ಬೇಕಾದ ಬಿಲ್ವಿದ್ಯೆಯ ನಿಪುಣತೆ ಎರಡೂ ಇದೆ ಎನ್ನುವುದನ್ನು ಮನಗಂಡ ಸುಗ್ರೀವ ಹಗಲು ಹೊತ್ತಿನಲ್ಲಿಯೇ ಹೋಗಿ ವಾಲಿಯನ್ನು ಯುದ್ಧಕ್ಕೆ ಕರೆಯುತ್ತಾನೆ. ಸುಗ್ರೀವ ಕರೆದದ್ದೇ ವಾಲಿ ಅವಡುಗಚ್ಚಿ ಯುದ್ಧಕ್ಕೆ ಬಂದು ಸುಗ್ರೀವನ ಮೇಲೆ ಆಕ್ರಮಣ ಮಾಡಿದ. ಅವರಿಬ್ಬರ ಹೋರಾಟವನ್ನು ಕಣ್ಣುರೆಪ್ಪೆ ಮುಚ್ಚದೇ ಈಕ್ಷಿಸುತ್ತಿರುವ ರಾಮನಿಗೆ ಇಬ್ಬರಲ್ಲಿ ಯಾರು ಸುಗ್ರೀವ, ಯಾರು ವಾಲಿ ಎನ್ನುವುದೇ ತಿಳಿಯುವುದಿಲ್ಲ. ವಾಲಿಯ ಆಘಾತಕ್ಕೆ ಸುಗ್ರೀವನ ಮೈಯೆಲ್ಲ ರಕ್ತದಿಂದ ತೋಯ್ದು ಜೀವ ಉಳಿಸಿಕೊಳ್ಳಲು ಓಡಲು ಪ್ರಾರಂಭಿಸುತ್ತಾನೆ. ವಾಲಿಯ ಕೈಗೆ ಸಿಕ್ಕಿದ್ದರೆ ಆತನನ್ನು ಕೊಂದೇ ಬಿಡುತ್ತಿದ್ದ. ಅಷ್ಟರಲ್ಲಿ ಮತಂಗವನವನ್ನು ಪ್ರವೇಶಿಸಿರುವುದರಿಂದ ವಾಲಿ ಸುಮ್ಮನಾಗಬೇಕಾಯಿತು. “ಮುಕ್ತೋ ಹ್ಯಸಿ ತ್ವಮಿತ್ಯುಕ್ತ್ವಾ ಸ ನಿವೃತ್ತೋ ಮಹಾದ್ಯುತಿಃ – ನೀನಿಂದು ತಪ್ಪಿಸಿಕೊಂಡು ಬಿಟ್ಟೆ; ಇರಲಿ ಎಂದು ಮಹಾಪರಾಕ್ರಮಿಯಾದ ವಾಲಿ ಕಿಷ್ಕಿಂಧೆಗೆ ಹಿಂದುರಿಗಿದನು”. ವಾಲಿ ಸುಗ್ರೀವನನ್ನು ಜೀವ ಸಹಿತ ಬಿಟ್ಟಿರುವುದು ಆತ ತನ್ನ ಕೈಗೆ ಸಿಗದ ಜಾಗದಲ್ಲಿ ಅವಿತಿರುವುದರಿಂದ ಹೊರತೂ ಸಾಹೋದರ್ಯವೆನ್ನುವ ಯಾವ ಭಾವವೂ ಆತನಲ್ಲಿ ಇರಲಿಲ್ಲ. ಮುಂದೆ ತಾರೆಯಲ್ಲಿ ಆತ ಸುಗ್ರೀವನ ಕೊಲ್ಲುವುದಿಲ್ಲ ಎಂದು ಹೇಳುತ್ತಾನೆ. ಅದು ಕೇವಲ ಆಕೆಯನ್ನು ಸಂತೈಸಲು ಹೊರತೂ ಮತ್ತೇನೂ ಅಲ್ಲ. ಒಂದುವೇಳೆ ಆತನಲ್ಲಿ ಕರುಣೆ ಇದ್ದಿದ್ದರೆ ಸುಗ್ರೀವನನ್ನು ಅಷ್ಟೆಲ್ಲಾ ಅಲೆದಾಡಿಸುತ್ತಿರಲಿಲ್ಲ.
ರೂಪ ಸಾಮ್ಯತೆ
ಸುಗ್ರೀವ ರಾಮನನ್ನು ಮಾತುತಪ್ಪಿದವನೆಂದು ದೂಷಿಸುತ್ತಾನೆ. ಆಗ ರಾಮ ಯಾಕೆ ತಾನು ಸುಗ್ರೀವನನ್ನು ಕೊಲ್ಲಲಿಲ್ಲ ಎನ್ನುವುದಕ್ಕೆ
ಅಲಙ್ಕಾರೇಣ ವೇಷೇಣ ಪ್ರಮಾಣೇನ ಗತೇನ ಚ ৷
ತ್ವಂ ಚ ಸುಗ್ರೀವ ವಾಲೀ ಚ ಸದೃಶೌ ಸ್ಥಃ ಪರಸ್ಪರಮ್ ৷৷ ಕಿ-12-30৷৷
ಶರೀರಾಲಂಕರಾದಿಂದಲೂ, ವೇಷದಿಂದಲೂ, ಎತ್ತರದಿಂದಲೂ, ನಡಿಗೆಯಿಂದಲೂ ನೀನು ಮತ್ತು ವಾಲಿ ಪರಸ್ಪರವಾಗಿ ಅನುರೂಪರಾಗಿಯೇ ಇರುವಿರಿ. ಒಬ್ಬರಿಗೊಬ್ಬರಿಗೆ ಯಾವ ವೆತ್ಯಾಸವೂ ಕಾಣುತ್ತಿರಲಿಲ್ಲ ಎನ್ನುವ ಮೂಲಕ ಆತನ ಸಂಶಯವನ್ನು ನಿವಾರಿಸುತ್ತಾನೆ. ವಾಲಿ ಮತ್ತು ಸುಗ್ರೀವರ ಬಣ್ಣ ಹೇಗಿತ್ತು ಎಂದರೆ “ಸುಗ್ರೀವೋ ಹೇಮಪಿಙ್ಗಲಃ – ಹೇಮ ಪಿಂಗಳ, ಕಂದು ಹಳದೀ ಬಣ್ಣದವನಾಗಿದ್ದನಂತೆ. ಎರಡು ಸಾರಿ ವಾಲ್ಮೀಕಿ ಸುಗ್ರೀವನ ಬಣ್ಣವನ್ನು ’ಹೇಮಪಿಙ್ಗಲ’ ಎಂದು ವರ್ಣಿಸುತ್ತಾರೆ. ವಾಲಿಯ ಬಣ್ಣವೋ “ಸನ್ಧ್ಯಾಕನಕಪ್ರಭಃ – ಸಾಯಂಕಾಲದ ಬಿಸಿನಂತೆ ಕಾಂತಿಯಿಂದ ಕೂಡಿದೆ”. ಸಾಯಂಕಾಲದ ಬಿಸಿಲೂ ಸಹ ಕಂದು ಹಳದೀ ಬಣ್ಣವೇ ಆಗಿದೆ (ಯಾವ ಸೂಕ್ಷ್ಮ ವಿವರಗಳನ್ನೂ ವಾಲ್ಮೀಕಿ ಬಿಡುವುದಿಲ್ಲ). “ಅಭಯದಾನವನ್ನು ಮಾಡಿದವನನ್ನೇ ಯಾವಕಾರಣಕ್ಕೂ, ಅಕಸ್ಮಾತಾಗಿಯೂ ಕೊಲ್ಲಕೂಡದು- ದತ್ತಾಭಯವಧೋ ನಾಮ ಪಾತಕಂ ಮಹದುಚ್ಯತೇ” . ಸುಗ್ರೀವನ ಜಯ ರಾಮನಿಗೆ ತುಂಬಾ ಮುಖ್ಯವಾಗಿದೆ, “ಅಹಂ ಚ ಲಕ್ಷ್ಮಣಶ್ಚೈವ ಸೀತಾ ಚ ವರವರ್ಣಿನೀ ৷ ತ್ವದಧೀನಾ ವಯಂ ಸರ್ವೇ ವನೇಸ್ಮಿನ್ ಶರಣಂ ಭವಾನ್৷৷. ರಾಮ ಸೀತೆ ಮತ್ತು ಲಕ್ಷ್ಮಣ ಮೂವರೂ ಸುಗ್ರೀವನ ಅಧೀನದಲ್ಲಿಯೇ ಇದ್ದಾರೆ, ಅಂದರೆ ಸುಗ್ರೀವ ರಾವಣನ ಪಟ್ಟಣವನ್ನು ತೋರಿಸಬಲ್ಲವನಾದುದರಿಂದ ಆತ ಬೇಕೇ ಬೇಕು.
ಈ ಬೇಧವನ್ನು ನಿವಾರಿಸಲು ಇರುವ ಉಪಾಯವೆಂದರೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಸುಗ್ರೀವನ ಕೊರಳಿಗೆ ಗಜಪುಷ್ಪ ಹಾರವನ್ನು ತೊಡಿಸಿ ಯುದ್ಧಕ್ಕೆ ವಾಲಿಯನ್ನು ಆಹ್ವಾನಿಸಲು ಕಳುಹಿಸುತ್ತಾನೆ.
ಸುಗ್ರೀವನಿಗೆ ರಾಮನ ಶೌರ್ಯದ ಮೇಲೆ ಮಂಬಿಕೆ ಇತ್ತು. ಆದರೆ ಆತನಲ್ಲಿ ವಾಲಿಯಂತಹ ಮಹಾತೇಜಸ್ಸಿನ (ಮಹಾದ್ಯುತಿಃ) ಮುಂದೆ ನಿಲ್ಲಬಲ್ಲ ಸಾಮರ್ಥ್ಯವಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿತ್ತು. ಅದಕ್ಕೆ ಆತ ಇಲ್ಲಿ ಮತ್ತೊಂದು ಉಪಾಯವನ್ನು ಮಾಡುತ್ತಾನೆ. ಕಿಷ್ಕಿಂಧೆಯ ಕಡಗೆ ಮೊದಲು ಹೋದ ಹಾದಿಯಲ್ಲಿ ಹೋಗದೇ, ಮತ್ತೊಂದು ಹಾದಿಯನ್ನು ಹಿಡಿಯುತ್ತಾನೆ. ಅಲ್ಲಿ ಸಪ್ತಜನ ಆಶ್ರಮವಿತ್ತು. ಹಿಂದೆ ಏಳು ಋಷಿಗಳು ನೀರಿನಲ್ಲಿ ತಲೆಕೆಳಗಾಗಿ ನಿಂತು ತಪಸನ್ನಾಚರಿಸಿದ್ದರು. ಅಲ್ಲಿಗೆ ಧರ್ಮಾತ್ಮರಾದವರಲ್ಲದವರು ಹೋದರೆ ಅವರು ಹೊರಬರುವುದಿಲ್ಲ. ರಾಮನನ್ನು ಪರೀಕ್ಷಿಸಿದ ಹಾಗೆಯೂ ಆಯಿತು ಎಂದು ಕೊಳ್ಳುತ್ತಾ ಸಪ್ತಜನ ಆಶ್ರಮದ ಹಾದಿಯಿಂದ ರಾಮನನ್ನು ಕರೆದುಕೊಂಡು ಹೋಗಿ ಅವನಿಗೆ ಆ ಆಶ್ರಮವನ್ನು ತೋರಿಸಿ “ಕೈ ಮುಗಿ, ಯಾವು ವಿನೀತರಾಗಿ ನಮಸ್ಕರಿಸಿಕೊಳ್ಳುತ್ತಾರೆಯೋ ಅವರಲ್ಲಿ ಅಶುಭಸೂಚಕವಾದ ಲಕ್ಷಣಗಳೊಂದೂ ಕಾಣಿಸುವುದಿಲ್ಲ” ಎನ್ನುತ್ತಾನೆ. ರಾಮ ಲಕ್ಷ್ಮಣರು ಅದೇ ರೀತಿ ನಮಸ್ಕರಿಸಿ ಕಿಷ್ಕಿಂಧೆಯ ಕಡೆಗೆ ಹೊರಡುತ್ತಾರೆ.
ಕಿಷ್ಕಿಂಧಾ ಪಟ್ಟಣ
ಕಿಷ್ಕಿಂಧೆ ಕೇವಲ ಗಿರಿ ಕೊಳ್ಳಗಳಿಂದಕೂಡಿದ ಪ್ರದೇಶವಾಗಿರಲಿಲ್ಲ. ಅಲ್ಲೊಂದು ನಗರವೇ ಇತ್ತು. ವಾಲಿಯ ರಕ್ಷಣಾ ವ್ಯವಸ್ಥೆ ಅಯೋಧ್ಯೆಯ ರಕ್ಷಣಾ ವ್ಯವಸ್ಥೆಗಳಿಗಿಂತ ಕಡಿಮೆಯೇನೂ ಆಗಿರಲಿಲ್ಲ. ರಾಮಾಯಣದಲ್ಲಿ ಗೂಢಾಚಾರರು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಕಿಷ್ಕಿಂಧೆಯ ಕೋಟೆಯನ್ನು ವಾನರರು ಭದ್ರವಾಗಿ ಕಾಯುತ್ತಿದ್ದರು.
ಹರಿವಾಗುರಯಾ ವ್ಯಾಪ್ತಾಂ ತಪ್ತಕಾಞ್ಚನತೋರಣಾಮ್
ಪ್ರಾಪ್ತಾಃ ಸ್ಮ ಧ್ವಜಯನ್ತ್ರಾಢ್ಯಾಂ ಕಿಷ್ಕಿನ್ಧಾಂ ವಾಲಿನಃ ಪುರೀಮ್৷৷ಕಿ.14.5৷৷
ನಾವೀಗ ಕಿಷ್ಕಿಂಧಾ ಪಟ್ಟಣಕ್ಕೆ ಬಂದಿದ್ದೇವೆ. ಈ ಪಟ್ಟಣವು ವಾನರರೂಪವಾದ ಬಲೆಯಿಂದ ವ್ಯಾಪ್ತವಾಗಿದೆ. ಧ್ವಜಗಳಿಂದಲೂ, ಶತಘ್ನಿಯೇ ಮೊದಲಾದ ಆಯುಧಗಳಿಂದಲೂ ಸಮೃದ್ಧವಾಗಿದೆ.
ವಾಲಿಯ ಗೂಢಚಾರರು ಅರಣ್ಯದ ತುಂಬಾ ಇದ್ದರು. ರಾಮ ಲಕ್ಷ್ಮಣರು ಅರಣ್ಯದಲ್ಲಿ ಇರುವ ವಿಷಯ ಮತ್ತು ಸುಗ್ರೀವನ್ನೊಡನೆ ನಡೆದ ಅಗ್ನಿಸಾಕ್ಷಿಯಾದ ಮಿತ್ರತ್ವ, ವಾಲಿಯನ್ನು ಕೊಲ್ಲುವೆ ಎನ್ನುವ ರಾಮನ ಪ್ರತಿಜ್ಞೆ ಈ ಎಲ್ಲ ಸಂಗತಿ ತಾರೆಗೆ ಅಂಗದನ ಮೂಲಕ ತಿಳಿದಿತ್ತು. ಅದಾಗಲೇ ಅಂಗದ ಸಹ ರಾಜ್ಯಭಾರದಲ್ಲಿ ತಂದೆಗೆ ಸಹಕಾರಿಯಾಗಿದ್ದ, ಹಾಗೂ ತಾರೆ ರಾಜಕಾರಣದಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಳು ಎನ್ನುವದು ಸ್ಪಷ್ಟವಾಗುತ್ತ್ತದೆ. ವಾಲಿಗಿಂತ ಮೊದಲೇ ತಾರೆಗೆ ರಾಮನ ವಿಚಾರ ತಿಳಿದಿತ್ತು. ವಾಲಿ ರಾಜ್ಯವನ್ನಾಳುವ ವಿಷಯದಲ್ಲಿ ತನ್ನ ಬಲವನ್ನು ನಂಬಿಕೊಂಡಿದ್ದನೇ ಹೊರತೂ ಸುಗ್ರೀವನಷ್ಟು ಪ್ರಬುದ್ಧ ರಾಜಕಾರಣಿಯಾಗಿರಲಿಲ್ಲ. ಹಾಗಂತ ಆತನಿಗೆ ರಾಜಕಾರಣದ ಆಗುಹೋಗುಗಳು ತಿಳಿದಿಲ್ಲವೆಂದೇನೂ ಅಲ್ಲ. ರಾಮ ಧರ್ಮ ಮಾರ್ಗದಲ್ಲಿ ನಡೆಯುವವ, ತನಗೇನೂ ಮಾಡಲಾರ ಎನ್ನುವ ನಂಬಿಕೆಯಿದೆ. ಅಯೋಧ್ಯೆಯಲ್ಲಿ ನಡೆದ ಎಲ್ಲಾ ಬೆಳವಣಿಗೆಗಳೂ ವಾನರರ ಸಾಮ್ರಾಜ್ಯಕ್ಕೆ ತಿಳಿದಿತ್ತು. ಶತಘ್ನಿ ಎನ್ನುವುದು ಆ ಕಾಲದಲ್ಲಿ (ಇಂದಿನ ತೋಪುಗಳು) ರಾಜ್ಯದ ರಕ್ಷಣೆಯ ಪ್ರಮುಖ ಆಯುಧವಾಗಿತ್ತು. ಅಯೋಧ್ಯೆಯ ಪಟ್ಟಣದ ರಕ್ಷಣೆಯಲ್ಲಿ ಶತಘ್ನಿ ಮೊದಲಾದ ಯಂತ್ರಗಳ ವಿಷಯವನ್ನು ವಿವರವಾಗಿ ಗಮನಿಸಿದ್ದೇವೆ. ಲಂಕೆಯಲ್ಲಿಯೂ ಶತಘ್ನಿಗಳು ಇದ್ದವು. ರಾಜರುಗಳಿಗೆ ಇರುವಂತೆ ವಾನರರ ಸಾಮ್ರಾಜ್ಯಕ್ಕೂ ಪ್ರತ್ಯೇಕವಾದ ಧ್ವಜಗಳಿದ್ದವು. ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ವಾನರರೆಂದರೆ ಕೇವಲ ಮಂಗಗಳಾಗಿರಲಿಲ್ಲ; ಒಂದು ಬುಡಕಟ್ಟಿನವರಾಗಿದ್ದರು ಎನ್ನುವ ಅನುಮಾನಕ್ಕೆ ಪುಷ್ಟಿದೊರೆಯುತ್ತದೆ.
ರಾಮ ಕಿಷ್ಕಿಂಧೆಯ ಸಾಮ್ರಾಜ್ಯದ ಈ ಎಲ್ಲಾ ಭದ್ರತೆಯನ್ನು ಗಮನಿಸಿದ್ದನು. ಬಲೆಯಂತೆ ಅರಣ್ಯದ ತುಂಬಾ ಓಡಾಡುತ್ತಿದ್ದ ವಾನರರು ತಮ್ಮ ಆಗಮದ ವಿಷಯವನ್ನು ತಕ್ಷಣದಲ್ಲಿ ಅಧಿಕಾರದ ಕೇಂದ್ರಕ್ಕೆ ತಿಳಿಸುತ್ತಾರೆ ಎನ್ನುವುದು ತಿಳಿದಿತ್ತು. ಅದಕ್ಕಾಗಿ ವಾಲಿಯೊಡನೆ ನಡೆಯಬಹುದಾದ ಎರಡನೆಯ ಯುದ್ಧದಲ್ಲಿ ಆಯ್ದುಕೊಂಡ ಕಾಲವೂ ಹಗಲಿನ ವೇಳೆಯಾಗಿರಲಿಲ್ಲ.
ಇದನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.
ಇದನ್ನೂ ಓದಿ: New Column: ಅವನಿ ಅಂಬರ ಅಂಕಣ: ಋಷ್ಯಮೂಕದೊಳಿಪ್ಪ ಸುಗ್ರೀವನೆಂಬ ವಾನರ