ಕಾಠ್ಮಂಡು: ಇಲ್ಲಿ ನಡೆದ ಏಷ್ಯಾ ರಗ್ಬಿ(Rugby) ಎಮಿರೇಟ್ಸ್ ಸೆವೆನ್ಸ್ ಟ್ರೋಫಿಯ(Asia Rugby Trophy) ಫೈನಲ್‌ನಲ್ಲಿ ಭಾರತದ ಮಹಿಳಾ ತಂಡ(India Women’s Rugby Team) ಫಿಲಿಪ್ಪೀನ್ಸ್ ಎದುರು 5-7 ಅಂತರದ ಆಘಾತಕಾರಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಶಿಖಾ ಯಾದವ್ ನೇತೃತ್ವದ ತಂಡವು ಫೈನಲ್‌ನಲ್ಲಿ ಎಡವಿತು.
ಸೆಮಿಫೈನಲ್‌ನಲ್ಲಿ ಭಾರತ ಗುವಾಮ್ ತಂಡವನ್ನು 24-7 ಅಂತರದಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪುವ ಮೂಲಕ ಫೈನಲ್ ಲಗ್ಗೆ ಇಟ್ಟಿತ್ತು. ಆದರೆ ಫೈನಲ್‌ನಲ್ಲಿ ನಮ್ಮವರ ಆಟ ನಡೆಯಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ 0-7 ಹಿನ್ನಡೆಯಲ್ಲಿದ್ದ ಭಾರತೀಯ ತಂಡ ದ್ವಿತೀಯಾರ್ಧದಲ್ಲಿ ಗ್ರೇಟ್ ಕಮ್ ಬ್ಯಾಕ್ ಮೂಲಕ 5 ಅಂಕ ಕಲೆ ಹಾಕಿತು. ಎದುರಾಳಿಗೆ ಈ ಅವಧಿಯಲ್ಲಿ ಒಂದೇ ಒಂದು ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಕನಿಷ್ಠ ಒಂದೆರಡು ಗೋಲು ಬಾರಿಸುತ್ತಿದ್ದರೂ ಕೂಡ ಗೆಲುವು ಭಾರತಕ್ಕೆ ಲಭಿಸುವ ಸಾಧ್ಯತೆ ಅಧಿಕವಾಗಿತ್ತು. ಆಟಗಾರ್ತಿಯರು ಲಯಕ್ಕೆ ಮರಳುವಾಗ ಪಂದ್ಯವೇ ಮುಕ್ತಾಯಗೊಂಡಿತ್ತು. ಲೀಗ್ ಸುತ್ತಿನಲ್ಲಿ, ಭಾರತವು ಶ್ರೀಲಂಕಾವನ್ನು 29-10 ಮತ್ತು ಇಂಡೋನೇಷ್ಯಾವನ್ನು 17-10 ಅಂಕದಿಂದ ಸೋಲಿಸಿತ್ತು.
ತಂಡದ ಪ್ರರ್ಶನದ ಬಗ್ಗೆ ಮಾತನಾಡಿದ ನಾಯಕಿ ಶಿಖಾ, ‘ಬೆಳ್ಳಿ ಪದಕದ ಸಾಧನೆ ಕಡಿಮೆಯಲ್ಲ. ಟೂರ್ನಿಯಲ್ಲಿ ನಾವು ಉತ್ತಮ ಆಟವಾಡಿದ್ದೇವೆ. ಮುಂದಿನ ಸ್ಪರ್ಧೆಗಳಲ್ಲಿ ಚಿನ್ನಕ್ಕಾಗಿ ಶ್ರಮಿಸುತ್ತೇವೆ. ತಂಡದ ಎಲ್ಲ ಆಟಗಾರ್ತಿಯರು ಉತ್ತಮ ಪ್ರದರ್ಶನ ತೋರಿದ್ದಾರೆ. ತಮ್ಮ ತರಬೇತುದಾರ ವೈಸಾಲೆ ಸೆರೆವಿ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದʼ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.