Monday, 7th October 2024

Hardik Pandya: ಕೊಹ್ಲಿಯ ಸಿಕ್ಸರ್‌ ದಾಖಲೆ ಮುರಿದ ಪಾಂಡ್ಯ

ಗ್ವಾಲಿಯರ್‌: ಬಾಂಗ್ಲಾದೇಶ(India vs Bangladesh) ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಗಮನಸೆಳೆದ ಟೀಮ್‌ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ(Hardik Pandya) ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಹೆಚ್ಚು ಬಾರಿ ಸಿಕ್ಸರ್‌ ಮೂಲಕ ಪಂದ್ಯವನ್ನು ಮುಗಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದುವರೆಗೂ ಈ ದಾಖಲೆ ವಿರಾಟ್‌ ಕೊಹ್ಲಿ(Virat Kohli) ಹೆಸರಿನಲ್ಲಿತ್ತು. ಕೊಹ್ಲಿ 4 ಬಾರಿ ಈ ಸಾಧನೆ ಮಾಡಿದ್ದರು. ಇದೀಗ ಪಾಂಡ್ಯ(5) ಅಗ್ರಸ್ಥಾನಕ್ಕೇರಿದ್ದಾರೆ.

ಬಾಂಗ್ಲಾ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಆಡಲಿಳಿದ ಪಾಂಡ್ಯ, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿ ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿ ಅಜೇಯ 39 ರನ್‌ ಚಚ್ಚಿದರು. ಎದುರಿಸಿದ್ದು ಕೇವಲ 16 ಎಸೆತಗಳು. ಬೌಲಿಂಗ್‌ನಲ್ಲಿಯೂ ಪಾಂಡ್ಯ 4 ಓವರ್‌ ಬೌಲಿಂಗ್‌ ದಾಳಿ ನಡೆಸಿ 24 ರನ್‌ ವೆಚ್ಚದಲ್ಲಿ ಒಂದು ವಿಕೆಟ್‌ ಕಿತ್ತರು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಅವರದ್ದು ಸರ್ವಾಂಗೀಣ ಪ್ರದರ್ಶನ.

ಅತಿ ಹೆಚ್ಚು ಸಿಕ್ಸರ್‌ ಮೂಲಕ ಪಂದ್ಯ ಗೆಲ್ಲಿದ ಬ್ಯಾಟರ್‌

ಹಾರ್ದಿಕ್‌ ಪಾಂಡ್ಯ-5

ವಿರಾಟ್‌ ಕೊಹ್ಲಿ-4

ಮಹೇಂದ್ರ ಸಿಂಗ್‌ ಧೋನಿ-3

ರಿಷಭ್‌ ಪಂತ್‌-3

ಇದನ್ನೂ ಓದಿ Mayank Yadav: ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್‌ ಯಾದವ್‌

ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ 14 ವರ್ಷಗಳ ಬಳಿಕೆ ನಡೆದ ಈ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಬಾಂಗ್ಲಾದೇಶ ನಾಟಕೀಯ ಕುಸಿತ ಕಂಡು19.5 ಓವರ್‌ಗಳಲ್ಲಿ 127 ರನ್‌ಗೆ ಕುಸಿಯಿತು. ಜವಾಬಿತ್ತ ಭಾರತ ಈ ಅಲ್ಪ ಮೊತ್ತವನ್ನು 11.5 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ ಬಾರಿಸಿ ಗೆಲುವು ದಾಖಲಿಸಿತು.

ಪಾಂಡ್ಯ ಮುಂದಿನ 2 ಪಂದ್ಯಗಳಿಂದ ಕೇವಲ 4 ವಿಕೆಟ್‌ ಕಿತ್ತರೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಭಾರತೀಯ ಬೌಲರ್‌ಗಳ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ. ಈ ವೇಳೆ ಭುವನೇಶ್ವರ್‌ ಕುಮಾರ್‌(90) ಮತ್ತು ಜಸ್‌ಪ್ರೀತ್‌ ಬುಮ್ರಾ(89) ದಾಖಲೆ ಹಿಂದಿಕ್ಕಲಿದ್ದಾರೆ. ಬುಮ್ರಾ ಮತ್ತು ಭುವನೇಶ್ವರ್‌ ಈ ಸರಣಿ ಆಡುತ್ತಿಲ್ಲವಾದ ಕಾರಣ ಪಾಂಡ್ಯಗೆ ಪೈಪೋಟಿ ಕೂಡ ಇಲ್ಲದಂತಾಗಿದೆ. ಪಾಂಡ್ಯ ಇದುವರೆಗೆ 103 ಪಂದ್ಯ ಆಡಿ 87 ವಿಕೆಟ್‌ ಕೆಡವಿದ್ದಾರೆ. ಅತಿ ಹೆಚ್ಚು ವಿಕೆಟ್‌ ಕಿತ್ತ ದಾಖಲೆ ಯಜುವೇಂದ್ರ ಚಹಲ್‌ ಹೆಸರಿನಲ್ಲಿದೆ. ಚಹಲ್‌ 80 ಪಂದ್ಯ ಆಡಿ 96 ವಿಕೆಟ್‌ ಪಡೆದಿದ್ದಾರೆ.