Friday, 22nd November 2024

Chennai Air Show: ಚೆನ್ನೈ ವೈಮಾನಿಕ ಪ್ರದರ್ಶನ ದುರಂತಕ್ಕೆ ಏನು ಕಾರಣ?

Chennai Air Show

ಚೆನ್ನೈ: ಭಾರತೀಯ ವಾಯುಪಡೆಯು (Indian Air Force) ಭಾನುವಾರ ಚೆನ್ನೈನ ಮರೀನಾ ಬೀಚ್‌ನಲ್ಲಿ (Chennai Marina beach) ಆಯೋಜಿಸಿದ್ದ ವೈಮಾನಿಕ ಪ್ರದರ್ಶನದ (Chennai Air Show) ವೇಳೆ ನಡೆದಿರುವ ದುರ್ಘಟನೆಗೆ ಕಳಪೆ ಯೋಜನೆಯೇ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ.

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದ್ದು, ಈ ವೇಳೆ ನೆರೆದಿದ್ದ ಪ್ರೇಕ್ಷಕರಲ್ಲಿ ಐವರು ಸಾವನ್ನಪ್ಪಿದ್ದು 50 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಜಲೀಕರಣ ಮತ್ತು ತೀವ್ರ ನಿಶ್ಯಕ್ತಿಯ ಕಾರಣದಿಂದ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ. ಜನದಟ್ಟಣೆ ಹೆಚ್ಚಾಗಿದ್ದು, ಕಳಪೆ ನಿರ್ವಹಣೆ, ಸಂಚಾರ ಯೋಜನೆಯ ಕೊರತೆ, ಅಸಮರ್ಪಕ ಸಾರ್ವಜನಿಕ ಸಾರಿಗೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಬೀಚ್‌ನಲ್ಲಿ ವೈಮಾನಿಕ ಪ್ರದರ್ಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆಯವರೆಗೆ ನಡೆದಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿದ ಸಾವಿರಾರು ಜನರು ಹಲವಾರು ಕಿಲೋ ಮೀಟರ್ ಉದ್ದದ ಬೀಚ್ ತೀರದಲ್ಲಿ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಂತಿದ್ದರು. ಇದರಲ್ಲಿ ಐವರು ಸಾವನ್ನಪ್ಪಿದ್ದು, ಅನೇಕರು ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದಿದ್ದರು. ನಿರ್ಜಲೀಕರಣ ಮತ್ತು ಬಳಲಿಕೆಯಿಂದ 50ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

Chennai Air Show

ಜನಸಂದಣಿ ನಿಯಂತ್ರಣ ಮತ್ತು ಟ್ರಾಫಿಕ್ ನಿರ್ವಹಣೆಯ ಕೊರತೆಯ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆ ಹೊರಡುವ ಧಾವಂತವು ಮತ್ತಷ್ಟು ಅವ್ಯವಸ್ಥೆಗೆ ಕಾರಣವಾಗಿತ್ತು. ಇದರಿಂದ ನೂರಾರು ಜನರು ರಸ್ತೆ, ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದರು. ಇದನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಿತ್ತು.

ವೈಮಾನಿಕ ಪ್ರದರ್ಶನ ಸ್ಥಳದ ಸಮೀಪದಲ್ಲಿರುವ ಅಣ್ಣಾ ಚೌಕದ ಬಸ್ ನಿಲ್ದಾಣವು ಜನರಿಂದ ತುಂಬಿ ತುಳುಕುತ್ತಿತ್ತು. ಸಂಚಾರ ನಿರ್ಬಂಧಗಳ ದೃಷ್ಟಿಯಿಂದ ಜನರು ಬಸ್ಸುಗಳನ್ನು ಹಿಡಿಯಲು ಅಥವಾ ರೈಲು ನಿಲ್ದಾಣಗಳನ್ನು ತಲುಪಲು ಸಾಕಷ್ಟು ದೂರ ನಡೆಯಬೇಕಾಗಿತ್ತು. ನಿಶ್ಯಕ್ತಿಯಿಂದಾಗಿ ಹಲವಾರು ವ್ಯಕ್ತಿಗಳು ಮೂರ್ಛೆ ಹೋದರು. ತುರ್ತು ಕಾರ್ಯಕರ್ತರು ಅವರನ್ನು ಆಶ್ರಯ ಕೇಂದ್ರಗಳಲ್ಲಿ ಆರೈಕೆ ಮಾಡಿದರು. ಕಾರ್ಯಕ್ರಮದ ಮುಗಿದ ಬಳಿಕ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಸ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.

Chennai Air Show

ಬಿಜೆಪಿ-ಡಿಎಂಕೆ ಆರೋಪ ಪ್ರತ್ಯಾರೋಪ

ವೈಮಾನಿಕ ಪ್ರದರ್ಶನದ ವ್ಯವಸ್ಥೆ ಬಗ್ಗೆ ರಾಜ್ಯದ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಸಮರ್ಥಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ಎರಡು ಆರೋಗ್ಯ ತಂಡಗಳನ್ನು ನಿಯೋಜಿಸಲಾಗಿತ್ತು. ನಲವತ್ತು ಆಂಬ್ಯುಲೆನ್ಸ್‌ಗಳನ್ನು ಅರೆವೈದ್ಯಕೀಯ ತಂಡಗಳೊಂದಿಗೆ ಇರಿಸಲಾಗಿತ್ತು. ಆದರೂ ಈ ದುರಂತ ಘಟನೆಯು ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಡಿಎಂಕೆ ಸರ್ಕಾರವನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ದೂರಿದ್ದಾರೆ.

PM Modi Meets Muizzu: ಮೋದಿ ಜತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾತುಕತೆ

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಚೆನ್ನೈ ಮರೀನಾ ಬೀಚ್ ನಲ್ಲಿ ನಡೆದ ಐಎಎಫ್ ‘ಏರ್ ಶೋ’ ಕಾರ್ಯಕ್ರಮದಲ್ಲಿ ಜನಸಂದಣಿಯಿಂದ 5 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ಕೇಳಿ ಆಘಾತವಾಯಿತು. ಇದಕ್ಕೆ ಒಂದೇ ಕಾರಣ ಡಿಎಂಕೆ ಸರ್ಕಾರ ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಬಂದ ಸಾರ್ವಜನಿಕರಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಮತ್ತು ಸಾಕಷ್ಟು ಸಾರಿಗೆ ವ್ಯವಸ್ಥೆಗಳನ್ನು ಒದಗಿಸದೆ ಸರ್ಕಾರವು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಅವರು ತಿಳಿಸಿದ್ದಾರೆ.