Monday, 25th November 2024

PM Modi Meets Muizzu: ಮೋದಿ ಜತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾತುಕತೆ

PM Modi Meets Muizzu

ನವದೆಹಲಿ: ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರನ್ನು ಸೋಮವಾರ (ಅಕ್ಟೋಬರ್‌ 7) ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಮಾಡಿದರು (PM Modi Meets Muizzu). ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಈ ನಾಯಕರು ಭೇಟಿಯಾದರು. ಭಾರತಕ್ಕೆ ತಮ್ಮ ಅಧಿಕೃತ ಭೇಟಿಗಾಗಿ ಭಾನುವಾರ ಬಂದಿಳಿದ ಮೊಹಮ್ಮದ್ ಮುಯಿಝು ಅವರು ಬಿಗಡಾಯಿಸಿರುವ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಧನಸಹಾಯ ಯಾಚಿಸಲಿದ್ದಾರೆ ಹಾಗೂ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಯತ್ನಿಸಲಿದ್ದಾರೆ.

ಈ ಸಭೆಯಲ್ಲಿ ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಮುಯಿಝು ಅವರು ತಮ್ಮ ಐದು ದಿನಗಳ ಭಾರತ ಭೇಟಿಯ ವೇಳೆ ಹಿರಿಯ ಭಾರತೀಯ ಅಧಿಕಾರಿಗಳೊಂದಿಗೂ ಸಭೆಗಳನ್ನು ನಡೆಸಲಿದ್ದಾರೆ.

ಕಳೆದ ವರ್ಷ ಭಾರತ ಸ್ನೇಹಿ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಸೋಲಿಸಿ ಚೀನಾ ಪರ ಒಲವು ಹೊಂದಿರುವ ಮುಯಿಝು ಅಧಿಕಾರಕ್ಕೆ ಬಂದಾಗಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. 2023ರ ಚುನಾವಣೆಗೆ ಮುನ್ನ ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ ಭಾರತೀಯ ಸೈನಿಕರನ್ನು ಹೊರಹಾಕುವುದಾಗಿ ಮುಯಿಝು ಭರವಸೆ ನೀಡಿದ್ದರು.

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೆ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಬಳಿಕ ಭಾರಿ ಹೊಡೆತ ಬಿದ್ದಿತ್ತು. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಅಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿತ್ತು.

ಇದು ಭಾರತಕ್ಕೆ ಮುಯಿಝು ಅವರ ಮೊದಲ ದ್ವಿಪಕ್ಷೀಯ ಭೇಟಿ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಜೂನ್‌ನಲ್ಲಿ ಇನ್ನಿತರ ಆರು ರಾಷ್ಟ್ರಗಳ ನಾಯಕರೊಂದಿಗೆ ನವದೆಹಲಿಗೆ ಬಂದಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಕಠಿಣವಾದ ಹಂತದಲ್ಲಿರುವ ಹೊತ್ತಿನಲ್ಲಿ ಈ ಭೇಟಿ ಆಯೋಜಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ 80ಕ್ಕೂ ಹೆಚ್ಚು ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಭಾರತ ಹಿಂತೆಗೆದುಕೊಳ್ಳುವಂತೆ ಮುಯಿಝು ಕಠಿಣ ಎಚ್ಚರಿಕೆ ನೀಡಿದ್ದರು. ಹಾಗೂ ಚೀನಾಕ್ಕೆ ಹತ್ತಿರವಾಗಲು ಪ್ರಯತ್ನಿಸಿದ್ದರು. ಇದರ ಜತೆಗೆ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನವೂ ಸೇರಿ ಭಾರತದೊಂದಿಗೆ ಮಾಲ್ಡೀವ್ಸ್‌ನ ಬಾಂಧವ್ಯ ಹಳಸಿತ್ತು. ಇದೀಗ ಸುಮಾರು ಒಂದು ಡಜನ್ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ಮುಯಿಝು ಅವರ ತಂಡ ಆಗಮಿಸಿದೆ. ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಮುಯಿಝುರನ್ನು ಬರಮಾಡಿಕೊಂಡರು. ಮೋದಿ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಉಭಯ ದೇಶಗಳು ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಂದಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Mohamed Muizzu India visit: ಬಿರುಕುಬಿಟ್ಟ ಬಾಂಧವ್ಯಕ್ಕೆ ತೇಪೆ ಹಾಕಲು ಭಾರತಕ್ಕೆ ಬಂದಿಳಿದ ಮಾಲ್ದೀವ್ಸ್‌ ಅಧ್ಯಕ್ಷ ಮುಯಿಝು