ರಾಂಚಿ: ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್ ಕೂಲ್, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ ಕೆಲವು ವರ್ಷ ಕಳೆದದಿದ್ದರೂ ಕೂಡ ಅವರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಈಗಲೂ ಅಪಾರ ಸಂಖ್ಯೆಯ ಅಭಿಮಾನಿ(MS Dhoni Fan) ಬಳಗವನ್ನು ಹೊಂದಿದ್ದಾರೆ. ಧೋನಿಯನ್ನು ಭೇಟಿ ಮಾಡಲು, ಆಟೋಗ್ರಾಪ್ ಪಡೆಯಲು ಕಾದು ಕುಳಿತಿರುತ್ತಾರೆ. ಇಲ್ಲೊಬ್ಬ ಅಭಿಮಾನಿ ಧೋನಿಯನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಅವರ ಮನೆ ಮುಂದೆಯೇ ಟೆಂಟ್ ಹಾಕಿ 6 ರಾತ್ರಿಗಳನ್ನ ಕಳೆದು ಕೊನೆಗೂ ತನ್ನ ಆಸೆ ಈಡೆರಿಸಿಕೊಂಡಿದ್ದಾನೆ.
ಬಿಹಾರ ಮೂಲದ ಧೋನಿ ಅಭಿಮಾನಿಯಾಗಿರುವ ಗೌರವ್ ಕುಮಾರ್(gourav kumar) ಡೆಲ್ಲಿಯಲ್ಲಿ ನೆಲೆಸಿದ್ದಾನೆ. ಧೋನಿಯನ್ನು ನೋಡಲು ಡೆಲ್ಲಿಯಿಂದ 1200 ಕಿ.ಮೀ ದೂರ ಸೈಕಲ್ ತುಳಿಯುತ್ತಾ ಧೋನಿ ತವರಾದ ರಾಂಚಿಗೆ ಆಗಮಿಸಿದ್ದಾನೆ. ಧೋನಿಯನ್ನು ನೋಡಿಯೇ ಡೆಲ್ಲಿಗೆ ತೆರಳುವುದಾಗಿ ಪಣ ತೊಟ್ಟಿದ್ದ. ಇದೇ ಕಾರಣಕ್ಕೆ ಧೋನಿ ಫಾರ್ಮ್ಹೌಸ್ ಬಳಿ ಟೆಂಟ್ ಹಾಕಿ ಕೆಲ ದಿನಗಳಿಂದ ಕಾಯುತ್ತಿದ್ದ. ಕೊನೆಗೂ ಧೋನಿ ತನ್ನ ಅಭಿಮಾನಿಯನ್ನು ಭೇಟಿ ಮಾಡಿ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಗೌರವ್ ಕುಮಾರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾರೆ.
ʼಕೊನೆಗೂ ನನ್ನ ಆರಾಧ್ಯ ದೈವ ಧೋನಿ ಸರ್ ಅವರನ್ನು ಭೇಟಿಯಾದೆ. ಈ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಧೋನಿ ಜತೆ ಅವರ ಹಿರಿಯ ಸಹೋದರನನ್ನೂ ಭೇಟಿಯಾದೆ. ಧೋನಿ ಜತೆ ಫಾರ್ಮ್ಹೌಸ್ ಸುತ್ತಾಡಿದೆ. ಸೆಕ್ಯೂರಿಟಿ ಕಾರಣದಿಂದ ಧೋನಿ ಜತೆಗೆ ಫೋಟೋ ಹಾಗೂ ವಿಡಿಯೊ ಸಿಗಲಿಲ್ಲ. ಆದರೆ ಅವರು ತಮ್ಮ ಹಸ್ತಾಕ್ಷರವುಳ್ಳ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ MS Dhoni: ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಕೇಳಿಕೆ ಕೊಟ್ಟ ಫ್ರಾಂಚೈಸಿ ಸಿಇಒ
ಕಳೆದ ಐಪಿಎಲ್ ವೇಳೆ ಧೋನಿಯ ಆಟ ನೋಡಲೆಂದು ಇದೇ ಅಭಿಮಾನಿ ಗೌರವ್ ಕುಮಾರ್, ಡೆಲ್ಲಿಯಿಂದ ಬರೋಬ್ಬರಿ 2100 ಕಿ.ಮೀ ಸೈಕಲ್ ತುಳಿದು ಚೆನ್ನೈಗೆ ಆಗಮಿಸಿ ಪಂದ್ಯ ವೀಕ್ಷಿಸಿದ್ದ. 23 ದಿನಗಳ ಜರ್ನಿ ಇದಾಗಿತ್ತು. ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.