Monday, 7th October 2024

Child dies: ಬೆಂಗಳೂರಲ್ಲಿ ಕೇಕ್‌ ತಿಂದು 5 ವರ್ಷದ ಮಗು ಸಾವು; ತಂದೆ-ತಾಯಿಗೆ ಐಸಿಯುನಲ್ಲಿ ಚಿಕಿತ್ಸೆ

Birthday Cake

ಬೆಂಗಳೂರು: ಕೇಕ್‌ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ 5 ವರ್ಷದ ಮಗು ಮೃತಪಟ್ಟಿರುವುದು (Child dies) ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ.

ಧೀರಜ್ (5) ಮೃತ ಮಗು. ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲರಾಜ್‌ ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದು, ಮಗನಿಗಾಗಿ ಮನೆಗೆ ಕೇಕ್‌ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗು ಜತೆ ಸೇರಿ ಕೇಕ್ ತಿಂದಿದ್ದರು. ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಧೀರಜ್‌ ತೀವ್ರ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲರಾಜ್ , ನಾಗಲಕ್ಷ್ಮಿ ದಂಪತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೆಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ ತಿಂದಿದ್ದರಿಂದಲೇ ಅಸ್ವಸ್ಥರಾಗಿದ್ದಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಪುಡ್ ಪಾಯನ್ಸ್‌ನಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Shivamogga News: ಎಸ್ಕೇಪ್‌ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿ ಬಂಧನ

ಬಾಲಕ ಧೀರಜ್‌ ತಂದೆ ಬಾಲರಾಜ್‌ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ವ್ಯಕ್ತಿಯೊಬ್ಬರು ಕೇಕ್ ಆರ್ಡರ್ ಮಾಡಿ, ನಂತರ ಕ್ಯಾನ್ಸಲ್ ಮಾಡಿದ್ದರಂತೆ. ಹೀಗಾಗಿ ಬಾಲರಾಜ್‌ ಕೇಕ್ ಮನೆಗೆ ತಂದು ಕುಟುಂಬದೊಂದಿಗೆ ತಿಂದಿದ್ದಾರೆ. ನಂತರ ಮೂವರು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡು ಧೀರಜ್‌ ಮೃತಪಟ್ಟಿದ್ದಾನೆ. ಸದ್ಯ ಈ ಪ್ರಕರಣ ಹಲವು ಅನುಮಾನ ಮೂಡಿಸಿದೆ.