Friday, 22nd November 2024

Hardeep Singh Nijjar: ನಿಜ್ಜರ್‌ ಹತ್ಯೆ ತನಿಖಾ ವರದಿಗೆ ವೈಟಿಂಗ್‌ ಎಂದ ಕೆನಡಾ; ಮತ್ತೆ ಭಾರತದತ್ತ ಬೊಟ್ಟು ಮಾಡಿದ ಟ್ರುಡೊ

Hardeep Singh Nijjar

ಟೊರೊಂಟೊ: ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್(Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತದ ಗುಪ್ತಚರ ಇಲಾಖೆ ನಂಟು ಹೊಂದಿರುವ ಬಗ್ಗೆ ಕಾನೂನು ಜಾರಿ ಸಂಸ್ಥೆಗಳು ನಡೆಸುತ್ತಿರುವ ತನಿಖೆಯ ವರದಿಗಾಗಿ ತಾನು ಇನ್ನೂ ಕಾಯುತ್ತಿರುವುದಾಗಿ ಕೆನಡಾ ಸರ್ಕಾರ ಹೇಳಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಅವರು ಹೌಸ್ ಆಫ್ ಕಾಮನ್ಸ್‌ನಲ್ಲಿಈ ಬಗ್ಗೆ ಮಾತನಾಡಿದ್ದು, ಭಾರತೀಯ ಏಜೆಂಟ್‌ಗಳು ಮತ್ತು ನಿಜ್ಜರ್ ಹತ್ಯೆಯ ನಡುವೆ ನಂಟು ಹೊಂದಿರುವ ಬಗ್ಗೆ ಆರೋಪಗಳಿವೆ. ಈ ಬಗೆಗಿನ ತನಿಖಾ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ವಿದೇಶಿ ಇಂಟಫಿಯರೆನ್ಸ್‌ ಕಮಿಷನ್‌ ಎದುರು ಹಾಜರಾದ ಗ್ಲೋಬಲ್ ಅಫೇರ್ಸ್ ಕೆನಡಾ (ಜಿಎಸಿ) ನಲ್ಲಿ ಇಂಡೋ-ಪೆಸಿಫಿಕ್‌ನ ಸಹಾಯಕ ಸಚಿವ ವೆಲ್ಡನ್ ಎಪ್, ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (ಆರ್‌ಸಿಎಂಪಿ) ತನಿಖೆಗಳು ರಾಜತಾಂತ್ರಿಕತೆಯಂತೆಯೇ ನಡೆಯುತ್ತಿದೆ ಎಂದು ಹೇಳಿದರು. “ಆ ತನಿಖೆಗಳು ಮುಗಿಯುವವರೆಗೆ, ಭಾರತದ ಗುಪ್ತಚರ ಇಲಾಖೆ ವಿರುದ್ಧ ಆರೋಪಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆ ದಿನವನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೂಡ ಎನ್‌ಐಎ ಘೋಷಿಸಿತ್ತು.

ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಖಲಿಸ್ತಾನಿ ಉಗ್ರ, ಖಲಿಸ್ತಾನ್‌ ನಾಯಕ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು.

ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯ ಸಂಬಂಧ ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಭಾರತೀಯ ಮೂಲದ ಕರನ್‌ ಬ್ರಾರ್‌ (22), ಕಮಲ್‌ಪ್ರೀತ್‌ ಸಿಂಗ್‌ (22), ಕರಣ್‌ಪ್ರೀತ್‌ ಸಿಂಗ್‌ (28) ಮತ್ತು ಅಮನ್‌ದೀಪ್‌ ಸಿಂಗ್‌ (22) ಬಂಧಿತರು.

ಈ ಸುದ್ದಿಯನ್ನೂ ಓದಿ: ಕೆನಡಾ ಕೂಡ ಪಾಕಿಸ್ತಾನ ಆಗದಿರಲಿ !