Monday, 25th November 2024

Tejaswi Yadav: ತೇಜಸ್ವಿ ಯಾದವ್‌ ತೆರವು ಮಾಡಿರುವ ಸರ್ಕಾರಿ ಬಂಗಲೆಯಲ್ಲಿ ಸೋಫಾ, ಎಸಿ, ಬೆಡ್‌ ಮಿಸ್ಸಿಂಗ್;‌ ಬಿಜೆಪಿ ಗಂಭೀರ ಆರೋಪ

Tejaswi Yadav

ಪಾಟ್ನಾ: ಇತ್ತೀಚೆಗಷ್ಟೇ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌(Tejaswi Yadav) ಅವರು ತೆರವುಗೊಳಿಸಿರುವ ಅಧಿಕೃತ ಬಂಗಲೆಯಲ್ಲಿ ಸೋಫಾಗಳು, ನೀರಿನ ನಲ್ಲಿಗಳು, ವಾಶ್ ಬೇಸಿನ್‌ಗಳು, ಹವಾನಿಯಂತ್ರಣಗಳು(AC), ದೀಪಗಳು, ಹಾಸಿಗೆಗಳು ಕಾಣೆಯಾಗಿವೆ. ಆ ವಸ್ತುಗಳು ಕಳ್ಳತನವಾಗಿದೆ ಎಂದು ಬಿಜೆಪಿ(BJP) ಆರೋಪಿಸಿದೆ. ರಾಷ್ಟ್ರೀಯ ಜನತಾ ದಳ ಅಥವಾ ಆರ್‌ಜೆಡಿ, ತೇಜಸ್ವಿ ಯಾದವ್ ಅವರ ಪಕ್ಷವು ತಕ್ಷಣ ಆ ವಸ್ತುಗಳನ್ನು ಮರಳಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.

ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಮೈತ್ರಿಯಲ್ಲಿದ್ದಾಗ ಅವರು ಹೊಂದಿದ್ದ 5 ದೇಶ್ರತಾನ್ ರಸ್ತೆಯಲ್ಲಿರುವ ಬಂಗಲೆಯನ್ನು ಯಾದವ್ ಅವರು ಇಂದು ಖಾಲಿ ಮಾಡಿದ್ದಾರೆ. ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ವಿಜಯದಶಮಿಯ ಶುಭ ಸಂದರ್ಭದಲ್ಲಿ ಹೊಸ ಮನೆಗೆ ತೆರಳಲಿದ್ದಾರೆ. ಆದರೆ ಇದಕ್ಕೂ ಮುನ್ನವೇ ಡಿಸಿಎಂ ನಿವಾಸದ ವಸ್ತುಗಳು ಕಳ್ಳತನವಾಗಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಸಾಮ್ರಾಟ್ ಚೌಧರಿ ಅವರ ಆಪ್ತ ಕಾರ್ಯದರ್ಶಿ ಶತ್ರುಘ್ನ ಪ್ರಸಾದ್ ಪ್ರತಿಕ್ರಿಯಿಸಿದ್ದು, ಉಪಮುಖ್ಯಮಂತ್ರಿಯವರ ಮನೆಯಲ್ಲಿ ಯಾವ ರೀತಿ ಕಳ್ಳತನವಾಗಿದೆ ಎಂಬುದನ್ನು ಬೆಳಕಿಗೆ ತರುತ್ತಿದ್ದೇವೆ. ಅಲ್ಲಿ ಎರಡು ಹೈಡ್ರಾಲಿಕ್ ಬೆಡ್‌ಗಳು, ಅತಿಥಿಗಳಿಗಾಗಿ ಸೋಫಾ ಸೆಟ್‌ಗಳು ಇದ್ದವು. ಆ ಎಲ್ಲಾ ವಸ್ತುಗಳು ಕಾಣೆಯಾಗಿವೆ. 20ಕ್ಕೂ ಹೆಚ್ಚು ಸ್ಪ್ಲಿಟ್ ಎಸಿಗಳು ಕಾಣೆಯಾಗಿವೆ. ಆಪರೇಟಿಂಗ್ ಕೋಣೆಯಲ್ಲಿ ಕಂಪ್ಯೂಟರ್ ಅಥವಾ ಕುರ್ಚಿ ಇಲ್ಲ, ಅಡುಗೆಮನೆಯಲ್ಲಿ ಫ್ರಿಜ್ ಇಲ್ಲ. ಗೋಡೆಗಳಿಂದ ಲೈಟ್‌ಗಳನ್ನು ಎಂದು ಅವರು ಹೇಳಿದರು.

ಆಜೆಡಿ ಸ್ಪಷ್ಟನೆ

ಈ ಬಗ್ಗೆ ಆರ್‌ಜೆಡಿ ಪ್ರತಿಕ್ರಿಯೆ ನೀಡಿದ್ದು, ಭವನ ನಿರ್ಮಾಣ ವಿಭಾಗದಿಂದ ಪಡೆದ ಸೂಕ್ತ ದಾಖಲೆಯನ್ನು ಬಿಜೆಪಿ ನೀಡಬೇಕು. ಒಂದು ವೇಳೆ ಆರೋಪ ಸುಳ್ಳು ಎಂಬುದು ಸಾಬೀತಾದರೆ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತತಾಯಿಸಿದೆ. ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ ಶಕ್ತಿ ಯಾದವ್‌ ಪ್ರತಿಕ್ರಿಯಿಸಿದ್ದು, ಬಿಹಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್‌ ಅವರು 5 ದೇಶತನ್ ಮಾರ್ಗ್ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಭವನ ನಿರ್ಮಾಣ ವಿಭಾಗವು ದಾಸ್ತಾನು ಬಿಡುಗಡೆ ಮಾಡಬೇಕು. ನಮ್ಮ ಬಳಿ ಎಲ್ಲಾ ಪುರಾವೆಗಳಿವೆ. ವಸ್ತುಗಳ ಕಳ್ಳತನವಾಗಿದೆ ಎಂಬುದಕ್ಕೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲೆಸೆದಿದ್ದಾರೆ.

ಇನ್ನು ಈ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಾಮ್ರಾಟ್ ಚೌಧರಿ ಅವರಿಗೆ ಈ ಬಂಗಲೆ ಮಂಜೂರು ಮಾಡಲಾಗಿದ್ದು, ನವರಾತ್ರಿಯಲ್ಲಿ ಈ ಮನೆಗೆ ಶಿಫ್ಟ್ ಆಗಬೇಕಿತ್ತು. ವಾಶ್ ಬೇಸಿನ್, ನೀರಿನ ನಲ್ಲಿಗಳು, ಪೀಠೋಪಕರಣಗಳಂತಹ ಅಗತ್ಯ ವಸ್ತುಗಳು ಕಾಣೆಯಾಗಿವೆ. ಹೈಡ್ರಾಲಿಕ್ ಬೆಡ್ ತೆಗೆದಿದ್ದಾರೆ. ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿದ್ದ ಚಾಪೆಯನ್ನೂ ತೆಗೆದುಕೊಂಡು ಹೋಗಲಾಗಿದೆ. ಜಿಮ್ ಖಾಲಿಯಾಗಿದೆ ಎಂದು ಬಿಹಾರದ ಬಿಜೆಪಿಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್ ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bihar Tragedy: ಬಿಹಾರದಲ್ಲಿ ಘನಘೋರ ದುರಂತ; ಪುಣ್ಯಸ್ನಾನದ ವೇಳೆ 37 ಮಕ್ಕಳು ಸೇರಿ ಬರೋಬ್ಬರಿ 46 ಜನ ನೀರುಪಾಲು