ಮದ್ದೂರು: ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯಾನೂ ಕೇಳ್ತಿವಿ. ಅವರು ಯಾವತ್ತಾದರೂ ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅನುಭವ ಇಲ್ಲ ಅದಕ್ಕೆ ಆ ರೀತಿ ಅಂತಾರೆ ಅಷ್ಟೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಎಚ್.ಡಿ. ಕುಮಾರಸ್ವಾಮಿ (HD Kumaraswamy) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವಧಿಗೂ ಮುನ್ನ ಚುನಾವಣೆ ವಿಚಾರದ ಬಗ್ಗೆ ಎಚ್.ಡಿ.ಕೆ ಹೇಳಿಕೆ ವಿಚಾರ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಮದ್ದೂರಿನ ತರಮ್ಮನಕಟ್ಟೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಯಾವ ಸರ್ಕಾರ ಬಂದರೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಕ್ಕರೂ ಪೂರ್ಣ ಅವಧಿಯನ್ನು ಮುಗಿಸೋಕೆ ಯಾವತ್ತು ರೆಡಿ ಇಲ್ಲ. ಅವರು ಜ್ಯೋತಿಷ್ಯ ಹೇಳೋದಾದ್ರೆ ಹೇಳಿ, ಒಂದಷ್ಟು ಜನ ನನ್ನ ಹತ್ರ ಯಾರಾದ್ರೂ ಬಂದ್ರೆ ಹೇಳ್ತಿನಿ, ಒಳ್ಳೆ ಜ್ಯೋತಿಷ್ಯ ಹೇಳೋರು ಇದ್ದಾರೆ ಹೋಗಿ ಅಂತ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Government Jobs: 34,863 ಖಾಲಿ ಹುದ್ದೆಗಳನ್ನು ಕಾಲಮಿತಿಯಲ್ಲಿ ತುಂಬಲು ಸಿಎಂ ಸೂಚನೆ
ಗೃಹ ಸಚಿವ ಪರಮೇಶ್ವರ್-ಸತೀಶ್ ಜಾರಕಿಹೋಳಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದಾ? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗದಿ ಮಾಡಕ್ಕಾಗುತ್ತಾ ಎಂದರು. ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪ ವಿಚಾರ ಕುರಿತು ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ ಅವರು, ಅವರ ಪಕ್ಷದ ತೀರ್ಮಾನ ಏನಾದರೂ ಮಾಡಿಕೊಳ್ಳಲಿ ಎಂದರು.
ಈ ಸುದ್ದಿಯನ್ನೂ ಓದಿ | Karnataka Rain: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮುಂದುವರಿಯಲಿದೆ ವರುಣಾರ್ಭಟ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ತೀರ್ಮಾನ ಮಾಡಿದ್ದೇವೆ. ಸೂಕ್ತ ಸಂದರ್ಭದಲ್ಲಿ ಘೋಷಣೆ ಮಾಡಲಾಗುವುದು. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.