Thursday, 21st November 2024

Nagamangala Violence: ನಾಗಮಂಗಲ ಕೋಮುಗಲಭೆ ಕೇಸ್‌ಗೆ ಟ್ವಿಸ್ಟ್‌: ದೂರು ನೀಡಿದ್ದ ಪೊಲೀಸ್ ಅಧಿಕಾರಿಯ ಅಮಾನತು

Nagamangala Violence

ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Mandya violence) ಗಣೇಶ ಮೂರ್ತಿಯ ವಿಸರ್ಜನೆ (Ganesha visarjan) ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Crime news) ಹಾಗೂ ಗಲಭೆ (Nagamangala Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಗಲಭೆ ಬಗ್ಗೆ ದೂರು ನೀಡಿದ್ದ ಅಧಿಕಾರಿಯನ್ನೇ ಅಮಾನತುಗೊಳಿಸಲಾಗಿದೆ. ನಾಗಮಂಗಲ ಟೌನ್ ಠಾಣೆ ಪಿಎಸ್​ಐ ಬಿ.ಜೆ.ರವಿ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶ ಹೊರಡಿಸಿದ್ದಾರೆ.

ಗಣೇಶ ವಿಸರ್ಜನೆ ಮಾಡುತ್ತಿದ್ದವರ ಪ್ರಚೋದನೆಯಿಂದ ಗಲಭೆ ಸೃಷ್ಟಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪಿಎಸ್ಐ ರವಿ ಅವರನ್ನು ಅಮಾನತು ಮಾಡಲಾಗಿದೆ. ಅವರ ಜತೆಗೆ ಪೊಲೀಸ್​ ಪೇದೆ ​ ರಮೇಶ್ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ.

ಗಲಭೆಯ ಹಿನ್ನೆಲೆ

ನಾಗಮಂಗಲದಲ್ಲಿ ಗಣೇಶೋತ್ಸವದ ಬಳಿಕ ನಡೆಯುತ್ತಿದ್ದ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಜಿಲ್ಲೆಯ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ, ಗಣೇಶ ವಿಸರ್ಜನೆಯ ಅಂಗವಾಗಿ ಮೂರ್ತಿಯನ್ನು ಮೆರವಣಿಗೆಗೆ ತಂದಿದ್ದ ವೇಳೆ ಇಲ್ಲಿನ ದರ್ಗಾ ಬಳಿ ಏಕಾಏಕಿ ಕಲ್ಲು ತೂರಾಟ ನಡೆದಿತ್ತು.

ಕೆಲವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಪೆಟ್ರೋಲ್‌ ಬಾಂಬ್‌ ಎಸೆದು ಸಿಕ್ಕ ಸಿಕ್ಕಲ್ಲಿ ಬೆಂಕಿ ಕೂಡ ಹಚ್ಚಿದ್ದರು. ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ್ದು, ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿ ದಾಂಧಲೆ ನಡೆಸಿದ್ದರು. ದುಷ್ಕರ್ಮಿಗಳು ಕೈಯಲ್ಲಿ ಕತ್ತಿ, ತಲ್ವಾರ್‌ ಕೂಡ ಹಿಡಿದು ಬಂದಿದ್ದರು.

ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಲಾಠಿ ಚಾರ್ಜ್‌ ಮೂಲಕ ದುಷ್ಕರ್ಮಿಗಳನ್ನು ಅಲ್ಲಿಂದ ಚದುರಿಸಿ, ಅವರು ತಂದಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿತ್ತು.

ಮುಸ್ಲಿಂ ಸಮುದಾಯದ ಕೆಲ ಯುವಕರು ಈ ರೀತಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಕೇರಳದಿಂದಲೂ ಈ ದಾಳಿ ನಡೆಸಲು ಗೂಂಡಾಗಳನ್ನು ಕರೆಸಲಾಗಿದೆ ಎಂದು ಗಣೇಶೋತ್ಸವದ ಯುವಕರು ಆರೋಪಿಸಿದ್ದರು. ಗಣಪತಿ ಮೂರ್ತಿಯನ್ನು ನೇರವಾಗಿ ನಾಗಮಂಗಲ ಪೊಲೀಸ್‌ ಠಾಣೆಯ ಎದುರು ಕರೆದೊಯ್ದು, ಧಿಕ್ಕಾರ ಕೂಗಿದ್ದರು. ರಾಜ್ಯದ್ಯಂತ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದವು. ರಾಜ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ-ಜೆಡಿಎಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಿಜೆಪಿಯು ಘಟನೆಯ ಕುರಿತು ಸತ್ಯಾಸತ್ಯತೆ ತಿಳಿಯಲು ಸತ್ಯಶೋಧನಾ ತಂಡವನ್ನು ರಚಿಸಿ, ಸಮಗ್ರ ವರದಿ ನೀಡಲು ನಿರ್ದೇಶಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸತ್ಯಶೋಧನಾ ತಂಡ ರಚಿಸಿದ್ದರು. ಇದರಲ್ಲಿ ಬಿಜೆಪಿ ನಾಯಕರಾದ ಸಿ.ಎನ್‌.ಅಶ್ವತ್ಥ್‌ ನಾರಾಯಣ್‌, ಬೈರತಿ ಬಸವರಾಜ್‌, ಕೆ.ಸಿ.ನಾರಾಯಣಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್‌ ಗೌಡ, ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್ ಇದ್ದರು.

ಈ ಸುದ್ದಿಯನ್ನೂ ಓದಿ: Mandya violence: ನಾಗಮಂಗಲ ಗಲಭೆಯ ನಷ್ಟದ ಪ್ರಮಾಣ 2.66 ಕೋಟಿ ರೂ.; ವ್ಯಾಪಾರಿಗಳು ಅತಂತ್ರ