Friday, 22nd November 2024

Haryana Election Result 2024: ಯಶಸ್ವಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವಿನೇಶ್ ಫೋಗಟ್; ಮೊದಲ ಯತ್ನದಲ್ಲೇ ಗೆಲುವು

Haryana Election Result 2024

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ (Haryana Election Result 2024). ಬಿಜೆಪಿ ಸರಳ ಬಹುಮತದತ್ತ ದಾಪುಗಾಲು ಹಾಕಿದ್ದು, ಹ್ಯಾಟ್ರಿಕ್‌ ಕನಸು ನನಸಾಗಿದೆ. ಈ ಮಧ್ಯೆ ದೇಶದ ಗಮನ ಸೆಳೆದ ಜುಲಾನಾ (Julana) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) 6,000ಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ವಿನೇಶ್‌ ತಮ್ಮ ಎದುರಾಳಿ ಬಿಜೆಪಿಯ ಯೋಗೇಶ್‌ ಭೈರಾಗಿ ಅವರನ್ನು ಸೋಲಿಸಿ ಈ ಐತಿಹಾಸಿಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಸ್ಪರ್ಧೆಯ ಕಾರಣದಿಂದ ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಒಲಿಂಪಿಕ್ಸ್‌ ಪದಕದಿಂದ ವಂಚಿತರಾಗಿದ್ದ ಅವರು ಇದೀಗ ರಾಜಕೀಯಕ್ಕೆ ಧುಮುಕಿ ಯಶಸ್ವಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಅವರ ಸೋದರ ಸಂಬಂಧಿ ಬಬಿತಾ ಫೋಗಟ್ 2019ರಲ್ಲಿ ಹರಿಯಾಣದ ಚಾರ್ಖಿ ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.

ವಿನೇಶ್‌ ಹೇಳಿದ್ದೇನು?

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ವಿನೇಶ್, ʼʼಇದು ಜನರ ಹೋರಾಟವಾಗಿತ್ತು. ಅವರು ಗೆದ್ದಿದ್ದಾರೆ. ನಾನು ಕೇವಲ ಮುಖವಾಗಿದ್ದೆ. ನನಗೆ ಸಿಕ್ಕಿರುವ ಪ್ರೀತಿ ಮತ್ತು ಗೌರವಕ್ಕೆ ಆಭಾರಿಯಾಗಿದ್ದೇನೆ. ಇದು ಪ್ರತಿಯೊಬ್ಬ ಮಹಿಳೆಯರ ಹೋರಾಟವಾಗಿತ್ತು. ಇದು ಹೋರಾಟ ಹಾಗೂ ಸತ್ಯದ ಗೆಲುವು. ಈ ದೇಶದ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆʼʼ ಎಂದು ಹೇಳಿದ್ದಾರೆ. ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಅನರ್ಹಗೊಂಡು ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್ ಸೆಪ್ಟೆಂಬರ್ 6ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಕಳೆದ ವರ್ಷ ಬಿಜೆಪಿ ನಾಯಕ ಹಾಗೂ ಡಬ್ಲ್ಯುಎಫ್‌ಐ (WFI) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ನಡೆದ ಹೋರಾಟದಲ್ಲಿ ವಿನೇಶ್‌ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್‌ ಸೇರ್ಪಡೆಯಾಗುವ ವೇಳೆ ಅವರು ಯಾವುದಕ್ಕೂ ಹೆದರಲ್ಲ ಹಾಗೂ ಮುಂದಿಟ್ಟ ಕಾಲನ್ನು ಹಿಂದೆ ಇಡಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Election Results 2024 : ಚುನಾವಣೋತ್ತರ ಸಮೀಕ್ಷೆ ಫೇಲ್‌; ಹರಿಯಾಣ, ಜಮ್ಮು ಕಾಶ್ಮೀರ ಊಹೆ ಉಲ್ಟಾ

ಚುನಾವಣಾ ಪ್ರಚಾರದ ವೇಳೆ ಅವರು ಒಲಿಂಪಿಕ್ಸ್‌ನಿಂದ ತೂಕದ ಹೆಚ್ಚಳದ ಕಾರಣಕ್ಕೆ ಅನರ್ಹಗೊಂಡ ಬಳಿಕ ಪ್ರಧಾನಿ ಮೋದಿ ಜತೆ ಮಾತನಾಡಲು ಯಾಕೆ ನಿರಾಕರಿಸಿದ್ದರೆಂಬುದನ್ನು ತಿಳಿಸಿದ್ದರು. ತನ್ನ ಭಾವನೆಗಳು ಮತ್ತು ಪ್ರಯತ್ನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಅವರ ಕರೆಯನ್ನು ನಿರಾಕರಿಸಿದ್ದೆ ಎಂದು ಹೇಳಿದ್ದರು. ʼʼಪ್ರಧಾನಿಯಿಂದ ಕರೆ ಬಂದಿತ್ತು. ಆದರೆ ನಾನು ಮಾತನಾಡಲು ನಿರಾಕರಿಸಿದೆ. ಕರೆ ನೇರವಾಗಿ ನನಗೆ ಬರಲಿಲ್ಲ. ಅಲ್ಲಿದ್ದ ಭಾರತೀಯ ಅಧಿಕಾರಿಗಳು ಮೋದಿ ಮಾತನಾಡಲು ಬಯಸುತ್ತಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧನಾಗಿದ್ದೆ. ಆದರೆ ಅವರು ಕೆಲವು ಷರತ್ತುಗಳನ್ನು ವಿಧಿಸಿದರು. ನನ್ನ ತಂಡದಿಂದ ಯಾರೂ ಹಾಜರಾಗಬಾರದು. ಅವರ ಕಡೆಯಿಂದ ಇಬ್ಬರು ಸಂಭಾಷಣೆಯನ್ನುಸೋಷಿಯಲ್ ಮೀಡಿಯಾಗಾಗಿ ರೆಕಾರ್ಡ್‌ ಮಾಡುತ್ತಾರೆ ಎಂದರು. ನಾನು ಅದಕ್ಕೆ ನಿರಾಕರಿಸಿದೆʼʼ ಎಂದು ವಿನೇಶ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.