Saturday, 14th December 2024

Election Results 2024 : ಚುನಾವಣೋತ್ತರ ಸಮೀಕ್ಷೆ ಫೇಲ್‌; ಹರಿಯಾಣ, ಜಮ್ಮು ಕಾಶ್ಮೀರ ಊಹೆ ಉಲ್ಟಾ

Haryana Election Results 2024

ನವದೆಹಲಿ: ಒಂದು ಕಾಲದಲ್ಲಿ ಚುನಾವಣೋತ್ತರ ಫಲಿತಾಂಶಗಳು ಚುನಾವಣಾ ಫಲಿತಾಂಶದಂತೆಯೇ ಇರುತ್ತಿತ್ತು. ಅಂದಾಜು ಬಹುತೇಕ ಸರಿಯಾಗಿರುತ್ತಿತ್ತು. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ಚುನಾವಣೋತ್ತರ ಫಲಿತಾಂಶಗಳು ನಿರೀಕ್ಷೆಯಂತೆ ಬರುತ್ತಿಲ್ಲ. ಸಂಪೂರ್ಣವಾಗಿ ಉಲ್ಟಾ ಫಲಿತಾಂಶಗಳು ಬರುತ್ತಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಜತೆಗೆ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಅದೇ ರೀತಿ ಆಗಿತ್ತು. ಇದೀಗ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲೂ (Election Results 2024) ಅದೇ ರೀತಿಯ ಫಲಿತಾಂಶಗಳು ಮೂಡಿ ಬಂದಿವೆ.

ಹರಿಯಾಣ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಕಾಂಗ್ರೆಸ್‌ ಸರಳ ಬಹುಮತ ದಾಟುತ್ತದೆ ಎಂದು ಹೇಳಿದ್ದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಎರಡೂ ತಪ್ಪಾಗಿದೆ. ಹರಿಯಾಣದಲ್ಲಿ ಬಿಜಪಿ ಸರಳ ಬಹುಮತ ಸುಲಭವಾಗಿ ಮತ್ತು ಅಚ್ಚರಿಯ ರೂಪವಾಗಿ ಪಡೆದರೆ ಜಮ್ಮು ಕಾಶ್ಮೀರದಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್‌ ಸರ್ಕಾರ ರಚಿಸುವುದು ಖಚಿತ. ಹೀಗಾಗಿ ಇಲ್ಲೂ ಚುನಾವಣೋತ್ತರ ಸಮೀಕ್ಷೆಗಳು ವಿಫಲಗೊಂಡಿವೆ.

ಹರಿಯಾಣ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಹಿಂದಿ ಹೃದಯಭಾಗವಾಗಿರುವ ಹರಿಯಾಣದಲ್ಲಿ ಬಿಜೆಪಿಯ 10 ವರ್ಷಗಳ ಆಡಳಿತವನ್ನು ಕೊನೆಯಾಗಲಿದ್ದು ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದವು. ಈ ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜಕೀಯ ಪಕ್ಷವು 90 ವಿಧಾನಸಭಾ ಸ್ಥಾನಗಳಲ್ಲಿ ಕನಿಷ್ಠ 46 ಸ್ಥಾನಗಳನ್ನು ಗೆಲ್ಲಬೇಕು ಅಥವಾ ಅರ್ಧದಷ್ಟು ದಾಟಬೇಕು. ಆದರೆ, ಬಿಜಪಿ ಈ ಸಂಖ್ಯೆಯನ್ನು ದಾಟಿದೆ.

ಯಾವುದೆಲ್ಲ ವಿಫಲ

ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಗಳು 90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 53-65 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಊಹಿಸಿತ್ತು. ಬಿಜೆಪಿ 18-28 ಸ್ಥಾನಗಳನ್ನು ಮತ್ತು ಐಎನ್ಎಲ್ಡಿ-ಬಿಎಸ್ಪಿ ಮೈತ್ರಿಕೂಟವು 1-5 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಗೆ ಶೂನ್ಯ ಸಾಧನೆ ಎಂದಿತ್ತು.

ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯು 90 ಸ್ಥಾನಗಳಲ್ಲಿ ಕಾಂಗ್ರೆಸ್ 55-62 ಸ್ಥಾನಗಳನ್ನು ಪಡೆಯಬಹುದು ಮತ್ತು ಬಿಜೆಪಿ 18-24 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ದೈನಿಕ್ ಭಾಸ್ಕರ್ ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 44-54, ಬಿಜೆಪಿ 15-29 ಮತ್ತು ಇತರರು 4-9 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿತ್ತು

ಇಲ್ಲಿನ ಆಶ್ಚರ್ಯಕರ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಗೆ ಉತ್ತೇಜನ ನೀಡಿದ್ದು ಕಾಂಗ್ರೆಸ್‌ಗೆ ಆಘಾತ. ಸುಮಾರು ಎರಡು ಗಂಟೆಗಳ ಎಣಿಕೆಯ ಬಳಿಕ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು ಮಧ್ಯಾಹ್ನ 12:30 ರ ವೇಳೆಗೆ 90 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳ ಮುನ್ನಡೆ ಪಡೆದು ಕಾಂಗ್ರೆಸ್‌ಗಿಂತ ಮುಂದಿದ್ದರೆ, ಕಾಂಗ್ರೆಸ್ 36 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ.

2024ರ ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?

ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದಾಗ್ಯೂ, ಚುನಾವಣಾ ಪ್ರಕಟಿಸುತ್ತಿರುವ ಮುನ್ನಡೆ ಪ್ರಕಾರ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮೈತ್ರಿಕೂಟಕ್ಕೆ ಸ್ಪಷ್ಟ ಗೆಲುವನ್ನು ದಾಖಲಿಸುತ್ತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚಿಸಲು ರಾಜಕೀಯ ಪಕ್ಷಕ್ಕೆ 46 ಸ್ಥಾನಗಳು ಬೇಕಾಗುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ.

ಇದನ್ನೂ ಓದಿ: Haryana Election result 2024: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅನಿರೀಕ್ಷಿತ ಸೋಲು; ಈ ಹಿನ್ನಡೆಗೆ ಕಾರಣವೇನು?

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ಸಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 24-34 ಸ್ಥಾನಗಳನ್ನು (21% ಮತ ಹಂಚಿಕೆ) ಗೆಲ್ಲಬಹುದು ಎಂದು ಘೋಷಿಸಿದ್ದರೆ, ಎನ್ಸಿ-ಕಾಂಗ್ರೆಸ್-ಸಿಪಿಐಎಂ ಮೈತ್ರಿಕೂಟವು 35-45 ಸ್ಥಾನಗಳನ್ನು (38% ಮತ ಹಂಚಿಕೆ) ಪಡೆಯಬಹುದು ಎಂದು ಘೋಷಿಸಿತ್ತು. ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) 4-6 ಸ್ಥಾನಗಳನ್ನು (9% ಮತ ಹಂಚಿಕೆ) ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಚುನಾವಣೋತ್ತರ ಸಮೀಕ್ಷೆಯು ಎನ್‌ಸಿಯ ಸ್ಥಾನ ಹಂಚಿಕೆಯನ್ನು 24, ಕಾಂಗ್ರೆಸ್ 14 ಮತ್ತು ಸಿಪಿಐಎಂ 0.5 ಸ್ಥಾನಗಳನ್ನು ಹೊಂದಿದೆ ಎಂದು ಹೇಳಿದೆ.

ದೈನಿಕ್ ಭಾಸ್ಕರ್ ಎನ್ಸಿ-ಕಾಂಗ್ರೆಸ್ ಮೈತ್ರಿಯನ್ನು 35-40 ಮತ್ತು ಬಿಜೆಪಿ 20-25 ಎಂದು ಹೇಳಿದೆ. ಸ್ವತಂತ್ರ ಅಭ್ಯರ್ಥಿಗಳು ಪಿಡಿಪಿಯನ್ನು ಮೀರಿಸಬಹುದು, ಅದು 4-7 ಸ್ಥಾನಗಳನ್ನು ಪಡೆಯಬಹುದು ಎಂದು ಅದು ತೋರಿಸಿತ್ತು. ರಿಪಬ್ಲಿಕ್-ಗುಲಿಸ್ತಾನ್ ಎನ್‌ಸಿ -ಕಾಂಗ್ರೆಸ್‌ಗೆ 31-36 ಸ್ಥಾನಗಳು ಮತ್ತು ಬಿಜೆಪಿಗೆ 28-30 ಸ್ಥಾನಗಳನ್ನು ನೀಡಿತ್ತು. ಗುಲಿಸ್ತಾನ್ ಸ್ವತಂತ್ರ ಅಭ್ಯರ್ಥಿಗಳಿಗೆ ‘ಕಿಂಗ್ ಮೇಕರ್’ ಪಾತ್ರ ಕೊಟ್ಟಿತ್ತು. ಅವರು 19-23 ಸ್ಥಾನಗಳನ್ನು ಪಡೆಯಬಹುದು ಮತ್ತು ಪಿಡಿಪಿ 5-7 ಸ್ಥಾನಗಳನ್ನು ಪಡೆಯಬಹುದು ಎಂದಿತ್ತು.

ಫಲಿತಾಂಶದ ಪ್ರವೃತ್ತಿಗಳನ್ನು ನೋಡಿದರೆ ಕಾಂಗ್ರೆಸ್-ಎನ್‌ಸಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ 51 ಸ್ಥಾನಗಳೊಂದಿಗೆ ಗೆಲ್ಲಬಹುದು. ಸ್ವತಂತ್ರ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 28 ಸ್ಥಾನಗಳೊಂದಿಗೆ ಬಹುಮತಕ್ಕಿಂತ ಹಿಂದುಳಿದಿದೆ. ಫಾರೂಕ್ ಅಬ್ದುಲ್ಲಾ ಅವರ ಎನ್‌ಸಿ 43 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಎಕ್ಸಿಟ್ ಪೋಲ್ ಹಿಂದಿನ ತಪ್ಪು ಸಮೀಕ್ಷೆ

20204 ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 10 ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದಾಗ್ಯೂ, 543 ಸ್ಥಾನಗಳಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ತನ್ನ ಇಂಡಿಯಾ ಬ್ಲಾಕ್ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿತ್ತು.

2014 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ, ಎಕ್ಸಿಟ್ ಪೋಲ್ ಫಲಿತಾಂಶಗಳೂ ಸುಳ್ಳಾಗಿದ್ದವು. 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನು ಗೆದ್ದಿದೆ.

2019ರಲ್ಲಿ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಿಜೆಪಿಯ ಪರವಾಗಿ ನೀಡಿತ್ತು. ಅದನ್ನು ಹೊರತುಪಡಿಸಿ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿಗೆ 38 ಸ್ಥಾನಗಳು ಮತ್ತು ಕಾಂಗ್ರೆಸ್ಗೆ 36 ಸ್ಥಾನ ನೀಡಿತ್ತು. ಆದರೆ ಬಿಜೆಪಿ 40 ಸ್ಥಾನ ಮತ್ತು ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತ್ತು.