ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Election) ಬಿಜೆಪಿ (BJP) ಜಯಭೇರಿ ಬಾರಿಸಿದ್ದು ಇಲ್ಲಿನ ಫಲಿತಾಂಶವು ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲ ಇಲ್ಲಿನ ಹೊಸ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Haryana CM Nayab Saini) ಅವರ ಭವಿಷ್ಯಕ್ಕೂ ನಿರ್ಣಾಯಕವಾಗಿತ್ತು. ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡ ಅವರು ಮನೋಹರ್ ಲಾಲ್ ಖಟ್ಟರ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದರು.
ಸುಮಾರು ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಖಟ್ಟರ್ ಆಡಳಿತ ವಿರೋಧಿ ಭಾವನೆಯನ್ನು ಎದುರಿಸುತ್ತಿದ್ದರು. ಖಟ್ಟರ್ ಬಳಿಕ ಅಧಿಕಾರ ವಹಿಸಿಕೊಂಡ 54 ವರ್ಷದ ಸೈನಿ ಅವರಿಗೆ ಇದನ್ನು ಎದುರಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಈ ನಡುವೆ ಈಗ ಹರಿಯಾಣದಲ್ಲಿ ಬಿಜೆಪಿ ಗೆಲುವು ಅವರಿಗೆ ಅಚ್ಚರಿಯನ್ನು ತಂದಿದೆ.
ಹರಿಯಾಣದ 11 ನೇ ಮುಖ್ಯಮಂತ್ರಿಯಾಗಿ ಸೈನಿ ಅವರ ನೇಮಕ ಬಿಜೆಪಿಯ ಅನಿರೀಕ್ಷಿತ ನಿರ್ಧಾರವಾಗಿತ್ತು. ಖಟ್ಟರ್ ಅವರು ರಾಜ್ಯದ ರಾಜಕೀಯ ರಂಗದಲ್ಲಿ ಪ್ರಬಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಸೈನಿ ಅವರ ಮೂಲಕ ಕೇಸರಿ ಪಕ್ಷ ಮುಖ್ಯಮಂತ್ರಿ ಕಚೇರಿ ಪ್ರವೇಶಿಸಲು ಪ್ರಯತ್ನಿಸಿತ್ತು.
ಕೇವಲ ಎರಡು ತಿಂಗಳ ಅಧಿಕಾರಾವಧಿಯಲ್ಲಿ ಸೈನಿ ಅವರು ಕ್ಯಾಬಿನೆಟ್ ಸಭೆಗಳನ್ನು ಕರೆದರು, ಹಿಂದುಳಿದ ವರ್ಗಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗಳಂತಹ ವಿವಿಧ ಸಮುದಾಯಗಳಿಗೆ ಅನೇಕ ಯೋಜನೆಗಳನ್ನು ಘೋಷಿಸಿ ಹೆಚ್ಚಿನ ಮತದಾರರನ್ನು ತಲುಪಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಅಧಿಕಾರಾವಧಿಯ ಅಂತ್ಯದ ವೇಳೆಗೆ ಉದ್ಯೋಗ ಭರವಸೆಯ ಪ್ರಚಾರ ಮಾಡಿ ಹೆಚ್ಚಿನ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.
ಹಿಂದುಳಿದ ವರ್ಗದತ್ತ ಹೆಚ್ಚಿನ ಗಮನ
ಸೈನಿ ಅವರು ಹಿಂದುಳಿದ ಸಮುದಾಯಕ್ಕೆ ಸೌಲಭ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಗಮನ ಹರಿಸಿದ್ದರು. ಇದು ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಮತ್ತು ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಡುವೆ ಜಾಟ್ ಮತಗಳನ್ನು ವಿಭಜಿಸುವ ನಿರೀಕ್ಷೆ ಇತ್ತು. ಆದರೆ ಸೈನಿ ಅವರು ಜಾಟ್ ಅಲ್ಲದವರ ಮತಗಳನ್ನು ಬೇಟೆಯಾಡಲು ಪ್ರಾರಂಭಿಸಿದರು. ಇದಕ್ಕಾಗಿ ಬಿಜೆಪಿ ಹೈಕಮಾಂಡ್ ಒಬಿಸಿಯ ಸೈನಿ ಅವರನ್ನು ಸಿಎಂ ಆಗಿ ನೇಮಿಸಲು ಆದ್ಯತೆ ನೀಡಿತು.
ಸೈನಿಯವರ ರಾಜಕೀಯ ಪಯಣ ಹೇಗಿತ್ತು?
1970ರ ಜನವರಿ 25ರಂದು ಅಂಬಾಲಾದ ಮಿಜಾಪುರ್ ಮಜ್ರಾ ಗ್ರಾಮದಲ್ಲಿ ಜನಿಸಿದ ನಯಾಬ್ ಸಿಂಗ್ ಸೈನಿ ಅವರು ಮುಖ್ಯಮಂತ್ರಿ ಕುರ್ಚಿಯವರೆಗಿನ ಪಯಣ ಅತ್ಯಂತ ಗಮನಾರ್ಹವಾಗಿದೆ.
ಸೈನಿ ಅವರು ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1996ರ ಬಳಿಕ ಪಕ್ಷ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಮುಜಾಫರ್‌ಪುರದಲ್ಲಿರುವ ಬಿ.ಆರ್. ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಲ್ಎಲ್ ಬಿ ಪದವಿಗಳಿಸಿದ ಸೈನಿ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯಲ್ಲಿ ತೊಡಗಿಸಿಕೊಂಡರು.
ಸೈನಿ ಅವರ ರಾಜಕೀಯ ಜೀವನವು 2000ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. 2002ರಲ್ಲಿ ಅಂಬಾಲಾದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಅವರು 2005 ರಲ್ಲಿ ಮತ್ತೊಮ್ಮೆ ಆಯ್ಕೆಯಾದರು. 2009ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ 2014ರಲ್ಲಿ ನರೇನ್‌ಗಢದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
2019ರಲ್ಲಿ ಕುರುಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾದ ಅವರು ಖಟ್ಟರ್ ಅವರಿಗೆ ಆಪ್ತರಾದರು. ಹಲವಾರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದರಿಂದ 2016 ರಲ್ಲಿ ಹರಿಯಾಣ ಸರ್ಕಾರದಲ್ಲಿ ಸಚಿವ ಸ್ಥಾನ ಸೇರಿದಂತೆ ಮಹತ್ವದ ರಾಜಕೀಯ ಪಾತ್ರಗಳು ಅವರಿಗೆ ದೊರೆಯಿತು.
Mithun Chakraborty : ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಖಟ್ಟರ್ ಅವರೊಂದಿಗಿನ ಸೈನಿಯ ಸಂಪರ್ಕಗಳು ಅವರ ವೃತ್ತಿಜೀವನದುದ್ದಕ್ಕೂ ಗಟ್ಟಿಯಾಗಿ ಉಳಿದಿವೆ. ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಮುಖ್ಯ ಕಾರಣ ಖಟ್ಟರ್‌ಗೆ ಎದುರಾದ ಸವಾಲುಗಳನ್ನು ಎದುರಿಸುವುದು ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯುವುದು ಬಿಜೆಪಿಯ ಚುನಾವಣಾ ಕಾರ್ಯತಂತ್ರದ ಭಾಗವಾಗಿತ್ತು ಎಂದರೆ ತಪ್ಪಾಗಲಾರದು.