Wednesday, 11th December 2024

Mithun Chakraborty : ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

National Awards

ನವದೆಹಲಿ: ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ (Mithun Chakraborty) ಭಾರತದ ಅತ್ಯುನ್ನತ ಚಲನಚಿತ್ರ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. 70 ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. 74 ವರ್ಷದ ಮಿಥುನ್ ಚಕ್ರವರ್ತಿ ಅಗ್ನಿಪಥ್, ಮುಜೆ ಇನ್ಸಾಫ್ ಚಾಹಿಯೆ, ಹಮ್ ಸೆ ಹೈ ಜಮಾನಾ, ಪಸಂದ್ ಅಪ್ನಿ ಅಪ್ನಿ, ಘರ್ ಏಕ್ ಮಂದಿರ್ ಮತ್ತು ಕಸಮ್ ಪೈಡಾ ಕರ್ನೆ ವಾಲೆ ಕಿ ಮುಂತಾದ ಚಿತ್ರಗಳಲ್ಲಿನ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.

ಸಮಾರಂಭಕ್ಕೆ ಮುಂಚಿತವಾಗಿ ಮಾತನಾಡಿದ ಮಿಥುನ್ ಅವರು “ನಾನು ಏನು ಹೇಳಲಿ? ಇದೊಂದು ದೊಡ್ಡ ಗೌರವ. ನಾನು ದೇವರಿಗೆ ಮಾತ್ರ ಧನ್ಯವಾದ ಹೇಳಬಲ್ಲೆ. ನಾನು ಮಾಡಿದ ಹೋರಾಟಕ್ಕಾಗಿ ದೇವರು ಎಲ್ಲವನ್ನೂ ನನಗೆ ಹಿಂದಿರುಗಿಸಿದ್ದಾನೆ ಎಂದು ಹೇಳಿದ್ದಾರೆ.

ಮಿಥುನ್ ಚಕ್ರವರ್ತಿ ಅವರನ್ನು ಕಳೆದ ತಿಂಗಳು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಸುದ್ದಿಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಕಟಿಸಿದ್ದರು, ಮಿಥುನ್ ದಾ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ತಲೆಮಾರುಗಳಿಗೆ ಸ್ಫೂರ್ತಿ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಖ್ಯಾತ ನಟ ಶ್ರೀ ಮಿಥುನ್ ಚಕ್ರವರ್ತಿ ಜಿ ಅವರಿಗೆ ಪ್ರಶಸ್ತಿ ನೀಡಲು ದಾದಾಸಾಹೇಬ್ ಫಾಲ್ಕೆ ಆಯ್ಕೆ ತೀರ್ಪುಗಾರರು ನಿರ್ಧರಿಸಿದ್ದಾರೆ. ಅಕ್ಟೋಬರ್ 8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದುಬರೆದುಕೊಂಡಿದ್ದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೇಶದ ಅತ್ಯುನ್ನತ ಚಲನಚಿತ್ರ ಗೌರವ. ಈ ಹಿಂದೆ ಅಮಿತಾಭ್ ಬಚ್ಚನ್, ವಹೀದಾ ರೆಹಮಾನ್, ರೇಖಾ, ಆಶಾ ಪರೇಖ್ ಮತ್ತು ರಜನಿಕಾಂತ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷದ ಆರಂಭದಲ್ಲಿ, ಮಿಥುನ್ ಚಕ್ರವರ್ತಿ ಅವರನ್ನು ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: Actor Darshan: ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ; ಜಾಮೀನಿಗೆ ಕಾರಣಗಳು ಇಲ್ಲಿವೆ

ಕಲ್ಕತ್ತಾದಲ್ಲಿ ಜನಿಸಿದ ಮಿಥುನ್ ಚಕ್ರವರ್ತಿ 1976 ರ ಮೃಗಯಾ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಮಿಥುನ್ ತಹದೇರ್ ಕಥಾ (1992) ಮತ್ತು ಸ್ವಾಮಿ ವಿವೇಕಾನಂದ (1998) ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಇನ್ನೂ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗೆ, ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಣಿಸಿಕೊಂಡರು. ಅವರ ಮಗ ನಮಾಶಿ ಚಕ್ರವರ್ತಿ ಬ್ಯಾಡ್ ಬಾಯ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.