Monday, 25th November 2024

‌Thimmanna Bhagwat Column: ಮಾನಹಾನಿ ಪ್ರಕರಣ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವೇ ?

ನ್ಯೂನ ಕಾನೂನು

ತಿಮ್ಮಣ್ಣ ಭಾಗ್ವತ್

ಮಾನಹಾನಿ ಖಟ್ಲೆ ಸಾಕಷ್ಟು ಸಲ ಕೇಳಿ ಬರುವ ವಿಷಯ. ‘ಮಾನಹಾನಿ ಕೇಸ್ ಹಾಕುತ್ತೇನೆ’ ಎಂದು ರೋಪ್ ಹಾಕಿಸಿ ಕೊಳ್ಳುವುದು ಮತ್ತು ಮಾನಹಾನಿ ಕೇಸುಗಳನ್ನು ಎದುರಿಸುವುದು ಪತ್ರಕರ್ತರು/ಮಾಧ್ಯಮದವರಿಗೆ ಬಹುಶಃ ದಿನನಿತ್ಯದ ವ್ಯವಹಾರ. ಕೆಲವು ರಾಜಕಾರಣಿಗಳಂತೂ ಮತಬೇಟೆಯ ಆರ್ಭಟದ, ಮಿತಿಬಿಟ್ಟ ಭಾಷಣಗಳಲ್ಲಿ ಮಾನಹಾನಿಯನ್ನು ಮಾಡಿದರೂ ‘ನಾನು ಹಾಗೆ ಹೇಳಿಲ್ಲ’ ಎಂದು ಸಾಧಿಸಲು ಇನ್ನಿಲ್ಲದ ಸಾಹಸಪಡುತ್ತಾರೆ. ಇನ್ನು ಕೆಲವು ‘ಮಾನವಂತರು’ ಇದನ್ನು ತಮ್ಮ ವಿರುದ್ಧ ಬರುವ ಟೀಕೆಗಳನ್ನು ಮುಚ್ಚಿಹಾಕಲು ಅಥವಾ ಟೀಕಾಕಾರರ ಬಾಯಿ ಮುಚ್ಚಿಸಲು ಬೆದರಿಕೆ ಅಸ್ತ್ರವಾಗಿ ಬಳಸುತ್ತಾರೆ ಎಂಬ ಆರೋಪವಿದೆ.

ಏನಿದು ಮಾನಹಾನಿ?
‘ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ’ (ಭಗವದ್ಗೀತೆ ಅಧ್ಯಾಯ 2, ಶ್ಲೋಕ 34)- ಮಾನವಂತರಿಗೆ ಮಾನ
ಹಾನಿಯು ಮರಣಕ್ಕಿಂತಲೂ ಹೆಚ್ಚಿನದು. ಮನುಸ್ಮೃತಿಯ ಪ್ರಕಾರ ರಾಜನು ನ್ಯಾಯನಿರ್ಣಯ ಮಾಡಬೇಕಾದ 18
ಬಗೆಯ ವ್ಯಾಜ್ಯಗಳಲ್ಲಿ ಅಪನಿಂದೆ (ವಾಚಿಕಾ) ಕೂಡ ಒಂದು ಐರೋಪ್ಯ ದೇಶಗಳಲ್ಲಿ ಕೂಡ ಅಪನಿಂದೆ ಮತ್ತು ಅವಮಾನ (ಸ್ಲಾಂಡರ್ ಮತ್ತು ಲಿಬೆಲ್) ಶಿಕ್ಷಾರ್ಹವಾಗಿತ್ತು.

ಭಾರತದ ಸಂವಿಧಾನದ ಪೀಠಿಕೆಯು (preamble) ದೇಶದ ಪ್ರಜೆಗಳಿಗೆ ಘನತೆಯ ಭರವಸೆಯನ್ನು ನೀಡುತ್ತದೆ. 21ನೇ ವಿಧಿಯ ಅಡಿಯಲ್ಲಿ ದತ್ತವಾದ ಜೀವಿಸುವ ಹಕ್ಕು ಕೇವಲ ಜೀವ ಉಳಿಸಿಕೊಳ್ಳುವ ಹಕ್ಕಲ್ಲ, ಘನತೆ ಮತ್ತು ಗೌರವ ದಿಂದ ಬದುಕುವ ಹಕ್ಕು ಎಂದು ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ (ಉದಾಹರಣೆಗೆ, ಮನೇಕಾ ಗಾಂಧಿ ವರ್ಸಸ್ ಭಾರತ ಸರಕಾರ ಪ್ರಕರಣ).

ಭಾರತೀಯ ನ್ಯಾಯ ಸಂಹಿತೆಯ 354ನೇ ಕಲಂ, (ಐಪಿಸಿ 499 ಮತ್ತು 500) ಮಾನಹಾನಿಯ ಕುರಿತು ವ್ಯಾಖ್ಯೆ ಮತ್ತು ಉದಾಹರಣೆಗಳ ಸಹಿತ ಸುದೀರ್ಘ ವಿವರಣೆಗಳನ್ನು ನೀಡುತ್ತದೆ. ಈ ಕಲಮಿನ ಪ್ರಕಾರ ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಅಥವಾ ಅಂಥ ಧಕ್ಕೆಯಾಗುವುದೆಂಬ ಅರಿವಿದ್ದರೂ ನಿಂದನೆಯ ಮಾತನ್ನಾಡಿದರೆ ಅಥವಾ ಬರವಣಿಗೆ, ಸಂಜ್ಞೆ, ಚಿತ್ರ ಅಥವಾ ದೃಶ್ಯ ಮಾಧ್ಯಮಗಳ ಮೂಲಕ ನಿಂದನೆ ಯನ್ನು ಮಾಡಿದರೆ ಅಥವಾ ಪ್ರಕಟಿಸಿದರೆ ಅಂಥ ವ್ಯಕ್ತಿಯು ಆ ಇನ್ನೊಬ್ಬನಿಗೆ ಮಾನಹಾನಿಯನ್ನು ಮಾಡಿದಂತಾ ಗುತ್ತದೆ. ಮಾನಹಾನಿಯನ್ನು ಮಾಡುವ ವ್ಯಕ್ತಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಇವೆರಡನ್ನೂ ವಿಧಿಸಬಹುದು. ಇಂಥ ಮಾನಹಾನಿಯು ವ್ಯಕ್ತಿಗಳಿಗೆ, ಕಂಪನಿಗಳಿಗೆ ಅಥವಾ ಗುರುತಿಸಬಹುದಾದ ನಿರ್ದಿಷ್ಟ ಸಮುದಾಯಕ್ಕೆ ಕೂಡ ಅನ್ವಯಿಸುತ್ತದೆ.

ಆದರೆ ಅಂಥ ಆರೋಪಗಳು ನಿಜವಾಗಿದ್ದರೆ ಮತ್ತು ಸಾರ್ವಜನಿಕ ಹಿತಕ್ಕಾಗಿ ಅವನ್ನು ಪ್ರಕಟಿಸಬೇಕಾಗಿದ್ದರೆ ಅಥವಾ
ಅಂಥ ಪ್ರಕಟಣೆ ಸರಕಾರಿ ಅಽಕಾರಿಗಳ ಸಾರ್ವಜನಿಕ ನಡವಳಿಕೆ ಕುರಿತಾಗಿದ್ದರೆ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿಯ ವಿಷಯದ ಬಗೆಗಿನ ವ್ಯಕ್ತಿಯೊಬ್ಬನ ನಡವಳಿಕೆ ಕುರಿತಾಗಿದ್ದರೆ ಅಥವಾ ಸಾರ್ವಜನಿಕ ಪ್ರದರ್ಶನ ವೊಂದರಲ್ಲಿನ ವ್ಯಕ್ತಿಯೊಬ್ಬನ ನಿರ್ವಹಣೆಯ ಕುರಿತಾಗಿದ್ದರೆ ಅಂಥ ಸಂದರ್ಭಗಳಲ್ಲಿ ಆಂಥ ಪ್ರಕಟಣೆಯನ್ನು ಮಾನಹಾನಿ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ 10 ಅಪವಾದಗಳ ವಿವರಣೆಗಳಲ್ಲಿ ಸ್ಪಷ್ಟಪಡಿಸ ಲಾಗಿದೆ. ಬ್ರಿಟಿಷ್ ಕಾಯ್ದೆಯಲ್ಲಿ ಇರುವ ನಿಂದನೆ (ಸ್ಲಾಂಡರ್) ಮತ್ತು ಅವಮಾನ (ಲಿಬೆಲ್) ಎಂಬ ಪ್ರತ್ಯೇಕತೆಯನ್ನು ಭಾರತದ ಕಾನೂನಿನಲ್ಲಿ ಒದಗಿಸಿಲ್ಲ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) 222ನೇ ಕಲಂ (CrPC 199ಮಾನಹಾನಿ ಪ್ರಕರಣ ದಾಖಲಿಸು ವಾಗ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ಕೋರ್ಟುಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ವಿವರಿಸುತ್ತದೆ. ತನ್ನ ವಿರುದ್ಧ ಮಾಡಲಾದ ಮಾನಹಾನಿಕರ ಹೇಳಿಕೆ ಅಥವಾ ಪ್ರಕಟಣೆಗಳಿಂದ ಆದ ಹಾನಿಯ ಕುರಿತು ನ್ಯಾಯಾಲಯ ದಲ್ಲಿ ನಷ್ಟ ಪರಿಹಾರದ ಬಗ್ಗೆ ಮೊಕದ್ದಮೆ ಹೂಡಬಹುದು. ಹಾಗಾದರೆ ಪತ್ರಿಕೆಗಳಲ್ಲಿ ಅಥವಾ ದೃಶ್ಯ ಮಾಧ್ಯಮ ಗಳಲ್ಲಿ ಯಾರ ಬಗ್ಗೆಯೂ ಟೀಕೆ-ಟಿಪ್ಪಣಿ ಮಾಡುವಂತಿಲ್ಲವೇ? ಇದು ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದಿಲ್ಲವೇ? ಎಂಬ ಪ್ರಶ್ನೆ ಸಹಜ.

ಭಾರತದ ಸಂವಿಧಾನದ 19(1)(ಎ) ವಿಧಿಯು ಎಲ್ಲಾ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕನ್ನು ನೀಡಿದೆ. ಆದರೆ 19(2) ನೇ ವಿಧಿಯನ್ವಯ ಈ ಹಕ್ಕಿನ ಚಲಾವಣೆಯಿಂದ ಆಗಬಹುದಾದ ಮಾನಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಸಮಂಜಸವಾದ ನಿರ್ಬಂಧ ವಿಧಿಸಬಹುದಾಗಿದೆ. ಸುಬ್ರಹ್ಮಣ್ಯ ಸ್ವಾಮಿ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಐಪಿಸಿಯ 499 ಮತ್ತು 500ನೇ ಕಲಮುಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ. 19(1) ಎಲ್ಲಾ ವಿಧಿಯು ಒದಗಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು 19(2)ರಲ್ಲಿನ ನಿರ್ಬಂಧಗಳಿಗೆ ಒಳಪಟ್ಟು ಇರುತ್ತದೆ ಮತ್ತು ಅಂಥ ನಿರ್ಬಂಧ ಸಮಂಜಸವಾಗಿದೆ.
21ನೇ ವಿಧಿಯನ್ವಯ ಇರುವ ಜೀವಿಸುವ ಹಕ್ಕು, ಘನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ಒಳಗೊಂಡಿ ರುತ್ತದೆ ಎಂದು ಅದು ಹೇಳಿದೆ.

ಕಾಯ್ದೆಗಳಲ್ಲಿ ಮಾನಹಾನಿಯ ಕುರಿತಾಗಿ ಇರುವ ಅನುವು, ಅಧಿಕಾರ ಮತ್ತು ಹಣಬಲ ಹೊಂದಿರುವ ವ್ಯಕ್ತಿಗಳು ತಮ್ಮ ವಿರುದ್ಧ ಬರಬಹುದಾದ ಟೀಕೆಗಳನ್ನು ಸುಮ್ಮನಾಗಿಸಲು ಬಳಸಬಹುದಾದ ಅಸ್ತ್ರವಾಗಿದೆ ಎಂಬ ಅಭಿಪ್ರಾಯ ವಿದೆ. ರಾಜಕಾರಣಿಗಳ ವಿರುದ್ಧ ಪತ್ರಕರ್ತರು ಮಾಡುವ ಟೀಕೆಗಳು, ಅವ್ಯವಹಾರಗಳ ಕುರಿತಾದ ತನಿಖಾ ವರದಿಗಳು, ದೊಡ್ಡ ಕಂಪನಿಗಳ ವ್ಯವಹಾರಗಳ ವಿಮರ್ಶಾತ್ಮಕ ವಿಶ್ಲೇಷಣೆ ಇವುಗಳನ್ನು ಹತ್ತಿಕ್ಕಲು ಕೆಲವುಸಲ ಮಾನಹಾನಿ ಪ್ರಕರಣದ ಮೂಲಕ ಕಾಯ್ದೆಯ ದುರುಪಯೋಗ ಮಾಡಲಾಗುತ್ತದೆ. ಪ್ರಕರಣಗಳ ಸತ್ಯಾಸತ್ಯತೆಯ ಪರಿಶೀಲನೆ ಮುಗಿಯುವವರೆಗಿನ ಪೊಲೀಸ್ ಹಾಗೂ ನ್ಯಾಯ ವ್ಯವಸ್ಥೆಯ ಅತಿ ಕ್ಲಿಷ್ಟವಾದ ಮತ್ತು ಅಮಾನವೀಯ ವೆನಿಸಬಹುದಾದ ಕಾರ್ಯವಿಧಾನ ಹಾಗೂ ನಿಯಮಗಳ ಪಾಲನೆಯೇ ನಕಲಿ ಪ್ರಕರಣಗಳಲ್ಲಿ ಆಪಾದಿತರಿಗೆ ಶಿಕ್ಷೆಯಾಗಿ ಪರಿಣಮಿಸುತ್ತವೆ.

ಅಂತಿಮವಾಗಿ ಖುಲಾಸೆಗೊಂಡರೂ ಪ್ರಕರಣದಲ್ಲಿ ಸಿಲುಕಿ ಅನುಭವಿಸುವ ಕಿರುಕುಳ, ಖರ್ಚು ಮತ್ತು ಅಲೆದಾಡುವ ಯಾತನೆ ನಿಜಕ್ಕೂ ಶೋಚನೀಯ. ಈ ಕಾರಣಕ್ಕೆ ಐಪಿಸಿಯ 499ನೇ ಕಲಮನ್ನು ರದ್ದುಪಡಿಸಿ ಮಾನಹಾನಿಯನ್ನು ಕೇವಲ ಸಿವಿಲ್ ಪ್ರಕರಣದ ವ್ಯಾಪ್ತಿಗೆ ತರಬೇಕು ಎಂಬ ಅಭಿಪ್ರಾಯ ಬಹಳ ಹಿಂದಿನಿಂದ ಇದೆ. ಮಾನಹಾನಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆಯಂಥ ಅಂತಾರಾಷ್ಟ್ರೀಯ ಸಂಸ್ಠೆಗಳು ಅಭಿಪ್ರಾಯಪಟ್ಟಿವೆ. ಭಾರತದ ಕಾನೂನು ಆಯೋಗ ತನ್ನ ೨೦೧೪ರ ವರದಿಯಲ್ಲಿ 499ನೇ ಕಲಮನ್ನು ಹಿಂಪಡೆಯುವ ಅವಶ್ಯಕತೆಯನ್ನು ಗಮನಿಸಿ, ಮಾನಹಾನಿ ಕುರಿತು ಕ್ರಿಮಿನಲ್ ಮೊಕದ್ದಮೆ ಹೂಡಲು ಇರುವ ಅವಕಾಶ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ವಿಜಯಕಾಂತ್ ವರ್ಸಸ್ ತಮಿಳುನಾಡು ಸರಕಾರ ಪ್ರಕರಣ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಮಾಡಿದ ಟೀಕೆಗಳ ವಿಷಯದ 14 ಎಫ್ಐಆರ್‌ಗಳನ್ನು ರದ್ದು ಮಾಡಿದ ಸರ್ವೋಚ್ಚ ನ್ಯಾಯಾಲಯವು “ಪ್ರಜಾಪ್ರಭುತ್ವದ ಕತ್ತು ಹಿಸುಕಲು ನೀವು ಮಾನಹಾನಿಯ ಪ್ರಕರಣಗಳನ್ನು ಬಳಸಬಾರದು. ನೀವು ಸಾರ್ವಜನಿಕ ವ್ಯಕ್ತಿ ಮತ್ತು ನೀವು ಟೀಕೆಗಳನ್ನು ಎದುರಿಸಬೇಕು. ರಾಜಕೀಯ ಎದುರಾಳಿಗಳ ವಿರುದ್ಧ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿ ಮಾನಹಾನಿ ಖಟ್ಲೆಗಳನ್ನು ಹಾಕಬಾರದು” ಎಂದು ಅಭಿಪ್ರಾಯ ಪಟ್ಟಿತು.

ಬೋನ್ನಾರ್ಡ್ ವರ್ಸಸ್ ಪೆರಿಮನ್ ಪ್ರಕರಣ 1891ನೇ ಇಸವಿಯಷ್ಟು ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಈ
ಐತಿಹಾ‌ಸಿಕ ಪ್ರಕರಣದಲ್ಲಿ ಚೀಫ್ ಜಸ್ಟೀಸ್ ಕಾಲ್ರಿಜ್ ನೀಡಿದ‌ ಆದೇಶ ಈವರೆಗೂ ಮಾನಹಾನಿ ಪ್ರಕರಣಗಳಿಗೆ ಆಧಾರ ಮತ್ತು ಮಾರ್ಗದರ್ಶಿ ಸೂತ್ರವಾಗಿದೆ. ವಿಚಾರಣೆ ನಡೆದು ಮಾನಹಾನಿ ಆಗಿರುವುದು ನಿಜವೆಂದು ಸಾಬೀತಾಗುವವರೆಗೂ ವಿವಾದಿತ ಪ್ರಕಟಣೆ ಅಥವಾ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಅನಿಯಂತ್ರಿತ ಚಲಾವಣೆಯನ್ನು ನಿರ್ಬಂಧಿಸಬಾರದು. ವಾಕ್ ಸ್ವಾತಂತ್ರ್ಯವು ಪ್ರತಿಯೊಬ್ಬ
ನಾಗರಿಕನಿಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಇರುವ ಅಮೂಲ್ಯವಾದ ಹಕ್ಕು. ಅದ್ದರಿಂದ ತಡೆಯಾe ನೀಡಲು ಇರುವ ಅಧಿಕಾರವನ್ನು ಕೋರ್ಟುಗಳು ಅತಿ ವಿರಳ ಸಂದರ್ಭಗಳಲ್ಲಿ ಮಾತ್ರ ವಿವೇಚನೆಯಿಂದ ಚಲಾಯಿಸಬೇಕು” ಎಂಬುದು Bonnard Rule ಎಂದು ಪ್ರಸಿದ್ಧವಾಗಿದೆ.

ಈ ತತ್ವವನ್ನು ಭಾರತದಲ್ಲೂ ಅನೇಕ ಪ್ರಕರಣಗಳಲ್ಲಿ ಅನುಸರಿಸಲಾಗುತ್ತಿದೆ. ಉದಾಹರಣೆಗೆ: ಶಶಿ ತರೂರ್ ವರ್ಸಸ್ ಅರ್ನಬ್ ಗೋಸ್ವಾಮಿ, ಟಾಟಾ ಸನ್ಸ್ ವರ್ಸಸ್ ಗ್ರೀನ್ ಪೀಸ್ ಇಂಡಿಯಾ, ಟೈಮ್ಸ್ ನೌ ನವಭಾರತ ವರ್ಸಸ್ ನರೇಶ ಬಲಿಯಾನ್, ನವೀನ್ ಜಿಂದಾಲ್ ವರ್ಸಸ್ ಝೀ ಮೀಡಿಯಾ ಪ್ರಕರಣಗಳು. ಈ ನಿಯಮವು ಟೀಕಾಕಾರರ ಬಾಯಿ ಮುಚ್ಚಿಸುವ ಹುನ್ನಾರಗಳಿಂದ ರಕ್ಷಿಸುತ್ತದೆ. ದಾಖಲಾದ ಎಲ್ಲಾ ಪ್ರಕರಣಗಳಲ್ಲೂ ಕೋರ್ಟುಗಳು ಪ್ರಕಟಣೆ ಅಥವಾ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದರೆ ಜನರು ಮತ್ತು ಮಾಧ್ಯಮದವರು ಲಂಚ, ಭ್ರಷ್ಟಾಚಾರ, ಕಳಪೆ ಕಾಮಗಾರಿ, ಅತ್ಯಾಚಾರ, ಸ್ವಜನ ಪಕ್ಷಪಾತ ಮುಂತಾದ ಸಾರ್ವಜನಿಕ ವಿಷಯಗಳ ಕುರಿತು ಚರ್ಚೆ ಮಾಡುವುದೇ ಅಪರಾಧ ವೆನಿಸುತ್ತದೆ.

ರಂಗರಾಜನ್ ವರ್ಸಸ್ ಜಗಜೀವನ್ ಪ್ರಕರಣ: ಜಾತಿ ಆಧರಿತ ಮೀಸಲಾತಿ ನೀತಿ, ಆರ್ಥಿಕ ಹಿಂದುಳಿಯುವಿಕೆಯ ಮಾನದಂಡ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿ ತಯಾರಿಸಿದ ‘ಒರೆ ಒರು ಗ್ರಾಮಥಿಲೆ’ ಎಂಬ ತಮಿಳು ಚಲನಚಿತ್ರದ ಪ್ರದರ್ಶನಕ್ಕೆ ಹೈಕೋರ್ಟು ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟು ತೆರವುಗೊಳಿಸಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರವನ್ನು ನಿಷೇಧ ಮಾಡಿದ ತಮಿಳುನಾಡು ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟು, ವಿರೋಧಿ ಪ್ರದರ್ಶನ ಅಥವಾ ಹಿಂಸಾತ್ಮಕ ಪ್ರತಿಭಟನೆಗಳಿಗೆ ಹೆದರಿ ಅಭಿವ್ಯಕ್ತಿ
ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಕಾನೂನಿನ ನಿಯಮದ ಉಲ್ಲಂಘನೆಯಾಗುತ್ತದೆ.

19(1)ಎ ವಿಧಿಯಲ್ಲಿರುವ ಹೇರಲಾಗುವ ನಿರ್ಬಂಧಗಳು ಅತಿ ಅವಶ್ಯಕತೆಗಳ ಆಧಾರದಲ್ಲಿ ಸಮರ್ಥನೀಯ ವಾಗಬೇಕೇ ಹೊರತು ಸುಲಭ ಪರಿಹಾರ, ಅನುಕೂಲ ಅಥವಾ ಅವಸರಕ್ಕಾಗಿ ಅಲ್ಲ. ಇತರರ ಭಾವನೆಗಳ ಕುರಿತು ಸಹಿಷ್ಣುತೆ ಇರಬೇಕು. ಅಸಹಿಷ್ಣುತೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬೆಲ್ಲ ಅಭಿಪ್ರಾಯಗಳನ್ನು ದಾಖಲಿಸಿತು. ಇಂಥದೇ ಆದೇಶಗಳನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋಟ್ ಗಳು ವಿವಿಧ ಪ್ರಕರಣಗಳಲ್ಲಿ ನೀಡಿವೆ. ಉದಾಹರಣೆಗೆ: ಖುಷ್ವಂತ್ ಸಿಂಗ್ ವರ್ಸಸ್ ಮನೇಕಾ ಗಾಂಧಿ, ಬಾಳಾಸಾಹೇಬ್ ಠಾಕರೆ ವರ್ಸಸ್ ಮಹಾರಾಷ್ಟ್ರ ಸರಕಾರ.

ರಾಜೇಂದ್ರಕುಮಾರ್ ವರ್ಸಸ್ ಉತ್ತಮ್ ಮತ್ತು ಇತರರು (ಸುಪ್ರೀಂ ಕೋರ್ಟ್) ನೌಕರನ ಮೇಲಧಿಕಾರಿಗೆ ಅವನ ಕಾರ್ಯವಿಧಾನದ ಕುರಿತು ಹೇಳುವ ಮತ್ತು ವರದಿ ಮಾಡುವ ಅಧಿಕಾರವಿದೆ ಎಂದು ಪರಿಗಣಿಸಿತು ಮತ್ತು ಮೇಲಧಿ ಕಾರಿಯ ವಿರುದ್ಧದ ಪ್ರಕರಣವನ್ನು ರದ್ದು ಪಡಿಸಿತು.

ಸರಕಾರವನ್ನು ಟೀಕಿಸಿದ್ದಕ್ಕೆ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ (4 ಅಕ್ಟೋಬರ್, 2024)- ಸುಪ್ರೀಂ
ಕೋರ್ಟ್- ಅಭಿಷೇಕ್ ಉಪಾಧ್ಯಾಯ ವರ್ಸಸ್ ಉತ್ತರ ಪ್ರದೇಶ ಸರಕಾರ.

ನ್ಯಾಯಾಲಯಗಳ ಒಟ್ಟಾರೆ ಅಭಿಪ್ರಾಯ ಮತ್ತು ಆದೇಶಗಳು ಮಾನಹಾನಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ
ಸಮತೋಲನದ ಪರವಾಗಿವೆ. ಸಾಕ್ಷ್ಯಾಧಾರಗಳ ವಿಶ್ಲೇಷಣೆಯ ಆಧಾರದಲ್ಲಿ ಮಾನಹಾನಿಯ ನಿರ್ಣಯ ಆಗಬೇಕು ಮತ್ತು ವಿಚಾರಣಾಪೂರ್ವದ ತಡೆಯಾeಯನ್ನು ಅತಿ ವಿರಳ ಪ್ರಸಂಗಗಳಲ್ಲಿ ಮಾತ್ರ ನೀಡಬೇಕು ಎಂಬುದು ಹೆಚ್ಚಿನ
ಪ್ರಕರಣಗಳಲ್ಲಿ ಕೋರ್ಟುಗಳ ಅಭಿಪ್ರಾಯ. ಮಾನಹಾನಿಗೆ ಕ್ರಿಮಿನಲ್ ಪ್ರಕರಣದ ಬದಲಾಗಿ ಸಿವಿಲ್ ವ್ಯಾಜ್ಯಗಳ ಮೂಲಕ ಪರಿಹಾರಕ್ಕೆ ಕೋರ್ಟುಗಳು ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ.

(ಲೇಖಕರುಕಾನೂನು ತಜ್ಞರು ಮತ್ತುಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)

ಇದನ್ನೂ ಓದಿ: Court News : ರಾಮ, ಹಿಂದೂಗಳಿಗೆ ಅಪಮಾನ : ಬಿಲಾಲ್ ಸಲ್ಲಿಸಿದ್ದ ಎಫ್‌ಐಆರ್‌ ರದ್ದುಅರ್ಜಿ ತಿರಸ್ಕರಿಸಿದ ಹೈಕೋರ್ಟ್‌